ರೈಲ್ವೆ ಪರೀಕ್ಷೆಯಲ್ಲಿ ಜನಿವಾರ ಮಾತ್ರವಲ್ಲ, ಮಂಗಳಸೂತ್ರವೂ ನಿಷಿದ್ಧ! ವ್ಯಾಪಕ ಆಕ್ರೋಶ
ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ರಾಜ್ಯದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಇದೀಗ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಪರೀಕ್ಷೆಯೊಂದಕ್ಕೆ ಹಾಜರಾಗುವವರು ಮಂಗಳಸೂತ್ರ, ಧಾರ್ಮಿಕ ಸಂಕೇತಗಳನ್ನು ತೆಗೆದು ಹಾಜರಾಗಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಮಂಗಳೂರು, ಏಪ್ರಿಲ್ 28: ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ (Janivar) ತೆಗೆಸಿದ ಪ್ರಕರಣ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿಯೇ ಇದೀಗ ರೈಲ್ವೆ ನೇಮಕಾತಿ ಮಂಡಳಿ (Railway Recruitment Board) ಕೂಡ ಆಕ್ಷೇಪಾರ್ಹ ಕ್ರಮ ಕೈಗೊಂಡಿದೆ. ಈ 29ರಂದು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಹಾಲ್‌ಟಿಕೆಟ್ ನೀಡಲಾಗಿದೆ. ಅದರಲ್ಲಿ, ಮಂಗಳಸೂತ್ರ (Mangal Sutra) ಮತ್ತು ಧಾರ್ಮಿಕ ಸಂಕೇತಗಳನ್ನೆಲ್ಲ ತೆಗೆದಿರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ರೈಲ್ವೆ ನೇಮಕಾತಿ ಮಂಡಳಿಯ ಈ ಕ್ರಮಕ್ಕೆ ಹಿಂದು ಪರ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಮಣೇಲ್ ಬೆಸೆಂಟ್ ವಿದ್ಯಾ ಕೇಂದ್ರದಲ್ಲಿ ಕೂಡ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ನೀಡಲಾದ ಹಾಲ್ ಟಿಕೆಟ್‌ನಲ್ಲಿ ಮಂಗಳಸೂತ್ರ ತೆಗೆದಿರಿಸುವಂತೆ ಉಲ್ಲೇಖಿಸಿರುವುದು ಕಂಡುಬಂದಿದ್ದು, ಜಿಲ್ಲೆಯ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಿವಾರ ಮತ್ತು ಮಂಗಳಸೂತ್ರ ಹಾಕುವುದು ಹಿಂದೂಗಳ ಧಾರ್ಮಿಕ ಸಂಪ್ರದಾಯ. ಅದನ್ನು ತೆಗೆದು ಪರೀಕ್ಷೆ ಬರೆಯುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಧರ್ಮ ವಿರೋಧಿ ಧೋರಣೆಯನ್ನು ಸಹಿಸಲು ಸಾಧ್ಯ ಎಂದು ಇಂದು ಮುಖಂಡರು ಹೇಳಿದ್ದಾರೆ.
‘‘ರೈಲ್ವೆ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆಯು ಏಪ್ರಿಲ್ 28, 29 ಹಾಗೂ 30 ರಂದು ಬೋಂದೆಲ್ನ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ನಡೆಯಲಿದ್ದು, ಆ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಸಂಪ್ರದಾಯಗಳಾದ ಮಂಗಳಸೂತ್ರ, ಜನಿವಾರಗಳನ್ನೂ ತೆಗೆದು ಹಾಜರಾಗುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ’’ ಎಂದು ವಿಎಚ್ಪಿ ಮುಖಂಡ ಶರಣ್ ಪಂಪುವೆಲ್ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶರಣ್ ಪಂಪುವೆಲ್ ಪೋಸ್ಟ್
‘‘ಮಾನ್ಯ ಜಿಲ್ಲಾಧಿಕಾರಿಗಳೇ / ಮಾನ್ಯ ಸಂಸದರೇ ಇಂತಹ ಆದೇಶವನ್ನು ಕೈಬಿಟ್ಟು, ನಡೆಯಲಿರುವ ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಆಗ್ರಹಿಸುತ್ತೇನೆ’’ ಎಂದೂ ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಜನಿವಾರ ವಿವಾದ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಹೈಕೋರ್ಟ್ಗೆ ಪಿಐಎಲ್, ಮರು ಪರೀಕ್ಷೆಗೆ ಮನವಿ
ಜನಿವಾರ ವಿವಾದ ಕರ್ನಾಟಕದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಲ್ಲದೆ, ಹಿಂದೂ ಧಾರ್ಮಿಕ ಆಚರಣೆಗಳಿಗೆ ಕಾಂಗ್ರೆಸ್ ಸರ್ಕಾರ ಧಕ್ಕೆ ತರುತ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಕಿಡಿಕಾರಿದ್ದವು. ಇದೀಗ ರೈಲ್ವೆ ಇಲಾಖೆ ವಿರುದ್ಧವೂ ಅಂಥದ್ದೇ ಆರೋಪ ಕೇಳಿಬಂದಿದೆ. ಇದಕ್ಕೆ ರೈಲ್ವೆ ಇಲಾಖೆ ಏನು ಉತ್ತರ ನೀಡುತ್ತದೆ ಅಥವಾ ಮುಂದೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:15 am, Mon, 28 April 25