ಮಂಗಳೂರಿನಲ್ಲಿ ತೇರು ಬಿದ್ದ ವಿಚಾರ: ದೈವಗಳು ಆಕ್ರೋಶ, ತಿದ್ದಿಕೊಳ್ಳದಿದ್ರೆ ಮತ್ತಷ್ಟು ಅಪಾಯದ ಎಚ್ಚರಿಕೆ!
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ರಥೋತ್ಸವದ ವೇಳೆ ತೇರು ಮುಗುಚಿ ಬಿದ್ದ ಅವಘಡಕ್ಕೆ ಸಂಬಂಧಿಸಿದಂತೆ ಇದೀಗ ಜಾರಂದಾಯ ಮತ್ತು ಬಂಟ ದೈವಗಳು ಆಕ್ರೋಶ ವ್ಯಕ್ತಪಡಿಸಿವೆ. ಹೀಗಾಗಿ ಬಪ್ಪನಾಡು ದೇವಸ್ಥಾನದ ಆಡಳಿತ ದೈವಗಳ ಮುನಿಸಿಗೆ ತುತ್ತಾಗಿದೆ. ಇದೆ ಪರಿಸ್ಥಿತಿ ಮುಂದುವರೆದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ದೈವಗಳು ಎಚ್ಚರಿಕೆ ಸಹ ನೀಡಿವೆ.

ಮಂಗಳೂರು, ಏಪ್ರಿಲ್ 27: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪುರಾಣ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮರಥೋತ್ಸವ ನಡೆಯಿತು. ಈ ವೇಳೆ ತೇರು (Chariot Collapse) ಎಳೆಯುತ್ತಿದ್ದ ಸಂದರ್ಭದಲ್ಲಿ ದೇವರನ್ನು ಹೊತ್ತು ಸಾಗುತ್ತಿದ್ದ ಬ್ರಹ್ಮರಥ ಏಕಾಏಕಿ ಜನರಿದ್ದ ಕಡೆ ಮುಗುಚಿ ಬಿದಿತ್ತು. ತೇರಿನ ಒಳಗೆ ಕುಳಿತಿದ್ದ ಅರ್ಚಕರು ಸೇರಿದಂತೆ ಸಾವಿರಾರು ಭಕ್ತರು ಪವಾಡ ಸದೃಶ ಎಂಬಂತೆ ಪಾರಾಗಿದ್ದರು. ಆದರೆ ಇದೀಗ ಈ ಘಟನೆ ಮಾತ್ರ ತುಳುನಾಡಿನ ಕಾರ್ಣಿಕ ದೈವದ (Daiva) ರೋಷಾವೇಷಕ್ಕೆ ಕಾರಣವಾಗಿದೆ. ಎಲ್ಲರನ್ನೂ ಕಾಪಾಡಿದ್ದು ನಾನೇ, ತಿದ್ದಿಕೊಳ್ಳದಿದ್ದರೆ ಇನ್ನಷ್ಟು ಅಪಾಯ ಎದುರಾಗಲಿದೆ ಎಂದು ದೈವ ಎಚ್ಚರಿಕೆ ನೀಡಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ರಥೋತ್ಸವದ ವೇಳೆ ತೇರು ಮುರಿದು ಬಿದ್ದ ಅವಘಡದ ಬಗ್ಗೆ ಸದ್ಯ ಜಾರಂದಾಯ ಮತ್ತು ಬಂಟ ದೈವಗಳಿಂದ ತಂತ್ರಿಗಳ ಎದುರಲ್ಲೇ ಆಕ್ರೋಶ ಹೊರಹಾಕಿವೆ. ಜಾತ್ರೋತ್ಸವದ ಬಳಿಕ ನಡೆದ ನೇಮೋತ್ಸವದ ವೇಳೆ ದೈವ ಆಕ್ರೋಶ ಹೊರಹಾಕಿದ್ದು, ಬಂಟ ದೈವದ ರೋಷಾವೇಶ ಕಂಡು ಭಕ್ತರು ಬೆಚ್ಚಿ ಬಿದಿದ್ದಾರೆ.
ಒಂದು ಜೀವಕ್ಕೂ ಗಾಯ ಆಗೋದಕ್ಕೆ ಬಿಟ್ಟಿಲ್ಲವೆಂದ ದೈವ
ಒಂದು ಜೀವಕ್ಕೂ ಗಾಯ ಆಗೋದಕ್ಕೆ ಬಿಟ್ಟಿಲ್ಲ ನಾನು. ಎಷ್ಟು ಜೀವಕ್ಕೆ ಹಾನಿ ಆಗುತ್ತಿತ್ತು? ಮುಂದಕ್ಕೆ ಎಲ್ಲವನ್ನೂ ಸರಿ ಮಾಡುತ್ತೇನೆ. ತುಂಬಾ ವಿಷಯಗಳು ಇದೆ. ನನಗಿರುವ ಅಧಿಕಾರ ಬೇರೆ ಯಾವ ದೈವಕ್ಕೂ ಇಲ್ಲ. ಪ್ರಶ್ನಾಚಿಂತನೆ ಹಾಕಲೇಬೇಕಾಗಿದೆ. ಆ ಸಂದರ್ಭದಲ್ಲಿ ನಿಮ್ಮ ನಾಲಗೆಯ ಮೂಲಕ ನಾನು ಮಾತನಾಡುತ್ತೇನೆ ಎಂದು ದೈವ ನುಡಿದಿದೆ.
ಇದನ್ನೂ ಓದಿ: ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ಅವಘಡ: ತೇರಿನ ಮೇಲ್ಭಾಗ ಏಕಾಏಕಿ ಕುಸಿತ
ಪುನಃ ಬ್ರಹ್ಮಕಲಶ ಆಗಿ ಹೊಸ ಬ್ರಹ್ಮ ರಥೋತ್ಸವದಲ್ಲಿ ರಥೋತ್ಸವ ಆಗಲಿ. ಆ ಸಂದರ್ಭದಲ್ಲಿ ಯಾರು ತಡೆಯುತ್ತಾರೆಂದು ನಾನು ನೋಡುತ್ತೇನೆ. ಯಾವ ರೀತಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂಬ ಲೆಕ್ಕಾಚಾರ ನನಗೆ ಬಿಡಿ. ಈಗ ಒಳ್ಳೆ ರೀತಿಯಲ್ಲಿ ವಾಪಾಸು ಹೋಗುತ್ತೇನೆ. ದುರ್ಗಾಪರಮೇಶ್ವರಿಯ ಕಣ್ಣೀರು ಒರೆಸಿ ಕೂರಿಸಿದ್ದೇನೆ. ಅವರು ದುಃಖದಲ್ಲಿದ್ದರು ಹೋಗಿ ಅವರ ಪಾದ ಹಿಡಿಯುತ್ತೇನೆ. ಮುಂದಿನ ಭವಿಷ್ಯವನ್ನು ಒಳ್ಳೆದು ಮಾಡುತ್ತೇನೆ. ಯಾರಿಗೂ ಏನು ತೊಂದರೆಯಾಗಲ್ಲ ಎಂಬ ಭಾಷೆಯನ್ನು ಅವರಿಗೆ ನೀಡುತ್ತೇನೆ ಎಂದು ದೈವ ನುಡಿದಿದೆ.
ಬಲಿ ಮೂರ್ತಿಗೆ, ಅರ್ಚಕರಿಗೆ, ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿ ರಕ್ಷಣೆ ನೀಡಿ ಕಾಪಾಡಿದ್ದೇನೆ. ಇಲ್ಲಿನ ಹೆಸರನ್ನು ಕಾಪಾಡಿದ್ದೇನೆ. ದೊಡ್ಡ ಗಂಡಾಂತರ ಏನಾದರೂ ಆಗಿದ್ದರೆ ಅಜಗಜಾಂತರವಾಗುತ್ತಿತ್ತು. ಪ್ರಾಣ, ಮಾನಕ್ಕೆ ಏನು ಹಾನಿಯಾಗೋದಕ್ಕೆ ಬಿಟ್ಟಿಲ್ಲ ನಾನು. ಮುಂದಕ್ಕೆ ಏನು ನಡಿಬೇಕು ಅದನ್ನು ಚಂದದಲ್ಲಿ ಮಾಡಿಸಿಕೊಡುತ್ತೇನೆ. ಯಾರಿಂದ ಏನು ತಪ್ಪಾಗಿದೆ ಎಂದು ಮುಂದಕ್ಕೆ ಹೇಳುತ್ತೇನೆ. ಈಗ ಎಷ್ಟು ಬೇಕಾದರೂ ಮುಚ್ಚಿಡಲಿ. ನನ್ನ ಗ್ರಾಮದ ಯುವಕರು ನನ್ನ ಜೊತೆಗಿರಲಿ ಎಂದು ತಿಳಿಸಿದೆ.
ಇದು ಮಾಡಿದ ತಪ್ಪನ್ನ ತಿದ್ದಿಕೊಳ್ಳುವ ಅವಕಾಶ: ದೈವರಾಧಕ ತಮ್ಮಣ್ಣ ಶೆಟ್ಟಿ
ಜಾರಂದಾಯ ದೈವದ ಮುನಿಸಿನ ಬಗ್ಗೆ ಟಿವಿ9 ಗೆ ದೈವರಾಧಕ ತಮ್ಮಣ್ಣ ಶೆಟ್ಟಿ ಪ್ರತಿಕ್ರಿಯಿಸಿದ್ದು, ಇಂತಹ ಘಟನೆಗಳು ತುಳುನಾಡಿನಲ್ಲಿ ಸಂಭವಿಸಬಾರದಿತ್ತು. ರಥ ಬಿದ್ದ ವಿಚಾರ ಜಾರಂದಾಯ ದೈವಕ್ಕೆ ಕೋಪ ಬಂದಿದೆ. ನನ್ನ ತಾಯಿ (ದುರ್ಗಾಪರಮೇಶ್ವರಿ) ಪರಿಸ್ಥಿತಿ ಹೀಗಾಗಲು ನೀವು ಕಾರಣ ಎಂದು ದೈವ ಆಕ್ರೋಶ ತೋರಿದೆ ಎಂದು ಹೇಳಿದ್ದಾರೆ.
ದೇವಸ್ಥಾನಕ್ಕೆ ಒಳಪಟ್ಟ ಅನೇಕರು ಮಾಡಿದ ತಪ್ಪಿನಿಂದ ಹೀಗಾಗಿದೆ. ಮುಂದೆ ಸರಿಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತೆ ಎಂದು ದೈವ ಸೂಚನೆ ನೀಡಿದೆ. ಇದು ಮಾಡಿದ ತಪ್ಪನ್ನ ತಿದ್ದಿಕೊಳ್ಳುವ ಅವಕಾಶ. ಬಪ್ಪನಾಡಿಗೆ ಮಾತ್ರವಲ್ಲ ಇಡಿ ದಕ್ಷಿಣ ಕನ್ನಡಕ್ಕೆ ಇದೊಂದು ಸೂಚನೆ. ದೈವರಾಧನೆ ದಾರಿ ತಪ್ಪುತ್ತಿದ್ದು, ಹಾಗಾಗಿ ದಕ್ಷಿಣ ಕನ್ನಡಕ್ಕೆ ಎಚ್ಚರಿಕೆಯಿದು ಎಂದರು.
ಇದನ್ನೂ ಓದಿ: ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮರಥೋತ್ಸವ ನಡೆಯುವಾಗ ರಥದ ಗೋಪುರ ಉರುಳಿದ್ದು ಯಾಕೆ ಗೊತ್ತಾ?
ದೈವರಾಧನೆಯಲ್ಲಿ ಅಹಂಕಾರ, ಪ್ರತಿಷ್ಠೆ ಬಿಡು ಎಂದು ದೈವ ಸಂದೇಶ ನೀಡಿದೆ. ತುಳುನಾಡಿನಲ್ಲಿ ದೇವಸ್ಥಾನಗಳಿಗೂ, ದೈವರಾಧನೆಗೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಯಾವುದೇ ದೇವಸ್ಥಾನಗಳ ಉತ್ಸವಾದಿಗಳನ್ನು ದೈವಗಳೆ ಮುಂದೆ ನಿಂತು ಮಾಡಿಸೋದು. ಹೀಗಾಗಿ ದೈವಗಳಿಗೆ ಸಾಕಷ್ಟು ಮಹತ್ವವಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:26 am, Sun, 27 April 25