- Kannada News Photo gallery Shivamogga Lion Safari's Innovative Water Project for Wildlife, Karnataka news in kannada
ಬಿರು ಬೇಸಿಗೆಗಯಲ್ಲಿ ಕಾಡು ಪ್ರಾಣಿಗಳು ದಣಿಯದಂತೆ ಮಾಸ್ಟರ್ ಪ್ಲ್ಯಾನ್
ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಸಮಸ್ಯೆ ಪರಿಹರಿಸಲು 10 ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ನಮ್ಮ ಕಾಡು ನಮ್ಮ ಕೆರೆ' ಯೋಜನೆಯಡಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೆರೆಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯಿಂದ ಹುಲಿ, ಸಿಂಹ, ಜಿಂಕೆ ಮುಂತಾದ ಪ್ರಾಣಿಗಳಿಗೆ ಸಾಕಷ್ಟು ನೀರು ಲಭ್ಯವಾಗಲಿದೆ. ಏಪ್ರಿಲ್ ಒಳಗೆ ಕೆರೆಗಳ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Updated on: Mar 12, 2025 | 10:11 PM

ಈ ಬೇಸಿಗೆ ಬಂತೆಂದ್ರೆ ಸಾಕು, ಜನರ ಜೊತೆಗೆ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆಯುಂಟಾಗುವುದು ಸಹಜ. ಮನುಷ್ಯ ಜೀವಿ ಹೇಗಾದರೂ ಮಾಡಿ ಕುಡಿಯಲು ನೀರು ಹೊಂದಿಸಿಕೊಳ್ಳಬಹುದು. ಆದರೆ ಜಾನುವಾರುಗಳು ಏನು ಮಾಡ್ಬೇಕು ಎನ್ನುವುದಕ್ಕೆ ಇವರು ಉತ್ತರ ನೀಡುತ್ತಿದ್ದಾರೆ. ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣ ಲಯನ್ ಸಫಾರಿಯಲ್ಲಿರುವ ಹುಲಿ, ಸಿಂಹ, ಜಿಂಕೆ, ಕಡವೆ, ಸಾರಂಗ ಸೇರಿದಂತೆ ಇತರೆ ಪ್ರಾಣಿಗಳಿಗೆ ಈ ಬಿರು ಬೇಸಿಗೆಯಲ್ಲೂ ನೀರುಣಿಸುವ ಯೋಜನೆ ರೂಪಿಸಲಾಗಿದೆ.

ಆಹಾ! ಸ್ವಚ್ಛಂದ ಕಾಡು ಹೊಂದಿರುವ ಮೃಗಾಲಯ. ಈ ಮೃಗಾಲಯದಲ್ಲಿ ಜಿಂಕೆ, ಸಾರಂಗ, ಕಡವೆ, ಹುಲಿ, ಸಿಂಹ, ಕಾಡುಕೋಣ, ಕಾಡುಕುರಿ ಎಲ್ಲವೂ ಇವೆ. ಆದರೆ ಇಲ್ಲಿ ಬೇಸಿಗೆ ಸಮಯದಲ್ಲಿ, ನೀರಿನ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ, ಇದೀಗ ಪ್ರಾಣಿಗಳಿಗಾಗಿ ಸರ್ವ ಕಾಲಕ್ಕೂ ನೀರುಣಿಸುವ ಯೋಜನೆ ಸಿದ್ಧವಾಗುತ್ತಿದೆ.

ಈಗಾಗಲೇ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ, ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಇದೀಗ ಹುಲಿ ಮತ್ತು ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯದಲ್ಲಿ ‘ನಮ್ಮ ಕಾಡು ಮತ್ತು ನಮ್ಮ ಕೆರೆ’ ಎಂಬ ಯೋಜನೆಯಡಿ ಹುಲಿ ಮತ್ತು ಸಿಂಹಧಾಮದಲ್ಲಿ, ಪ್ರಾಣಿಗಳಿಗಾಗಿಯೇ ಕುಡಿಯಲು 14 ಲಕ್ಷ ರೂ. ವೆಚ್ಚದಲ್ಲಿ 10 ಕೆರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಒಂದೊಂದು ವಲಯದಲ್ಲಿ 2 ರಂತೆ 5 ವಲಯಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಫಾರಿಯಲ್ಲಿರುವ ಮರಗಳನ್ನು ಹಾಗೆಯೇ ಉಳಿಸಿಕೊಂಡು ಕೆರೆಗಳನ್ನು ನಿರ್ಮಿಸಲಾಗುತ್ತಿದೆ.

ಇನ್ನು ಈ ಸಫಾರಿಯಲ್ಲಿ 10 ಕೆರೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಹುಲಿ, ಸಿಂಹ, ಜಿಂಕೆ, ಕಾಡುಕೋಣ ಇನ್ನಿತರೆ ಮೃಗಾಲಯದಲ್ಲಿರುವ ಎಲ್ಲಾ ಪ್ರಾಣಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಹೇರಳವಾಗಿ ಕುಡಿಯುವ ನೀರು, ದಣಿವಾರಿಸಿಕೊಳ್ಳಲು ಹಸಿ ಮಣ್ಣು ಮಿಶ್ರಿತ ನೀರು ಲಭ್ಯವಾಗಲಿದೆ. ನಮ್ಮ ಕಾಡು - ನಮ್ಮ ಕೆರೆ ಯೋಜನೆಯಡಿಯಲ್ಲಿ 10 ಕೆರೆಗಳ ಅಭಿವೃದ್ಧಿಪಡಿಸಲು ಯೋಜನೆ ಮೂಲಕ ಈಗಾಗಲೇ, ಹಿಟಾಚಿಯಿಂದ ಹೂಳು ತೆಗೆಯಲಾಗುತ್ತಿದ್ದು, ಏಪ್ರಿಲ್ ಒಳಗಾಗಿ, 10 ಕೆರೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ.

ಈ ಮುಂಚೆ ಈ ಲಯನ್ ಸಫಾರಿಯಲ್ಲಿ ಹೊಂಡ ಮಾದರಿಯಲ್ಲಿ, ಪ್ರಾಣಿಗಳಿಗೆ ನೀರುಣಿಸಲಾಗುತ್ತಿತ್ತು. ಆದರೆ ಈಗ ಯಂತ್ರಗಳನ್ನು ಬಳಸಿ, ಕೆರೆ ನಿರ್ಮಾಣ ಕಾರ್ಯ ಸಾಗಿರುವುದು, ಮೃಗಾಲಯದ ಪ್ರಾಣಿಗಳಿಗೆ ಸಂತೋಷದಾಯಕ ವಾತಾವರಣ ಸೃಷ್ಟಿಯಾದಂತಾಗಿದೆ.

ಒಟ್ಟಾರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಮಹತ್ಕಾರ್ಯವೊಂದಕ್ಕೆ ಕೈ ಹಾಕಿದ್ದು, ಇದೊಂದು ವಿಶಿಷ್ಟ ಕಾರ್ಯಕ್ರಮ ಎಂದರೂ ತಪ್ಪಿಲ್ಲ. ಮನುಷ್ಯರಿಗಾಗಿ ಸಾಲ ನೀಡುವ ಸಂಸ್ಥೆ, ಪ್ರಾಣಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿರುವುದು ಮಾತ್ರ ಶ್ಲಾಘನೀಯ ಕಾರ್ಯವಾಗಿದೆ.



















