ಕೋಲಾರ ನಗರಸಭೆಯಲ್ಲಿ ಮುಂದುವರೆದ ಅಕ್ರಮಗಳ ಸರಮಾಲೆ: ಕೋಟ್ಯಂತರ ರೂ ಆಸ್ತಿ ಕೊಳ್ಳೆ ಹೊಡೆದ ಖದೀಮರು
ಕೋಲಾರ ನಗರಸಭೆಯಲ್ಲಿ ಕೋಟ್ಯಂತರ ರೂ ಮೌಲ್ಯದ ಸರ್ಕಾರಿ ಜಮೀನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬೋಗಸ್ ಖಾತೆಗಳನ್ನು ತೆರೆದು ಈ ಅಕ್ರಮ ಮಾಡಲಾಗಿದೆ. ಆಶ್ರಯ ಯೋಜನೆಗಾಗಿ ಖರೀದಿಸಿದ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಬಡಾವಣೆ ನಿರ್ಮಿಸಿ ಮಾರಾಟ ಮಾಡಿದ್ದಾರೆ. ನಗರಸಭೆ ಸದಸ್ಯರು ದೂರು ನೀಡಿದ್ದಾರೆ.

ಕೋಲಾರ, ಏಪ್ರಿಲ್ 25: ನಗರಸಭೆಯಲ್ಲಿ (Municipal Council) ಅಕ್ರಮಗಳ ಸರಮಾಲೆ ಮುಂದುವರೆದಿದೆ. ನಕಲಿ ದಾಖಲೆ ಸೃಷ್ಟಿ, ಬೋಗಸ್ ಖಾತೆ, ಸಹಿ, ಸೀಲ್ ಎಲ್ಲವೂ ನಕಲು ಮಾಡುವ ಮೂಲಕ ನಗರಸಭೆಯ ಕೋಟ್ಯಂತರ ರೂ ಆಸ್ತಿಯನ್ನು (property) ಖದೀಮರು ಕೊಳ್ಳೆ ಹೊಡೆದಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿಗಳು ಕರ್ತವ್ಯ ಲೋಪವೆಸಗಿದ ಹಿನ್ನಲೆ ನಗರಸಭೆ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಸದ್ಯ ನಗರಸಭೆ ಸದಸ್ಯ ಪ್ರವೀಣ್ ಗೌಡರಿಂದ ಕಮಿಷನರ್ ಪ್ರಸಾದ್ಗೆ ದೂರು ನೀಡಲಾಗಿದೆ.
ಕೋಲಾರ ನಗರಸಭೆ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಇದೀಗ ಖಾಸಗಿ ವ್ಯಕ್ತಿಗಳು ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೋಲಾರ ತಾಲ್ಲೂಕಿನ ಕಸಬಾ ಹೋಬಳಿ ಖಾದ್ರಿಪುರ ಗ್ರಾಮದ ಸರ್ವೇ ನಂ.29 ರಲ್ಲಿ 1.19 ಎಕರೆ ಜಾಗದಲ್ಲಿ ಲೇಔಟ್ ಮಾಡಿ ಮಾರಾಟ ಮಾಡಲಾಗಿದೆ. 2001-02 ರಲ್ಲಿ ಮುನಿವೆಂಕಟಪ್ಪ, ಮುನಿಸೊಣ್ಣಪ್ಪ ಅವರ ಮಾಲೀಕತ್ವದ ಭೂಮಿಯನ್ನು ಮಹ್ಮದ್ ಅಕ್ಬರ್, ಎಸ್.ಚಾಂದ್ ಪಾಷಾ ಅವರು ಜಿ.ಪಿ.ಎ ಮಾಡಿಕೊಂಡಿದ್ದ ಭೂಮಿಯನ್ನು ನಗರಸಭೆಯಿಂದ ಆಶ್ರಯ ಸಮಿತಿಗಾಗಿ ಖರೀದಿ ಮಾಡಲಾಗಿತ್ತು.
ಇದನ್ನೂ ಓದಿ: ಬರೋಬ್ಬರಿ 57 ವರ್ಷಗಳ ನಂತರ ಸಿಕ್ತು ನೂರಾರು ಕೋಟಿ ರೂ. ಬೆಲೆ ಬಾಳುವ PWD ಆಸ್ತಿ
ಆಶ್ರಯ ಸಮಿತಿಗಾಗಿ ಖರೀದಿ ಮಾಡಿರುವ ದಾಖಲೆಗಳಿರುವ ನಗರಸಭೆ ಆಸ್ತಿಯನ್ನು ಆಶ್ರಯ ಯೋಜನೆಯಡಿ ನಗರಸಭೆ ವ್ಯಾಪ್ತಿಯ ವಸತಿ ರಹಿತರಿಗೆ ನಿವೇಶನ ನೀಡಲು ರಾಜ್ಯಪಾಲರ ಮೂಲಕ ಕೋಲಾರ ನಗರಸಭೆ ಆಯುಕ್ತರ ಹೆಸರಿನಲ್ಲಿ ಖರೀದಿ ಮಾಡಿದ್ದ ಜಮೀನು ಇದಾಗಿದೆ. ಆದರೆ ನಗರಸಭೆ ಸಮಯಕ್ಕೆ ಸರಿಯಾಗಿ ಖಾತೆ ಮಾಡಿಕೊಳ್ಳದೆ ಹಾಗೆ ಬಿಟ್ಟಿದ್ದರ ಹಿನ್ನೆಲೆ ಕೆಲ ಪ್ರಭಾವಿಗಳು, ಭೂ ಮಾಫಿಯಾದವರು ಯೋಜನಾ ನಿರ್ದೇಶಕರ ಸಹಿ ಹಾಗೂ ಪುರಸಭೆಗೂ ಜಮೀನಿಗೂ ಯಾವುದೆ ಸಂಬಂಧವಿಲ್ಲ ಅನ್ನೋ ರೀತಿಯಲ್ಲಿ ನಕಲು ದಾಖಲೆ ಮಾಡಿ ಬಡಾವಣೆ ಮಾಡಿ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಸದ್ಯ ನಗರಸಭೆ ಸದಸ್ಯ ಪ್ರವೀಣ್ ಗೌಡ ಎಂಬುವರು ನಗರಸಭೆ ಕಮಿಷನರ್ ಪ್ರಸಾದ್ ಅವರಿಗೆ ದೂರು ಸಲ್ಲಿಸಿದ್ದು, ಭೂಮಿ ವಶಕ್ಕೆ ಪಡೆಕೊಳ್ಳದೆ ಇದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ನಗರಸಭೆ ಖರೀದಿ ಮಾಡಿದ್ದ ನೂರಾರು ಕೋಟಿ ರೂ ಬೆಲೆ ಬಾಳುವ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಠಿ ಮಾಡುವುದು, ಇ-ಖಾತೆಗಳಂತಹ ಬೋಗಸ್ ದಾಖಲೆ ಮಾಡಿಕೊಂಡು ಮಾರಾಟ ಮಾಡುವ ಜಾಲ ನಗರಸಭೆಯಲ್ಲಿ ಆಕ್ಟೀವ್ ಆಗಿದೆ. ಏಜಾಜ್ ಪಾಷಾ ಎಂಬುವರು ತಮ್ಮದೆ ಜಮೀನು ಎಂದು ನಿವೇಶನಗಳನ್ನು ಮಾಡಿ ಮಾರಾಟ ಮಾಡಿದ್ದರು. ತಕ್ಷಣ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಪತ್ರ ಬರೆದು ಈ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ರಿಜಿಸ್ಟರ್ ಆಗಲೀ ಯಾವುದೇ ವ್ಯವಹಾರ ನಡೆಸದಂತೆ ಕೋರಿದ್ದರು. ಇದಕ್ಕೆ ಪ್ರತಿಯಾಗಿ ನಗರಸಭೆ ನಕಲಿ ಪತ್ರವನ್ನು ಸೃಷ್ಟಿಸಿ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಜಮೀನು ಸಂಬಂಧ ಯಾವುದೇ ತಕರಾರು ಇಲ್ಲ ಎಂದು ಮನವಿ ಪತ್ರ ನೀಡಿದ್ದಾರೆ.
ಅಂದಿನ ಪ್ರಭಾರ ಪೌರಾಯುಕ್ತಾಗಿದ್ದ, ಯೋಜನಾ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅಂಬಿಕಾ ಅವರ ಸಹಿಯನ್ನು ನಕಲು ಮಾಡಿದ್ದಾರೆ. ಹಾಗಾಗಿ ನಗರಸಭೆ ಆಸ್ತಿ ಉಳಿಸುವ ನಿಟ್ಟಿನಲ್ಲಿ ಎಚ್ಚೆತ್ತ ನಗರಸಭೆ ಪೌರಾಯುಕ್ತರು ಗಲ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಅಲ್ಲದೆ ನಗರಸಭ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಆಯುಕ್ತ ಪ್ರಸಾದ್ ಅವರು ಕೋಲಾರ ತಹಶಿಲ್ದಾರ್ ನಯನ ಅವರನ್ನ ಭೇಟಿಯಾಗಿ ಅಗತ್ಯ ದಾಖಲೆಗಳ ಹುಡುಕಾಟದಲ್ಲಿದ್ದಾರೆ. ನಗರಸಭೆಗೆ ಸೇರಿದ ಸ್ವತ್ತನ್ನು ಹುಡುಕಿ ಅವು ರಿಜಿಸ್ಟರ್ ಆಗದಂತೆ ಬ್ಲಾಕ್ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕಾರು ಅಡ್ಡಗಟ್ಟಿ 3.5 ಕೆಜಿ ಚಿನ್ನ ರಾಬರಿ: ಕೋಲಾರ ನಗರಸಭೆ ಕಾಂಗ್ರೆಸ್ ಸದಸ್ಯ ಅರೆಸ್ಟ್!
ಒಟ್ಟಾರೆ ಕೋಲಾರ ನಗರಸಭೆ ಸರಕಾರಿ ಸ್ವತ್ತುಗಳ ಮೇಲೆ ಭೂ ಮಾಫಿಯಾದವರ ಕಣ್ಣು ಬಿದ್ದಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂ ಜಮೀನು ಹೊಡೆಯುವ ಹುನ್ನಾರ ಇದಾಗಿದೆ. ಇನ್ನಾದರೂ ಅಧಿಕಾರಿಗಳು ದಾಖಲೆ ಹಾಗೂ ಜಾಗವನ್ನು ಭದ್ರಪಡಿಸಿಕೊಳ್ಳದಿದ್ದರೆ ಸರ್ಕಾರಿ ಕಚೇರಿಗಳು ಸಹ ಭೂ ಮಾಫಿಯಾದವರ ಪಾಲಾಗೋದ್ರಲ್ಲಿ ಯಾವುದೆ ಅನುಮಾನವಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:03 pm, Fri, 25 April 25




