ಪಾಕಿಸ್ತಾನದಲ್ಲಿ ಹಿಂದೂಗಳ ನಿರ್ಮೂಲನೆ ಮಾಡಿದಂತೆ ಬಾಂಗ್ಲಾದಲ್ಲೂ ಷಡ್ಯಂತ್ರ ನಡೆಯುತ್ತಿದೆ; ಧಾರವಾಡದಲ್ಲಿ ಆರ್​ಎಸ್​ಎಸ್​ ಆರೋಪ

| Updated By: ಸುಷ್ಮಾ ಚಕ್ರೆ

Updated on: Oct 30, 2021 | 2:58 PM

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದಿರುವುದು ಆಕಸ್ಮಿಕ ದಾಳಿಯಲ್ಲ. ಅದು ಉದ್ದೇಶಪೂರ್ವಕವಾಗಿ ಹಿಂದೂಗಳಲ್ಲಿ ಭಯ ಹುಟ್ಟಿಸಲು ಮಾಡಲಾದ ದಾಳಿ. ಪಾಕಿಸ್ತಾನದಲ್ಲಿ ಈಗಾಗಲೇ ಹಂತಹಂತವಾಗಿ ಹಿಂದೂಗಳ ನಿರ್ಮೂಲನೆ ಮಾಡಲಾಗಿದೆ. ಅದೇ ರೀತಿಯ ಷಡ್ಯಂತ್ರ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಆರ್​​ಎಸ್​ಎಸ್​ ಆರೋಪಿಸಿದೆ.

ಪಾಕಿಸ್ತಾನದಲ್ಲಿ ಹಿಂದೂಗಳ ನಿರ್ಮೂಲನೆ ಮಾಡಿದಂತೆ ಬಾಂಗ್ಲಾದಲ್ಲೂ ಷಡ್ಯಂತ್ರ ನಡೆಯುತ್ತಿದೆ; ಧಾರವಾಡದಲ್ಲಿ ಆರ್​ಎಸ್​ಎಸ್​ ಆರೋಪ
ಧಾರವಾಡದಲ್ಲಿ ನಡೆದ ಆರ್​ಎಸ್​ಎಸ್​ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು
Follow us on

ಧಾರವಾಡ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಹಿಂದೂಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಹುನ್ನಾರವಾಗಿದೆ ಎಂದು ಆರ್​ಎಸ್​ಎಸ್​ ಧಾರವಾಡದಲ್ಲಿ ನಡೆದುತ್ತಿರುವ ರಾಷ್ಟ್ರೀಯ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಆರೋಪಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ವಿರುದ್ಧ ಆರ್​ಎಸ್​ಎಸ್​ ಹಲವು ನಿರ್ಣಯಗಳನ್ನು ಕೈಗೊಂಡಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದಿರುವುದು ಆಕಸ್ಮಿಕ ದಾಳಿಯಲ್ಲ. ಅದು ಉದ್ದೇಶಪೂರ್ವಕವಾಗಿ ಹಿಂದೂಗಳಲ್ಲಿ ಭಯ ಹುಟ್ಟಿಸಲು ಮಾಡಲಾದ ದಾಳಿ. ಪಾಕಿಸ್ತಾನದಲ್ಲಿ ಈಗಾಗಲೇ ಹಂತಹಂತವಾಗಿ ಹಿಂದೂಗಳ ನಿರ್ಮೂಲನೆ ಮಾಡಲಾಗಿದೆ. ಅದೇ ರೀತಿಯ ಷಡ್ಯಂತ್ರ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಆರ್​​ಎಸ್​ಎಸ್​ ಆರೋಪಿಸಿದೆ.

ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ರಾಷ್ಟ್ರೀಯ ಮಟ್ಟದ ಬೈಠಕ್​ನಲ್ಲಿ ಬೇರೆ ದೇಶಗಳಲ್ಲಿ ಹಿಂದೂಗಳ ಮೇಲೆ ನಡೆಸಲಾಗುತ್ತಿರುವ ದಾಳಿ, ಜನಸಂಖ್ಯೆ ನಿಯಂತ್ರಣ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮತಾಂತರ ನಿಷೇಧ ಕಾಯ್ದೆಗೆ ಅಲ್ಪಸಂಖ್ಯಾತರು ವಿರೋಧ ಮಾಡುತ್ತಿದ್ದಾರೆ. ಯಾಕೆ ವಿರೋಧ ಮಾಡ್ತಾರೆ ಅನ್ನೋದ್ರಲ್ಲೇ ಅದರ ಹಿನ್ನೆಲೆ ಇದೆ. ಈಗಾಗಲೇ 10 ರಾಜ್ಯಗಳು ಮತಾಂತರ ತಡೆ ಕಾಯ್ದೆ ಜಾರಿಗೆ ತಂದಿವೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದೆ. ಅಲ್ಲಿ ಕಾಂಗ್ರೆಸ್‌ನವರೇ ಕಾಯ್ದೆ ಮಾಡಿದ್ದಾರೆ. ಮತಾಂತರ ತಡೆ ಕಾಯಿದೆ ಬರಲಿ. ಆ ಕಾಯ್ದೆ ಬಂದ ಮೇಲೆ ತಿದ್ದುಪಡಿ ಇದ್ದರೆ ಮಾಡಬಹುದು. ಆದರೆ, ಕಾಯ್ದೆ ಬರುವ ಮೊದಲೇ ವಿರೋಧಿಸುವುದು ಸರಿಯಲ್ಲ ಎಂದು ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ದೀಪಾವಳಿಗೆ ಪಟಾಕಿ ಹೊಡೆಯಬಾರದೆಂಬ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ದತ್ತಾತ್ರೇಯ ಹೊಸಬಾಳೆ, ಪರಿಸರ ಮಾಲಿನ್ಯದ ಹೆಸರಿನಲ್ಲಿ ಪಟಾಕಿ ಹೊಡೆಯುವುದು ಬೇಡ ಅಂತಾರೆ. ಆದರೆ, ಇದು ದೀಪಾವಳಿಗೆ ಮಾತ್ರವೇ ಯಾಕೆ ಅನ್ವಯವಾಗುತ್ತದೆ? ವಿದೇಶಗಳಲ್ಲಿಯೂ ಪಟಾಕಿಗಳಿವೆ. ಅಲ್ಲಿಯೂ ಸಂಭ್ರಮಗಳಿದ್ದಾಗ ಪಟಾಕಿ ಹೊಡೆಯುತ್ತಾರೆ. ಆದರೆ, ಭಾರತದಲ್ಲಿ ದೀಪಾವಳಿ ಬಂದಾಗ ಮಾತ್ರ ಯಾಕೆ ಬ್ಯಾನ್ ಅಂತಾರೆ? ಪಟಾಕಿ ತಯಾರಿಸಿ, ಮಾರಾಟಕ್ಕೆ ಹಂಚಿಕೆಯಾದ ಮೇಲೆ ಬ್ಯಾನ್ ಅಂತಾರೆ. ಜನರ ಕೈಗೆ ಪಟಾಕಿ ಬಂದ ಬಳಿಕ ಬ್ಯಾನ್ ಅಂತಾರೆ. ಪರಿಸರ ಮಾಲಿನ್ಯ ವಿಷಯ ಮಹತ್ವದ್ದೇ ಆದರೂ ಪಟಾಕಿ ತಯಾರಕರ ಜೀವನದ ಬಗ್ಗೆಯೂ ಚಿಂತನೆ ಮಾಡಬೇಕಲ್ಲವೇ? ಪಟಾಕಿ ಬ್ಯಾನ್ ಮಾಡಿದ್ರೆ ಆ ಕಾರ್ಮಿಕರಿಗೆ ಏನು ಮಾಡುತ್ತಾರೆ? ಅವರ ಪುನರ್‌ವಸತಿಗೆ ಏನು ದಾರಿಗಳಿವೆ? ಈ ಎಲ್ಲವೂಗಳ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ಕಿಡಿ ಕಾರಿದ್ದಾರೆ.

ಜನಸಂಖ್ಯೆ ನಿಯಂತ್ರಣ ಕಾಯ್ದೆ ವಿಚಾರವಾಗಿ ಮಾತನಾಡಿದ ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಪ್ರತಿ ದೇಶಕ್ಕೂ ತನ್ನದೇ ಆದ ಜನಸಂಖ್ಯೆ ಕಾಯ್ದೆ ಇದೆ. ಜನಸಂಖ್ಯೆ ಕಾಯ್ದೆ ಬಗ್ಗೆ ನಾವೂ ಈ ಹಿಂದೆಯೇ ಠರಾವ್ ಮಾಡಿದ್ದೇವೆ. ಸಂಘದ ಹಿಂದಿನ ಬೈಠಕ್‌ಗಳಲ್ಲಿ ಐದಾರು ವರ್ಷಗಳ ಹಿಂದೆಯೇ ಠರಾವ್ ಮಾಡಿದ್ದೇವೆ. ಅದನ್ನೇ ಇತ್ತೀಚೆಗೆ ಮೋಹನ ಭಾಗವತ್ ಪುನರ್‌ಮನನ ಮಾಡಿದ್ದಾರೆ ಎಂದಿದ್ದಾರೆ.

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಯಾವ ಅಧಾರದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದರೆ, ನೈತಿಕ ಪೊಲೀಸ್‌ರಿಗೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಇದನ್ನೂ ಓದಿ: RSS Baithak: ಧಾರವಾಡದಲ್ಲಿ ರಾಷ್ಟ್ರೀಯ ಮಟ್ಟದ ಆರ್​ಎಸ್​ಎಸ್​ ಬೈಠಕ್​ಗೆ ಮೋಹನ್ ಭಾಗವತ್ ಚಾಲನೆ

ಧಾರವಾಡದಲ್ಲಿ ನಾಳೆಯಿಂದ ಆರ್​ಎಸ್​ಎಸ್​ ಸಭೆ; ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ, ಪೆಟ್ರೋಲ್ ಬೆಲೆಯೇರಿಕೆ ಬಗ್ಗೆ ಚರ್ಚೆ ಸಾಧ್ಯತೆ