Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದೊಂದಿದ್ದರೆ ಸಾಕಂತೆ ಪಡಿತರ ಬೇಡವಂತೆ… ಧಾರವಾಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!

ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12 ಸಾವಿರ ರೂ ಗಿಂತ ಕಡಿಮೆ ಆದಾಯ, ನಗರ-ಪಟ್ಟಣದಲ್ಲಿ ವಾರ್ಷಿಕ 17 ಸಾವಿರ ರೂಗಿಂತ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಗೆ ಅರ್ಹರು. ಇನ್ನು ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಪಡೆಯಲು ಆಗೋದಿಲ್ಲ. ಆದರೂ ಈ ರೀತಿ ಆಗುತ್ತಿದೆ ಅಂದರೆ ಅವುಗಳ ದುರುಪಯೋಗ ನಡೆಯುತ್ತಿದೆಯಾ ಅನ್ನೋ ಅನುಮಾನ ಹೆಚ್ಚುತ್ತಿದೆ.

ಅದೊಂದಿದ್ದರೆ ಸಾಕಂತೆ ಪಡಿತರ ಬೇಡವಂತೆ... ಧಾರವಾಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!
ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿನಿಂದ ರೇಷನ್ ಪಡೆದೇ ಇಲ್ಲ!
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on: Nov 16, 2023 | 6:36 PM

ಬಡತನದ ರೇಖೆಗಿಂತ ಕೆಳಗಡೆ ಇರೋರಿಗಾಗಿಯೇ ಸರಕಾರ ಬಿಪಿಎಲ್ ಕಾರ್ಡ್ (BPL card holders) ಗಳನ್ನು ಜಾರಿಗೆ ತಂದಿದೆ. ಆ ಕಾರ್ಡ್ ಪಡೆಯೋ ಮೂಲಕ ಸರಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಬಡವರಿಗೆ ಅನುಕೂಲವಾಗುತ್ತೆ. ಅದರಲ್ಲೂ ಸರಕಾರ ವಿತರಿಸೋ ಪಡಿತರವನ್ನು (ration) ಈ ಕಾರ್ಡ್​ ಮೂಲಕ ಪಡೆದು ಹಸಿವಿನಿಂದ ಬಳಲೋದನ್ನು ತಡೆಯಬಹುದಾಗಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ (Dharwad district ) ಈ ಕಾರ್ಡ್ ಹೊಂದಿದ ಸಾವಿರಾರು ಜನರು ಅನೇಕ ತಿಂಗಳಿನಿಂದ ರೇಷನ್ ಪಡೆದೇ ಇಲ್ಲ ಅನ್ನೋ ಅಂಶ ಬೆಳಕಿಗೆ ಬಂದಿದೆ.

ಯಾವ ಬಡವರೂ ಕೂಡ ಉಪವಾಸ ಇರಬಾರದು ಅನ್ನೋ ಕಾರಣಕ್ಕೆ ಬಡತನ ರೇಖೆಗಿಂತ ಕೆಳಗಡೆ ಇರೋ ಕುಟುಂಬಗಳಿಗೆ ಸರಕಾರ ಉಚಿತವಾಗಿ ಅಕ್ಕಿಯನ್ನು ವಿತರಿಸುತ್ತದೆ. ಇದೀಗ ಕುಟುಂಬದ ಪ್ರತಿ ಸದಸ್ಯನಿಗೆ ಐದು ಕೇಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಈ ಬಿಪಿಎಲ್ ಕಾರ್ಡ್​ ಇದಕ್ಕಷ್ಟೇ ಬಳಕೆಯಾಗೋದಿಲ್ಲ. ಬದಲಿಗೆ ಆರೋಗ್ಯ ಸೇವೆ ಸೇರಿದಂತೆ ಸರಕಾರಗಳ ವಿವಿಧ ಯೋಜನೆಗಳಿಗೆ ಈ ಕಾರ್ಡ್ ಉಪಯೋಗವಾಗುತ್ತದೆ. ಇದೀಗ ಧಾರವಾಡ ಜಿಲ್ಲೆಯಲ್ಲಿ ಈ ಕಾರ್ಡ್ ಹೊಂದಿದ ಸಾವಿರಾರು ಜನರು ಎಷ್ಟೋ ತಿಂಗಳಿನಿಂದ ಪಡಿತರವನ್ನೇ ಪಡೆದಿಲ್ಲ. ಜಿಲ್ಲೆಯಲ್ಲಿ ಒಟ್ಟು 10,709 ಕುಟುಂಬಗಳು ಕಳೆದ ಆರು ತಿಂಗಳಿನಿಂದ ಪಡಿತರವನ್ನೇ ಪಡೆದಿಲ್ಲ. ಈ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣವನ್ನು ಹುಡುಕಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಚಕ್ರವರ್ತಿ ಸೂಲಿಬೆಲೆ ಮೇಲಿನ ಎಫ್​ಐಆರ್​ಗೆ ಹೈಕೋರ್ಟ್ ತಡೆ

ಧಾರವಾಡ ಜಿಲ್ಲೆಯಲ್ಲಿ ಒಟ್ಟು 3.87 ಲಕ್ಷ ಪಡಿತರ ಚೀಟಿದಾರರಿದ್ದು, ಈ ಪೈಕಿ ಸರ್ಕಾರಿ ಸೌಲಭ್ಯ, ವೈದ್ಯಕೀಯ ಚಿಕಿತ್ಸೆ ಉದ್ದೇಶಕ್ಕೆ ಪಡೆದಿರುವವರೇ ಹೆಚ್ಚು ಅನ್ನೋದು ಇದರಿಂದಾಗಿ ಗೊತ್ತಾಗುತ್ತಿದೆ. ವೈದ್ಯಕೀಯ ಚಿಕಿತ್ಸೆ ಉದ್ದೇಶಕ್ಕಾಗಿ ಪಡೆದಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಕೂಡ ರದ್ದುಪಡಿಸುವುದಿಲ್ಲ ಎಂದು ಸರಕಾರ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಆದರೆ ಹೀಗೆ ಪಡಿತರ ತೆಗೆದುಕೊಳ್ಳದೇ ಇರೋದಕ್ಕೆ ಕಾರಣವೇನು ಅನ್ನೋ ಅಂಶ ಪತ್ತೆ ಹಚ್ಚಲು ಅಧಿಕಾರಿಗಳು ಶುರುಮಾಡಿದ್ದಾರೆ. ಕುಟುಂಬ ಬೇರೆಡೆ ತೆರಳಿದೆಯೇ? ಚೀಟಿದಾರರು ಮೃತರಾಗಿದ್ದಾರೆಯೇ? ಸೇರಿ ಎಲ್ಲ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇಂಥ ಕುಟುಂಬಗಳ ನೂರಾರು ಇವೆ.

ಇಷ್ಟೊಂದು ಕುಟುಂಬಗಳು ಆರು ತಿಂಗಳಿನಿಂದ ಪಡಿತರ ಪಡೆಯದೇ ಇರೋದಕ್ಕೆ ಮುಖ್ಯ ಕಾರಣ ಬೇರೇನೇ ಇರಬಹುದು. ಅನೇಕರು ಈ ಕಾರ್ಡ್ ಗಳನ್ನು ಕೇವಲ ಆರೋಗ್ಯ ಸೇವೆಗಾಗಿ ಮಾತ್ರ ಬಳಸಿಕೊಳ್ಳುತ್ತಾರೆ. ಮತ್ತೆ ಕೆಲವರು ವೃದ್ಧರಾಗಿರೋದ್ರಿಂದ ನ್ಯಾಯಬೆಲೆ ಅಂಗಡಿಗೆ ಬಂದು ತೆಗೆದುಕೊಂಡು ಹೋಗಲು ಸಾಧ್ಯವಾಗದೇ ಇರೋದು ಕೂಡ ಕಾರಣವಿರುತ್ತದೆ. ಇವುಗಳಲ್ಲಿ ಕೆಲವು ನಕಲಿ ಕಾರ್ಡ್ ಕೂಡ ಇರಬಹುದು ಅನ್ನೋ ಅನುಮಾನಗಳು ಕೂಡ ಎದ್ದಿವೆ.

ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12 ಸಾವಿರ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವವರು, ನಗರ-ಪಟ್ಟಣದಲ್ಲಿ ವಾರ್ಷಿಕ 17 ಸಾವಿರ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಾಗಿರುತ್ತಾರೆ. ಇನ್ನು ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಪಡೆಯಲು ಆಗೋದಿಲ್ಲ. ಸರಕಾರ ಇತ್ತೀಚಿನ ದಿನಗಳಲ್ಲಿ ಈ ಕಾರ್ಡ್ ವಿತರಣೆಗೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಕೂಡ ಈ ರೀತಿ ಆಗುತ್ತಿದೆ ಅಂದರೆ ಅವುಗಳ ದುರುಪಯೋಗ ನಡೆಯುತ್ತಿದೆಯಾ ಅನ್ನೋ ಅನುಮಾನ ಮಾತ್ರ ಹೆಚ್ಚುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ