ಈ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಪಮಾನ: 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಉಷ್ಣಾಂಶ
ಕರ್ನಾಟಕದಲ್ಲಿ ಈ ಬಾರಿಯ ಬೇಸಿಗೆಯ ತಾಪಮಾನ ದಿನ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿ ವರ್ಷ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ರಣಬಿಸಿಲು ಜನರ ನೆತ್ತಿ ಸುಡುತ್ತಿತ್ತು. ಆದ್ರೆ, ಅಚ್ಚರಿ ಅಂದ್ರೆ ಈ ಬಾರಿ ಉತ್ತರ ಕರ್ನಾಟಕ ಜಿಲ್ಲೆ ಬದಲಿಗೆ ಕರಾವಳಿ ಭಾಗದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ಈ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ತಾಪಮಾನ ಏರಿಕೆ ಆಗಿರಲಿಲ್ಲ.

ಕಾರವಾರ, (ಮಾರ್ಚ್ 13): ಕರ್ನಾಟಕದಲ್ಲಿ (Karnataka) ಅತಿ ವೇಗವಾಗಿ ತಾಪಮಾನ (Temperature) ಏರಿಕೆಯಾಗುತ್ತಿದೆ. ನಿನ್ನೆ ಅಂದರೆ ಮಾರ್ಚ್ 12ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ ಆದರೂ ಸಹ ರಾಯಚೂರು, ಮಂಗಳೂರು ನಂತರ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಸಾವಂತವಾಡದಲ್ಲಿ 42.9ಡಿಗ್ರಿ ಸೆಲ್ಸಿಯಸ್ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ತಾಪಮಾನ ಏರಿಕೆ ಆಗಿರಲಿಲ್ಲ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗೀಕ ವಿಕೋಪ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 2ನೇ ಅಥವಾ 3ನೇ ವಾರದ ಅವಧಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ತಾಪಮಾನ ಇರುತ್ತಿತ್ತು. ಇದೇ ವೇಳೆಗೆ ಮಳೆ ಸುರಿದು ತಂಪೆರೆಯುತ್ತಿತ್ತು. ಆದರೆ ಈ ಭಾರಿ ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಿಂತಲೂ ಹೆಚ್ಚಿನ ತಾಪಮಾನ ಉತ್ತರ ಕನ್ನಡದಲ್ಲಿ ಕಂಡು ಬಂದಿದ್ದು ಇಲ್ಲಿಯ ಜನರನ್ನು ಕಂಗೆಡಿಸಿದೆ. ಆತಂಕಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಬಿರು ಬೇಸಿಗೆಗಯಲ್ಲಿ ಕಾಡು ಪ್ರಾಣಿಗಳು ದಣಿಯದಂತೆ ಮಾಸ್ಟರ್ ಪ್ಲ್ಯಾನ್
ಉತ್ತರ ಕನ್ನಡ ಜಿಲ್ಲೆಯ 9 ಹೊಬಳಿಯಲ್ಲಿ 38 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಹೆಚ್ಚು ಉಷ್ಣ. ಈ ಬಾರಿಯ ಬೇಸಿಗೆಯ ಆರಂಭದಲ್ಲೇ ಕರಾವಳಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಕಾರವಾರ ತಾಲೂಕಿನ ಕಿನ್ನರದಲ್ಲಿ 41.8, ಕುಮಟಾ ತಾಲೂಕಿನ ಮಿರ್ಜಾನನಲ್ಲಿ 40.7, ಮುಂಡಗೋಡ ತಾಲೂಕಿನ ಪಾಳಾದಲ್ಲಿ 40, ಅಂಕೋಲಾದಲ್ಲಿ 40.5, ಅವರ್ಸಾದಲ್ಲಿ 40.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜನರು ಮನೆಯಿಂದ ಹೊರ ಬರಲೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳು ಫೆಬ್ರವರಿ ಮಾಸಾಂತ್ಯದಲ್ಲಿ ಹೆಚ್ಚು ತಾಪಮಾನ ಹಾಗೂ ಬಿಸಿ ಗಾಳಿಯ ಸಮಸ್ಯೆ ಎದುರಿಸಿದ್ದ ಇಲ್ಲಿನ ಜನ ಈಗಿನ ಬಿಸಿಲು ಕಂಡು ದಿಗಿಲುಗೊಂಡಿದ್ದಾರೆ.
ರಣ ಬಿಸಿಲಿಗೆ ಜನ ಕಂಗಾಲು
ಗರಿಷ್ಠ ತಾಪಮಾನದಿಂದಾಗಿ ಜನರ ತಲೆ ಸುಡುತ್ತಿದೆ. ರಣ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ. ಬೆಳಗ್ಗೆ ಯಿಂದಲೆಯೇ ಸೂರ್ಯನ ತಾಪ ಶುರುವಾಗುತ್ತಿರುವುದರಿಂದ ಜನ ಮನೆಯಿಂದ ಹೊರಗಡೆ ಬರುವಷ್ಟರಲ್ಲಿ ಸುಡು ಬಿಸಿಲಿಗೆ ಬಳಲಿ ಬೆಂಡಾಗುತ್ತಿದ್ದಾರೆ. ಮಧ್ಯಾಹ್ನದ ರಣ ಬಿಸಿಲು ಜನರಿಗೆ ಕಾಟಕೊಡುತ್ತಿದೆ, ಸೂರ್ಯನ ಬಿಸಿಯಿಂದ ತಪ್ಪಿಸಿಕೊಳ್ಳಲು ಜನರು ನೆರಳನ್ನು ಹುಡುಕುತ್ತಿದ್ದು, ಹೆಲ್ಮೆಟ್, ತಂಪು ಪಾನೀಯ ಕುಡಿಯುವುದು, ಕ್ಯಾಪ್, ಕರ್ಚಿಫ್ ಧರಿಸಿ ಓಡಾಡುತ್ತಿದ್ದಾರೆ.
ಎಚ್ಚರಿಕೆ ಜತೆಗೆ ಸಲಹೆ ನೀಡಿದ DHO
ಇನ್ನು ಈ ಬಗ್ಗೆ ಉತ್ತರ ಕನ್ನಡ DHO ಡಾ.ನೀರಜ್ ಪ್ರತಿಕ್ರಿಯಿಸಿದ್ದು, KSNDMC ವರದಿ ಅನ್ವಯ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣ ದಾಖಲಾಗಿದೆ. ಹೀಗಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಆಗುವ ಸಾಧ್ಯತೆ ಹೆಚ್ಚಿದ್ದು, ಜಿಲ್ಲಾಡಳಿತದಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ 5 ಬೆಡ್ ಗಳ ವಾರ್ಡ್ ತೆರೆಯಲಾಗಿದೆ. PHC ಗಳಲ್ಲಿ 3 ಬೆಡ್ ಗಳ ವಾರ್ಡ್ ತೆರೆಯಲಾಗಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 4 ರ ವರೆಗೆ ಮನೆಯಿಂದ ಹೊರಬರವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಹಲವೆಡೆ ಮಳೆ: ಮಂಗಳೂರಿನಲ್ಲಿ ಗಾಳಿ ಮಳೆಯಿಂದ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಡೈವರ್ಟ್
ಇನ್ನು ನೀರು ಹಾಗೂ ನೀರಿನ ಪದಾರ್ಥಗಳನ್ನ ಹೆಚ್ಚಾಗಿ ಸೇವನೆ ಮಾಡಬೇಕು. ಬಿಪಿ ರೋಗಿಗಳು ಹಾಗೂ ಚಿಕ್ಕ ಮಕ್ಕಳು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇದುವರೆಗೂ ಬಂದ ವರದಿ ಪ್ರಕಾರ ಬಿಸಲಿನಿಂದ ಜಿಲ್ಲೆಯಲ್ಲಿ ಯಾವುದೇ ಸಾವಾಗಿಲ್ಲ ಎಂದು ತಿಳಿಸಿದರು.
ಇನ್ನು ಕಲಬುರಗಿ ಜಿಲ್ಲೆಯಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ಪಕ್ಕದ ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ತಾಪಮಾನ 38 ರಿಂದ 39 ಡಿಗ್ರಿ ಸೆಲ್ಸಿಯಸ್ ಒಳಗಡೆಯೇ ಇತ್ತು. ಕಳೆದ 3 ದಿನಗಳ ಹಿಂದೆ ರಾಯಚೂರಿನಲ್ಲಿ ತಾಪಮಾನ 41 ಡಿಗ್ರಿ ದಾಟಿದ್ದರೆ ಕಲಬುರಗಿಯಲ್ಲಿ 40 ಡಿಗ್ರಿ ದಾಟಿದ್ದನ್ನು ಸ್ಮರಿಸಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Thu, 13 March 25