ಹುಬ್ಬಳ್ಳಿ-ಧಾರವಾಡ: ರಾಷ್ಟ್ರೀಯ ಯುವಜನೋತ್ಸವದ (National Youth Fest) ಅಂಗವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಇದೇ ಪ್ರಥಮಬಾರಿಗೆ ಸ್ಕೂಬಾಡೈವಿಂಗ್ ಮತ್ತು ದೆಹಲಿಯ ಭಾರತೀಯ ಪರ್ವತಾರೋಹಣ ಸಂಸ್ಥೆ ಸಹಯೋಗದಲ್ಲಿ ಶಿಲಾರೋಹಣ ಹಾಗೂ ಜಕ್ಕೂರ ರಾಷ್ಟ್ರೀಯ ವೈಮಾನಿಕ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ವೈಮಾನಿಕ ತರಬೇತಿ ಹಮ್ಮಿಕೊಂಡಿದ್ದು, ಪ್ರತಿದಿನ ನಾಲ್ಕು ಗಂಟೆಗಳ ಪ್ರಾಯೋಗಿಕ ಮತ್ತು ಥೇರಿ ಕ್ಲಾಸ್‍ಗಳನ್ನು ನಡೆಸುವ ಮೂಲಕ ಕ್ರ್ಯಾಷ್ ಕೋರ್ಸ್‍ಗಳನ್ನು ಆಯೋಜಿಸಿದೆ.
ಈ ಕಾರ್ಯಾಗಾರದಲ್ಲಿ ನೋಂದಾಯಿತ ಯುವ ಸ್ಪರ್ಧಾಳುಗಳು ಯುವಕ, ಯುವತಿಯರಿಗೆ ಭಾಗವಹಿಸಲು ಅವಕಾಶವಿದೆ. ಪ್ರತಿದಿನ ಕೇವಲ 50 ಜನರಿಗೆ ಮಾತ್ರ ಅವಕಾಶವಿರುತ್ತದೆ. ಕೆಸಿಡಿ ಆವರಣದ ಸೃಜನಾ ರಂಗಮಂದಿರ ಪಕ್ಕದ ಖಾಲಿ ಸ್ಥಳದಲ್ಲಿ ವೈಮಾನಿಕ ತರಬೇತಿಗೆ ಸಣ್ಣ ಪ್ರಮಾಣದ ವಿಮಾನ ನಿಲ್ದಾಣ ಮತ್ತು ಶಿಲಾರೋಹಣ ತರಬೇತಿಗೆ 32 ಅಡಿ ಉದ್ದದ ಕೃತಕ ಗೋಡೆಯನ್ನು ನಿರ್ಮಿಸಲಾಗುತ್ತಿದೆ. ಯುವಜನೋತ್ಸವದ 5 ದಿನಗಳ ಅವಧಿಯಲ್ಲಿ ವೈಮಾನಿಕ, ಶಿಲಾರೋಹಣ ಮತ್ತು ಸ್ಕೂಬಾಡೈವಿಂಗ್ ಸೇರಿ ಒಟ್ಟು ಸುಮಾರು 700 ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ತಾಂತ್ರಿಕ ಸಲಹೆಗಾರ ಕೀರ್ತಿ ಪಾಯ್ಸಾ ಅವರು ತಿಳಿಸಿದ್ದಾರೆ.
ಆಸಕ್ತ ಯುವಕರಿಗೆ ವೈಮಾನಿಕ ಕ್ಷೇತ್ರದ ಉದ್ಯೋಗ ಅವಕಾಶಗಳನ್ನು ಪರಿಚಯಿಸುವ ಮತ್ತು ಅಭಿರುಚಿ ಮೂಡಿಸುವ ಉದ್ದೇಶದಿಂದ ಜಕ್ಕೂರು ರಾಷ್ಟ್ರೀಯ ವೈಮಾನಿಕ ತರಬೇತಿ ಶಾಲೆಯ ಸಹಯೋಗದಲ್ಲಿ ವೈಮಾನಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ 8:30 ನಿಮಿಷದಿಂದ ಮಧ್ಯಾಹ್ನ 12:30 ನಿಮಿಷದವರೆಗೆ ತರಬೇತಿ ನಡೆಯಲಿದ್ದು, ತರಬೇತಿ ಸಂದರ್ಭದಲ್ಲಿ ಎರಡು ಆಸನದ ವಿಮಾನವನ್ನು ಬಳಸಲಾಗುತ್ತಿದೆ. ಇದು ಜಕ್ಕೂರು ತರಬೇತಿ ಶಾಲೆಯ ಸಣ್ಣ ವಿಮಾನವಾಗಿದ್ದು, ತರಬೇತಿ ಶಾಲೆಯ ಅಧಿಕಾರಿಗಳೇ ತರಬೇತಿ ನೀಡುತ್ತಾರೆ. ಮತ್ತು ಹಳೆಯ ರೋಸ್‍ವೈಸ್ ಕಂಪನಿಯ ವಿಮಾನ ಯಂತ್ರ (ಪುಷ್ಪಕ ವಿಮಾನ)ವನ್ನು ಸಹ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಮತ್ತು ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಮಿಸುವ ಯುವ ಸಮಯುದಾಯಕ್ಕೆ ಈ ಕುರಿತು ಪರಿಚಯಿಸಲಾಗುತ್ತಿದೆ. ಯುವಸಮೂಹದಲ್ಲಿ ಪೈಲಟ್ ಆಗಲು ಬೇಕಾಗಿರುವ ಅರ್ಹತೆ, ಅವಕಾಶಗಳು ಮತ್ತು ದೇಶ ಸೇವೆಯ ಮಹತ್ವವನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಭಾರತದ ನೈಸರ್ಗಿಕ ವಿಶಿಷ್ಟತೆಗಳಲ್ಲಿ ಪರ್ವತಾರೋಹಣವು ಒಂದಾಗಿದೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ದೆಹಲಿಯ ಭಾರತೀಯ ಪರ್ವತಾರೋಹಣ ಸಂಸ್ಥೆಯ ಸಹಯೋಗದಲ್ಲಿ ಶಿಲಾರೋಹಣ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಭಾರತೀಯ ಸೈನ್ಯದಲ್ಲಿ ಪರ್ವತಾರೋಹಣ, ಶಿಲಾರೋಹಣ ಒಂದು ಮಹತ್ವದ ವಿಂಗ್ ಆಗಿದೆ. ಯುವಸಮೂಹದಲ್ಲಿ ಪರ್ವತಾರೋಹಣ ಕ್ಷೇತ್ರದಲ್ಲಿ ಇರುವ ಸರ್ಕಾರಿ ಉದ್ಯೋಗದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಶಿಲಾರೋಹಣ ಕುರಿತು ಕ್ರ್ಯಾಷ್ ಕೋರ್ಸ್ ಸಂಘಟಿಸಲಾಗುತ್ತಿದೆ.
ಶಿಲಾರೋಹಣ ತರಬೇತಿ ಕಾರ್ಯಾಗಾರಕ್ಕಾಗಿ ಸೃಜನಾ ರಂಗಮಂದಿರ ಪಕ್ಕದಲ್ಲಿ ಸುಮಾರು 32 ಅಡಿ ಉದ್ದದ ಕ್ಲೇಮಿಂಗ್ ವಾಲ್ (ಕೃತಕ ಗೋಡೆ) ಅನ್ನು ನಿರ್ಮಿಸಲಾಗುತ್ತಿದೆ. ಪರ್ವತಾರೋಹಣ ಸಂಸ್ಥೆಯ ಅಧಿಕಾರಿಗಳು ಶಿಬಿರದಲ್ಲಿ ಪಾಲ್ಗೊಳ್ಳುವ ಮತ್ತು ಯುವಜನೋತ್ಸವಕ್ಕೆ ಆಗಮಿಸುವ ಯುವ ಸಮೂಹಕ್ಕೆ ಶಿಲಾರೋಹಣದ ಕುರಿತಾಗಿ ತಿಳುವಳಿಕೆಯೊಂದಿಗೆ ಆಸಕ್ತಿ ಮೂಡಿಸಲಿದ್ದಾರೆ.
ಭಾರತದ ನೆಲ, ವಾಯು ಮತ್ತು ಪರ್ವತಗಳೊಂದಿಗೆ ಜಲ ಸಾಹಸಗಳು ಪ್ರಸಿದ್ಧಿಯಾಗಿವೆ. ಇಂದು ಭಾರತೀಯ ಜಲಪಡೆಯಲ್ಲಿ ಸೇವೆ ಸಲ್ಲಿಸಲು ಯುವಕರಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ಮಾಹಿತಿ ಕೊರತೆಯಿಂದಾಗಿ ಸಾಕಷ್ಟು ಅವಕಾಶಗಳಿಂದ ಯುವಸಮೂಹ ವಂಚಿತವಾಗುತ್ತಿದೆ. ಆದ್ದರಿಂದ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯು ಸ್ಪರ್ಧಾಳುಗಳಿಗೆ ಮತ್ತು ಇತರರಿಗೆ ಸ್ಕೂಬಾಡೈವಿಂಗ್ ತರಬೇತಿಯನ್ನು ಆಯೋಜಿಸುತ್ತಿದೆ.
ಹುಬ್ಬಳ್ಳಿಯ ಎಪಿಎಂಸಿ ಹತ್ತಿರದ ಶಿವಗಿರಿಯಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈಜು ಕೋಳದಲ್ಲಿ ಸ್ಕೂಬಾಡೈವಿಂಗ್ ತರಬೇತಿಯನ್ನು ಆಯೋಜಿಸಲಾಗಿದೆ. ಸುಮಾರು 16 ಅಡಿ ಆಳವಿರುವ ಈ ಈಜು ಕೋಳದಲ್ಲಿ ತರಬೇತಿ ನೀಡಲಾಗುತ್ತಿದೆ. ಜಲ ಸುರಕ್ಷತೆ, ಜಲ ಸಾಹಸದಲ್ಲಿ ಇರುವ ಅವಕಾಶ, ಉದ್ಯೋಗವಕಾಶಗಳು ಮತ್ತು ಸ್ಕೂಬಾಡೈವಿಂಗ್ ಸೇರಿದಂತೆ ಜಲಸಾಹಸದಲ್ಲಿ ಬಳಸುವ ಸಲಕರಣೆಗಳನ್ನು ಪರಿಚಯಿಸಲಾಗುತ್ತದೆ.
ಇದನ್ನೂ ಓದಿ: ಸರ್ಕಾರ, ಖಾಸಗಿ ಸಂಘ ಸಂಸ್ಥೆಗಳಿಂದ ಹರಿದು ಬಂದ ದೇಣಿಗೆ; ಅವಳಿ ನಗರದ ಹೃದಯ ಶ್ರೀಮಂತಿಕೆ ಅನಾವರಣ
ಇಡೀ ವಿಶ್ವದಲ್ಲಿ ಗಮನ ಸೆಳೆದಿರುವ ದೆಹಲಿ ಮೂಲದ ನಿವೃತ್ತ ಕರ್ನಲ್ ಆನಂದ ಸ್ವರೂಪ ಅವರು ಸ್ಕೂಬಾಡೈವಿಂಗ್ ತರಬೇತಿಯನ್ನು ನೀಡಲಿದ್ದಾರೆ. ವಿಶ್ವದ ಅತ್ಯಂತ ತುತ್ತ ತುದಿಗಳಾದ ಉತ್ತರದ ಧೃವ (ನಾರ್ಥ್ ಪೋಲ್) ಮತ್ತು ದಕ್ಷಿಣ ಧೃವ (ಸೌಥ್ ಪೋಲ್) ತಲುಪಿರುವ ವ್ಯಕ್ತಿ ಆನಂದ ಸ್ವರೂಪ ಆಗಿದ್ದಾರೆ. ಇವರಂತಹ ಅನೇಕ ಸಾಹಸಿಗಳ ಪರಿಚಯಿಸುವುದರೊಂದಿಗೆ ತರಬೇತಿಯನ್ನು ನೀಡಲಾಗುತ್ತಿದೆ.
ಸಾಹಸದೊಂದಿಗೆ ಮನರಂಜನೆಯನ್ನು ನೀಡುವ ಜಲಸಾಹಸ ಕ್ರೀಡೆಗಳನ್ನು ಯುವಜನೋತ್ಸವದ ಅಂಗವಾಗಿ ಧಾರವಾಡ ನಗರದ ಕೆಲಗೇರಿ ಕೆರೆಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಸಾರ್ವಜನಿಕರಿಗೂ ಅವಕಾಶವಿರುವುದು ವಿಶೇಷವಾಗಿದೆ.
ವಿವಿಧ ರೀತಿಯ ಜಲಕ್ರೀಡೆಗಳಿಗೆ ಸೂಕ್ತವಾಗುವಂತೆ ಜಿಲ್ಲಾಡಳಿತವು ಈಗಾಗಲೇ ಕೆಲಗೇರಿ ಕೆರೆ ಸ್ವಚ್ಛತೆ ಕಾರ್ಯವನ್ನು ಕೈಗೊಂಡಿದೆ. ಜನರಲ್ಲಿ ಮನರಂಜನೆಯೊಂದಿಗೆ ಮಾಹಿತಿ ನೀಡಿ ನೆಲ, ಜಲ, ವಾಯು ಬಗ್ಗೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಮೂಡಿಸುವುದು ಯುವಜನೋತ್ಸವದ ಉದ್ದೇಶವಾಗಿದೆ.
ಜಲಕ್ರೀಡೆಗಳಲ್ಲಿ ಜೆಟ್‍ಸ್ಕೀ (ವಾಟರ್ ಸ್ಕೂಟರ್ ಬಳಕೆ), ಸ್ಪೀಡ್ ಬೋಟ್, ಕಯಾಕ್ (ಹುಟ್ಟು ಹಾಕುವ ಬೋಟ್), ರ್ಯಾಪಟ್ (ಗಾಳಿ ತುಂಬಿದ ಬೋಟ್) ಮತ್ತು ಬನಾನ್ ರೈಡ್, ಬಂಪಿ ರೈಡ್ಗಳನ್ನು ಆಯೋಜಿಸಲಾಗುತ್ತಿದೆ. ಯುವಜನೋತ್ಸವಕ್ಕೆ ನೋಂದಣಿ ಆಗಿರುವವರು ಉಚಿತವಾಗಿ ಪಾಲ್ಗೊಳ್ಳಬಹುದು ಮತ್ತು ಯಾವುದೇ ವಯಸ್ಸಿನ ಸಾರ್ವಜನಿಕರು ನಿಗದಿತ ದರ ನೀಡಿ ಈ ಎಲ್ಲ ಜಲಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಾಹಸ ಕ್ರೀಡೆಗಳಲ್ಲಿ ಮತ್ತೊಂದು ಹೆಸರಾಗಿರುವ ಮೌಂಟೆನ್ ಬೈಕ್ ರೈಡಿಂಗ್ ಅನ್ನು ಸಹ ಯುವಜನೋತ್ಸವದಲ್ಲಿ ಆಯೋಜಿಸಲಾಗಿದೆ. ಈ ಕ್ರೀಡೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಂಭಾಗದಲ್ಲಿರುವ ಸಪ್ತ ಗುಡ್ಡಗಳ ಪ್ರದೇಶದಲ್ಲಿ ಸಂಘಟಿಸಲಾಗುತ್ತಿದೆ. ಇಲ್ಲಿಯೂ ಸಹ ಸಾರ್ವಜನಿಕರಿಗೆ ನಿಗದಿತ ದರ ತುಂಬಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮೌಂಟೇನ್ ಬೈಕ್ ರೈಡಿಂಗ್‍ಗೆ ನೋಂದಣಿಯಾಗುವವರಿಗೆ ಸುಮಾರು 10 ಕಿ.ಮೀ. ದಾರಿಯನ್ನು ಗುಡ್ಡ ಗಾಡಿನಲ್ಲಿ ಕ್ರಮಿಸಲು ಅವಕಾಶವಿದೆ. ಈ ಕ್ರೀಡೆಗೆ ಹೆಚ್ಚಿನ ಸಿಬ್ಬಂದಿ, ವಾಹನ, ಆ್ಯಂಬುಲೆನ್ಸ್ ಅಗತ್ಯವಿದ್ದು, ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಯುವಜನೋತ್ಸವದಲ್ಲಿ ಭಾಗವಹಿಸುವ ಯುವ ಸಮೂಹಕ್ಕೆ ಮತ್ತು ಯುವಜನೋತ್ಸವಕ್ಕೆ ಸಾಕ್ಷಿಯಾಗಲು ಆಗಮಿಸುವ ಸಾರ್ವಜನಿಕರಿಗೆ ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶದಿಂದ ದೆಹಲಿಯ ಭಾರತೀಯ ಪರ್ವತಾರೋಹಣ ಸಂಸ್ಥೆ ಮತ್ತು ಜಕ್ಕೂರಿನ ರಾಷ್ಟ್ರೀಯ ವೈಮಾನಿಕ ತರಬೇತಿ ಶಾಲೆ ಹಾಗೂ ಭಾರತೀಯ ಸೈನ್ಯದ ಶಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಮಳಿಗೆಗಳನ್ನು ಸ್ಥಾಪಿಸಲಿದೆ. ಈ ಮಳಿಗೆಗಳಲ್ಲಿ ಆಯಾ ಕ್ಷೇತ್ರದ ಸಾಹಸಿಗರು, ಸಾಧಕರು ಮತ್ತು ಮಾದರಿ ವ್ಯಕ್ತಿಗಳು ಭಾಗವಹಿಸಿ ಸಾರ್ವಜನಿಕರಲ್ಲಿ ಸ್ವಾಭಿಮಾನ ಮತ್ತು ಪ್ರೇರಣೆ ನೀಡಲಿದ್ದಾರೆ.
ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಈ ಎಲ್ಲ ಪ್ರಯತ್ನಗಳನ್ನು ರಾಷ್ಟೀಯ ಯುವಜನೋತ್ಸವದಲ್ಲಿ ಪ್ರಥಮ ಬಾರಿಗೆ ಮಾಡಲಾಗುತ್ತಿದೆ. ಕ್ರ್ಯಾಷ್ ಕೋರ್ಸ್‌ದಂಥ ಹೊಸ ಪ್ರಯೋಗವನ್ನು ಮಾಡಿ ಭಾಗಿದಾರ ಯುವಕರಿಗೆ ಸರ್ಟಿಫಿಕೇಟ್ ಸಹ ನೀಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ