ಗದಗ: ಮಾಜಿ ಪ್ರೇಮಿಯಿಂದ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್, ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ
ಗದಗ ತಾಲೂಕಿನ ಅಸುಂಡಿ ಗ್ರಾಮದ 29 ವರ್ಷದ ಯುವತಿ ಮದುವೆಗೆ ಕೆಲವೇ ದಿನಗಳ ಮುನ್ನ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಹಳೆ ಪ್ರೇಮಿಯಿಂದ ಬ್ಲ್ಯಾಕ್‌ಮೇಲ್ ಆರೋಪ ಕೇಳಿಬಂದಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕಿದ್ದಾರೆ.

ಗದಗ, ಏಪ್ರಿಲ್ 21: ಮಾಜಿ ಪ್ರೇಮಿ ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಮರ್ಯಾದೆಗೆ ಹೆದರಿ ಮದುವೆ ಸಂಭ್ರಮದಲ್ಲಿದ್ದ ಯುವತಿ (girl) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ. ಸಾಯಿರಾಬಾನು ನದಾಫ್(29) ಆತ್ಮಹತ್ಯೆ (death) ಮಾಡಿಕೊಂಡ ಯುವತಿ. ಸಾಯಿರಾಬಾನು ಡೆತ್ನೋಟ್ ಬರೆದಿಟ್ಟಿದ್ದು, ಮೈಲಾರಿ ಎಂಬುತಾನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಖುಷಿಯಿಂದಲೇ ತಾಳಿ, ಬಟ್ಟೆ ಖರೀದಿಸಿದ್ದ ಯುವತಿ ಆತ್ಮಹತ್ಯೆಗೆ ಶರಣು
ಮೇ 8ರಂದು ಸಾಯಿರಾಬಾನು ನದಾಫ್ ಮದುವೆ ನಿಗದಿಯಾಗಿತ್ತು. ಹಾಗಾಗಿ ಇತ್ತ ಮನೆಯಲ್ಲಿ ಅದ್ಧೂರಿ ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಸಾಯಿರಾಬಾನು ಖುಷಿಯಿಂದಲೇ ತಾಳಿ, ಬಟ್ಟೆ ಎಲ್ಲವನ್ನು ಖರಿಸಿದ್ದರು. ಇಂದು ಪೋಷಕರು ಮದುವೆ ವಸ್ತುಗಳ ಖರೀದಿಗೆ ಹೋದಾಗ ಸಾಯಿರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಬಾಗಿಲು ತೆರೆದು ನೋಡಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದುಬಂದಿದೆ. ಮಗಳ ಸ್ಥಿತಿ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮದುವೆ ಸಂಭ್ರಮದಲ್ಲಿ ಇದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ಇದನ್ನೂ ಓದಿ: ಓಂ ಪ್ರಕಾಶ್ ಕೊಲೆ: ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ
ಐದು ವರ್ಷಗಳ ಹಿಂದೆ ಮೈಲಾರಿ ಜೊತೆ ಸಾಯಿರಾಬಾನು ನದಾಫ್ ಲವ್ ಬ್ರೇಕಪ್ ಆಗಿತ್ತು. ನಿನಗೆ ತೊಂದರೆ ಕೊಡಲ್ಲ ಅಂತ ಮಾಜಿ ಪ್ರೇಮಿ ಬರ್ತಡೇ ಆಚರಿಸಿದ್ದ. ಆದರೆ ಐದು ವರ್ಷಗಳ ಬಳಕ ಮತ್ತೆ ಎಂಟ್ರಿಕೊಟ್ಟ ಪಾಗಲ್ ಪ್ರೇಮಿ, ಬಳಿಕ ವಿಡಿಯೋ, ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಹೀಗಾಗಿ ಮರ್ಯಾದೆಗೆ ಹೆದರಿ ಸಾಯಿರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಮಗಳಿಗೆ ಆದ ಸ್ಥಿತಿ ಯಾರಿಗೂ ಆಗಬಾರದು. ಮೈಲಾರಿ ಎಂಬಾತನಿಗೆ ಗಲ್ಲು ಶಿಕ್ಷೆ ಆಗಬೇಕು ಅಂತ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಕ್ರೀಡೆಗಳಲ್ಲಿ ಸಾಧನೆ
ಇನ್ನು ಸಾಯಿರಾಬಾನು ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು. ಕುಸ್ತಿ ಸೇರಿ ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಸಾಯಿರಾಬಾನು, ಸಾಕಷ್ಟು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆದರೆ ಇದೀಗ ಮುದ್ದಾಗಿ ಸಾಕಿದ್ದ ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕುವಂತಾಗಿದೆ.
ಇದನ್ನೂ ಓದಿ: ಮುತ್ತಪ್ಪ ರೈ ಪುತ್ರನ ಹತ್ಯೆ ಯತ್ನ ಹಿಂದೆ ಶಾರ್ಪ್ಶೂಟರ್? ರಿಕ್ಕಿ ಮೇಲಿನ ಗುಂಡಿನ ದಾಳಿಗೆ ಅಸಲಿ ಕಾರಣವೇನು?
ಒಟ್ಟಿನಲ್ಲಿ ಮದುವೆ ಸಂಭ್ರಮದಲ್ಲಿ ಇದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಇನ್ನು ಘಟನಾ ಸ್ಥಳಕ್ಕೆ ಪಿಎಸ್ಐ ಲಾಲಸಾಬ್ ಜೂಲಕಟ್ಟಿ ಭೇಟಿ ಪರಿಶೀಲನೆ ಮಾಡಿದ್ದಾರೆ.
ಡೆತ್ನೋಟ್ನಲ್ಲಿ ಏನಿದೆ?
ನಾನು ಮಾಡಿದ ತಪ್ಪು ಏನೆಂದರೆ ಮೈಲಾರಿ ಎನ್ನುವ ಹುಡಗನನ್ನು ಪ್ರೀತಿ ಮಾಡಿದ್ದೆ. ಅದು 5 ವರ್ಷಗಳ ಹಿಂದೆ ಬ್ರೇಕಪ್ ಆಯ್ತು. ಇದೀಗ ಮತ್ತೆ 1 ತಿಂಗಳ ಹಿಂದೆ ಮತ್ತೆ ಮೀಟ್ ಆಗಿ ಬಳಿಕ ಅವರೇ ಇನ್ಸ್ಟಾಗ್ರಾಮ್ನಲ್ಲಿ ಮೆಸೇಜ್ ಮಾಡಿದ್ದರು. ನಂತರ ನನ್ನ ಹುಟ್ಟುಹಬ್ಬ ಮಾಡಿದ್ದರು. ಅವರು ನನಗೆ ಮಾತು ಕೊಟ್ಟಿದ್ದರು. ನಿನ್ನಗೆ ಯಾವತ್ತು ತೊಂದರೆ ಬರದ ಹಾಗೇ ನೋಡಿಕೊಳ್ಳುತ್ತೇನೆ ಎಂದಿದ್ದರು. ಆದರೆ ಇವಾಗ ನನ್ನ ಫೋಟೋ, ವಿಡಿಯೋ ಎಲ್ಲಾ ಇಟ್ಟುಕೊಂಡು ನನಗೆ ತೊಂದರೆ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ನನ್ನ ಸಾವಿಗೆ ನಿರ್ಧಾರ ಮಾಡಿದ್ದೇನೆ. ನನ್ನ ತಂದೆ, ತಾಯಿಗೆ ಯಾವುದೇ ರೀತಿಯಾದ ತೊಂದರೆ ಆಗಬಾರದು. ನನ್ನನ್ನು ಕ್ಷಮಿಸಿ… ಸಾಯಿರಾಬಾನು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:17 am, Mon, 21 April 25