ಮದ್ದೇರಿ ಕೆನರಾ ಬ್ಯಾಂಕಿನಲ್ಲಿ ಕೋಟ್ಯಾಂತರ ರೂ. ವಂಚನೆ: ಕನ್ನಡ ಬಾರದಕ್ಕೆ ಮೋಸ ಹೋದ್ರಾ ಅಧಿಕಾರಿಗಳು?
ಅದೊಂದು ಗ್ರಾಮೀಣ ಪ್ರದೇಶದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್. ಹತ್ತಾರು ವರ್ಷಗಳಿಂದ ಜನರ ನಂಬಿಕೆ ಗಳಿಸಿದ್ದ ಬ್ಯಾಂಕ್ ಆಗಿದ್ದು, ಹಣ ಒಡವೆ ತಮ್ಮ ಮನೆಯಲ್ಲಿದ್ದರೆ ಕಳ್ಳತನವಾಗಬಹುದು ಎಂದು ಎಲ್ಲವನ್ನು ತಂದು ಬ್ಯಾಂಕ್ನಲ್ಲಿಟ್ಟಿದ್ದರು. ಆದರೆ ಕೋಟ್ಯಾಂತರ ರೂಪಾಯಿ ಹಣ ಹಾಗೂ ಒಡವೆಗಳನ್ನು ಕನ್ನಡ ಭಾಷೆ ಬಾರದ ಅಧಿಕಾರಿಗಳಿಗೆ ಯಾಮಾರಿಸಿ ಅಲ್ಲಿನ ಸಿಬ್ಬಂದಿಗಳೇ ನುಂಗಿಹಾಕಿದ್ದಾರೆ.

ಕೋಲಾರ, (ಮಾರ್ಚ್ 25): ತಾಲ್ಲೂಕು ಮದ್ದೇರಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ (Madderi canara bank) ಶಾಖೆ ತೆರೆದು 30 ವರ್ಷಗಳೇ ಕಳೆದಿವೆ. ಮೂವತ್ತು ವರ್ಷಗಳಿಂದ ಇಲ್ಲಿನ ಗ್ರಾಹಕರ ವಿಶ್ವಾಸ ಗಳಿಸಿರುವ ಕೆನರಾ ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಉತ್ತಮ ಬಾಂಧ್ಯವ್ಯ ಹಾಗೂ ವಿಶ್ವಾಸ ಗಳಿಸಿತ್ತು. ಹೀಗಿರುವಾಗಲೇ ಈ ಬ್ಯಾಂಕ್ನಲ್ಲಿ ಇತ್ತೀಚೆಗೆ ನಡೆಯಬಾರದ್ದು ನಡೆದು ಹೋಗಿದೆ, ಬ್ಯಾಂಕ್ನಲ್ಲಿ ಗ್ರಾಹಕರು ಇಟ್ಟಿದ್ದ ಅಸಲಿ ಚಿನ್ನ ನಾಪತ್ತೆಯಾಗಿ ನಕಲಿ ಚಿನ್ನವಾಗಿದೆ. ಅಡವಿಟ್ಟಿದ್ದ ಚಿನ್ನ ನಕಲಿಯಾಗಿದೆ. ಗ್ರಾಹಕರ ಠೇವಣಿ ಹಣ ಗ್ರಾಹಕರಿಗೆ ತಿಳಿಯದಂತೆ ಖಾತೆಯಲ್ಲಿದ್ದ ಹಣ ಖಾಲಿಯಾಗಿದೆ. ಖಾತೆಗಳಲ್ಲಿನ ಹಣ ಮಾಯವಾಗುತ್ತಿರುವ ಕೆಲವೇ ಕೆಲವು ಪ್ರಕರಣಗಳು ಕಳೆದ ಒಂದು ವಾರದಿಂದ ಬೆಳಕಿಗೆ ಬರುತ್ತಿದ್ದವು. ಆದ್ರೆ ಈಗ ನೂರಾರು ಪ್ರಕರಣಗಳಾಗಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಸುಮಾರು ಎರಡು ಕೋಟಿಯಷ್ಟು ವಂಚನೆ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಇದಕ್ಕೆ ಯಾರು ಎನ್ನುವುದನ್ನು ನೋಡಿದರೆ ಬ್ಯಾಂಕ್ನಲ್ಲಿರುವ ಸಿಬ್ಬಂದಿಗಳೇ ಎನ್ನಲಾಗಿದ್ದು, ಇದೀಗ ಈ ಪ್ರಕರಣ ಸಿಐಡಿ ತನಿಖೆಗೆ ವರ್ಗಾವಣೆಯಾಗಲಿದೆ.
2022 ರಿಂದ ಈ ರೀತಿಯ ಅವಾಂತರಗಳು ನಡೆದುಕೊಂಡು ಬಂದಿದ್ದು, ನೂರಾರು ಜನರು ತಮ್ಮ ಹಣ, ಒಡವೆಗಳು ಬ್ಯಾಂಕ್ನಲ್ಲಿ ಸುರಕ್ಷಿತವಾಗಿರುತ್ತವೆ ಎಂದು ಲಾಕರ್ನಲ್ಲಿ ಇಟ್ಟಿದ್ದ ಒಡವೆಗಳು ನಾಪತ್ತೆಯಾಗಿವೆ. ಇದೀಗ ಅದು ಬಯಲಿಗೆ ಬಂದಿದೆ. ಅಲ್ಲದೇ ಅಡವಿಟ್ಟಿದ್ದ ಚಿನ್ನ ನಕಲಿಯಾಗಿದೆ, ಇನ್ನು ತಾವು ಊಟ ಬಟ್ಟೆ ಕಟ್ಟಿ ಬೆವರು ಹರಿಸಿ ಕೂಲಿ ಮಾಡಿ ಕೂಡಿಟ್ಟ ಹಣವು ಖಾತೆಯಿಂದ ಖಾಲಿಯಾಗಿದೆ. ಇದರಿಂದ ಆತಂಕಗೊಂಡ ಮದ್ದೇರಿ ಬ್ಯಾಂಕ್ ಗ್ರಾಹಕರು, ಪ್ರತಿನಿತ್ಯ ಬ್ಯಾಂಕ್ ಶಾಖೆಯ ಬಳಿ ಬಂದು ತಮ್ಮ ಖಾತೆಗಳನ್ನು ಚೆಕ್ ಮಾಡಿಕೊಳ್ಳುತ್ತಿದ್ದಾರೆ.
ಗ್ರಾಹಕರ ಖಾತೆಯಲ್ಲಿದ್ದ ಹಣ ಮಾಯ
ಇನ್ನು ವಿವಿಧ ಉದ್ದೇಶಗಳಿಗೆ ಜನರು ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣವಮನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ನನಗೆ ತಿಳಿಯದೆ ನಾಪತ್ತೆಯಾಗಿದೆ. ನನ್ನ ಮಗಳ ಮದುವೆಗೆಂದು, ಹಬ್ಬಕ್ಕೆಂದು, ಮನೆ ಕಟ್ಟೋದಕ್ಕೆ ಹೀಗೆ ಬೇರೆ ಬೇರೆ ಉದ್ದೇಶಕ್ಕಾಗಿ ಕೂಡಿಟ್ಟಿದ್ದ ಹಣ ಇಲ್ಲದಾಗಿದೆ. ನಾವು ಈಗ ಏನು ಮಾಡಬೇಕೆಂದು ಹಣ ಕಳೆದುಕೊಂಡ ಖಾತೆದಾರರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಬ್ಯಾಂಕ್ನಲ್ಲಿ ಇಂಥಾದೊಂದು ಹಣ ದುರುಪಯೋಗ ಆಗಿಲು ಕಾರಣ ಇಲ್ಲಿನ ಸಿಬ್ಬಂದಿಗಳೇ ಕಾರಣ. ಇದು ಹೊರಗಿನವರಿಂದ ಸಾಧ್ಯವಿಲ್ಲ ಅನ್ನೋ ನಿರ್ಧಾರಕ್ಕೆ ಬಂದಿರುವ ಕೋಲಾರ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಮದ್ದೇರಿ ಶಾಖೆಯ 4 ಜನ ಸಿಬ್ಬಂದಿಗಳಾದ ಮ್ಯಾನೇಜರ್ ಇಂದ್ರಜಿತ್ಸಿಂಗ್, ಸೂಪರ್ವೈಸರ್ ರಾವತ್ ಮಹೇಶ್ವರ್, ಅಟೆಂಡರ್ ಮಂಜುನಾಥ್, ಸಹಾಯಕ ಹಾಗೂ ಹೌಸ್ ಕೀಪಿಂಗ್ ಮಧು ಎಂಬುವರ ವಿರುದ್ದ ದೂರು ದಾಖಲಿಸಿದ್ದು, ಇಷ್ಟೆಲ್ಲಾ ವಂಚನೆ ನಡೆಯಲು ಪ್ರಮುಖ ಕಾರಣ ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ವೈಸರ್ ಕನ್ನಡ ಭಾಷೆ ಬಾರದೆ ಇದ್ದದ್ದು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಹೊರಗುತ್ತಿಗೆ ನೌಕರರ ಕರಾಮತ್ತು
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ತಾಲ್ಲೂಕು ವೇಮಗಲ್ ಮೂಲದ ಮಧು ಹಾಗೂ ಮಾಲೂರಿನ ಮಂಜುನಾಥ್ ಇಬ್ಬರು ಸೇರಿ ಭಾಷೆ ತಿಳಿಯದ ಉತ್ತರ ಭಾರತ ಮೂಲದ ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ವೈಸರ್ ಅವರನ್ನು ಯಾಮಾರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನು ಗ್ರಾಮೀಣ ಭಾಗದ ಅನಕ್ಷರಸ್ಥರು ಹಾಗೂ ಅಮಾಯಕರು ಬಂದಾಗಲೂ ಅವರಿಂದ ಹಣ ಕಟ್ಟಿಸಿಕೊಳ್ಳುವ ಬದಲಾಗಿ ಅವರ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಲು ಬೇಕಾದ ಫಾರಂಗೆ ಸಹಿ ಮಾಡಿಸಿಕೊಂಡಿದ್ದಾರೆ. ಬಳಿಕ ಅವರ ಖಾತೆಗಳಲ್ಲಿದ್ದ ಹಣವನ್ನು ಲಪಟಾಯಿಸಿದ್ದಾರೆ. ಹೀಗೆ ಕಳೆದ ಎರಡು ವರ್ಷಗಳಿಂದ ಆಗಿಂದಾಗ್ಗೆ ಕೋಟ್ಯಾಂತರ ರೂಪಾಯಿ ವಂಚನೆ ನಡೆದುಕೊಂಡು ಬಂದಿದ್ದು ಈ ವಂಚನೆ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಒಟ್ಟಾರೆ ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕಿದ್ದ ಬ್ಯಾಂಕ್ನಲ್ಲಿ ಭಾಷಾ ಸಮಸ್ಯೆಯಿಂದ ಇಂಥಾದೊಂದು ದೊಡ್ಡ ವಂಚನೆಯೇ ನಡೆದುಹೋಗಿದೆ. ಗ್ರಾಮೀಣ ಭಾಗದ ಅಮಾಯಕ ಹಳ್ಳಿಯ ಜನರ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದು, ಕೂಡಲೇ ಬ್ಯಾಂಕ್ ತನ್ನ ಬೇಜವಾಬ್ದಾರಿಯಿಂದ ವಂಚನೆಗೊಳಗಾದ ತನ್ನ ಗ್ರಾಹಕರಿಗೆ ನ್ಯಾಯ ಕೊಡಿಸಬೇಕಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 pm, Tue, 25 March 25