- Kannada News Photo gallery Karnataka Coast Heatwave: Fishing Industry Crippled by Rising Sea Temperatures, taja suddi
ಕೋಟಿ ಕೋಟಿ ವಹಿವಾಟು ನಡೆಸುವ ಮೀನುಗಾರಿಕೆಗೆ ತಟ್ಟಿದ ತಾಪಮಾನದ ಬಿಸಿ: ಮೀನು ಸಿಗದೆ ಕಂಗಾಲಾದ ಮೊಗವೀರರು
ಕರ್ನಾಟಕದ ಕರಾವಳಿಯಲ್ಲಿ ಉಷ್ಣಾಂಶದ ಏರಿಕೆಯಿಂದಾಗಿ ತೀವ್ರ ಬಿಸಿಲಿನಿಂದಾಗಿ ಮೀನುಗಾರಿಕಾ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಮುದ್ರದ ತಾಪಮಾನ ಹೆಚ್ಚಳದಿಂದಾಗಿ ಮೀನುಗಳು ಆಳಕ್ಕೆ ಹೋಗುತ್ತಿರುವುದರಿಂದ ಮೀನುಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಸಾವಿರಾರು ಬೋಟ್‌ಗಳು ಬಂದರಿನಲ್ಲೇ ಲಂಗರು ಹಾಕಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
Updated on: Mar 12, 2025 | 5:44 PM

ರಾಜ್ಯ ಕರಾವಳಿಯಲ್ಲಿ ಬಿಸಿಗಾಳಿಯ ಜೊತೆ ಉಷ್ಣಾಂಶ ಏರಿಕೆಯಾಗಿ ವಾತಾವರಣ ಬೆಂಕಿ ಕೆಂಡದಂತಾಗಿದೆ. ಈ ನಡುವೆ ಸಮುದ್ರದಲ್ಲಿಯು ತಾಪಮಾನ ಹೆಚ್ಚಾಗಿ ಮತ್ಸ್ಯಕ್ಷಾಮ ಉಂಟಾಗಿದೆ. ಮನುಷ್ಯರಂತೆ ಮೀನುಗಳು ಸಹ ತಂಪಾದ ಸ್ಥಳ ಹುಡುಕಿಕೊಂಡು ಹೋದುದರ ಪರಿಣಾಮ ಸಾವಿರಾರು ಮೀನುಗಾರಿಕಾ ಬೋಟ್‌ಗಳು ಬಂದರಿನಲ್ಲೇ ಲಂಗರು ಹಾಕಿದೆ.

ಕಡಲನಗರಿ ಮಂಗಳೂರಿನಲ್ಲಿ ಹೊರಗೆ ಕಾಲಿಟ್ಟರೆ ಬಿಸಿ ಬಿಸಿ ಕೆಂಡದ ವಾತಾವರಣದಲ್ಲಿರುವ ಅನುಭವವಾಗುತ್ತಿದೆ. ಬಿಸಿಗಾಳಿಯ ಜೊತೆ ತಾಪಮಾನ ಏರಿಕೆಯಾಗಿರುವ ಪರಿಣಾಮ ಜನರಿಗೆ ಈಗಿನ ತಾಪಮಾನ ಸಹಿಸಲು ಅಸಾಧ್ಯವಾಗಿದೆ. ಈ ನಡುವೆ ಸಾವಿರಾರು ಕೋಟಿ ವಹಿವಾಟು ನಡೆಸುವ ಮೀನುಗಾರಿಕೆಗೂ ತಾಪಮಾನದ ಬಿಸಿ ತಟ್ಟಿದೆ. ಸಮುದ್ರದಲ್ಲಿ ತಾಪಮಾನ ಏರಿಕೆ ಆಗಿರುವುದರಿಂದ ಮೀನುಗಳು ತಳ ಸೇರುತ್ತಿದ್ದು, ಮೀನುಗಾರರು ಪರದಾಡುವಂತಾಗಿದೆ.

ಸಮುದ್ರದಲ್ಲಿ ಹೆಚ್ಚಾದ ತಾಪಮಾನದಿಂದ, ಹವಾಮಾನ ವೈಪರೀತ್ಯದಿಂದಾಗಿ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮೀನುಗಾರಿಕೆಗೆ ತೆರಳುತ್ತಿರುವ ಮೀನುಗಾರರು ಲಕ್ಷಾಂತರ ರೂ. ನಷ್ಟಕ್ಕೊಳಗಾಗುತ್ತಿದ್ದಾರೆ. ಮಂಗಳೂರು ಬಂದರಿನಲ್ಲಿ 1500ಕ್ಕೂ ಹೆಚ್ಚು ಆಳಸಮುದ್ರ ಮೀನುಗಾರಿಕಾ ಬೋಟ್‌ಗಳಿವೆ. ಮೇ ತಿಂಗಳ ಅಂತ್ಯದವರೆಗೆ ಈ ಬೋಟ್‌ಗಳು ನಿರಂತರವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತವೆ. ಆದರೆ ಇದೀಗ ಸಾವಿರಕ್ಕೂ ಅಧಿಕ ಬೋಟ್‌ಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿವೆ.

ಸಮುದ್ರದಲ್ಲಿ ಮೀನುಗಳು ಕೂಡ ತಮ್ಮ ಜೀವ ರಚನೆಗೆ ಬೇಕಾದ ತಾಪಮಾನವನ್ನು ಬಯಸುತ್ತವೆ. ಅದು ಸಿಗದೆ ಇದ್ದಾಗ ಅವುಗಳು ಸಮುದ್ರದಾಳಕ್ಕೆ ಹೋಗಿ ಬದುಕುತ್ತವೆ. ಮೀನುಗಳು ಸಮುದ್ರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವಾಗ ಮೀನುಗಾರರ ಬಲೆಗೆ ಸುಲಭವಾಗಿ ಬೀಳುತ್ತವೆ. ಆದರೆ ಯಾವಾಗ ಅವುಗಳು ಸಮುದ್ರದಾಳದಲ್ಲಿ ಆಶ್ರಯ ಪಡೆಯುತ್ತವೆಯೋ ಅಂತಹ ಸಂದರ್ಭದಲ್ಲಿ ಮೀನುಗಾರರ ಬಲೆಗೆ ಸಿಗುವುದಿಲ್ಲ. ಇದೀಗ ಇಂತಹದ್ದೇ ಪರಿಸ್ಥಿತಿ ಮೀನುಗಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ.

ಆಳಸಮುದ್ರಕ್ಕೆ ಹೋಗುವ ಮೀನುಗಾರಿಕಾ ಬೋಟ್‌ಗಳು 10 ರಿಂದ 13 ದಿನ ಸಮುದ್ರದಲ್ಲಿ ಮೀನುಗಳ ಬೇಟೆಯಾಡಿ ಮತ್ತೆ ಬಂದರಿಗೆ ಬರುತ್ತವೆ. ಈ ವೇಳೆ ಹೋಗಿ ಬರೋದಕ್ಕೆ ಒಂದು ಬೋಟಿಗೆ 6 ಲಕ್ಷ ರೂ ಖರ್ಚು ತಗುಲುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಬೋಟ್ಗಳಿಗೆ 2 ಲಕ್ಷ ರೂನಷ್ಟು ಮಾತ್ರವೇ ಮೀನುಗಳು ಸಿಗುತ್ತಿವೆ. ಇದರಿಂದಾಗಿ ಅಂದಾಜು 4 ಲಕ್ಷ ರೂವರೆಗೆ ಮತ್ಸೋದ್ಯಮಿಗಳು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ನಷ್ಟ ಬೇಡ ಎಂದು ಬೋಟ್ಗಳನ್ನು ಮೀನುಗಾರಿಕೆಗೆ ಕಳುಹಿಸದೇ ಬಂದರಿನಲ್ಲಿ ಲಂಗರು ಹಾಕುತ್ತಿದ್ದಾರೆ.

ಹಿಂದೆ ಫೆಬ್ರವರಿ, ಮಾರ್ಚ್ನಲ್ಲಿ ಉತ್ತಮ ಮೀನುಗಾರಿಕೆ ಆಗುತ್ತಿತ್ತು. ಆದರೆ ಈ ಬಾರಿ ಲಾಭದಾಯಕ ತಿಂಗಳಲ್ಲೇ ಹವಮಾನ ವೈಪರೀತ್ಯ ಆಗಿರುವುದರಿಂದ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಂದೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು ಜನ ಚಿಂತೆಗೀಡಾಗಿದ್ದಾರೆ.
























