ರಾಮನಗರ: ಪ್ರತಿಷ್ಠಿತ ಕಂಪನಿಯಲ್ಲಿ ದೇಶದ್ರೋಹ ಕೃತ್ಯ, ಪಾಕಿಸ್ತಾನ ಪರ ಬರಹ
ರಾಮನಗರದ ಒಂದು ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆಯ ಮೇಲೆ "ಪಾಕಿಸ್ತಾನ ಜೈ" ಮತ್ತು ಕನ್ನಡಿಗರನ್ನು ಅವಮಾನಿಸುವ ಬರಹಗಳು ಕಾಣಿಸಿಕೊಂಡಿವೆ. ಈ ದೇಶದ್ರೋಹದ ಕೃತ್ಯಕ್ಕೆ ಕಂಪನಿ ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸಿದೆ ಮತ್ತು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಕನ್ನಡಪರ ಸಂಘಟನೆಗಳು ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿವೆ ಮತ್ತು ಕಿಡಿಗೇಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.

ರಾಮನಗರ, ಮಾರ್ಚ್ 16: ಪ್ರತಿಷ್ಠಿತ ಕಂಪನಿಯಲ್ಲಿ ಯಾರೋ ಕಿಡಿಗೇಡಿಗಳು ದೇಶದ್ರೋಹದ (Treason) ಕೃತ್ಯ ಎಸಗಿದ್ದಾರೆ. ಕಂಪನಿಯ ಶೌಚಾಲಯದ ಗೋಡೆಯ ಮೇಲೆ “ಪಾಕಿಸ್ತಾನಜೈ” ಎಂದು ಬರೆಯಲಾಗಿದೆ. ಅಲ್ಲದೇ, ಕನ್ನಡಿಗರು ಸೂ…ಮಕ್ಕಳು ಎಂದು ಬರಹ ಇದೆ. ಬಿಡಿದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬರಹವನ್ನು ಯಾರು, ಯಾವಾಗ ಬರೆದಿದ್ದಾರೆ ಎಂಬುವುದಕ್ಕೆ ಸ್ಪಷ್ಟತೆ ಇಲ್ಲ. ಆದರೆ, ಘಟನೆ ಮಾರ್ಚ್ 15 ರಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಂಪನಿ ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸಿದೆ. ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಂಪನಿ ಹೇಳಿದೆ.
ಕಂಪನಿಯ ಸುತ್ತೋಲೆಯಲ್ಲಿ ಏನಿದೆ?
“ಕೆಲವು ಕಿಡಿಗೇಡಿ ಉದ್ಯೋಗಿಗಳು PU ಲೈನಿನ ಶೌಚಾಲಯಗಳಲ್ಲಿ “ಪಾಕಿಸ್ತಾನ ಜೈ, ಕನ್ನಡಿಗರು ಸೂ,…. ಮಕ್ಕಳು ಎಂದು ಬರೆದಿರುತ್ತಾರೆ. ಈ ರೀತಿಯ ಬರವಣಿಗೆಗಳು ಉದ್ಯೋಗಿಗಳ ಮನಸ್ಸಿನಲ್ಲಿ ಅಶಾಂತಿಯನ್ನು ಸೃಷ್ಟಿಸುವುದಲ್ಲದೇ ಸಂಸ್ಥೆಯಲ್ಲಿ ತೀವ್ರ ರೀತಿಯ ಅಶಿಸ್ತಿನ ಬೆಳವಣಿಗೆಗೆ ಕಾರಣವಾಗುತ್ತದೆ. ಮುಂದುವರೆದು ಈ ರೀತಿಯ ಬರವಣಿಗೆಗಳು ದೇಶದ ಕಾನೂನಿನ ಚೌಕಟ್ಟಿನಲ್ಲಿ “ದೇಶದ್ರೋಹಿ” ಅಪರಾಧಗಳಡಿಯಲ್ಲಿ ವರ್ಗೀಕೃತವಾಗಿರುತ್ತವೆ.
ಈ ರೀತಿಯಾದ ಕೃತ್ಯಗಳು ಮುಂದುವರೆದಲ್ಲಿ, ಮಾಹಿತಿಯನ್ನು ಪೊಲೀಸರ ಗಮನಕ್ಕೆ ತರುವುದರೊಂದಿಗೆ ಜೈಲು ವಾಸವಾಗುವವರೆಗೂ ಕಿಡಿಗೇಡಿಗಳನ್ನು ಬಿಡುವುದಿಲ್ಲ ಮತ್ತು ಬೆರಳಚ್ಚು ಹಾಗೂ ಬರವಣಿಗೆ ತಜ್ಞರ ಗಮನಕ್ಕೆ ತಂದು ಈ ಕೃತ್ಯ ಹೆಸಗುವವರನ್ನು ಕಂಡುಹಿಡಿದು ಹೆಚ್ಚಿನ ಮಟ್ಟದಲ್ಲಿ ಶಿಕ್ಷೆಯಾಗುವವರೆಗೂ ಆಡಳಿತ ಮಂಡಳಿಯು ಕಾಳಜಿ ವಹಿಸಲು ಸಿದ್ಧವಿರುತ್ತದೆ.
ಆದುದರಿಂದ, ಎಲ್ಲಾ ವರ್ಗದ ಉದ್ಯೋಗಿಗಳು ಮೇಲೆ ತಿಳಿಸಿದ ವಿಷಯವನ್ನು ಸೂಕ್ಷ್ಮವಾಗಿ ಗಮನಕ್ಕೆ ತೆಗೆದುಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ. ಹಾಗೂ ಯಾವುದೇ ಉದ್ಯೋಗಿಯು ಈ ರೀತಿಯ ಕಿಡಿಗೇಡಿ ಕೃತ್ಯ ಮಾಡುವಾಗ ಸಿಕ್ಕಿಬಿದ್ದಲ್ಲಿ ಅತ್ಯಂತ ಕಠಿಣ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಆಡಳಿತ ಮಂಡಳಿಯು ತಿಳಿಸುತ್ತದೆ” ಎಂದು ಕಂಪನಿ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಅತೀ ದೊಡ್ಡ ಕಾರ್ಯಾಚರಣೆ: 75 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಕಂಪನಿ ಮುಂಭಾಗ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಘಟನೆಯನ್ನು ಖಂಡಿಸಿ ಕಂಪನಿ ಎದುರು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಭಯೋತ್ಪಾದಕ ಕೃತ್ಯ ಎಸಗಿರುವ ಕಿಡಿಗೇಡಿ ವಿರುದ್ಧ ಗಂಭೀರ ಪ್ರಕರಣ ದಾಖಲು ಮಾಡಬೇಕು. ಕಿಡಿಗೇಡಿಯನ್ನು ಗಡಿಪಾರು ಮಾಡಬೇಕು. ಪ್ರಕರಣ ಮುಚ್ಚಾಕಲು ಯತ್ನಿಸಿದ್ದ ಆಡಳಿತ ಮಂಡಲಿ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆ ಮುಖಂಡ ಕನ್ನಡ ಮಂಜು ಆಗ್ರಹಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Sun, 16 March 25