ಜನಿವಾರ ವಿವಾದ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಹೈಕೋರ್ಟ್‌ಗೆ ಪಿಐಎಲ್, ಮರು ಪರೀಕ್ಷೆಗೆ ಮನವಿ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆದ ಘಟನೆಯನ್ನು ಖಂಡಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದೆ. ರಾಜ್ಯದ ಹಲವೆಡೆ ಇಂತಹ ಘಟನೆಗಳು ನಡೆದಿರುವುದರಿಂದ ಶಿಕ್ಷಣ ಹಕ್ಕು ಉಲ್ಲಂಘನೆಯಾಗಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಮನವಿ ಮಾಡಲಾಗಿದೆ.

ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ (CET exam) ವೇಳೆ ಜನಿವಾರ (Janivara) ತೆಗೆಸಿದ ಪ್ರಕರಣ ಖಂಡಿಸಿ ಜಿಲ್ಲೆ ಜಿಲ್ಲೆಯಲ್ಲೂ ಬ್ರಾಹ್ಮಣ ಸಮುದಾಯ ಬೀದಿಗಿಳಿದಿತ್ತು. ಶಿವಮೊಗ್ಗ, ಬೀದರ್, ಧಾರವಾಡ, ಸಾಗರದಲ್ಲಿ ಜನಿವಾರ ತೆಗೆಸಿದನ್ನ ವಿರೋಧಿಸಿ ಪ್ರತಿಭಟನೆ ಮಾಡಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮರು ಸಿಇಟಿ ಪರೀಕ್ಷೆ ಮಾಡಲು ಅರ್ಜಿದಾರರ ಪರ ವಕೀಲ ಮನವಿ ಮಾಡಿದ್ದು, ಜೂನ್ 9ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.
ಜನಿವಾರ ತೆಗೆಸಿದ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಎಲ್ಲೆಡೆ ಪ್ರತಿಭಟನೆ ಮಾಡುವ ಮೂಲಕ ಜನರು ಆಕ್ರೋಶ ಹೊರಹಾಕಿದ್ದರು. ಹೀಗಿರುವಾಗಲೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ದಟ್ಟವಾಗಿತ್ತು. ಇದೀಗ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಹೈಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಸಿದೆ.
ಇದನ್ನೂ ಓದಿ: ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ರಾಜ್ಯದ ಹಲವೆಡೆ ಇಂತಹ ಘಟನೆಗಳು ನಡೆದಿವೆ. ಸಂವಿಧಾನಬಾಹಿರ ಕೃತ್ಯದಿಂದ ಶಿಕ್ಷಣ ಹಕ್ಕು ವಂಚನೆಯಾಗಿದೆ. ಈ ವಿದ್ಯಾರ್ಥಿಗಳಿಗೆ ಮರು ಸಿಇಟಿ ಪರೀಕ್ಷೆ ನಡೆಸುವಂತೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಶ್ರೀರಂಗ ಮನವಿ ಮಾಡಿದ್ದಾರೆ. ಸದ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದ್ದು, ಜೂನ್ 9ಕ್ಕೆ ವಿಚಾರಣೆ ನಿಗದಿಪಡಿಸಿದೆ.
ವೃತ್ತಿಪರ ಕೋರ್ಸ್‌ಗಳಿಗಾಗಿ ಏಪ್ರಿಲ್ 16 ರಂದು ರಾಜ್ಯದ ಉದ್ದಗಲಕ್ಕೂ ಸಿಇಟಿ ಪರೀಕ್ಷೆ ನಡೆದಿತ್ತು. ಈ ವೇಳೆ ಶಿವಮೊಗ್ಗದಲ್ಲಿ ಇಬ್ಬರು ವಿದ್ಯಾರ್ಥಿಗಳ ಜನಿವಾರ ತೆಗೆಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗಿತ್ತು. ಬೀದರ್‌ನಲ್ಲಿ ಜನಿವಾರ ತೆಗೆಯೋದಿಲ್ಲ ಎಂದಿದ್ದಕ್ಕೆ ವಿದ್ಯಾರ್ಥಿಯನ್ನ ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟಿರಲಿಲ್ಲ. ಈ ಎರಡೂ ಪ್ರಕರಣಗಳು ರಾಜ್ಯದಲ್ಲಿ ಬೆಂಕಿ ಹೊತ್ತಿಸಿತ್ತು.
ಧಾರವಾಡದಲ್ಲೂ ವಿದ್ಯಾರ್ಥಿಯ ಜನಿವಾರಕ್ಕೆ ಕತ್ತರಿ
ಇದರ ನಡುವೆ ಧಾರವಾಡದಲ್ಲೂ ವಿದ್ಯಾರ್ಥಿಯ ಜನಿವಾರಕ್ಕೆ ಕತ್ತರಿ ಹಾಕಿರುವ ಆರೋಪ ಕೇಳಿ ಬಂದಿತ್ತು. ಧಾರವಾಡದ ರಾಘವೇಂದ್ರ ನಗರದ ನಂದನ್, ಹುರಕಡ್ಲಿ ಕಾಲೇಜ್‌ನಲ್ಲಿ ಪರೀಕ್ಷೆ ಬರೆಯಲು ಹೋಗಿದ್ದ. ಈ ವೇಳೆ ಜನಿವಾರ ತೆಗೆಯುವಂತೆ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ನಂದನ್ ವಿರೋಧಿಸ್ತಿದ್ದಂತೆ ಸಿಬ್ಬಂದಿಯೇ ಜನಿವಾರ ಕತ್ತರಿಸಿ ಒಳಗೆ ಬಿಟ್ಟಿದ್ದರು. ಇನ್ನೂ ಕತ್ತರಿಸಿದ ಜನಿವಾರವನ್ನ ನನ್ನ ಕೈಗೆ ಕೊಟ್ಟರು ಅಂತಾ ನಂದರ್ ಆರೋಪಿಸಿದ್ದರು.
ಇದನ್ನೂ ಓದಿ: ಸಿಇಟಿ ಅಭ್ಯರ್ಥಿಗಳ ಜನಿವಾರ ತೆಗೆಸಿದ ಪ್ರಕರಣ; ಅಧಿಕಾರಿಗಳದ್ದೇ ತಪ್ಪೆಂದು ವರದಿ ಸಲ್ಲಿಸಿದ ಡಿಸಿ
ಧಾರವಾಡದಲ್ಲೂ ಜನಿವಾರ ಕತ್ತರಿಸಿರೋದು ಗೊತ್ತಾಗ್ತಿದ್ದಂತೆ ಆಕ್ರೋಶಗೊಂಡ ಬ್ರಾಹ್ಮಣ ಸಮುದಾಯ, ಪ್ರತಿಭಟನೆ ನಡೆಸಿತ್ತು. ನಿಯಮ ಇಲ್ಲದಿದ್ದರೂ ತೆಗೆದಿದ್ದು ಯಾಕೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







