ಕುಣಿಗಲ್: ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
ಕುಣಿಗಲ್ ಬಳಿಯ ದೊಡ್ಡಕೆರೆಯಲ್ಲಿ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯ ಟೆಕ್ಕಿ ಸುಮಾ ಅವರ ಮೃತದೇಹ ಪತ್ತೆಯಾಗಿದೆ. ಗುರುವಾರ ಸಂಜೆ ಕೆರೆ ಬಳಿ ಅವರ ವಸ್ತುಗಳು ಪತ್ತೆಯಾದ ನಂತರ ಶೋಧ ಕಾರ್ಯ ನಡೆಸಲಾಯಿತು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತುಮಕೂರು, ಫೆಬ್ರವರಿ 28: ಕುಣಿಗಲ್ (Kunigal) ಬಳಿಯ ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ನಿವಾಸಿ ಸುಮಾ ಮೃತ ದುರ್ದೈವಿ. ಟೆಕ್ಕಿ ಸುಮಾ ಅವರು ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಟೆಕ್ಕಿ ಸುಮಾ ಗುರುವಾರ (ಫೆ.27) ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ ಬಂದಿದ್ದರು. ಸಂಜೆ ಹೊತ್ತಿಗೆ ಕೆರೆ ಬಳಿ ಸುಮಾರ ಬ್ಯಾಗ್, ಮೊಬೈಲ್, ಬಸ್ ಟಿಕೆಟ್, ಚಪ್ಪಲಿ ಸಿಕ್ಕಿವೆ.
ಇದರಿಂದ ಅನುಮಾನಗೊಂಡ ಸ್ಥಳೀಯರು ಸುಮಾರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಸುಮಾರ ಕುಟುಂಬಸ್ಥರು, ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದಾರೆ. ಗುರುವಾರ ಸಂಜೆಯಿಂದ ಸುಮಾಗಾಗಿ ಕೆರೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಹುಡುಕಾಡಿದ್ದಾರೆ. ಆದರೆ, ಸುಮಾ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಸ್ನೇಹಿತನ ಜತೆ ಪರಾರಿ: ಮನನೊಂದ ಪತಿ ಆತ್ಮಹತ್ಯೆಗೆ ಶರಣು
ಅಗ್ನಿಶಾಮಕ ಸಿಬ್ಬಂದಿ ಶುಕ್ರವಾರ ಮತ್ತೆ ಶೋಧಕಾರ್ಯಕ್ಕೆ ಇಳಿದರು. ಅಗ್ನಿಶಾಮಕದಳ ಸಿಬ್ಬಂದಿಯೊಂದಿಗೆ ಶಾಸಕ ರಂಗನಾಥ್ ಸಾಥ್ ನೀಡಿದ್ದು, ಖುದ್ದು ಶೋಧಕಾರ್ಯಕ್ಕೆ ಕೆರೆಗೆ ಇಳಿದರು. ನಿರಂತರ ಶೋಧಕಾರ್ಯ ಬಳಿಕ ಟೆಕ್ಕಿ ಸುಮಾರ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Fri, 28 February 25







