Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹೆಚ್ಚಿದ ಫೇಕ್ ನ್ಯೂಸ್ ಹಾವಳಿ: ಬೆಂಗಳೂರು, ಉತ್ತರ ಕನ್ನಡ ಮುಂಚೂಣಿಯಲ್ಲಿ

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಫೇಕ್​ ನ್ಯೂಸ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿವೆ. ಬೆಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಡೀಪ್‌ಫೇಕ್ ತಂತ್ರಜ್ಞಾನದಿಂದ ಉಂಟಾಗುತ್ತಿರುವ ಸಮಸ್ಯೆಗಳೂ ಹೆಚ್ಚಾಗಿವೆ. ಪೊಲೀಸರು ಹಲವು ಪ್ರಕರಣಗಳನ್ನು ದಾಖಲಿಸಿದ್ದರೂ, ಇಂಥ ಪ್ರಕರಣಗಳಲ್ಲಿ ತನಿಖೆ ಮತ್ತು ಶಿಕ್ಷೆ ನಿಧಾನವಾಗುತ್ತಿರುವುದು ಸಮಸ್ಯೆಯ ತೀವ್ರತೆ ಹೆಚ್ಚಿಸಿದೆ.

ಕರ್ನಾಟಕದಲ್ಲಿ ಹೆಚ್ಚಿದ ಫೇಕ್ ನ್ಯೂಸ್ ಹಾವಳಿ: ಬೆಂಗಳೂರು, ಉತ್ತರ ಕನ್ನಡ ಮುಂಚೂಣಿಯಲ್ಲಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Mar 16, 2025 | 12:00 PM

ಬೆಂಗಳೂರು, ಮಾರ್ಚ್ 16: ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ನಕಲಿ ಸುದ್ದಿ (Fake News) ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರು (Bengaluru) ಮತ್ತು ಉತ್ತರ ಕನ್ನಡ (Uttara Kannada) ಹೆಚ್ಚು ಮುಂಚೂಣಿಯಲ್ಲಿವೆ. ರಾಜ್ಯ ಪೊಲೀಸರು 2023 ರಿಂದ ಒಟ್ಟು 259 ಪ್ರಕರಣಗಳನ್ನು ದಾಖಲಿಸಿದ್ದಾರೆ. 2023 ರಲ್ಲಿ 107 ಪ್ರಕರಣಗಳು, 2024 ರಲ್ಲಿ 139 ಮತ್ತು 2025 ರಲ್ಲಿ 13 ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2023 ರಲ್ಲಿ 48, 2024 ರಲ್ಲಿ 45 ಮತ್ತು 2025 ರಲ್ಲಿ 2 ಪ್ರಕರಣ ದಾಖಲಾಗಿವೆ. ನಂತರ ಉತ್ತರ ಕನ್ನಡದಲ್ಲಿ 2023 ರಲ್ಲಿ 19, 2024 ರಲ್ಲಿ 27 ಮತ್ತು 2025 ರಲ್ಲಿ 3 ಪ್ರಕರಣಗಳು ವರದಿಯಾಗಿವೆ. ಪ್ರಕರಣಗಳು ಹೆಚ್ಚುತ್ತಿದ್ದರೂ ಅಂಥವುಗಳ ವಿರುದ್ಧ ಕಾನೂನು ಕ್ರಮ ನಿಧಾನವಾಗುತ್ತಿದೆ. ಈವರೆಗೆ ಕೇವಲ 75 ಪ್ರಕರಣಗಳು ತನಿಖಾ ಹಂತದಲ್ಲಿವೆ ಮತ್ತು ಇಲ್ಲಿಯವರೆಗೆ ಕೇವಲ ಆರು ಪ್ರಕರಣಗಳಲ್ಲಿ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗಿವೆ.

ಡೀಪ್‌ಫೇಕ್ ತಂತ್ರಜ್ಞಾನದಿಂದ ಉದ್ಭವಿಸುತ್ತಿರುವ ಸಮಸ್ಯೆಗಳೂ ರಾಜ್ಯದಲ್ಲಿ ಆತಂಕ ಸೃಷ್ಟಿಸಿವೆ. ಕರ್ನಾಟಕ ಪೊಲೀಸರು ಡೀಪ್‌ಫೇಕ್ ವಿಷಯಕ್ಕೆ ಸಂಬಂಧಿಸಿದಂತೆ 12 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ 2024 ರಲ್ಲಿ 7 ಮತ್ತು 2025 ರಲ್ಲಿ 5 (ಫೆಬ್ರವರಿ 28 ರವರೆಗೆ). ಸೈಬರ್ ಅಪರಾಧಿಗಳು ಸಾರ್ವಜನಿಕರನ್ನು ವಂಚಿಸಲು AI-ರಚಿತ ವೀಡಿಯೊಗಳನ್ನು ಬಳಸಿಕೊಂಡಿದ್ದಾರೆ, ಬೆಂಗಳೂರಿನಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಕಲಿ ವೀಡಿಯೊಗಳನ್ನು ಒಳಗೊಂಡ ನಕಲಿ ಸುದ್ದಿಗಳನ್ನು ಹರಿಯಬಿಡಲಾಗಿತ್ತು. ಈ ವಂಚನೆಯ ಪ್ರಕರಣಗಳಲ್ಲಿ ಸಂತ್ರಸ್ತರು ಒಟ್ಟಾರೆಯಾಗಿ 83 ಲಕ್ಷ ರೂ.ಗಳಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.

ಬೆಳಗಾವಿಯಲ್ಲಿ 22 ವರ್ಷದ ಯುವಕನೊಬ್ಬ ಮಹಿಳೆ ಮತ್ತು ಆಕೆಯ ಸ್ನೇಹಿತರ ಡೀಪ್‌ಫೇಕ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟು ಬಂಧನಕ್ಕೊಳಗಾಗಿದ್ದಾನೆ.

ಇದನ್ನೂ ಓದಿ
Image
ರನ್ಯಾ ಮಲತಂದೆ ರಾಮಚಂದ್ರ ರಾವ್​ಗೆ ಸಂಕಷ್ಟ: ಹಳೇ ಪ್ರಕರಣ ಮತ್ತೆ ಮುನ್ನೆಲೆಗೆ
Image
ತೊಗರಿ ಬೇಳೆ ಸೇವಿಸುವ ಮುನ್ನ ಎಚ್ಚರ: ಕ್ಯಾನ್ಸರ್​ ಕಾರಕ ಅಂಶ ಪತ್ತೆ
Image
ವೃದ್ಧೆಗೆ 50 ಲಕ್ಷ ರೂ. ವಂಚಿಸಿದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್
Image
ಕಲಬುರಗಿ, ಬಾಗಲಕೋಟೆಯಲ್ಲಿ ಉಷ್ಣ ಅಲೆ, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ

ಇದನ್ನೂ ಓದಿ: ಈ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಪಮಾನ: 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಉಷ್ಣಾಂಶ

ಫೇಕ್ ನ್ಯೂಸ್ ಹರಡುವಿಕೆಯನ್ನು ತಡೆಯಲು ಅಧಿಕಾರಿಗಳು ಪ್ರಯತ್ನ ಹೆಚ್ಚಿಸಿದ್ದಾರೆ. ವಿಶೇಷವಾಗಿ ಧಾರ್ಮಿಕ, ಜಾತಿ ಅಥವಾ ಪ್ರಾದೇಶಿಕ ಭಿನ್ನಾಭಿಪ್ರಾಯವನ್ನು ಪ್ರಚೋದಿಸುವ ವಿಷಯಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ. ನಕಲಿ ಖಾತೆಗಳು ಮತ್ತು ತಪ್ಪು ಮಾಹಿತಿಯನ್ನು ಪತ್ತೆಹಚ್ಚಲು ಈಗ ಕರ್ನಾಟಕದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಘಟಕ ಮತ್ತು ರಾಜ್ಯ ಗುಪ್ತಚರದಿಂದ ತರಬೇತಿ ಪಡೆದ ಅಧಿಕಾರಿಗಳನ್ನು ನೇಮಿಸಲಾಗಿದೆ. ನಕಲಿ ಸುದ್ದಿಗಳ ಹಾವಳಿ ತಡೆಗಟ್ಟಲು, ಅಧಿಕಾರಿಗಳು ‘‘ಕೆಎಸ್​​ಪಿ ಫ್ಯಾಕ್ಟ್‌ಚೆಕ್’’ ಮೂಲಕ ಪರಿಶೀಲಿಸುತ್ತಾರೆ ಮತ್ತು ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ನಿಖರವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಎಂದು ಗೃಹ ಇಲಾಖೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ