ಧಾರವಾಡ: ರಾಜ್ಯದ ವಿವಿಧೆಡೆ ವ್ಯಾಪಕ ಮಳೆ ಮುಂದುವರಿದಿದ್ದು, ತುರ್ತು ಪರಿಹಾರಕ್ಕಾಗಿ ಜಿಲ್ಲಾಡಳಿತಗಳು ಅಗತ್ಯ ಕ್ರಮ ಕೈಗೊಂಡಿವೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು ಪಶುಪತಿಹಾಳದಲ್ಲಿ ಯಲ್ಲಪ್ಪ ಭೀಮಪ್ಪ ಡೊಳ್ಳಿನ ಎನ್ನುವವರ ಮನೆ ಕುಸಿದಿದೆ. ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಮಳೆ ಶುಕ್ರವಾರ ಮುಂಜಾನೆಯಿಂದ ಜೋರಾಗಿದೆ. ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಪ್ರತಿ ತಾಲ್ಲೂಕಿಗೂ ಒಬ್ಬೊಬ್ಬ ನೋಡೆಲ್ ಅಧಿಕಾರಿಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇಮಿಸಿದ್ದಾರೆ. ಮಳೆ ಪ್ರಮಾಣದ ಮೇಲೆ ಮತ್ತು ಪರಿಣಾಮಗಳ ಮೇಲೆ ನಿಗಾ ಇಡಲು ಸೂಚಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಬೆಳಿಗ್ಗೆಯಿಂದ ಮಳೆ ಒಂದೇ ಸಮನೆ ಸುರಿಯುತ್ತಿದೆ. ಜನರು ಮನೆಗಳಿಂದ ಹೊರಗೆ ಬರಲು ಇಷ್ಟಪಡುತ್ತಿಲ್ಲ.
ಭತ್ತದ ಗದ್ದೆ ನೀರುಪಾಲು
ದಾವಣಗೆರೆ: ಮಳೆಯಿಂದಾಗಿ ಹೊನ್ನಾಳಿ ತಾಲ್ಲೂಕು ಕತ್ತಿಗೆ ಗ್ರಾಮದ ಹೊಸಕೆರೆ ಕೋಡಿ ಹರಿಯುತ್ತಿದೆ. ಕೆರೆ ಕೆಳಗಿನ ಭತ್ತದ ಗದ್ದೆ ನೀರಿನಲ್ಲಿ ಮುಳುಗಿದೆ. ದೇವರ ಬೆಳಕೆರೆ ಬಳಿ ಇರುವ ಪಿಕ್ಅಪ್ ಡ್ಯಾಂ ತುಂಬಿದ್ದು, ಹಿನ್ನೀರಿನಿಂದ ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ. ಡ್ಯಾಂನ ಎಲ್ಲ ಗೇಟ್ಗಳನ್ನು ಅಧಿಕಾರಿಗಳು ತೆರೆದಿದ್ದಾರೆ. ಡ್ಯಾಂ ಹಿನ್ನೀರಿನಿಂದ 20ಕ್ಕೂ ಹೆಚ್ಚು ಕುಟುಂಬಳಿಗೆ ನೆರೆ ಭೀತಿ ಎದುರಾಗಿದೆ.
ಲಕ್ಷ್ಮೇಶ್ವರ: ತುಂಬಿ ಹರಿಯುತ್ತಿರುವ ಹಳ್ಳಗಳು
ಗದಗ: ಜಿಲ್ಲೆಯಲ್ಲಿ ರಾತ್ರಿಯಿಂದ ಮಳೆ ಒಂದೇ ಸಮನೆ ಸುರಿಯುತ್ತಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನೆಲೊಗಲ್ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಕಾರು ಸಮೇತ ನಾಲ್ವರು ನೀರಿಗೆ ಜಾರಿದ್ದರು. ತಕ್ಷಣ ಗಮನಿಸಿದ ನೆಲೊಗಲ್ ಗ್ರಾಮಸ್ಥರು ಇವರನ್ನು ರಕ್ಷಿಸಿದರು. ಲಕ್ಷ್ಮೇಶ್ವರದ ಸರ್ಕಲ್ ಇನ್ಸ್ಪೆಕ್ಟರ್ ವಿಕಾಸ್ ಲಮಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಹೆಬ್ಬಾಳ ಗ್ರಾಮದ ಚನ್ನವೀರಗೌಡ ಪಾಟೀಲ, ಡಾ ಪ್ರಭು ಮನ್ಸೂರ್, ಬಸವನಗೌಡ ತೆಗ್ಗಿನಮನಿ, ಕನಕವಾಡ ಗ್ರಾಮದ ವಿರೇಶ್ ಡಂಬಳ ಬಚಾವಾದವರು.
ಬೆಳಗಾವಿ: ಸ್ವೀಟ್ ಅಂಗಡಿಗೆ ನುಗ್ಗಿದ ನೀರು
ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ರಾಯಭಾಗ ತಾಲ್ಲೂಕಿನ ಲಮಾಣಿ ಅವರ ಮುಗಳಖೋಡದಲ್ಲಿ ಸ್ವೀಟ್ಸ್ ಅಂಗಡಿಗೆ ನೀರು ನುಗ್ಗಿ ಅವಾಂತರವಾಗಿದೆ. ಈ ಬಗ್ಗೆ ವಿಡಿಯೊ ಮಾಡಿ ಅವರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಿಂದ ನಗರ ಪ್ರದಕ್ಷಿಣೆ
ಬೆಳಗಾವಿಯಲ್ಲಿ ತಡರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಶಾಸಕ ಅಭಯ್ ಪಾಟೀಲ್ ಬೆಳಗಾವಿ ದಕ್ಷಿಣ ಕ್ಷೇತ್ರದ ವಿವಿಧೆಡೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ವಿವಿಧೆಡೆ ಪಾಲಿಕೆ ಸದಸ್ಯರು ಅಧಿಕಾರಿಗಳ ಜೊತೆ ಶಾಸಕರು ಭೇಟಿ ನೀಡಿದರು. ಕಳೆದ ವರ್ಷ ಮಳೆಯಾದ ವೇಳೆ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಹೀಗಾಗಿ ಇಂದು ಪಾಲಿಕೆ ಸದಸ್ಯರು ಅಧಿಕಾರಿಗಳ ಜೊತೆ ಭೇಟಿ ನೀಡಿರುವೆ ಎಂದು ಶಾಸಕರು ಹೇಳಿದರು. ಮಂಗಾಯಿ ನಗರದ ಬಳಿ ಇರುವ ಕೆರೆಯ ಪಕ್ಕ ರಸ್ತೆಯಲ್ಲಿ ನೀರು ಬಂದಿದೆ. ಮಾಧ್ವಾರಸ್ತೆಯ ಬಳಿ ಒಳಚರಂಡಿ ನೀರು ರಸ್ತೆ ಮೇಲೆ ಬಂದಿದ್ದರಿಂದ ಸಮಸ್ಯೆ ಆಗಿದೆ. ಈ ಎರಡೂ ಕಡೆ ಬಿಟ್ರೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಏನು ಸಮಸ್ಯೆಯಾಗಿಲ್ ಎಂದು ಅವರು ತಿಳಿಸಿದರು.
ವಾಹನ ಸವಾರರು ಹೈರಾಣ
ತುಮಕೂರು: ಜಿಲ್ಲೆಯಲ್ಲಿ ಮಳೆ ಒಂದೇ ಸಮನೆ ಮುಂದುವರಿಯುತ್ತಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.
ಇನ್ನಷ್ಟು ಮಳೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 am, Fri, 20 May 22