ನಂದಿನಿ ಹಾಲಿನ ಬೆಲೆ ಏರಿಕೆ: ರೈತರಿಗೆ ಸಿಗೋದೆಷ್ಟು, ಲಾಭದಲ್ಲಿ ಸರ್ಕಾರದ ಪಾಲೆಷ್ಟು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆ ಲೀಟರ್‌ಗೆ ನಾಲ್ಕು ರೂಪಾಯಿ ಏರಿಕೆಯಾಗಿದೆ. ಸರ್ಕಾರ ರೈತರಿಗೆ ನೇರವಾಗಿ ಹಣ ನೀಡುವುದಾಗಿ ಹೇಳಿದೆ. ಆದರೆ ರೈತರಿಗೆ ಕಡಿಮೆ ಹಣ ಸಿಗುತ್ತಿದೆ ಎಂಬ ಆರೋಪವಿದೆ. ಹಾಲಿನ ಖರೀದಿ ದರ ಎರಡು ಬಾರಿ ಇಳಿಕೆಯಾಗಿದೆ. ಗ್ರಾಹಕರಿಗೆ ಹೆಚ್ಚು ಬೆಲೆ, ರೈತರಿಗೆ ಕಡಿಮೆ ಲಾಭ, ಮತ್ತು ಸರ್ಕಾರಕ್ಕೆ ಭಾರಿ ಲಾಭ ಎಂಬ ಆರೋಪಗಳಿವೆ. ಹಾಲಿನ ದರ ಸಂಬಂಧಿತ ಅಂಕಿಅಂಶಗಳು ಇಲ್ಲಿವೆ.

ಕೋಲಾರ, ಮಾರ್ಚ್ 28: ಕರ್ನಾಟಕದಲ್ಲಿ (Karnataka) ನಂದಿನಿ ಹಾಲಿನ ದರ ಏರಿಕೆಗೆ (Nandini Milk Price Hike) ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಸಂಪುಟ ಸಭೆ ಅನುಮೂದನೆ ನೀಡಿದೆ. ಪ್ರತಿ ಲೀಟರ್ ಹಾಲಿಗೆ ನಾಲ್ಕು ರೂಪಾಯಿ ಏರಿಕೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದು, ಬೆಲೆ ಏರಿಕೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ ಏರಿಕೆ ಮಾಡಿದ ಹಣವನ್ನು ನೇರವಾಗಿ ರೈತರಿಗೆ ನೀಡುವುದಾಗಿ ಹೇಳಿದ್ದಾರೆ. ಹಾಗಾದರೆ ಬೆಲೆ ಏರಿಕೆಯಿಂದ ರೈತರಿಗೆಷ್ಟು ಲಾಭ? ಗ್ರಾಹಕರಿಗೆ ಎಷ್ಟು ನಷ್ಟ? ಲಾಭದಲ್ಲಿ ಸರ್ಕಾರದ ಪಾಲು ಎಷ್ಟಿರಲಿದೆ ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ.
ಕೋಲಾರ ಜಿಲ್ಲೆ ಹಾಲು ಮತ್ತು ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಹೆಸರು ಪಡೆದಿರುವ ಜಿಲ್ಲೆ. ಕೋಲಾರ ಜಿಲ್ಲೆ ಹೈನೋದ್ಯಮದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಹೈನೋದ್ಯಮವನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಜಿಲ್ಲೆಯಲ್ಲಿ ಲಕ್ಷಾಂತರ ಜನ ಹಾಲು ಉತ್ಪಾದಕರಿದ್ದಾರೆ. ಕೋಲಾರ ಹಾಲು ಒಕ್ಕೂಟದಲ್ಲಿ ಸರಿ ಸುಮಾರು 1200 ಕ್ಕೂ ಹೆಚ್ಚು ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿವೆ. ಪ್ರತಿನಿತ್ಯ ಕೋಲಾರ ಹಾಲು ಒಕ್ಕೂಟದಲ್ಲಿ ಸರಾಸರಿ ಸುಮಾರು 7 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೀಗಿರುವಾಗ ರಾಜ್ಯ ಸರ್ಕಾರ ಹಾಲಿನ ಬೆಲೆ ಏರಿಕೆ, ಹಾಲಿನ ಖರೀದಿ ದರದ ವಿಚಾರದಲ್ಲಿ ಹಾವು ಏಣಿ ಆಟ ಆಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರೈತರಿಂದ ಹಾಲು ಖರೀದಿ ದರ 2 ಬಾರಿ ಇಳಿಕೆ
ರೈತರಿಗೆ ಲೀಟರ್ ಹಾಲಿಗೆ ನೀಡಬೇಕಿದ್ದ ಸಹಾಯಧನ ಬಿಡುಗಡೆ ಮಾಡಲು ಇಲ್ಲದ ಆಸಕ್ತಿ ಸರ್ಕಾರಕ್ಕೆ ಹಾಲಿನ ದರ ಏರಿಕೆಯಲ್ಲಿ ಇದೆ ಎಂಬುದು ರೈತರು ಹಾಗೂ ಗ್ರಾಹಕರ ಆರೋಪವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿ, ಎರಡು ಬಾರಿ ರೈತರಿಂದ ಹಾಲಿನ ಖರೀದಿ ದರವನ್ನು ಇಳಿಕೆ ಮಾಡಿದೆ. ಮೊದಲು ರೈತರಿಗೆ ಲೀಟರ್ ಹಾಲಿಗೆ 34 ರೂಪಾಯಿ ಸಿಗುತ್ತಿತ್ತು. ಆದರೆ ಹಾಲು ಖರೀದಿ ದರ ಎರಡು ಬಾರಿ ಇಳಿಕೆ ಮಾಡಿದ ನಂತರ ಈಗ ಲೀಟರ್ ಹಾಲಿಗೆ ರೈತರಿಗೆ ಸಿಗುತ್ತಿರುವುದು ಕೇವಲ 30 ರೂಪಾಯಿ 20 ಪೈಸೆ ಮಾತ್ರ. ಆದರೆ ಹಾಲು ಒಕ್ಕೂಟಗಳು ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಮಾತ್ರ 60 ರೂಪಾಯಿಗೆ. ಇದು ಈವರೆಗಿನ ದರಪಟ್ಟಿ. ಆದರೆ, ಈಗ ಸರ್ಕಾರ ಹೊಸದಾಗಿ ಹಾಲಿನ ದರ ಏರಿಕೆ ಮಾಡಿದೆ.
ರೈತರಿಗೆ ಕಡಿಮೆ, ಗ್ರಾಹಕರಿಗೆ ದುಬಾರಿ, ಸರ್ಕಾರಕ್ಕೆ ಮಾತ್ರ ಭರ್ಜರಿ!
ಈವರೆಗೆ ಕೋಲಾರ ಹಾಲು ಒಕ್ಕೂಟದಲ್ಲಿ ಒಂದು ಲೀಟರ್ ಹಾಲಿನಗೆ 30.20 ಪೈಸೆ ಇತ್ತು. ಆದರೆ ಕೋಲಾರ ಹಾಲು ಒಕ್ಕೂಟ ಕಳೆದ ಒಂದು ವಾರದ ಹಿಂದೆ ರೈತರಿಗೆ ಎರಡು ರೂಪಾಯಿ ಹಾಲಿನ ಖರೀದಿ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ 32.20 ಪೈಸೆ ಸಿಗುತ್ತಿದೆ. ಈಗ ಹಾಲಿನ ದರ 4 ರೂಪಾಯಿ ಏರಿಕೆ ಮಾಡಿ ಏರಿಕೆ ಮಾಡಿದ್ದು, ಈ ದರವನ್ನು ನೇರವಾಗಿ ರೈತರಿಗೆ ಕೊಟ್ಟರೂ ರೈತರಿಗೆ ಲೀಟರ್ ಹಾಲಿಗೆ ಸಿಗುವುದು ಕೇವಲ 36.20 ರೂಪಾಯಿ. ಆದರೆ ಗ್ರಾಹಕರಿಗೆ ಮಾರಾಟ ಮಾಡುವುದು 64 ರೂ.ಗೆ. ಹಾಗಾಗಿ ಸರ್ಕಾರ ಒಂದು ಲೀಟರ್ ಹಾಲಿನ ಮೇಲೆ 30 ರೂ. ಲಾಭ ಪಡೆಯುತ್ತದೆ ಎಂಬುದು ಹಾಲು ಉತ್ಪಾದಕರ ಸುರೇಶ್ ಅವರ ಮಾತು.
ಹಾಲಿನ ದರ ಏರಿಕೆ ಬದಲು ಪಶು ಆಹಾರ ಬೆಲೆ ಇಳಿಕೆ ಮಾಡಲಿ: ರೈತರ ಆಗ್ರಹ
ಹಾಲಿನದರ ಏರಿಕೆ ಇರಲಿ, ಪಶು ಆಹಾರದ ಬೆಲೆ ಏರಿಕೆಗೆ ಹೊಣೆ ಯಾರು ಎಂದು ಹಾಲು ಉತ್ಪಾದಕರು ಪ್ರಶ್ನಿಸುತ್ತಿದ್ದಾರೆ. ಪ್ರತಿಬಾರಿ ಹಾಲಿನ ದರ ಏರಿಕೆ ಮಾಡುತ್ತಿದ್ದಂತೆ ಪಶು ಆಹಾರ ಹಾಗೂ ಫೀಡ್ಸ್ ಸೇರಿ ಎಲ್ಲಾ ಬೆಲೆಗಳು ಏರಿಕೆಯಾಗುತ್ತವೆ. ಅವರು ಮಾತ್ರ ಬೆಲೆ ಕಡಿಮೆ ಮಾಡುವುದಿಲ್ಲ. ಇದರಿಂದ ಹಾಲಿನ ದರ ಏರಿಕೆ ಮಾಡುವುದಕ್ಕಿಂತ ಹೆಚ್ಚಾಗಿ ಪಶುಆಹಾರದ ಬೆಲೆ ಇಳಿಕೆ ಮಾಡಿದರೆ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂಬ ಮಾತುಗಳು ಕೂಡಾ ರೈತರಿಂದ ಕೇಳಿ ಬರುತ್ತಿವೆ.
ಕಳೆದ ಒಂದು ವರ್ಷದಿಂದ ಮಳೆ ಇಲ್ಲದೆ ಬೆಳೆದ ಬೆಳೆಗಳೆಲ್ಲಾ ಕೈಕೊಟ್ಟಿವೆ. ರೈತರಿಗೆ ಮೇವಿನ ಕೊರತೆ ಕೂಡಾ ಕಾಡುತ್ತಿದೆ. ಜೊತೆಗೆ ಈಗ ಬೇಸಿಗೆ ಇರುವ ಹಿನ್ನೆಲೆ ಕ್ರಮೇಣವಾಗಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ ಕೂಡಾ 5 ತಿಂಗಳಿಂದ, ಅಂದರೆ 2024ರ ಅಕ್ಟೋಬರ್ ತಿಂಗಳಿಂದ ಬಾಕಿ ಉಳಿಸಿಕೊಂಡಿದೆ. ಸಾಮಾನ್ಯ ವರ್ಗ ಹಾಗೂ ಎಸ್ಟಿ ಜನಾಂಗದವರಿಗೆ ಐದು ತಿಂಗಳು ಹಾಗೂ ಎಸ್.ಸಿ ಜನಾಂಗದವರಿಗೆ ಎರಡು ತಿಂಗಳ ಪ್ರೋತ್ಸಾಹಧನ ನೀಡಬೇಕಿದೆ. ಕೋಲಾರ ಜಿಲ್ಲೆಯೊಂದಕ್ಕೆ ಸರಾಸರಿ 44 ಕೋಟಿ ರೂಪಾಯಿಯಷ್ಟು ಪ್ರೋತ್ಸಾಹಧನ ಬಾಕಿ ಇದೆ. ಹೀಗಿರುವಾಗ ಸರ್ಕಾರ ರೈತರ ಹೆಸರು ಹೇಳಿಕೊಂಡು ಹೀಗೆ ಹಾಲಿನ ದರ ಏರಿಕೆ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಆದರೆ ಈ ಹಣ ರೈತರಿಗೆ ಸಿಗುವುದು ಅನುಮಾನ ಎಂಬುದು ರೈತ ಮಹಿಳೆ ಲಕ್ಷ್ಮೀ ಅವರ ಅನುಮಾನ.
ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬರೆ: ನಂದಿನಿ ಹಾಲು ಮತ್ತಷ್ಟು ದುಬಾರಿ, ಎಷ್ಟು ಗೊತ್ತಾ?
ಒಟ್ಟಿನಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೇಲಿಂದ ಮೇಲೆ ಹಾಲಿನ ದರ ಮಾತ್ರ ಏರಿಕೆಯಾಗುತ್ತಿದ್ದು, ರೈತರಿಗೆ ಮಾತ್ರ ಇದರ ಲಾಭ ಸಿಗುತ್ತಿಲ್ಲ. ಈ ಬಾರಿಯಾದರೂ ಸರ್ಕಾರ ಏರಿಕೆ ಮಾಡುವ ಹಾಲಿನ ದರದಲ್ಲಿ ರೈತರಿಗೆ ಒಂದಷ್ಟು ಲಾಭ ಸಿಗಬೇಕಿದೆ. ಇಲ್ಲದಿದ್ದರೆ ಗ್ರಾಹಕರ ಶಾಪದ ಜೊತೆಗೆ ರೈತರ ಶಾಪಕ್ಕೆ ಸರ್ಕಾರ ಗುರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.