AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾಕಾಶಿ ಧಾರವಾಡದಲ್ಲೊಂದು ಸೋರುವ ಸರಕಾರಿ ಕಾಲೇಜು: ಕೊಡೆ ಹಿಡಿದುಕೊಂಡೇ ಕೂತ ವಿದ್ಯಾರ್ಥಿಗಳು

ಧಾರವಾಡದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಸಂಪೂರ್ಣ ಹಾನಿಗೊಳಗಾಗಿದ್ದು, ತರಗತಿ ನಡೆಯುತ್ತಿರುವಾಗ ಮಳೆ ಜೋರಾಗಿ ಸುರಿದರೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೊಡೆ ಹಿಡಿದುಕೊಂಡೇ ಕೂಡುವಂಥ ಪರಿಸ್ಥಿತಿ ಎದುರಾಗಿದೆ. ಉಚಿತ ಯೋಜನೆಗಳನ್ನು ಕೈಬಿಟ್ಟು ಕಟ್ಟಡಗಳ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.

ವಿದ್ಯಾಕಾಶಿ ಧಾರವಾಡದಲ್ಲೊಂದು ಸೋರುವ ಸರಕಾರಿ ಕಾಲೇಜು: ಕೊಡೆ ಹಿಡಿದುಕೊಂಡೇ ಕೂತ ವಿದ್ಯಾರ್ಥಿಗಳು
ಕೊಡೆ ಹಿಡಿದುಕೊಂಡು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2023 | 7:53 PM

ಧಾರವಾಡ, ಜುಲೈ 22: ಧಾರವಾಡಕ್ಕೆ ವಿದ್ಯಾಕಾಶಿ, ಶಿಕ್ಷಣ ಕಾಶಿ ಅಂತೆಲ್ಲಾ ಕರೆಯಲಾಗುತ್ತೆ. ಆದರೆ ಇದೇ ಶಿಕ್ಷಣ ಕಾಶಿಯಲ್ಲಿ ಸರಕಾರಿ ಕಾಲೇಜೊಂದಿದೆ (government college). ಅದನ್ನು ನೋಡಿದರೆ ಕಾಲೇಜು ಅನ್ನಿಸೋದೇ ಇಲ್ಲ. ಬದಲಿಗೆ ದನದ ಕೊಟ್ಟಿಗೆಗಿಂತಲೂ ಕಡೆಯಾಗಿದೆ. ಆ ಕಾಲೇಜನ್ನು ನೋಡಿದರೆ ಅದು ವಿದ್ಯಾಕಾಶಿಗೆ ಒಂದು ಕಪ್ಪು ಚುಕ್ಕೆ ಅನ್ನಿಸದೇ ಇರದು. ಧಾರವಾಡ ನಗರದ ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಎದುರಿನ ಕಟ್ಟಡದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ನಡೆಯುತ್ತಿದೆ. ಈ ಕಾಲೇಜಿನ ಒಳಗೆ ಹೋದರೆ ಎಂಥವರೂ ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಇದು ಕಾಲೇಜು ಕಟ್ಟಡ ಅನ್ನೋದಕ್ಕಿಂತ ದನದ ಕೊಟ್ಟಿಗೆ ಅನ್ನೋದೇ ಸೂಕ್ತ.

ಈ ಕಾಲೇಜಿನಲ್ಲಿ 343 ವಿದ್ಯಾರ್ಥಿನಿಯರು ವ್ಯಾಸಾಂಗ ಮಾಡುತ್ತಿದ್ದಾರೆ. ಇಲ್ಲಿ ಉತ್ತಮ ಉಪನ್ಯಾಸಕರೂ ಇದ್ದಾರೆ. ಆದರೆ ವಿದ್ಯಾರ್ಥಿನಿಯರು ಕುಳಿತುಕೊಳ್ಳುವ ತರಗತಿಯಲ್ಲಿ ನೀರು ನಿಂತಿರುತ್ತೆ. ಇದಕ್ಕೆ ಕಾರಣ ಮಳೆಯಿಂದಾಗಿ ಮೇಲ್ಛಾವಣಿನಿಂದ ನೀರು ಹರಿದು ಬರುತ್ತಿದೆ. ಇಂಥ ಅವ್ಯವಸ್ಥೆಯಲ್ಲಿಯೇ ವಿದ್ಯಾರ್ಥಿನಿಯರು ತರಗತಿಯಲ್ಲಿ ಕೂತು ಪಾಠ ಕೇಳಬೇಕು.

ತರಗತಿ ನಡೆಯುತ್ತಿರುವಾಗ ಮಳೆ ಜೋರಾಗಿ ಸುರಿದರೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೊಡೆ ಹಿಡಿದುಕೊಂಡೇ ಕೂಡುವಂಥ ಸ್ಥಿತಿ ಇದೆ. ಆದರೂ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರಕಾರ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿ ತರುವತ್ತ ಯೋಚನೆ ಮಾಡುತ್ತಿದೆ. ಆದರೆ ಓದುವ ನಮ್ಮಂಥ ವಿದ್ಯಾರ್ಥಿಗಳ ಬಗ್ಗೆ ಯಾರೂ ಯೋಚಿಸುತ್ತಿಲ್ಲ ಅಂತಾ ವಿದ್ಯಾರ್ಥಿನಿಯರು ನೋವು ತೋಡಿಕೊಳ್ಳುತ್ತಾರೆ.

ಇದನ್ನೂ ಓದಿ: Dharwad News: ಪ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡ್‌ರ್‌ಗೆ ದಂಡ

ಈ ಕಾಲೇಜಿನಲ್ಲಿ ಒಟ್ಟು ಐದು ಕೋರ್ಸ್​ಗಳಿವೆ. ಮೂರು ವಿಜ್ಞಾನದ ಕೋರ್ಸ್, ಬಿಎ ಮತ್ತು ಬಿಕಾಂ ಸೇರಿ ಒಟ್ಟು ಐದು ಕೋರ್ಸ್​ಗಳಿಗೆ ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಇಲ್ಲಿ ಉತ್ತಮವಾದ ಉಪನ್ಯಾಸಕರು ಇರುವುದರಿಂದ ಅನೇಕ ಮೆರಿಟ್ ಪಡೆದ ಹಾಗೂ ಬಡ ವಿದ್ಯಾರ್ಥಿನಿಯರು ಇಲ್ಲಿ ಪ್ರವೇಶ ಪಡೆದಿದ್ದಾರೆ. ಆದರೆ ಇದೀಗ ಅವರೆಲ್ಲ ನೀರಿನಲ್ಲಿಯೇ ಕುಳಿತು ಪಾಠ ಕೇಳಬೇಕಾಗಿದೆ.

ಮಳೆ ಜೋರಾಗಿ ಬಂದರೆ ಬೋರ್ಡ್ ಮೇಲೆಯೇ ನೀರು ಗೋಡೆಗುಂಟ ಹರಿದು ಬಂದು, ಎಲ್ಲವೂ ಅಳಿಸಿ ಹೋಗುತ್ತಿದೆ. ಈ ಬಗ್ಗೆ ಕಾಲೇಜಿನ ಪ್ರಾಚಾರ್ಯರಾದ ಸರಸ್ವತಿ ಕಳಸದ್ ಅವರನ್ನು ಕೇಳಿದರೆ, ಇಲ್ಲಿರುವ ಕೋರ್ಸ್ ಹಾಗೂ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ನಮಗೆ 35 ರೂಂಗಳು ಬೇಕು. ಆದರೆ ಇದೀಗ ನಮ್ಮ ಬಳಿ 12 ರೂಂ ಗಳಿವೆ. ಅದರಲ್ಲಿ ಅರ್ಧಕ್ಕರ್ಧ ಸೋರುತ್ತಿವೆ. ಈಗಾಗಲೇ ಪರೀಕ್ಷಾ ದಿನಾಂಕ ಘೋಷಣೆಯಾಗಿರುವುದರಿಂದ ನಮಗೆ ಪಠ್ಯ ಮುಗಿಸುವ ಒತ್ತಡವಿದೆ. ಇದೀಗ ಸರಕಾರಕ್ಕೆ ಈ ಕಟ್ಟಡದ ದುರಸ್ತಿ ಮಾಡಲು ಪ್ರಸ್ತಾಪನೆ ಸಲ್ಲಿಸಲಾಗಿದೆ. ಅದಕ್ಕೆ ಒಪ್ಪಿಗೆ ದೊರೆತರೆ ಅನುಕೂಲವಾಗುತ್ತೆ ಅನ್ನೋದು ಅವರ ಅಭಿಪ್ರಾಯ.

ಇದನ್ನೂ ಓದಿ: Dharwad News: ಧಾರವಾಡದ ಕಾರ್ಖಾನೆಗಳಿಂದ ತೆರಿಗೆಯೇ ಬರುತ್ತಿಲ್ಲ: ಗ್ರಾಮ ಪಂಚಾಯತಿಗಳಿಗಿಲ್ಲ ಆದಾಯ

ಪ್ರತಿಭಾವಂತ ಬಡ ಮಕ್ಕಳೇ ಇಲ್ಲಿಗೆ ಪ್ರವೇಶ ಬಯಸಿ ಬರುತ್ತಾರೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇದೀಗ ಅಂಥ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾದಂಗಾಗಿದೆ. ಏಕೆಂದರೆ ಇಂಥ ಕಾಲೇಜು ಕಟ್ಟಡದಲ್ಲಿ ಕುಳಿತು ಸರಿಯಾಗಿ ಪಾಠ ಕೇಳಲು ಸಾಧ್ಯವೇ ಆಗೋದಿಲ್ಲ. ಹೀಗಾಗಿ ಏನು ಮಾಡಬೇಕು ಅನ್ನೋದು ಅರ್ಥವಾಗದೇ ಪರದಾಡುವಂತಾಗಿದೆ. ಒಟ್ಟಿನಲ್ಲಿ ವಿದ್ಯಾಕಾಶಿ, ಶಿಕ್ಷಣ ಕಾಶಿ ಅಂತಾ ಕರೆಯಿಸಿಕೊಳ್ಳೋ ಧಾರವಾಡದ ಪಾಲಿಗೆ ಈ ಕಾಲೇಜು ಅಕ್ಷರಶಃ ಕಪ್ಪು ಚುಕ್ಕೆ ಅಂದರೆ ತಪ್ಪಾಗಲಾರದು.

ಗ್ಯಾರಂಟಿ ಯೋಜನೆ ಕೈಬಿಟ್ಟು ಇಂಥ ಕಟ್ಟಡ ದುರಸ್ತಿ ಮಾಡಲಿ: ಪೂಜಾ ಮನ್ನಿಕೇರಿ

ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ ಪೂಜಾ ಮನ್ನಿಕೇರಿ, ಇಲ್ಲಿ ವ್ಯಾಸಾಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿನಿಯರು ಬಡವರು ಹಾಗೂ ಪ್ರತಿಭಾವಂತರು. ಈ ಕಾಲೇಜನ್ನು ಬಿಟ್ಟರೆ ಬೇರೆ ಕಡೆ ಪ್ರವೇಶ ಪಡೆಯಲು ನಮಗೆಲ್ಲ ಸಾಧ್ಯವಿಲ್ಲ. ಸರಕಾರ ಸಾಕಷ್ಟು ಉಚಿತ ಯೋಜನೆಗಳನ್ನು ಇದೀಗ ನೀಡುತ್ತಿದೆ. ಆದರೆ ನಮ್ಮಂಥ ವಿದ್ಯಾರ್ಥಿನಿಯರು ಮಳೆಯಲ್ಲಿಯೇ ಕುಳಿತು ಪಾಠ ಕೇಳುವಂಥ ಪರಿಸ್ಥಿತಿ ಇದೆ. ಉಚಿತ ಯೋಜನೆಗಳನ್ನು ಕೈಬಿಟ್ಟು ನಮ್ಮಂಥ ವಿದ್ಯಾರ್ಥಿಗಳಿಗೆ ಕಟ್ಟಡಗಳ ವ್ಯವಸ್ಥೆ ಮಾಡಿದರೆ ಒಳ್ಳೆಯದಲ್ಲವೇ? ಅನ್ನುತ್ತಾರೆ.

ಕಾಲೇಜಿನ ಪ್ರಾಚಾರ್ಯರಾಗಿರುವ ಸರಸ್ವತಿ ಕಳಸದ್, ಈ ಮುಂಚೆಯಿಂದಲೂ ಅನೇಕ ಜನಪ್ರತಿನಿಧಿಗಳಿಗೆ ಕಟ್ಟಡ ದುರಸ್ತಿಗೆ ಸಹಾಯ ಪಡೆಯಲಾಗಿದೆ. ಇದೀಗ ಸರಕಾರಕ್ಕೆ ಕಟ್ಟಡ ದುರಸ್ತಿಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸರಕಾರ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಕೂಡಲೇ ಕಟ್ಟಡ ದುರಸ್ತಿ ಮಾಡಿಸಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಅಂತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.