Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧದಲ್ಲಿ ಕೋಲಾಹಲ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ವಿಧಾನಸೌಧದ ಮೊದಲ ಮಹಡಿಯ ಕಾರಿಡಾರ್‌ನಲ್ಲೇ ಯತ್ನಾಳ್ ಕುಸಿದುಬಿದ್ದರು. ಬಿಪಿ ಹೆಚ್ಚಾಗಿ ಅವರು ಅಸ್ವಸ್ಥಗೊಂಡರು ಎನ್ನಲಾಗಿದೆ. ಬಿಜೆಪಿಯ ಇತರ ಶಾಸಕರು ಗಾಳಿ ಬೀಸಿ ಯತ್ನಾಳ್​ ಅವರನ್ನು ಚೇತರಿಸುವಂತೆ ಮಾಡಲು ಯತ್ನಿಸಿದರು.

ವಿಧಾನಸೌಧದಲ್ಲಿ ಕೋಲಾಹಲ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)
Follow us
ಕಿರಣ್​ ಹನಿಯಡ್ಕ
| Updated By: Ganapathi Sharma

Updated on:Jul 19, 2023 | 7:17 PM

ಬೆಂಗಳೂರು, ಜುಲೈ 19: ವಿಧಾನಸಭೆ ಕಲಾಪದ (Karnataka Assembly Session) ವೇಳೆ ಅತಿಯಾಗಿ ವರ್ತಿಸಿದ ಬಿಜೆಪಿ ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಅವರು ಅಮಾನತುಗೊಳಿಸಿದ ನಂತರ ನಾಟಕೀಯ ಬೆಳವಣಿಗೆಗಳಿಗೆ ವಿಧಾನಸಭೆ ಸಾಕ್ಷಿಯಾಯಿತು. ಅಮಾನತುಗೊಂಡವರನ್ನು ಸದನದಿಂದ ಹೊರ ಹಾಕಲು ಮಾರ್ಷಲ್​ಗಳು ಒಳಬಂದರೆ, ಅಮಾನತಾಗಿರುವ ಶಾಸಕರ ರಕ್ಷಣೆಗೆ ಬಿಜೆಪಿಯ ಇತರ ಶಾಸಕರು ಮುಂದಾದರು. ಈ ವೇಳೆ ಭಾರಿ ಗದ್ದಲ ಸೃಷ್ಟಿಯಾಯಿತು. ಈ ಎಲ್ಲ ಬೆಳವಣಿಗೆಗಳ ಸಂದರ್ಭ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಸ್ವಸ್ಥಗೊಂಡು ವಿಧಾನಸೌಧದ ಕಾರಿಡಾರ್‌ನಲ್ಲೇ ಸುಸ್ತಾಗಿ ಕುಸಿದುಬಿದ್ದರು.

ವಿಧಾನಸೌಧದ ಮೊದಲ ಮಹಡಿಯ ಕಾರಿಡಾರ್‌ನಲ್ಲೇ ಯತ್ನಾಳ್ ಕುಸಿದುಬಿದ್ದರು. ಬಿಪಿ ಹೆಚ್ಚಾಗಿ ಅವರು ಅಸ್ವಸ್ಥಗೊಂಡರು ಎನ್ನಲಾಗಿದೆ. ಬಿಜೆಪಿಯ ಇತರ ಶಾಸಕರು ಗಾಳಿ ಬೀಸಿ ಯತ್ನಾಳ್​ ಅವರನ್ನು ಚೇತರಿಸುವಂತೆ ಮಾಡಲು ಯತ್ನಿಸಿದರು. ನಂತರ ವಿಧಾನಸೌಧದಲ್ಲೇ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಆಂಬುಲೆನ್ಸ್​ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಯತ್ನಾಳ್ ಅವರನ್ನು ಸದ್ಯ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯತ್ನಾಳ್ ಪತ್ನಿ ಶೈಲಜಮ್ಮ ಹಾಗೂ ಮಗ ಹರ್ಷ ಫೋರ್ಟಿಸ್ ಆಸ್ಪತ್ರೆಗೆ ತೆರಳಿದ್ದಾರೆ.

ಶಾಸಕ‌ ಬಸನಗೌಡ ಯತ್ನಾಳ್ ಆರೋಗ್ಯ ಸ್ಥಿರವಾಗಿದೆ. ಫೋರ್ಟಿಸ್ ಆಸ್ಪತ್ರೆಯ ಹಿರಿಯ ವೈದ್ಯರು ಯತ್ನಾಳ್ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಸ್ವಲ್ಪ ಬಿಪಿ ಹೆಚ್ಚಳ ಆಗಿದೆ ಅಷ್ಟೇ. ಮಾರ್ಷಲ್​​ಗಳ ತಳ್ಳಾಟ ನೂಕಾಟದಲ್ಲಿ ದೈಹಿಕ ಒತ್ತಡ ಬಿದ್ದಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ ಎಂಬುದಾಗಿ ಶಾಸಕ ಅರವಿಂದ ಬೆಲ್ಲದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: BJP MLAs Suspended: ಸದನದಲ್ಲಿ ಅತಿರೇಕದ ವರ್ತನೆ; ಹತ್ತು ಮಂದಿ ಬಿಜೆಪಿ ಶಾಸಕರ ಅಮಾನತು

ಈ ಮಧ್ಯೆ, ಅಮಾನತುಗೊಂಡ ಬಿಜೆಪಿ ಶಾಸಕರನ್ನು ಹೊರಹಾಕಿದ ಬಳಿಕ ವಿಧಾನಸಭೆ ಕಲಾಪ ಮುಂದುವರಿದಿದೆ. ಸರ್ಕಾರದ ಮತ್ತು ಸ್ಪೀಕರ್ ನಡೆಯನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಂಪೂರ್ಣ ಗೈರಾದರು. ವಿಧಾನಸಭೆಯ ವಿಪಕ್ಷದ ಸಾಲಿನಲ್ಲಿ ಏಕೈಕ ಶಾಸಕ, ಕೆಆರ್‌ಪಿಪಿಯ ಜನಾರ್ದನ ರೆಡ್ಡಿ ಮಾತ್ರ ಉಪಸ್ಥಿತರಿದ್ದರು.

ಬಿಜೆಪಿ ಶಾಸಕರ ವರ್ತನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ಶಾಸಕರು ಡೆಪ್ಯುಟಿ ಸ್ಪೀಕರ್​​ಗೆ ಅಗೌರವ ತೋರಿದ್ದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Wed, 19 July 23