Hubballi News: ಒಂದು ದಿನದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ ಹುಬ್ಬಳ್ಳಿಯ ಯುವತಿ ಸಂಜನಾ ಹಿರೇಮಠ್
ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಪ್ರತಿವರ್ಷ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲು 'ಒಂದು ದಿನದ ಹೈಕಮಿಷನರ್' ಎಂಬ ಸ್ಪರ್ಧೆಯನ್ನು ಆಯೋಜಿಸುತ್ತದೆ. 2017 ರಲ್ಲಿ ಪ್ರಾರಂಭವಾದ ಈ ಸ್ಪರ್ಧೆಯು ಭಾರತದಾದ್ಯಂತ 18 ರಿಂದ 23 ವರ್ಷದೊಳಗಿನ ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ. ಅದರಂತೆ, ಕರ್ನಾಟಕದ ಹುಬ್ಬಳ್ಳಿಯ ಯುವತಿ ಸಂಜನಾ ಹಿರೇಮಠ್ ಅವರು ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದರು.
ಹುಬ್ಬಳ್ಳಿ, ಅ.12: ಹುಬ್ಬಳ್ಳಿಯ 23 ವರ್ಷದ ಸಂಜನಾ ಹಿರೇಮಠ್ ಅವರು ಬೆಂಗಳೂರಿನಲ್ಲಿ (Bengaluru) ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ (British Deputy High Commissioner) ಆಗಿ ಕಾರ್ಯ ನಿರ್ವಹಿಸುವ ಮೂಲಕ ವೃತ್ತಿಜೀವನದಲ್ಲಿ ರಾಜತಾಂತ್ರಿಕರಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಪಡೆದರು.
ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಪ್ರತಿವರ್ಷ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲು ‘ಒಂದು ದಿನದ ಹೈಕಮಿಷನರ್’ ಎಂಬ ಸ್ಪರ್ಧೆಯನ್ನು ಆಯೋಜಿಸುತ್ತದೆ. 2017 ರಲ್ಲಿ ಪ್ರಾರಂಭವಾದ ಈ ಸ್ಪರ್ಧೆಯಲ್ಲಿ ಭಾರತದ 18 ರಿಂದ 23 ವರ್ಷದೊಳಗಿನ ಮಹಿಳೆಯರು ಭಾಗವಹಿಸಬಹುದು. ಈ ವರ್ಷ ಸ್ಪರ್ಧೆಯಲ್ಲಿ 180 ಅಭ್ಯರ್ಥಿಗಳು ಭಾಗವಹಿಸಿದ್ದರು.
ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ (ಎಲ್ಎಸ್ಇಜಿ) ಕಂಪನಿಯಲ್ಲಿ ಉದ್ಯೋಗದಲ್ಲಿರುವ ಸಂಜನಾ, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಕಚೇರಿಯನ್ನು ಟ್ಯಾಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿಮಿಷದ ಕ್ಲಿಪ್ ಹಂಚಿಕೊಂಡು ಒಂದು ದಿನದ ಹೈಕಮಿನರ್ ಆಗುವ ಬಗ್ಗೆ ತಮ್ಮ ಆಸಕ್ತಿಯನ್ನು ಹೇಳಿಕೊಂಡಿದ್ದಾರೆ. ಅದರಂತೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಸಂಜನಾ ಅವರನ್ನು ಒಂದು ದಿನದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ಗೆ ಆಯ್ಕೆ ಮಾಡಿದೆ.
ಇದನ್ನೂ ಓದಿ: ಪಂಚಮಸಾಲಿ ಹೋರಾಟ: ಅ.13 ರಂದು ಹುಬ್ಬಳ್ಳಿಯಲ್ಲಿ ಲಿಂಗಪೂಜೆ ಮೂಲಕ ಪ್ರತಿಭಟನೆ: ಜಯಮೃತ್ಯುಂಜಯ ಸ್ವಾಮೀಜಿ
ಸಂಜನಾ ಅವರಿಗೆ ನೀಡಲಾಗಿರುವ ಕರ್ತವ್ಯಗಳಲ್ಲಿ ಆಸ್ಟ್ರೇಲಿಯಾದ ಸಹವರ್ತಿ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡುವುದು ಒಳಗೊಂಡಿದೆ ಎಂದು ಹೈಕಮಿಷನ್ನ ಅಧಿಕೃತ ಪತ್ರಿಕಾ ಹೇಳಿಕೆ ದೃಢಪಡಿಸಿದೆ.
“ಈ ಒಂದು ಕನಸು ನನಸಾಯಿತು. ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ತಂಡ ಮತ್ತು ಮಹಿಳಾ ನಾಯಕರಿಂದ ಸಂವಹನ ನಡೆಸಲು ಮತ್ತು ಕಲಿಯಲು ನನಗೆ ಅವಕಾಶ ಸಿಕ್ಕಿತು. ನನ್ನ ಸ್ಪರ್ಧೆಯ ಪ್ರವೇಶದಲ್ಲಿ ನಾನು ಹೇಳಿದಂತೆ, ನಾನು ಬದಲಾವಣೆಯನ್ನು ತರಲು ಬಯಸುತ್ತೇನೆ” ಎಂದು ಸಂಜನಾ ಹಿರೇಮಠ್ ಹೇಳಿದ್ದಾರೆ.
ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಅವರ ಪ್ರಕಾರ, ಈ ಸ್ಪರ್ಧೆಯು ಯುವತಿಯರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಾಯಕತ್ವದ ಪಾತ್ರಗಳಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ವೇದಿಕೆಯನ್ನು ಒದಗಿಸುತ್ತದೆ. “ನನ್ನ ಹುದ್ದೆಗೆ ಸಂಜನಾ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತಿದ್ದರು. ಅವರ ಭವಿಷ್ಯದ ಗುರಿಗಳಿಗೆ ನಾನು ಎಲ್ಲಾ ಯಶಸ್ಸನ್ನು ಬಯಸುತ್ತೇನೆ” ಎಂದು ಹಾರೈಸಿದರು.
ಬೆಂಗಳೂರಿನಲ್ಲಿ ಯುಕೆಯ ಉನ್ನತ ರಾಜತಾಂತ್ರಿಕರಾಗಿ, ಸಂಜನಾ ಅವರು ಅತ್ಯಾಕರ್ಷಕ ಚಟುವಟಿಕೆಗಳನ್ನು ಅನುಭವಿಸಿದರು. ಬೆಂಗಳೂರಿನ ಡಿಎಚ್ಸಿ ನಿವಾಸದಲ್ಲಿ ಅಯ್ಯರ್ ಅವರೊಂದಿಗೆ ಉಪಾಹಾರ ಸೇವನೆಯೊಂದಿಗೆ ಅವರ ದಿನ ಪ್ರಾರಂಭವಾಯಿತು.
ನಂತರ ಆಯೋಗದ ಕಚೇರಿಯಲ್ಲಿ ಚರ್ಚೆಗಳು ನಡೆದವು. ಅಲ್ಲಿ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸುವ ತಮ್ಮ ಆಲೋಚನೆಗಳ ಬಗ್ಗೆ ಮಾತನಾಡಿದರು. ಮಧ್ಯಾಹ್ನದ ಊಟದ ಸಮಯದಲ್ಲಿ, ಅವರು ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್ ಗೀಚಿ ಅವರನ್ನು ಭೇಟಿಯಾದರು ಮತ್ತು ನಾಯಕತ್ವದಲ್ಲಿ ಮಹಿಳೆಯರ ಬಗ್ಗೆ ಮತ್ತು ಉತ್ತರ ಕರ್ನಾಟಕದ ವಿಶಿಷ್ಟ ಪಾಕಪದ್ಧತಿಯ ಬಗ್ಗೆ ಮಾತನಾಡಿದರು. ಚೆವೆನಿಂಗ್ ಗುರುಕುಲ ಫೆಲೋ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಐಎಎಸ್ ಅವರೊಂದಿಗಿನ ಸಭೆಯೊಂದಿಗೆ ಸಂಜನಾ ಅವರ ಒಂದು ದಿನದ ಹೈಕಮಿಷನ್ ಸೇವೆ ಮುಕ್ತಾಯಗೊಂಡಿತು ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Thu, 12 October 23