ಸಿಇಟಿ ಅಭ್ಯರ್ಥಿಗಳ ಜನಿವಾರ ತೆಗೆಸಿದ ಪ್ರಕರಣ; ಅಧಿಕಾರಿಗಳದ್ದೇ ತಪ್ಪೆಂದು ವರದಿ ಸಲ್ಲಿಸಿದ ಡಿಸಿ
ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಸಿಇಟಿ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯಲು ಕೊಠಡಿಗೆ ಕಳುಹಿಸುವಾಗ ತಪಾಸಣೆ ಮಾಡಿದ್ದ ಅಧಿಕಾರಿಗಳು ಜನಿವಾರ ಹಾಕಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರಾಕರಿಸಿದ್ದರು. ಹಲವು ವಿದ್ಯಾರ್ಥಿಗಳ ಜನಿವಾರ ಮತ್ತು ಕೈಯಲ್ಲಿದ್ದ ಕಾಶಿ ದಾರವನ್ನು ಬಿಚ್ಚಿಸಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇದೀಗ ಜನಿವಾರ ತೆಗಸಿರುವ ಹಾಗೂ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೀದರ್ ಡಿಸಿ ಸಂಪೂರ್ಣ ವರದಿ ಸಲ್ಲಿಸಿದ್ದಾರೆ. ಆ ವರದಿಯಲ್ಲೇನಿದೆ? ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 19: ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿಗಳ ಜನಿವಾರ (Sacred Thread) ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೀದರ್ ಜಿಲ್ಲಾಧಿಕಾರಿ ಸಂಪೂರ್ಣ ವರದಿ ಸಲ್ಲಿಕೆ ಮಾಡಿದ್ದಾರೆ. ಈ ವರದಿಯಲ್ಲಿ ಅಧಿಕಾರಿಗಳದ್ದೇ ತಪ್ಪು ಎಂದು ಉಲ್ಲೇಖಿಸಲಾಗಿದೆ. ಪರೀಕ್ಷಾ ವೀಕ್ಷಕರಾಗಿದ್ದ ಔರಾದ್ ಆರ್ಎಫ್ಒ ಮೊದ್ದಶೀರ್ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ಪರೀಕ್ಷಾರ್ಥಿ ಪರೀಕ್ಷೆಗೆ ಕಾದು ನಿಂತರೂ ಅವಕಾಶ ಸಿಕ್ಕಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿಯಮ ಪಾಲಿಸದೆ ಮೊದ್ದಶೀರ್ ಎಡವಟ್ಟು ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜನಿವಾರ ತೆಗೆಸಿದ ಪ್ರಕರಣದಲ್ಲಿ ಅಧಿಕಾರಿಗಳದ್ದೇ ತಪ್ಪು. UGCET 2025 ಪರೀಕ್ಷಾ ವೀಕ್ಷಕ ಮೊದ್ದಶೀರ್ RFO ಔರಾದ್ ನಿರ್ಲಕ್ಷ್ಯ ತೋರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದಹಾಗೆ, ಈ ಜನಿವಾರ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಜನಿವಾರ ಹಾಕಿದ್ದಾರೆಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಕಷ್ಟ ತಂದಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: ಜನಿವಾರ ಧರಿಸಬಾರದೆಂದು ಪ್ರಾಧಿಕಾರವು ವಸ್ತ್ರಸಂಹಿತೆ ವಿಷಯದಲ್ಲಿ ಹೇಳಿಲ್ಲ: ಹೆಚ್ ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ-ಕೆಇಎ
ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಇಬ್ಬರು ಹೋಮ್ಗಾರ್ಡ್ಗಳನ್ನು ಅಮಾನತು ಮಾಡಲಾಗಿದೆ. ಡಿ.ರಘು ಹಾಗೂ ಎಂ.ಕಲಾವತಿ ಅವರನ್ನು ಅಮಾನತು ಮಾಡಿ ಗೃಹರಕ್ಷಕ ದಳದ ಕಮಾಂಡೆಂಟ್ ಆದೇಶ ನೀಡಿದ್ದಾರೆ.
ಏನಿದು ಪ್ರಕರಣ?:
ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರ ಮತ್ತು ಕೈಗೆ ಕಟ್ಟಿದ್ದ ಕಾಶಿ ದಾರವನ್ನು ತೆಗೆಸಿ ಅಧಿಕಾರಿಗಳು ಕಸದ ಬುಟ್ಟಿಗೆ ಎಸೆದಿದ್ದರು. ಬೀದರ್‌ನಲ್ಲಿ ಜನಿವಾರ ಹಾಕಿದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗೇ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ಈ ಘಟನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Sat, 19 April 25