AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SL vs IND: ಶ್ರೀಲಂಕಾ ವಿರುದ್ಧ 9 ವಿಕೆಟ್​ಗಳಿಂದ ಗೆದ್ದ ಟೀಂ ಇಂಡಿಯಾ

SL W vs IND W: ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 147 ರನ್ ಗಳಿಸಿತು. ಭಾರತದ ಪರ ಸ್ನೇಹ ರಾಣಾ 3 ವಿಕೆಟ್ ಪಡೆದರು. ಭಾರತ 148 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.

SL vs IND: ಶ್ರೀಲಂಕಾ ವಿರುದ್ಧ 9 ವಿಕೆಟ್​ಗಳಿಂದ ಗೆದ್ದ ಟೀಂ ಇಂಡಿಯಾ
India Women
ಪೃಥ್ವಿಶಂಕರ
|

Updated on: Apr 27, 2025 | 6:33 PM

Share

ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಭಾರತ ವನಿತಾ ತಂಡಗಳ ನಡುವಿನ ತ್ರಿಕೋನ ಸರಣಿ ಇಂದಿನಿಂದ ಆರಂಭವಾಗಿದೆ. ಏಪ್ರಿಲ್ 27 ರಿಂದ ಪ್ರಾರಂಭವಾಗಿರುವ ಈ ತ್ರಿಕೋನ ಸರಣಿ 15 ದಿನಗಳ ಕಾಲ ನಡೆಯಲಿದ್ದು, ಒಟ್ಟು 7 ಪಂದ್ಯಗಳು ನಡೆಯಲಿವೆ. ಅದರಂತೆ ಇಂದಿನ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಭಾರತ ವನಿತಾ (SL W vs IND W) ಪಡೆಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನಿರೀಕ್ಷೆಯಂತೆ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಚಾಮರಿ ಅಟಪಟ್ಟು ನಾಯಕತ್ವದ ಶ್ರೀಲಂಕಾ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ತತ್ತರಿಸಿದ ಲಂಕಾ ಇನ್ನಿಂಗ್ಸ್

ಮಳೆ ಪೀಡಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮಳೆಯಿಂದಾಗಿ ಈ ಪಂದ್ಯವನ್ನು ತಲಾ 39 ಓವರ್​ಗಳಿಗೆ ಇಳಿಸಲಾಯಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ ಕೊನೆಯ ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ತಂಡದ ಪರ ಆರಂಭಿಕ ಆಟಗಾರ್ತಿ ಹಸಿನಿ ಪೆರೇರಾ ಅತ್ಯಧಿಕ 30 ರನ್ ಬಾರಿಸಿದರೆ, ಕವಿಶಾ ದಿಲ್ಹಾರಿ 25 ರನ್ ಹಾಗೂ ವಿಕೆಟ್ ಕೀಪರ್ ಅನುಷ್ಕಾ ಸಂಜೀವಿನಿ 22 ರನ್​ಗಳ ಕಾಣಿಕೆ ನೀಡಿದರು. ಇನ್ನು ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಸ್ನೇಹ ರಾಣಾ ಅತ್ಯಧಿಕ 3 ವಿಕೆಟ್ ಪಡೆದರೆ, ನಲ್ಲಪುರರೆಡ್ಡಿ ಚರಣಿ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು. ಅರುಂಧತಿ ರೆಡ್ಡಿ ಕೂಡ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಭಾರತಕ್ಕೆ 9 ವಿಕೆಟ್​ಗಳ ಜಯ

147 ರನ್​​ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ವನಿತಾ ಪಡೆ ಕೇವಲ 1 ವಿಕೆಟ್ ಕಳೆದುಕೊಂಡು 29.4 ಓವರ್​ಗಳಲ್ಲಿ ಗೆಲುವಿನ ನಗೆಬೀರಿತು. ಆರಂಭಿಕ ಆಟಗಾರ್ತಿಯರಾದ ಪ್ರತೀಕಾ ರಾವಲ್ ಹಾಗೂ ಸ್ಮೃತಿ ಮಂಧಾನ ಮೊದಲ ವಿಕೆಟ್​ಗೆ 54 ರನ್​​ಗಳ ಜೊತೆಯಾಟ ನೀಡಿದರು. ಈ ವೇಳೆ ಉಪನಾಯಕಿ ಮಂಧಾನ 46 ಎಸೆತಗಳಲ್ಲಿ 6 ಬೌಂಡರಿ ಸಹಿತ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಪ್ರತೀಕಾ ಹಾಗೂ ಹರ್ಲೀನ್ ಡಿಯೋಲ್ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಆರಂಭಿಕ ಆಟಗಾರ್ತಿ ಪ್ರತೀಕಾ 62 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 50 ರನ್ ಬಾರಿಸಿದರೆ, ಹರ್ಲೀನ್ 71 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 48 ರನ್‌ ಬಾರಿಸಿದರು. ಇದೀಗ ಭಾರತ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 29 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ