ಮದುವೆ ಫೋಟೋ ಕೊಡದ ಫೋಟೊಗ್ರಾಫರ್ಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ
ಫೋಟೊಗ್ರಾಫರ್ ಮದುವೆಯ ಫೋಟೋಗಳನ್ನೇ ನೀಡದೇ ಇದ್ದಿದ್ದಕ್ಕೆ ಮದುವೆ ಮನೆ ಕಡೆಯವರು ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಫೋಟೋಗ್ರಾಫರ್ಗೆ ಬರೋಬ್ಬರಿ ಬಿಸಿ ಮುಟ್ಟಿಸಿದೆ.
ಧಾರವಾಡ, ಜುಲೈ 19: ಕಳೆದು ಹೋದ ಕ್ಷಣಗಳು ಮತ್ತೆ ಬಾರವು ಎನ್ನುವ ಮಾತೊಂದಿದೆ. ಮದುವೆಯಂಥ ಕಾರ್ಯಕ್ರಮಗಳು ಜೀವನದಲ್ಲಿ ಒಂದೇ ಬಾರಿ ನಡೆಯುತ್ತವೆ. ಈ ಸಂದರ್ಭದಲ್ಲಿನ ಮಧುರ ಕ್ಷಣಗಳನ್ನು ಮೆಲುಕು ಹಾಕಲು ಫೋಟೋ, ವೀಡಿಯೋಗಳೊಂದೇ ಸಾಧನ. ಹೀಗಾಗಿ ಇಂಥ ಕಾರ್ಯಕ್ರಮಗಳಲ್ಲಿ ಫೋಟೊಗ್ರಾಫರ್ (photographer) ಮತ್ತು ವೀಡಿಯೋಗ್ರಾಫರ್ಗೆ ವಿಶೇಷ ಆದರವಿರುತ್ತೆ. ಆದರೆ ಧಾರವಾಡದ ಓರ್ವ ಫೋಟೊಗ್ರಾಫರ್ ಮದುವೆಯ ಫೋಟೋಗಳನ್ನೇ ನೀಡದೇ ಇದ್ದಿದ್ದಕ್ಕೆ ಮದುವೆ ಮನೆ ಕಡೆಯವರು ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಫೋಟೋಗ್ರಾಫರ್ಗೆ ಬರೋಬ್ಬರಿ ಬಿಸಿ ಮುಟ್ಟಿಸಿದೆ.
ಧಾರವಾಡ ನಗರದ ಆಕಾಶವಾಣಿ ಹತ್ತಿರದ ಶೇಕ್ ಕಂಪೌಂಡ್ ನಿವಾಸಿ ಶಹಬಾಜ ಹೆಬಸೂರ ಎಂಬುವವರು ತನ್ನ ಮದುವೆಗೆ ಫೋಟೋ ತೆಗೆಯಲು ಸತ್ತೂರು ಬಡಾವಣೆಯ ಕೆ.ಎಚ್.ಬಿ. ಲೇಔಟ್‌ನಲ್ಲಿರುವ ರವಿ ದೊಡ್ಡಮನಿ ಎಬುವರಿಗೆ ರೂ. 25 ಸಾವಿರಕ್ಕೆ ಗುತ್ತಿಗೆ ಕೊಟ್ಟಿದ್ದರು. ಆ ಪೈಕಿ ಶಹಬಾಜ ಅವರು ರೂ. 15 ಸಾವಿರ ಮುಂಗಡ ಹಣ ಸಹ ಕೊಟ್ಟಿದ್ದರು.
ಇದನ್ನೂ ಓದಿ: ಸಂವಿಧಾನದ 371 ಜೆ ವಿಧಿಯಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ
2022 ರ ಡಿಸೆಂಬರ್ ನಲ್ಲಿ ಶಹಬಾಜ್ ಅವರ ಮದುವೆಯಾಗಿತ್ತು. ಮದುವೆಯಾಗಿ ಬಹಳ ದಿನಗಳಾದರೂ ರವಿ ದೊಡ್ಡಮನಿ ಫೋಟೋಗಳನ್ನು ನೀಡಿರಲಿಲ್ಲ. ಇದರಿಂದ ಬೇಸತ್ತ ಶಹಬಾಜ್ ಹೆಬಸೂರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಮದುವೆಯ ಸವಿನೆನಪಿಗಾಗಿ ಮದುವೆ ಸಮಾರಂಭದಲ್ಲಿ ತೆಗೆದ ಫೋಟೋಗಳನ್ನು ನೀಡದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ.
ಸಂದಾಯ ಮಾಡಿದ ಮುಂಗಡ ಹಣ ರೂ. 15 ಸಾವಿರ ಜೊತೆಗೆ ದೂರುದಾರ ಅನುಭವಿಸಿದ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 10 ಸಾವಿರ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚವೆಂದು ರೂ. 5 ಸಾವಿರ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಫೋಟೊಗ್ರಾಫರ್ ರವಿ ದೊಡ್ಡಮನಿಗೆ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.