ಬರೋಬ್ಬರಿ 57 ವರ್ಷಗಳ ನಂತರ ಸಿಕ್ತು ನೂರಾರು ಕೋಟಿ ರೂ. ಬೆಲೆ ಬಾಳುವ PWD ಆಸ್ತಿ
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ರಸ್ತೆ ಮತ್ತು ರೈಲ್ವೆ ಲೈನ್ ನಿರ್ಮಾಣಕ್ಕಾಗಿ 57 ವರ್ಷಗಳ ಹಿಂದೆ ಸರ್ಕಾರ ರೈತರಿಂದ ಭೂ ಸ್ವಾಧೀನಪಡಿಸಿಕೊಂಡಿತ್ತು. ರಸ್ತೆ ಮತ್ತು ರೈಲ್ವೆ ಲೈನ್ ನಿರ್ಮಾಣ ಕಾರ್ಯವಾದ ಬಳಿಕ, ಉಳಿದ ಭೂಮಿಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಿಳಿಯದೆ ಲೋಕೋಪಯೋಗಿ ಇಲಾಖೆ ಇತ್ತ ತಲೆ ಸಹಿತ ಹಾಕಿರಲಿಲ್ಲ. ಆದರೆ, ಇದೀಗ ಏಕಾಏಕಿ ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಜೊತೆಗೂಡಿ ಈ ಭೂಮಿಯ ಗಡಿ ಗುರುತು ಮಾಡಲು ಮುಂದಾಗಿದೆ. ಮುಂದೇನಾಯ್ತು? ಇಲ್ಲಿದೆ ವಿವರ

ಕೋಲಾರ, ಏಪ್ರಿಲ್ 09: ಮಾಲೂರು (Malur) ಪಟ್ಟಣದ ಹೊಸೂರು ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಸರ್ಕಾರ 57 ವರ್ಷಗಳ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಈ ಭೂಮಿ ಈಗಿನ ಲೆಕ್ಕಾಚಾರದಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಆದರೆ, ಈ ಭೂಮಿ ಪಿಡಬ್ಲ್ಯುಡಿ (PWD) ಇಲಾಖೆಗೆ ಸೇರಿದ ಹಲವು ಜನರಿಂದ ಒತ್ತುವರಿಯಾಗಿದೆ. ಬುಧವಾರ (ಏ.09) ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿಯಾದ ಜಾಗದ ಗಡಿ ಗುರುತು ಮಾಡಿದ್ದು, ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಮಾಲೂರು ಪಟ್ಟಣದ ಹೊಸೂರು ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಹಾಗೂ ಹೊಸ ರೈಲ್ವೆ ಲೈನ್ ನಿರ್ಮಾಣಕ್ಕಾಗಿ ಸರ್ಕಾರ 1968-70 ರಲ್ಲಿ ರೈತರಿಗೆ ಪರಿಹಾರ ನೀಡಿ ಭೂ ಸ್ವಾಧೀನಪಡಿಸಿಕೊಂಡಿತ್ತು. ರಸ್ತೆ ಹಾಗೂ ರೈಲ್ವೆ ಲೈನ್ ನಿರ್ಮಾಣ ಮಾಡಿದ ನಂತರ 16.13 ಎಕರೆ ಜಾಗ ಉಳಿದಿದೆ. ಆದರೆ, ಈ ಜಾಗವನ್ನು ಪಿಡಬ್ಲ್ಯುಡಿ ಇಲಾಖೆ ಯಾವುದೇ ಕೆಲಸಕ್ಕೆ ಬಳಕೆ ಮಾಡದ ಹಿನ್ನೆಲೆಯಲ್ಲಿ ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಸುಮಾರು 24 ಸರ್ವೆ ನಂಬರ್ಗಳಲ್ಲಿ ಭೂಮಿ ಒತ್ತುವರಿಯಾಗಿದೆ ಎಂದು ಕಂದಾಯ ಇಲಾಖೆ ವರದಿ ನೀಡಿದೆ.
ಅಲ್ಲದೇ, ಒತ್ತುವರಿ ಮಾಡಿದವರಲ್ಲಿ ಸಾಕಷ್ಟು ಜನ ಪ್ರಭಾವಿಗಳೇ ಇದ್ದು, ಅವರಲ್ಲಿ ಕಾಂಗ್ರೇಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹಿನ್ನೆಲೆ ಇರುವವರು ಇದ್ದಾರೆ ಎನ್ನಲಾಗಿದೆ. ಸದ್ಯ, ಪಿಡಬ್ಲ್ಯುಡಿ ಇಲಾಖೆ ಒತ್ತುವರಿಯಾಗಿರುವ ತಮ್ಮ ಭೂಮಿಯ ಗಡಿ ಗುರುತು ಮಾಡಲು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು. ಗಡಿ ಗುರುತು ಮಾಡುವ ಕೆಲಸಕ್ಕೆ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಅವರನ್ನು ಸಮಾಧಾನಪಡಿಸಿದರು. ಇವತ್ತಿಗೆ, ಈ ಭೂಮಿಗೆ ಬಂಗಾರದ ಬೆಲೆ ಇದೆ. ಸುಮಾರು 150 ಕೋಟಿ ರೂಪಾಯಿಯಷ್ಟು ಬೆಲೆ ಬಾಳುವ ಆಸ್ತಿ ಇದಾಗಿದ್ದು ಅದರ ಗಡಿ ಗುರುತು ಮಾಡಿ ಆದಷ್ಟು ಬೇಗ ಒತ್ತುವರಿ ತೆರವು ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.
ಲೋಕೋಪಯೋಗಿ ಇಲಾಖೆ ರಸ್ತೆ ಹಾಗೂ ರೈಲ್ವೆ ಹೊಸ ಮಾರ್ಗಕ್ಕಾಗಿ ಭೂಸ್ವಾದೀನ ಪಡಿಸಿಕೊಂಡು ಸುಮಾರು 57 ವರ್ಷಗಳೇ ಕಳೆದಿವೆ. ಅಂದಿನಿಂದ ಇಲಾಖೆ ಈ ಜಾಗದತ್ತ ತಲೆ ಹಾಕಿ ಸಹಿತ ಮಲಗಿಲ್ಲ. ಈಗ ಮಾಲೂರು ಪಟ್ಟಣದಲ್ಲಿ ಹೊಸ ಬಸ್ ನಿಲ್ದಾಣ ಸೇರಿದಂತೆ ಬೇರೆ ಬೇರೆ ಅಭಿವೃದ್ದಿ ಕೆಲಸಗಳಿಗಾಗಿ ಜಾಗ ಹುಡುಕುವ ವೇಳೆ ಪಿಡಬ್ಲ್ಯುಡಿ ಇಲಾಖೆಗೆ ಸೇರಿದ ನೂರಾರು ಕೋಟಿ ಬೆಲೆ ಬಾಳುವ ಜಾಗ ಇರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಜಾಗದ ಗಡಿ ಗುರುತು ಮಾಡುವ ಕೆಲಸ ಬಿಗಿ ಪೊಲೀಸ್ ಬಂದೋಬಸ್ತ್ದಲ್ಲಿ ನಡೆಯಿತು. ಈ ವೇಳೆ ಕೆಲವು ರೈತರು ಗಡಿ ಗುರುತು ಮಾಡಲು ವಿರೋಧ ವ್ಯಕ್ತಪಡಿಸಿದರು. “ಇದು ಪಿಡಬ್ಲ್ಯುಡಿ ಇಲಾಖೆಗೆ ಸೇರಿದ ಜಾಗವಲ್ಲ ಇದು ನಮ್ಮ ಪಿತ್ರರ್ಜಿತ ಆಸ್ತಿ ಪಿಡಬ್ಲ್ಯುಡಿ ಸರ್ವೆ ನಂ-245/1 ರಲ್ಲಿ ಭೂಮಿ ವಶಪಡಿಸಿಕೊಂಡಿತ್ತು. ಆದರೆ, ಈಗ ಅಧಿಕಾರಿಗಳು 245/2 ರಲ್ಲಿ ಬಂದು ಸರ್ವೆ ಮಾಡಿ ನಮ್ಮ ಜಾಗವನ್ನು ಬಲವಂತವಾಗಿ ಪಡೆಯುತ್ತಿದ್ದಾರೆ. ನಮ್ಮ ಜಾಗದಲ್ಲಿ ಕಲ್ಲುಹಾಕಿ ಗಡಿ ಗುರುತು ಮಾಡುತ್ತಿದ್ದಾರೆ. ಅಧಿಕಾರಿಗಳು ಇದನ್ನು ಮರುಪರಿಶೀಲನೆ ನಡೆಸಬೇಕು ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡುವುದಾಗಿ” ರೈತರು ತಿಳಿಸಿದ್ದಾರೆ.
ಇದನ್ನೂ ಓದಿ: 8 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಕಂತೆ-ಕಂತೆ ಹಣ, ವಜ್ರ-ವೈಡೂರ್ಯ ಪತ್ತೆ
ಒಟ್ಟಾರೆಯಾಗಿ ಸುಮಾರು ಐವತ್ತು ವರ್ಷಗಳ ಹಿಂದೆ ಭೂಸ್ವಾದೀನ ಮಾಡಿಕೊಂಡಿದ್ದ ಭೂಮಿಯನ್ನು ಪಿಡಬ್ಲ್ಯುಡಿ ಅಧಿಕಾರಿಗಳು ಈಗ ಹುಡುಕಾಡಲು ಶುರುಮಾಡಿದ್ದಾರೆ. ಸದ್ಯ, ಇಲ್ಲಿಯ ಭೂಮಿಯ ಬೆಲೆ ಗಗನಕ್ಕೇರಿದೆ. ಪ್ರಭಾವಿಗಳು ಈ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಬೆಲೆ ಬಾಳುವ ಭೂಮಿ ಹಣವಂತರ ಕೈಲಿದೆ. ಒತ್ತುವರಿ ತೆರವು ಕಾರ್ಯ ನಡೆಯುತ್ತಾ ಅಥವಾ ಕೇವಲ ಗಡಿ ಗುರುತಿಗೆ ಮಾತ್ರಾ ಸೀಮಿತವಾಗುತ್ತಾ ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 pm, Wed, 9 April 25