ನೀರಿಲ್ಲಂತ ಮನೀಗೆ ಬೀಗರು ಬರುತ್ತಿಲ್ಲರಿ, ಗದಗ-ಬೆಟಗೇರಿ ಮಹಿಳೆಯರ ಅಳಲು
ಗದಗ-ಬೆಟಗೇರಿ ಅವಳಿ ನಗರದಲ್ಲಿ ಎರಡು ತಿಂಗಳಿಂದ ನೀರಿನ ತೀವ್ರ ಕೊರತೆ ಉಂಟಾಗಿದೆ. ನಗರಸಭೆಯಿಂದ ನೀರು ಪೂರೈಕೆ ನಿಂತಿದ್ದು, ರೊಚ್ಚಿಗೆದ್ದ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮುಂದಿನ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ.

ಗದಗ, ಏಪ್ರಿಲ್ 27: ಗದಗ-ಬೆಟಗೇರಿ (Gadag-Betageri) ಅವಳಿ ನಗರದಲ್ಲಿ ನೀರಿಗಾಗಿ (Water) ಹಾಹಾಕರ ಶುರುವಾಗಿದೆ. ಎರಡು ತಿಂಗಳಿಂದ ನಗರಸಭೆ ಹನಿ ನೀರು ಪೂರೈಕೆ ಮಾಡಿಲ್ಲ. ಹೀಗಾಗಿ, ರೊಚ್ಚಿಗೆದ್ದ ಮಹಿಳೆಯರು ಖಾಲಿ ಕೊಡಗಳ ಸಮೇತ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇಕಡಾ 100ರಷ್ಟು ಟ್ಯಾಕ್ಸ್ ತುಂಬುತ್ತೇವೆ. ಆದರೆ, ನಮಗೇಕೆ ನೀರು ಕೊಡಲ್ಲ ಅಂತ ನಗರಸಭೆಯನ್ನು ಮಹಿಳೆಯರು ಪ್ರಶ್ನೆ ಮಾಡಿದ್ದಾರೆ. ಶಾಸಕರು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಬಿರು ಬೇಸಿಗೆ ನೆತ್ತಿ ಸುಡುತ್ತಿದೆ. ಉರಿ ಬಿಸಿಲಿಗೆ ಗಂಟಲು ಒಣಗುತ್ತಿದೆ. ಆದರೆ, ಅವಳಿ ನಗರದಲ್ಲಿ ಹನಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಮಹಿಳೆಯರು ಖಾಲಿ ಕೊಡಗಳ ಸಮೇತ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಎರಡು ತಿಂಗಳಾದರೂ ಹನಿ ನೀರು ಪೂರೈಕೆ ಮಾಡದ ಜಿಲ್ಲಾಡಳಿತ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗನ ಹುಡ್ಕೋ ಕಾಲೋನಿ ನಿವಾಸಿಗಳಿಗೆ ಎರಡು ತಿಂಗಳಿಂದ ಕುಡಿಯುವ ನೀರು ಪೂರೈಕೆ ಮಾಡಿಲ್ಲ. ಹೀಗಾಗಿ, ನಗರಸಭೆ ಕಚೇರಿಗೆ ಹತ್ತಾರು ಬಾರಿ ಅಲೆದಾಡಿ ಮನವಿ ನೀಡಿದರೂ ಡೋಂಟ್ ಕೇರ್ ಅಧಿಕಾರಿಗಳು ಮಾತ್ರ ಪ್ರತಿಕ್ರಿಯೆ ನೀಡುತ್ತಿಲ್ಲ. ಅಲ್ಲದೇ, ಕ್ಷೇತ್ರದ ಶಾಸಕ ಹೆಚ್ ಕೆ ಪಾಟೀಲ್, ವಾರ್ಡ್ ಸದಸ್ಯೆ ಉಷಾ ದಾಸರ್ ಗಮನಕ್ಕೂ ತಂದಿದ್ದಾರೆ. ಆದರೂ ಎರಡು ತಿಂಗಳಾದರೂ ಹನಿ ನೀರು ಪೂರೈಕೆ ಆಗಿಲ್ಲ. ಹುಲಕೋಟಿ ಗ್ರಾಮಕ್ಕೆ ನೀರು ಕೊಡ್ತೀರಿ ಆದರೆ, ಗದಗ-ಬೆಟಗೇರಿ ಅವಳಿ ನಗರಕ್ಕೆ ಏಕೆ ನೀರು ಕೊಡಲ್ಲ ಅಂತ ಮಹಿಳೆಯರು ಕ್ಷೇತ್ರದ ಶಾಸಕ ಹೆಚ್ ಕೆ ಪಾಟೀಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ನೀರು ಕೊಡದಿದ್ದರೆ ನಗರಸಭೆ ಹಾಗೂ ಡಿಸಿ ಕಚೇರಿ ಎದುರು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಗದಗ ನಗರದ ಹುಡ್ಕೋ ನಿವಾಸಿಗಳು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ. ಗದಗನಲ್ಲಿ ನೀರು ಸಿಗಲ್ಲ ಅಂತ ಕನ್ಯೆ ಕೊಡುತ್ತಿಲ್ಲ. ಬೀಗರು, ಸಂಬಂಧಿಕರು ಮನೆಗೆ ಬರುತ್ತಿಲ್ಲ. ನಮ್ಮ ತಂದೆ, ತಾಯಿ ನಮಗೆ ಫೋನ್ ಮಾಡಿದ್ರೆ ಆರಾಮವಾಗಿ ಇದ್ದೀರಿ ಅಂತ ಕೇಳಲ್ಲ, ನೀರು ಬಿಟ್ಟಾರ ಅಂತ ಕೇಳುತ್ತಾರೆ. ಇಂಥ ಕೆಟ್ಟ ಪರಿಸ್ಥಿತಿ ಗದಗ-ಬೆಟಗೇರಿ ಅವಳಿ ನಗರದಲ್ಲಿದೆ ಎಂದು ಹುಡ್ಕೋ ನಗರ ನಿವಾಸಿ ವೀಣಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಗೆ ಬೀಗರು ಬಂದರೆ ಅಡುಗೆ ಮಾಡಿ ಊಟ ಹಾಕಬಹುದು. ಆದರೆ, ನೀರಿನ ಚಿಂತೆಯೇ ಹೆಚ್ಚಾಗಿದೆ ಅಂತ ಮಹಿಳೆ ಗೋಳು ತೋಡಿಕೊಂಡಿದ್ದಾರೆ. ಗದಗಕ್ಕೆ ಕನ್ಯೆ ಕೊಡಲು ಹೆದರುತ್ತಾರೆ. ನಮ್ಮ ಮಕ್ಕಳು ನೀರಿಗಾಗಿ ಒದ್ದಾಡುತ್ತಾರೆ ಅಂತ ಕನ್ಯೆ ಕೊಡುತ್ತಿಲ್ಲ. ಮನೆಯಲ್ಲಿ ಅತ್ತೆಗಳು ಸ್ಟ್ರಾಂಗ್ ಇದ್ರೆ ನೀರು ಹೊತ್ತು ತರಬೇಕಾಗುತ್ತೆ ಅನ್ನೋ ಭಯ ಇದೆ ಅಂತ ನೀರಿನ ಬವಣೆ ಬಗ್ಗೆ ಹುಡ್ಕೋ ನಿವಾಸಿ ಪ್ರಭಾವತಿ ಗೋಳು ತೋಡಿಕೊಂಡಿದ್ದಾರೆ. ನಗರಸಭೆ ಸ್ಪಂದನೆ ಮಾಡಿಲ್ಲ ಅಂತ ನಾವು ಬೀದಿಗೆ ಬಂದಿದ್ದೇವೆ. ಇನ್ನೂ ಕೆಟ್ಟು ನಿಂತ ಕೊಳವೆ ಬಾವಿ, ರಿಪೇರಿ ಕೂಡ ನಗರಸಭೆ ಮಾಡುತ್ತಿಲ್ಲ. ತುಂಗಭದ್ರಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಇದ್ರೂ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಗೋಳು ತಪ್ಪಿಲ್ಲ. ಚುನಾವಣೆಯಲ್ಲಿ ಕೈಮುಗಿದು ಬರುವ ಜನಪ್ರತಿನಿಧಿಗಳು ಈಗ ಕುಡಿಯುವ ನೀರು ಕೊಡುತ್ತಿಲ್ಲ ಅಂತ ಅಂತ ಹುಡ್ಕೋ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.
ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಇದೆ. ಆದ್ರೆ, ಗದಗ-ಬೆಟಬೇರಿ ಅವಳಿ ನಗರಕ್ಕೆ ಮಾತ್ರ ಸರಿಯಾಗಿ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ವಿಫಲವಾಗಿದೆ. ಅವಳಿ ನಗರದಲ್ಲಿ ಇಷ್ಟೊಂದು ಕುಡಿಯುವ ನೀರಿನ ಗಂಭೀರ ಸಮಸ್ಯೆ ಇದ್ರೂ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Sun, 27 April 25







