Dharwad News: ಧಾರವಾಡದ ಕಾರ್ಖಾನೆಗಳಿಂದ ತೆರಿಗೆಯೇ ಬರುತ್ತಿಲ್ಲ: ಗ್ರಾಮ ಪಂಚಾಯತಿಗಳಿಗಿಲ್ಲ ಆದಾಯ
ಧಾರವಾಡದ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ಕೈಗಾರಿಕೆಗಳು ಆರಂಭದಿಂದ ಇದುವರೆಗೂ ತೆರಿಗೆಯನ್ನೇ ಕಟ್ಟಿಲ್ಲ. ಇದರಿಂದಾಗಿ ಸ್ಥಳೀಯ ಗ್ರಾಮ ಪಂಚಾಯತಿಗೆ ದೊಡ್ಡ ಸಮಸ್ಯೆಗಳು ಎದುರಾಗಿವೆ.
ಧಾರವಾಡ, ಜುಲೈ 20: ಯಾವುದೇ ಉದ್ಯಮವಿರಲಿ, ಯಾವುದೇ ಕಟ್ಟಡಗಳಿರಲಿ, ಸರಕಾರಕ್ಕೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಕಟ್ಟೋದು ಕಡ್ಡಾಯ. ತೆರಿಗೆ ಕಟ್ಟಿದಾಗಲಷ್ಟೇ ಅಭಿವೃದ್ಧಿ ಸಾಧ್ಯ. ಅದರೊಂದಿಗೆ ಎಲ್ಲರಿಗೂ ಸಿಗಬೇಕಾದ ಸೌಲಭ್ಯವೂ ಸರಳವಾಗಿ ಸಿಗುತ್ತವೆ. ಆದರೆ ಧಾರವಾಡದ ಮುಮ್ಮಿಗಟ್ಟಿ ಕೈಗಾರಿಕಾ (factories) ಪ್ರದೇಶದಲ್ಲಿನ ಬಹುತೇಕ ಕೈಗಾರಿಕೆಗಳು ಆರಂಭದಿಂದ ಇದುವರೆಗೂ ತೆರಿಗೆಯನ್ನೇ ಕಟ್ಟಿಲ್ಲ. ಇದರಿಂದಾಗಿ ಸ್ಥಳೀಯ ಗ್ರಾಮ ಪಂಚಾಯತಿಗೆ ದೊಡ್ಡ ಸಮಸ್ಯೆಗಳು ಎದುರಾಗಿವೆ.
ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಬಳಿ ಇರೋ ಕೈಗಾರಿಕಾ ಪ್ರದೇಶವು ಮುಮ್ಮಿಗಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಗೆ ಬರುತ್ತದೆ. ಈ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 250 ಕ್ಕೂ ಹೆಚ್ಚು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಸಾವಿರಾರು ಜನರಿಗೆ ಕೆಲಸ ಸಿಕ್ಕಿದೆ. ಆದರೆ ಇದೀಗ ಮುಮ್ಮಿಗಟ್ಟಿ ಗ್ರಾಮ ಪಂಚಾಯತಿಗೆ ಸಮಸ್ಯೆಯೊಂದು ತಲೆದೋರಿದೆ.
ಕೈಗಾರಿಕೆಗಳು ಆಯಾ ಪ್ರದೇಶದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆಯನ್ನು ಕಟ್ಟಬೇಕು. 1993 ರಲ್ಲಿ ಈ ಪ್ರದೇಶದಲ್ಲಿ ಕೈಗಾರಿಕೆಗಳು ಆರಂಭವಾದ ಎಕರೆಗೆ ರೂ. 500 ವಿಧಿಸಲಾಗುತ್ತಿತ್ತು. ಆದರೆ ಬಳಿಕ ಸರಕಾರ ನಿಯಮಗಳನ್ನು ಬದಲಾಯಿಸಿತು. ಕೈಗಾರಿಕೆಗಳ ಕಟ್ಟಡ ಹಾಗೂ ವಿಸ್ತಾರದ ಆಧಾರದ ಮೇಲೆ ತೆರಿಗೆ ವಿಧಿಸಲು ಶುರುವಾಯ್ತು. ಆದರೆ ಅವತ್ತಿನಿಂದ ಇವತ್ತಿನವರೆಗೂ ಯಾವೊಬ್ಬ ಕೈಗಾರಿಕೋದ್ಯಮಿಯೂ ಈ ಗ್ರಾಮ ಪಂಚಾಯತಿಗೆ ತೆರಿಗೆಯನ್ನೇ ಕಟ್ಟಿಲ್ಲ. ಗ್ರಾಮ ಪಂಚಾಯತಿಗಳಿಗೆ ತೆರಿಗೆ ಕಟ್ಟಿದರೆ ಆಯಾ ಪ್ರದೇಶದಲ್ಲಿ ಅಭಿವೃದ್ಧಿ, ಸೌಕರ್ಯಗಳನ್ನು ನೀಡಲು ಸಾಧ್ಯ. ಆದರೆ ಇದೀಗ ಎರಡು ಕೋಟಿಗೂ ಅಧಿಕ ತೆರಿಗೆಯನ್ನು ಈ ಕೈಗಾರಿಕೆಗಳು ಇಟ್ಟುಕೊಂಡಿವೆ.
ಇದನ್ನೂ ಓದಿ: ನವಲಗುಂದದ ಪ್ರಸಿದ್ಧ ಕಾಮಣ್ಣ ದೇವನ ಹಣವನ್ನೇ ನುಂಗಿ ನೀರು ಕುಡಿದರಾ?
ಹೀಗೆ ತೆರಿಗೆ ಸಂಗ್ರಹವಾಗದೇ ಇರೋದ್ರಿಂದ ಈ ಪ್ರದೇಶದಲ್ಲಿ ಮೂಲಸೌಕರ್ಯ ಅನ್ನೋದು ಸಾಧ್ಯವಾಗುತ್ತಲೇ ಇಲ್ಲ. ಈ ಬಗ್ಗೆ ಕಾರ್ಖಾನೆಯವರನ್ನು ಕೇಳಿದರೆ ಅವರ ಉತ್ತರವೇ ಬೇರೆ ಇದೆ. ನಾವು ಸರಿಯಾದ ರಸ್ತೆಗಳನ್ನು ನಿರ್ಮಿಸಿಕೊಡಿ ಅಂತಾ ಗ್ರಾಮ ಪಂಚಾಯತಿಯವರನ್ನು ಕೇಳಿದರೆ, ಅದನ್ನು ಸಂಬಂಧಪಟ್ಟ ಇಲಾಖೆ ಮಾಡುತ್ತದೆ.
ಅದು ನಮಗೆ ಸಂಬಂಧವಿಲ್ಲ ಅನ್ನುತ್ತಾರಂತೆ. ಮತ್ತೆ ಕೆಲವು ಕೈಗಾರಿಕೆಗಳು ಸರಕಾರದಿಂದ ಸಬ್ಸಿಡಿ ಪಡೆದು ಇಲ್ಲಿ ಬಂದು ಸ್ಥಾಪಿತವಾಗಿವೆ. ಅಂಥ ಕೈಗಾರಿಕೆಗಳ ಮಾಲಿಕರು, ಸ್ಥಳೀಯ ತೆರಿಗೆ ತಮಗೆ ಸಂಬಂಧವೇ ಇಲ್ಲ ಅನ್ನುತ್ತಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಗೊಂದಲ ಸೃಷ್ಟಿಯಾಗಿರೋ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಶೀಘ್ರದಲ್ಲಿಯೇ ಸಂಬಂಧಿಸಿದವರೆಲ್ಲ ಸಭೆ ಕರೆದು ಇದಕ್ಕೊಂದು ಪರಿಹಾರ ಕಂಡುಕೊಳ್ಳೋ ಯತ್ನ ಮಾಡೋದಾಗಿ ಹೇಳುತ್ತಾರೆ.
ಗ್ರಾಮ ಪಂಚಾಯತಿಯವರು ರಸ್ತೆ ಅಭಿವೃದ್ಧಿ ಮಾಡಿದ ಮೇಲೆ ಟ್ಯಾಕ್ಸ್ ಕಟ್ಟುತ್ತೇವೆ ಅಂತಾ ಉದ್ಯಮಿಗಳು ಹೇಳಿದರೆ, ಹಣವೇ ಇಲ್ಲದಿದ್ದರೆ ಅಭಿವೃದ್ಧಿ ಮಾಡೋಕಾಗುತ್ತಾ ಅಂತಾ ಪಂಚಾಯತಿಯವರು ಕೇಳುತ್ತಿದ್ದಾರಂತೆ.
ಇದನ್ನೂ ಓದಿ: ಮದುವೆ ಫೋಟೋ ಕೊಡದ ಫೋಟೊಗ್ರಾಫರ್ಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ
ಇಲ್ಲಿನ ಜನರು ಕೈಗಾರಿಕೆಗಾಗಿ ತಮ್ಮ ಫಲವತ್ತಾದ ಜಮೀನನ್ನು ಕಳೆದುಕೊಂಡಿದ್ದಾರೆ. ಆಗ ಅವರಿಗೆ ಸಿಕ್ಕಿದ್ದ ಪರಿಹಾರವೂ ಅಷ್ಟಕ್ಕಷ್ಟೇ. ಅಲ್ಲದೇ ಭೂಸ್ವಾಧೀನಪಡಿಸಿಕೊಳ್ಳುವಾಗ ಕುಟುಂಬಕ್ಕೊಂದು ನೌಕರಿ ಕೊಡೋದಾಗಿ ಹೇಳಿದ್ದ ಕಂಪನಿಯವರು ಆ ಮಾತನ್ನು ಉಳಿಸಿಕೊಳ್ಳಲೇ ಇಲ್ಲ. ಅತ್ತ ಭೂಮಿಯೂ ಹೋಯಿತು, ಇತ್ತ ನೌಕರಿಯೂ ಇಲ್ಲ ಅನ್ನೋ ಹೊತ್ತಿನಲ್ಲಿ ಇದೀಗ ತಮ್ಮ ಸ್ಥಳೀಯ ಸಂಸ್ಥೆಗೆ ತೆರಿಗೆಯನ್ನೂ ಕಟ್ಟದಿದ್ದರೆ ಹೇಗೆ ಅಂತಾ ಪ್ರಶ್ನಿಸುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ಸಿಗೋದು ಮಾತ್ರ ಅಸಾಧ್ಯದ ಮಾತೇ ಸರಿ.
ಕೋಟ್ಯಾಂತರ ರೂಪಾಯಿ ತೆರಿಗೆ ಬಾಕಿ ಇದೆ: ವಿಠ್ಠಲ ಭಟ್ಟಂಗಿ
ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿರೋ ಮುಮ್ಮಿಗಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಠ್ಠಲ್ ಭಟ್ಟಂಗಿ, ಕೈಗಾರಿಕೆಗಳು ಆರಂಭದಿಂದಲೂ ತೆರಿಗೆಯನ್ನೇ ಕಟ್ಟಿಲ್ಲ. ಕೇಳಿದರೆ ಒಬ್ಬೊಬ್ಬರು ಒಂದೊಂದು ಥರ ಹೇಳುತ್ತಿದ್ದಾರೆ. ಮೂಲಸೌಕರ್ಯಗಳನ್ನು ನಾವು ಅವರಿಗೆ ನೀಡಬೇಕೆಂದರೆ ನಮಗೆ ಹಣ ಬೇಕು. ಆದರೆ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಕೈಗಾರಿಕೆಗಳು ಬರಲು ನಮ್ಮ ರೈತರು ತಮ್ಮ ಫಲವತ್ತಾದ ಭೂಮಿಯನ್ನು ನೀಡಿದ್ದಾರೆ. ಅಂಥ ಭೂಮಿಯಲ್ಲಿ ಸ್ಥಾಪಿತವಾದ ಕೈಗಾರಿಕೆಗಳು ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಕಟ್ಟದಿದ್ದರೆ ಹೇಗೆ? ಅಂತಾ ಪ್ರಶ್ನಿಸಿದ್ದಾರೆ.
ಕೋಳಿ ಮೊದಲೋ ಮೊಟ್ಟೆ ಮೊದಲೋ ಅನ್ನುವಂತಾಗಿದೆ: ಡಿಸಿ ಗುರುದತ್ತ ಹೆಗಡೆ
ಈ ಸಮಸ್ಯೆ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತಾಡಿದ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಶೀಘ್ರದಲ್ಲಿಯೇ ಸಂಬಂಧಿಸಿದವರೆಲ್ಲ ಸಭೆ ಕರೆದು ಇದಕ್ಕೊಂದು ಪರಿಹಾರ ಕಂಡುಕೊಳ್ಳೋ ಯತ್ನ ಮಾಡೋದಾಗಿ ಹೇಳುತ್ತಾರೆ. ಇನ್ನು ಗ್ರಾಮ ಪಂಚಾಯತಿಯವರು ರಸ್ತೆ ಅಭಿವೃದ್ಧಿ ಮಾಡಿದ ಮೇಲೆ ಟ್ಯಾಕ್ಸ್ ಕಟ್ಟುತ್ತೇವೆ ಅಂತಾ ಉದ್ಯಮಿಗಳು ಹೇಳಿದರೆ, ಹಣವೇ ಇಲ್ಲದಿದ್ದರೆ ಅಭಿವೃದ್ಧಿ ಮಾಡೋಕಾಗುತ್ತಾ ಅಂತಾ ಪಂಚಾಯತಿಯವರು ಕೇಳುತ್ತಿದ್ದಾರಂತೆ. ಹೀಗಾಗಿ ಈ ಸಮಸ್ಯೆ ಕೋಳಿ ಮೊದಲೋ ಮೊಟ್ಟೆ ಮೊದಲೋ ಅನ್ನುವಂತಾಗಿದೆ ಅನ್ನುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:25 pm, Thu, 20 July 23