ಕೆಜಿಎಫ್ನಲ್ಲಿವೆ ಸಾಕಷ್ಟು ಚಿನ್ನದ ನಿಕ್ಷೇಪಗಳು! ಸಂಶೋಧನೆಗಳಿಂದ ತಿಳಿದುಬಂತು ಅಚ್ಚರಿಯ ಅಂಶ
ಅದು ವಿಶ್ವಪ್ರಸಿದ್ದ ಚಿನ್ನದ ಗಣಿ. ಅದಕ್ಕೆ ಬೀಗ ಹಾಕಿ 24 ವರ್ಷಗಳೇ ಕಳೆದು ಹೋಗಿದೆ. ಅಷ್ಟು ವರ್ಷಗಳಿಂದ ಅದರ ಪುನರಾರಂಭ ಆಗುತ್ತಾ ಎಂದು ಆಸೆಗಣ್ಣುಗಳಿಂದ ನೋಡುತ್ತಿದ್ದ ಸಾವಿರಾರು ಜನರ ಕಣ್ಣಗಳಲ್ಲಿ ಈಗ ಹೊಸದೊಂದು ಆಶಾಭಾವನೆ ಮೂಡುವ ಸಂದರ್ಭ ಬಂದಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೆ ಕೆಜಿಎಫ್ನಲ್ಲಿ ಚಿನ್ನದ ಗಣಿಗಾರಿಕೆ ಆರಂಭ ಮಾಡುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂಬುದು ಇಲ್ಲಿದೆ.

ಕೋಲಾರ, ಮಾರ್ಚ್ 16: ಅದು 24 ವರ್ಷಗಳ ಹಿಂದೆ, ಅಂದರೆ 2001 ಮಾರ್ಚ್ 1 ರಲ್ಲಿ ನಷ್ಟದ ನೆಪವೊಡ್ಡಿ ಕೇಂದ್ರ ಸರ್ಕಾರ ಕೋಲಾರ (Kolar) ಚಿನ್ನದ ಗಣಿಗೆ (Gold Mine) ಬೀಗ ಹಾಕಿತ್ತು. ಆದರೆ ಚಿನ್ನದ ಗಣಿಗೆ ಬೀಗ ಹಾಕುವ ಸಂದರ್ಭದಲ್ಲಿ ಚಿನ್ನದ ಗಣಿ ಕಾರ್ಮಿಕರ ವೇತನ ಬಾಕಿ, ನಿವೃತ್ತಿ ವೇತನ ಸೇರಿ 58 ಕೋಟಿ ರೂಪಾಯಿ ಬಾಕಿ ಇತ್ತು. ಹೀಗಿರುವಾಗಲೇ ಬೀದಿಗೆ ಬಿದ್ದ ಹಲವಾರು ಕಾರ್ಮಿಕ ಸಂಘಟನೆಗಳು ತಮಗಾದ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದವು. 2006 ಜುಲೈ 7 ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲೂ ಚಿನ್ನದ ಗಣಿ ಪುನರಾರಂಭಕ್ಕೆ ಒಪ್ಪಿಗೆಯನ್ನು ಸೂಚಿಸಿತ್ತು. ಈ ಬೆನ್ನಲ್ಲೇ 2010 ರಲ್ಲಿ ಕರ್ನಾಟಕ ಹೈಕೋರ್ಟ್ ಕೂಡಾ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ಮತ್ತೆ ಕೋಲಾರದ ಚಿನ್ನದ ಗಣಿಯನ್ನು ಮತ್ತೆ ಆರಂಭಿಸಬೇಕು ಎಂದ ಸೂಚನೆ ನೀಡಿತ್ತು.
ನಂತರ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಈ ಕುರಿತಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಹೈಕೋರ್ಟ್ ಅದೇಶವನ್ನು ರದ್ದು ಮಾಡಿತ್ತು. 2013 ರಲ್ಲಿ ಗ್ಲೋಬಲ್ ಟೆಂಡರ್ ಕರೆದು ಷರತ್ತುಗಳೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಮತ್ತೆ ಚಿನ್ನದ ಗಣಿಯನ್ನು ಪುನರಾರಂಭ ಮಾಡುವ ಕುರಿತು ಸುಪ್ರೀಂಕೋರ್ಟ್ ಆದೇಶವನ್ನು ಹೊರಡಿಸಿತ್ತು. ಆದರೆ ಕೇಂದ್ರ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಗಣಿಗಾರಿಕೆ ಆರಂಭಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಗ್ಲೋಬಲ್ ಟೆಂಡರ್ ಮೂಲಕ ಚಿನ್ನದ ಗಣಿಯನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ಆರಂಭಿಸಿತ್ತು.
ತ್ಯಾಜ್ಯ ಮಣ್ಣಿನಲ್ಲೂ ಇದೆ ಚಿನ್ನ!
ಈ ಹಿಂದೆ ಕೆಜಿಎಫ್ನಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ಕಾಲದಲ್ಲಿ ಚಿನ್ನದ ಅದಿರಿನಿಂದ ಚಿನ್ನವನ್ನು ಬೇರ್ಪಡಿಸಿ ಬಿಸಾಡಿರುವ ತ್ಯಾಜ್ಯ ಮಣ್ಣನ್ನು ಮರು ಸಂಸ್ಕರಣೆ ಮಾಡಿದರೆ ಅದರಲ್ಲೂ ಚಿನ್ನ ಸಿಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಮಣ್ಣಿನಲ್ಲಿ ಅಂದರೆ ಕೆಜಿಎಫ್ನಲ್ಲಿರುವ 13 ಸೈನೈಡ್ ಗುಡ್ಡಗಳಲ್ಲಿ ಚಿನ್ನವನ್ನು ಮತ್ತೊಮ್ಮೆ ಶೋಧಿಸುವ ಕೆಲಸಕ್ಕೆ ಟೆಂಡರ್ ಕರೆದಿದೆ. ಕೆಜಿಎಫ್ ನಗರದ ಸುತ್ತಮುತ್ತ 13 ಸೈನೈಡ್ ಗುಡ್ಡಗಳಿದ್ದು ಅದರಲ್ಲಿ ಸುಮಾರು 50 ಲಕ್ಷ ಮಿಲಿಯನ್ ಟನ್ ಮಣ್ಣಿದೆ ಎಂದು ಅಂದಾಜಿಸಲಾಗಿದೆ.
ಒಂದು ಟನ್ ಮಣ್ಣಿನಲ್ಲಿ ಒಂದು ಗ್ರಾಂ ಚಿನ್ನ
ಸಂಶೋಧನೆಗಳ ಪ್ರಕಾರ, ಒಂದು ಟನ್ ಮಣ್ಣಿನಲ್ಲಿ ಸರಾಸರಿ ಒಂದು ಗ್ರಾಂ ಚಿನ್ನ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ, ಸುಮಾರು ಈ ಮಣ್ಣನ್ನೆಲ್ಲ ಶೋಧಿಸಿದರೆ ಸರಾಸರಿ 25 ಟನ್ ಚಿನ್ನ ಸಿಗುವ ನಿರೀಕ್ಷೆ ಇದೆ. ಸದ್ಯ ಆ ಮಣ್ಣಿನಲ್ಲಿನ ಚಿನ್ನವನ್ನು ಹೊರತೆಗೆಯುವ ಕೆಲಸ ಆರಂಭಿಸಿದ್ದು ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಶುರುಮಾಡಿದೆ. ಆದರೆ ಇದು ಚಿನ್ನದ ಗಣಿ ವಿಚಾರವಾಗಿ ಸರ್ಕಾರ 23 ವರ್ಷಗಳ ನಂತರ ಒಂದೊಳ್ಳೆ ನಿರ್ಧಾರ ಮಾಡಿತ್ತು. ಆದರೆ ಸದ್ಯಕ್ಕೆ ಆ ಟೆಂಡರ್ ಪ್ರಕ್ರಿಯೆ ಕೂಡಾ ಸ್ಥಗಿತವಾಗಿದೆ. ಕಾರಣ ಮೊದಲು 2006 ಕೇಂದ್ರ ಸರ್ಕಾರದ ಕ್ಯಾಬಿನೆಟ್ ನಿರ್ಣಯದಂತೆ ಹಾಗೂ 2016ರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೊದಲು ಇಲ್ಲಿ ಬಾಕಿ ಇರುವ ಗಣಿ ಕಾರ್ಮಿಕರ 52 ಕೋಟಿ ರೂಪಾಯಿ ಪರಿಹಾರ ನೀಡಿ ಮುಂದಿನ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿವೆ.
ಅಲ್ಲದೆ ಈಗ ಆ ಮಣ್ಣನ್ನು ಮತ್ತೆ ಸಂಸ್ಕರಣೆ ಹೆಸರಲ್ಲಿ ಮಣ್ಣಿನ ಗುಡ್ಡಗಳನ್ನು ಶೋಧಿಸುವ ಕೆಲಸ ಆರಂಭಿಸಿದರೆ ಕೆಜಿಎಫ್ ನಗರಕ್ಕೆ ಸಮಸ್ಯೆ ಉಂಟಾಗಲಿದೆ. ಸೈನೈಡ್ ಮಿಶ್ರಿತ ಮಣ್ಣಿನಿಂದ ನಗರದಲ್ಲಿ ವಾಸವಿರುವ ಜನರಿಗೆ ಆರೋಗ್ಯ ಸಮಸ್ಯೆ ದೂಳಿನ ಸಮಸ್ಯೆ ಉಂಟಾಗುವ ಆತಂಕ ಇದೆ.
ಇದನ್ನೂ ಓದಿ: ಕರ್ನಾಟಕದಲ್ಲೊಂದು ಹೀನ ಕೃತ್ಯ: ಮಗಳನ್ನೇ ಗರ್ಭಿಣಿ ಮಾಡಿದ ನೀಚ ತಂದೆ
ಆದರೆ ಕೆಲವು ಗಣಿ ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳುವಂತೆ ಈಗ ತಾಂತ್ರಿಕತೆ ಮುಂದುವರೆದಿದ್ದು, ಈಗ ಮತ್ತೆ ಚಿನ್ನದ ಗಣಿಗಾರಿಕೆ ಆರಂಭ ಮಾಡಿದರೆ ಲಾಭದ ಗಣಿಗಾರಿಕೆ ಮಾಡಬಹುದು. ಕೆಜಿಎಫ್ನಲ್ಲಿ ಸಾಕಷ್ಟು ಚಿನ್ನದ ನಿಕ್ಷೇಪಗಳಿವೆ. ಬ್ರಿಟಿಷರ ಕಾಲದಲ್ಲಿ ಕೆಜಿಎಫ್ನಲ್ಲಿ ಸುಮಾರು 27 ಚಿನ್ನದ ನಿಕ್ಷೇಪ ಇರುವ ಸ್ಥಳಗಳನ್ನು ಗುರುತು ಮಾಡಲಾಗಿತ್ತು. ಈ ಪೈಕಿ ಕೇವಲ ಎರಡು ಮೂರು ಸ್ಥಳಗಳಲ್ಲಿ ಮಾತ್ರ ಚಿನ್ನದ ಗಣಿಗಾರಿಕೆ ಮಾಡಲಾಗಿದ್ದು ಉಳಿದ ಸುಮಾರು 24 ರಲ್ಲಿ ಚಿನ್ನದ ಗಣಿಗಾರಿಕೆ ನಡೆದಿಲ್ಲ. ಈಗ ಮತ್ತೆ ಚಿನ್ನದ ಗಣಿಗಾರಿಕೆ ಆರಂಭಿಸಿದರೆ ಕನಿಷ್ಠ 25 ವರ್ಷಗಳ ಕಾಲ ಇಲ್ಲಿ ಚಿನ್ನದ ಗಣಿಗಾರಿಕೆ ಮಾಡಬಹುದು. ಇದರಿಂದ ಸ್ಥಳೀಯ ವಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗುವ ಜೊತೆಗೆ ಕಜಿಎಫ್ ಪ್ರದೇಶದಲ್ಲಿ ಅಭಿವೃದ್ದಿ ಕಾಣುತ್ತದೆ ಅನ್ನೋದು ಕಾರ್ಮಿಕ ಸಂಘಟನೆ ಮುಖಂಡರುಗಳ ಮಾತು.