ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಸುಂದರಿಗೆ 25 ಲಕ್ಷ ರೂ ಕೊಟ್ಟ: ಮುಂದೇನಾಯ್ತು?
ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಗೆ ಓರ್ವ ವ್ಯಕ್ತಿ 25 ಲಕ್ಷ ರೂ ನೀಡಿ ಯಾಮಾರಿರುವಂತಹ ಘಟನೆ ಗದಗಿನಲ್ಲಿ ನಡೆದಿದೆ. ಈ ವಿಚಾರವಾಗಿ ದೂರು ನೀಡಲು ಹೋದ ವ್ಯಕ್ತಿಗೆ ರೋಣ ಸಿಪಿಐ ಬೆದರಿಕೆ ಹಾಕಿ 15 ಲಕ್ಷ ರೂ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

ಗದಗ, ಏಪ್ರಿಲ್ 27: ದೂರು ನೀಡಲು ಬಂದ ವ್ಯಕ್ತಿಯನ್ನು ಬೆದರಿಸಿದ (Threatens) ಸಿಪಿಐ, ಆತನಿಂದಲೇ 15 ಲಕ್ಷ ರೂ ಬೇಡಿಕೆ ಇಟ್ಟಿರುವಂತಹ ಘಟನೆ ನಗರಲ್ಲಿ ನಡೆದಿದೆ. ಗದಗ ಜಿಲ್ಲೆಯ ರೋಣ ಸಿಪಿಐ (CPI) ಸಿದ್ದಪ್ಪ ಬೀಳಗಿ ವಿರುದ್ಧ ಗಜೇಂದ್ರಗಡದ ರಾಘವೇಂದ್ರ ರಾಠೋಡ ಎಂಬಾತ ಗಂಭೀರ ಆರೋಪ ಮಾಡಿದ್ದಾರೆ. ಈಗಾಗಲೇ ಹೆದರಿಸಿ 3 ಲಕ್ಷ ರೂ. ಹಣ ವಸೂಲಿ ಮಾಡಿದ್ದು, ಉಳಿದ ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ SP ಕಚೇರಿಗೆ ಲಿಖಿತ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. ಸದ್ಯ ಸಿದ್ದಪ್ಪ ಬೀಳಗಿ ಕಿರುಕುಳಕ್ಕೆ ರಾಘವೇಂದ್ರ ಕಂಗಾಲಾಗಿದ್ದಾರೆ.
ಘಟನೆ ಹಿನ್ನಲೆ
ರಾಘವೇಂದ್ರ ರಾಠೋಡಗೆ ಇನ್ಸ್ಟಾಗ್ರಾಂನಲ್ಲಿ ಓರ್ವ ಯುವತಿ ಪರಿಚಯವಾಗಿದ್ದಾಳೆ. ದಿನಕಳೆದಂತೆ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಬಳಿಕ ಕಷ್ಟ ಹೇಳಿಕೊಂಡ ಯುವತಿಗೆ ರಾಘವೇಂದ್ರ ಹಂತ ಹಂತವಾಗಿ ಬರೋಬ್ಬರಿ 25 ಲಕ್ಷ ರೂ ನೀಡಿದ್ದಾರೆ. ಬಳಿಕ ಹಣ ವಾಪಸ್ ಕೇಳಿದರೆ ಯುವತಿ ನೀಡಿಲ್ಲ. ಹೀಗಾಗಿ ರಾಘವೇಂದ್ರ ಆತ್ಮಹತ್ಯೆ ಯತ್ನಿಸಿದ್ದರು.
ಇದನ್ನೂ ಓದಿ: ಗದಗ: ಮಾಜಿ ಪ್ರೇಮಿಯಿಂದ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್, ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ
ಇನ್ನು ಹಣ ಪಡೆದ ಯುವತಿ ಸಿಪಿಐ ಸಿದ್ದಪ್ಪ ಬೀಳಗಿ ಸಂಬಧಿಕಳಂತೆ. ಈ ವಿಚಾರಕ್ಕೆ ದೂರು ನೀಡಲು ಬಂದ ರಾಘವೇಂದ್ರಗೆ ಸಿಪಿಐನಿಂದ ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಹಿತಿ ಹಕ್ಕಿನಡಿ ಸಿಸಿಟಿವಿ ದೃಶ್ಯಗಳು ನೀಡುವಂತೆ ಕೇಳಿದ್ದೇನೆ ಎಂದಿದ್ದಾರೆ. ಆಗ ನಿನ್ನ ಮೇಲೆ ರೇಪ್ ಕೇಸ್ ಹಾಕಿಸ್ತಿನಿ ಅಂತ ಸಿಪಿಪಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ.
ಬೆದರಿಕೆ ಹಾಕಿ ಲಂಚ ಪಡೆದಿದ್ರೆ ಸಿಪಿಐ ವಿರುದ್ಧ ಕ್ರಮ ಎಂದ ಎಸ್ಪಿ ಬಿಎಸ್ ನೇಮಗೌಡ
ಘಟನೆ ಬಗ್ಗೆ ಗದಗ ಎಸ್ಪಿ ಬಿಎಸ್ ನೇಮಗೌಡ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಈ ವಿಷಯದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬೆದರಿಕೆ, ಲಂಚ ಪಡೆದಿರುವ ಆರೋಪ ಸುಳ್ಳು. ಆ ಮಹಿಳೆಗೆ ನೀಡಿದ ಹಣ ಕೊಡಿಸುವಂತೆ ನಮ್ಮ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದ. ಹಣ ಕೊಡಿಸದ ಕಾರಣ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿದ್ದಾನೆ. ಈ ಬಗ್ಗೆ ನರಗುಂದ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇನೆ. ಒಂದು ವೇಳೆ ಸಿಪಿಐ ಬೆದರಿಕೆ ಹಾಕಿ, ಲಂಚ ಪಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.