ದಾವಣಗೆರೆಯಲ್ಲಿ ಸಿನಿಮೀಯ ರೀತಿಯಲ್ಲಿ ಚೇಸಿಂಗ್, ಫೈರಿಂಗ್: ದರೋಡೆಕೋರರ ಬಂಧನ
ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದ್ದು, ಬ್ಯಾಂಕ್ ದರೋಡೆಗೆ ಪ್ಲಾನ್ ಮಾಡಿ, ಉತ್ತರ ಪ್ರದೇಶದಿಂದ ಆಗಮಿಸುತ್ತಿದ್ದ ದರೋಡೆಕೋರರ ಗ್ಯಾಂಗ್ ಪ್ಲಾನ್ ಅನ್ನು ಪೊಲೀಸರು ತಪ್ಪಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ದರೋಡೆಕೋರನ ಕಾಲನ್ನು ಪೋಲೀಸ್ ಬುಲೆಟ್ ಸೀಳಿದ್ದು, ಪೊಲೀಸ್ ಫೈರಿಂಗ್ನ ಥ್ರಿಲ್ಲಿಂಗ್ ಸ್ಟೋರಿ ಇಲ್ಲಿದೆ.

ದಾವಣಗೆರೆ, ಮಾರ್ಚ್ 16: ಹೊನ್ನಾಳಿ (Honnali) ತಾಲೂಕಿನ ಅರಬಘಟ್ಟ ಗ್ರಾಮದ ಕ್ರಾಸ್ ಬಳಿ, ರವಿವಾರ (ಮಾ.16) ಬೆಳ್ಳಂಬೆಳಗ್ಗೆ UP 24, U1365 ERTIGA ಮತ್ತು MAHENDRA UP16, AS 5712 ವಾಹನದಲ್ಲಿ ಬಂದಿದ್ದ ದರೋಡೆಕೋರರ ಮೇಲೆ ಪೊಲೀಸರು ಫೈರಿಂಗ್ (Police Firing) ಮಾಡಿದ್ದಾರೆ. ದರೋಡೆಕೋರರು ಬರುವುದರ ಖಚಿತ ಮಾಹಿತಿ ಪಡೆದ ಹೊನ್ನಾಳಿ ಠಾಣೆಯ ಪೊಲೀಸರು ಕಡದಕಟ್ಟೆ ಚೆಕ್ ಪೋಸ್ಟ್ ಬಳಿ ನಸುಕಿನ ಜಾವ ಒಂದು ಗಂಟೆ ಸುಮಾರಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅದೇ ಸಮಯಕ್ಕೆ ಉತ್ತರ ಪ್ರದೇಶ ರಾಜ್ಯದ ನಂಬರ್ ಪ್ಲೇಟ್ ಇರುವ ಎರಡು ಕಾರುಗಳು ಬರುತ್ತಿದ್ದು ಅವುಗಳನ್ನು ತಡೆಯಲು ಪೊಲೀಸರು ಮುಂದಾದರು.
ಆದರೆ, ದರೋಡೆಕೋರರು ಕಾರು ನಿಲ್ಲಿಸದೆ ಹಾಗೇ ಹೋಗಿದ್ದಾರೆ. ಯುಪಿ ಕಾರುಗಳನ್ನು ಬೆನ್ನಟ್ಟಿದ ಪೊಲೀಸರು ಎರಡು ಕಾರ್ಗಳಲ್ಲಿದ್ದ ಏಳು ಜನ ದರೋಡೆಕೋರರನ್ನು ಹಿಡಿಲು ಪ್ರಯತ್ನ ಮಾಡಿದ್ದು, ನ್ಯಾಮತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿ ನೇತೃತ್ವದ ತಂಡ ಅರಬಘಟ್ಟ ಬಳಿ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿದೆ. ಆದರೂ, ಕಾರು ನಿಲ್ಲಿಸದ ದರೋಡೆಕೋರರು ಡಿಕ್ಕಿ ಹೊಡೆದು, ವಾಹನದಿಂದ ಇಳಿದು ಓಡಿ ಹೋಗಲು ಯತ್ನಿಸಿದ್ದಾರೆ. ನಿಲ್ಲುವಂತೆ ಸೂಚನೆ ನೀಡಿ ಗಾಳಿಯಲ್ಲಿ ಎರಡು ಗುಂಡುಗಳನ್ನು ಹಾರಿಸಿದರೂ ಕೂಡ, ಓರ್ವ ದರೋಡೆಕೋರ ನ್ಯಾಮತಿ ಠಾಣೆಯ ಕಾನ್ಸ್ಟೇಬಲ್ ಅನಂದ್ ಅವರ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಪರಾರಿಯಾಗಲು ಮುಂದಾಗಿನಿದ್ದಾನೆ. ಕೂಡಲೇ ಇನ್ಸ್ಪೆಕ್ಟರ್ ರವಿ ದರೋಡೆಕೋರ ಅಲಿಯಾನ್ ಗುಡು ಖಾಲಿಯಾ ಕಾಲಿಗೆ ಫೈರಿಂಗ್ ಮಾಡಿ, ಬಂಧಿಸಿದ್ದಾರೆ.
ಬಳಿಕ, ಆತನ ಜೊತೆಗಿದ್ದ ಉತ್ತರ ಪ್ರದೇಶ ಮೂಲದ ಹಸ್ರತ್ ಅಲಿ, ಅಸಾಂ ಯಾನೆ ಟನ್ ಟನ್, ಕಮರುನ್ ಯಾನೆ ಬಾಬು ಸೆರಲಿಯನ್ನು ಬಂಧಿಸಿದ್ದಾರೆ. ಗ್ಯಾಂಗ್ನ ನಟೋರಿಯಸ್ ಲೀಡರ್ ರಾಜಾರಾಮ್, ಬಾಬುಷಾ, ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆಪೀಜ್ ಪರಾರಿಯಾಗಿದ್ದಾರೆ. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎಸ್ಪಿ ನಾಲ್ಕು ತಂಡ ರಚನೆ ಮಾಡಿದ್ದು, ಪೈರಿಂಗ್ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಮಚ್ಚು, ಬುಲೆಟ್, ಎರಡು ಕಾರುಗಳು ಮತ್ತು ಮಂಕಿ ಕ್ಯಾಪ್ ಸಿಕ್ಕಿವೆ.
ಇದು ಉತ್ತರ ಪ್ರದೇಶದ ಕಕ್ರಾಳ್ ಗ್ಯಾಂಗ್ ಎಂದು ತಿಳಿದು ಬಂದಿದ್ದು, ಇವರು ಸವಳಂಗದ ಬ್ಯಾಂಕ್ ದರೋಡೆಗೆ ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಕಳೆದ ಕೆಲ ತಿಂಗಳ ಹಿಂದೆ ನ್ಯಾಮತಿಯಲ್ಲಿ ನಡೆದ ಎಸ್ಬಿಐ ಬ್ಯಾಂಕ್ ದರೋಡೆಗೂ, ಇವರಿಗೂ ಸಂಬಂಧ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿಗೆ ಗಾಯ, ಆಸ್ಪತ್ರೆಗೆ ದಾಖಲು
ಒಟ್ಟಾರೆಯಾಗಿ ದರೋಡೆಕೋರ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದು, ಹಲ್ಲೆಗೊಳಗಾದ ಪೊಲೀಸ್ ಕಾನ್ಸ್ಟೇಬಲ್ ಆನಂದ್ ಅವರನ್ನು ನ್ಯಾಮತಿ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿಲಾಗಿದೆ, ಗುಂಡು ತಗುಲಿದ ದರೋಡೆಕೋರನಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಇನ್ನುಳಿದ ದರೋಡೆಕೋರರ ಶೋಧಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.