ಕರ್ನಾಟಕದ ಹಲವೆಡೆ ಮಳೆ: ಮಂಗಳೂರಿನಲ್ಲಿ ಗಾಳಿ ಮಳೆಯಿಂದ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಡೈವರ್ಟ್
Karnataka Weather: ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಅನಿರೀಕ್ಷಿತ ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬರುವ ಹಲವು ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಈ ಮಳೆ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ. ರಾಜ್ಯದ ಒಟ್ಟಾರೆ ಹವಾಮಾನ ಕುರಿತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ವಿವರಗಳು ಇಲ್ಲಿವೆ.

ಬೆಂಗಳೂರು, ಮಾರ್ಚ್ 13: ಬೇಸಿಗೆ ಆರಂಭದಲ್ಲಿಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ವಾತಾವರಣ ಇದೆ. ಈಮಧ್ಯೆ, ಅನೇಕ ಕಡೆಗಳಲ್ಲಿ ಬುಧವಾರ ರಾತ್ರಿ ಏಕಾಏಕಿ (Karnataka Rains) ಮಳೆಯಾಗಿದೆ. ಪರಿಣಾಮವಾಗಿ ಇಳೆ ತುಸು ತಂಪಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮಂಗಳೂರಿಗೆ (Mangalore) ಬರುವ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಕಳುಹಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದುರುಗಿಸಲಾಗಿದೆ. ಮಂಗಳೂರಿನ ಬಜ್ಪೆ, ಕಿನ್ನಿಪದವು ಬಳಿ ಸಿಡಿಲು ಬಡಿದು ತೆಂಗಿನ ಮರ ಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಉಳಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಭಾಗದಲ್ಲಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಭಾರಿ ತಾಪಮಾನದಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದ್ದಾನೆ. ಕಡಬದಲ್ಲಿ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಕಾಫಿನಾಡಿನ ಮಲೆನಾಡು ಭಾಗದಲ್ಲಿ ವರ್ಷಧಾರೆ
ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ಬುಧವಾರ ಸಂಜೆ ವರ್ಷಧಾರೆ ಸುರಿದಿದ್ದು, ತಂಪೆರೆದಿದೆ. ಮೂಡಿಗೆರೆ, ಕಳಸ, ಎನ್ಆರ್ ಪುರ ತಾಲೂಕಿನ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ವರ್ಷದ ಮೊದಲ ಮಳೆಯ ಸಿಂಚನಕ್ಕೆ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿತ್ತು.
ಹಾಸನ ಜಿಲ್ಲೆಯಲ್ಲಿ ವಿವಿಧೆಡೆ ಬಿರುಗಾಳಿ ಸಹಿತವಾಗಿ ಮಳೆ ಸುರಿದಿದೆ. ಮೊದಲ ಮಳೆಯ ಅಬ್ಬರ ಜೋರಾಗಿದ್ದು, ಭೂಮಿ ತಂಪಾಗಿದೆ. ಇತ್ತ ತುಮಕೂರಿನಲ್ಲೂ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ವರುಣರಾಯ ತಂಪೆರೆದಿದ್ದಾನೆ.
ರಾಜ್ಯದ ವಿವಿಧೆಡೆ ನೆಲ ಕಾದ ಕುಲುಮೆಯಾಗಿದೆ. ಇದರ ನಡುವೆ ಕೆಲವು ಜಿಲ್ಲೆಗಳಲ್ಲಿ ದಿಢೀರ್ ಬಂದ ಮಳೆ ತಂಪೆರೆದಿದ್ದರ ಜತೆಗೆ ಅವಾಂತರಗಳನ್ನೂ ಸೃಷ್ಟಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಮಂಗಳವಾರ ಸಂಜೆಯೇ ಮಳೆಯಾಗಿತ್ತು.
ಬೆಂಗಳೂರಿಗೆ ಮತ್ತೆ ಮಳೆ ಮುನ್ಸೂಚನೆ ನೀಡಿದ ಐಎಂಡಿ
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಆರ್ದ್ರತೆ ಕಂಡುಬರುವ ನಿರೀಕ್ಷೆಯಿದೆ. ಐಎಂಡಿ ಪ್ರಕಾರ, ಗುರುವಾರ ಸಂಜೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ, ಗರಿಷ್ಠ ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: ಕೋಟಿ ಕೋಟಿ ವಹಿವಾಟು ನಡೆಸುವ ಮೀನುಗಾರಿಕೆಗೆ ತಟ್ಟಿದ ತಾಪಮಾನದ ಬಿಸಿ: ಮೀನು ಸಿಗದೆ ಕಂಗಾಲಾದ ಮೊಗವೀರರು
ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನದಲ್ಲಿ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಉಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ