ಧಾರವಾಡ: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು

| Updated By: Rakesh Nayak Manchi

Updated on: Jul 23, 2023 | 5:44 PM

ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಿಕೊಳ್ಳಲು ಹುಡುಗಿಯನ್ನು ಚುಡಾಯಿಸುವ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದ ಯುವಕರ ತಂಡಕ್ಕೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರನ್ನು ಧಾರವಾಡ ಪೊಲೀಸರು ಬಂಧಿಸಿದ್ದು, ನಂತರ ಬಿಫೋರ್ ಆಫ್ಟರ್ ವಿಡಿಯೋ ಮಾಡಿ ಟ್ವೀಟ್​ನಲ್ಲಿ ಹಂಚಿಕೊಂಡಿದ್ದಾರೆ.

ಧಾರವಾಡ, ಜುಲೈ 23: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಲು ಹೋಗಿ ಅನೇಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಅದರಲ್ಲೂ ಯುವಕರು ಏನೇನೋ ಮಾಡಲು ಹೋಗಿ ಪೊಲೀಸರಿಂದ ಹೊಡೆತ ತಿನ್ನುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಧಾರವಾಡ (Dharwad) ಮೂವರು ಯುವಕರು ಸೇರ್ಪಡೆಯಾಗಿದ್ದಾರೆ. ಕಾಲೇಜಿಗೆ ಹೋಗುವ ಯುವತಿಯರಿಗೆ ಛೇಡಿಸುವ ಮೂಲಕ ವಿಕೃತ ಆನಂದ ಪಡೆಯುತ್ತಿದ್ದ ಮೂವರನ್ನು ಬಂಧಿಸಿದ ಧಾರವಾಡ ನಗರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಎರಡು ದಿನಗಳ ಹಿಂದೆ ನಗರದ ಕಾಲೇಜೊಂದರ ಬಳಿ ಹೋಗುತ್ತಿದ್ದ ಯುವತಿಯರ ಗುಂಪಿನ ಹಿಂದೆ ಬೈಕ್ ಮೇಲೆ ಬಂದ ಓರ್ವ ಯುವಕ ಅವರ ಸಮೀಪ ಬರುತ್ತಿದ್ದಂತೆಯೇ ಜೋರಾಗಿ ಚೀರಿ, ಅವರು ಹೆದರಿದಾಗ ವಿಕೃತ ಆನಂದ ಪಡೆದಿದ್ದ. ಈ ದೃಶ್ಯವನ್ನು ಛೇಡಿಸಿದ ಯುವಕನ ಸ್ನೇಹಿತ ಮತ್ತೊಂದು ಬೈಕ್ ಮೇಲೆ ಕುಳಿತುಕೊಂಡು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದನು. ಬಳಿಕ ಅದನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿ ಖುಷಿ ಪಟ್ಟಿದ್ದರು.

ಇದನ್ನೂ ಓದಿ: ವಿದ್ಯಾಕಾಶಿ ಧಾರವಾಡದಲ್ಲೊಂದು ಸೋರುವ ಸರಕಾರಿ ಕಾಲೇಜು: ಕೊಡೆ ಹಿಡಿದುಕೊಂಡೇ ಕೂತ ವಿದ್ಯಾರ್ಥಿಗಳು

ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಲು ಇಂಥ ಹುಚ್ಚಾಟಗಳನ್ನು ಮಾಡುತ್ತಿದ್ದ ಮೂವರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ನಿತ್ಯವೂ ಈ ರೀತಿ ಮಾಡಿ, ವೀಡಿಯೋವನ್ನು ಟ್ವಿಟರ್​ಗೆ ಹಾಕಿ ವಿಕೃತ ಆನಂದ ಪಡೆಯುತ್ತಿದ್ದ ಧಾರವಾಡ ನಗರದ ಅಹ್ಮದ್ ಖಾತರ್, ಜುನೇದ್ ಸೌದಾಗರ್, ಮನ್ಸೂರ್ ಶಿರಹಟ್ಟಿ ಅನ್ನೋರನ್ನು ಪತ್ತೆ ಹಚ್ಚಿ ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಧಾರವಾಡ ನಗರ ಠಾಣೆ ಪೊಲೀಸರು ಅಷ್ಟಕ್ಕೇ ಬಿಟ್ಟಿಲ್ಲ. ಕೇಸು ದಾಖಲಿಸಿದ ಬಳಿಕ ಅದೇ ಯುವಕರ ವಿಡಿಯೋ ಟ್ವಿಟರ್​ಗೆ ಹಾಕಿ ಬುದ್ಧಿ ಕಲಿಸಿದ್ದಾರೆ. ಯುವಕರ ವಿಡಿಯೋಗೆ ಪೊಲೀಸರು ಪ್ರತಿ ವೀಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ. ಕೆಲವು ವೀಡಿಯೋಗಳು ವೈರಲ್ ಆಗುವ ರೀತಿಯಲ್ಲಿಯೇ ಪೊಲೀಸರು BEFORE, AFTER ಎಫೆಕ್ಟ್ ಹಾಕಿ ವೀಡಿಯೋ ರಿಲೀಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ವೀಡಿಯೋವನ್ನು ಪೊಲೀಸರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷ್ನರೇಟ್ ಟ್ವಿಟರ್ ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ. ಪೊಲೀಸರ ಈ ಕ್ರಮ ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ