ಬಿಟ್ಟಿಯಾಗಿ ಟವರ್ ಹಾಕಿಕೊಂಡು ಸೇವಾ ನ್ಯೂನ್ಯತೆ ಎಸಗಿದ ರಿಲಯನ್ಸ್ ಇನ್ಫೋ: ದಂಡ, ಪರಿಹಾರಕ್ಕೆ ಆದೇಶಿಸಿದ ಗ್ರಾಹಕ ಆಯೋಗ

ಖಾಲಿ ಜಾಗವನ್ನು ವಾಪಸ್​ ಮಾಡದೆ ಸೇವಾ ನ್ಯೂನ್ಯತೆ ಎಸಗಿದ ರಿಲಯನ್ಸ್ ಇನ್ಫೋಕಾಮ್ ಲಿಮಿಟೆಡ್ ಕಂಪನಿಗೆ ದಂಡ ವಿಧಿಸಿ ಪರಿಹಾರ ನೀಡಲು ಧಾರವಾಡದ ಗ್ರಾಹಕರ ಆಯೋಗ ಆದೇಶ ನೀಡಿದೆ.

ಬಿಟ್ಟಿಯಾಗಿ ಟವರ್ ಹಾಕಿಕೊಂಡು ಸೇವಾ ನ್ಯೂನ್ಯತೆ ಎಸಗಿದ ರಿಲಯನ್ಸ್ ಇನ್ಫೋ: ದಂಡ, ಪರಿಹಾರಕ್ಕೆ ಆದೇಶಿಸಿದ ಗ್ರಾಹಕ ಆಯೋಗ
ಸೇವಾ ನ್ಯೂನ್ಯತೆ ಎಸಗಿದ ರಿಲಯನ್ಸ್ ಇನ್ಫೋ: ಪರಿಹಾರಕ್ಕೆ ಆದೇಶಿಸಿದ ಆಯೋಗ
Updated By: ಸಾಧು ಶ್ರೀನಾಥ್​

Updated on: Jan 26, 2024 | 6:06 AM

ಹುಬ್ಬಳ್ಳಿಯ ತೋಳನಕೇರಿ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ಧಾರವಾಡದ ವಾರ್ಡ 1 ರಲ್ಲಿನ ತಮ್ಮ ಮಾಲೀಕತ್ವದ ಖಾಲಿ ಜಾಗವನ್ನು ತಿಂಗಳ ಬಾಡಿಗೆ ಕರಾರಿನ ಮೇಲೆ ರಿಲಯನ್ಸ್ ಇನ್ಫೋಕಾಮ್ ಲಿಮಿಟೆಡ್‌ಗೆ ಟವರ್ ಹಾಕಿಕೊಳ್ಳಲು ಕೊಟ್ಟಿದ್ದರು. 2003 ಮೇ ತಿಂಗಳಿಂದ ಮೇ 2023 ರವರೆಗೆ ಕರಾರು ಅವಧಿ ಇತ್ತು. ಕರಾರಿನ ಅವಧಿ ಮುಗಿದಿದ್ದು, ತಮ್ಮ ಟವರ್ ವಾಪಸ್ಸು ತೆಗೆದು, ಖಾಲಿ ಜಾಗವನ್ನು ವಶಕ್ಕೆ ನೀಡುವಂತೆ ಹಾಗೂ 2023ರ ಮೇ ತಿಂಗಳಿಂದ ಬಾಡಿಗೆಯನ್ನು ನೀಡುವಂತೆ ಕೇಳಿದರೂ ಸ್ಪಂದಿಸಿಲ್ಲ. ಹೀಗಾಗಿ ಅವರ ವಿರುದ್ಧ ಕಿತ್ತೂರ ಅವರು ಗ್ರಾಹಕರ ಆಯೋಗದಲ್ಲಿ ದೂರು ದಾಖಲು ಮಾಡಿದ್ದರು.

ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ರಿಲಯನ್ಸ್ ಇನ್ಫೋಕಾಮ್ ಕಂಪನಿ ಅವಧಿ ಮುಕ್ತಾಯವಾದರೂ ಟವರಿನ ಎಲ್ಲ ಸಲಕರಣೆಗಳನ್ನು ವಾಪಸ್ಸು ಪಡೆದುಕೊಂಡು ಖಾಲಿ ಜಾಗದ ಕಬ್ಜಾ ಕೊಡದೇ ಇರುವುದು ಹಾಗೂ ಬಾಡಿಗೆಯನ್ನು ಸಹ ಕೊಡದಿರುವುದು ತಪ್ಪೆಂದು ತೀರ್ಪು ನೀಡಿದೆ.

Also Read: ಸೇವಾ ನ್ಯೂನ್ಯತೆ -ಬಿಲ್ಡರ್‌ಗೆ ದಂಡ ವಿಧಿಸಿ, ಪರಿಹಾರ ನೀಡಲು ಆದೇಶಿಸಿದ ಧಾರವಾಡ ಗ್ರಾಹಕರ ಆಯೋಗ

2023ರ ಮೇ ತಿಂಗಳಿಂದ 2024ರ ಜನವರಿವರೆಗೆ ಬಾಕಿ ಬಾಡಿಗೆ ಹಣವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡಲು ಆಯೋಗ ನಿರ್ದೇಶಿಸಿದೆ. ಒಂದು ತಿಂಗಳ ಒಳಗಾಗಿ ಆಯೋಗದ ಆದೇಶ ಪಾಲನೆ ಮಾಡುವಲ್ಲಿ ವಿಫಲರಾದಲ್ಲಿ ಖುಲ್ಲಾ ಜಾಗದ ಕಬ್ಜಾ ಕೊಡುವವರೆಗೂ ಪ್ರತಿ ತಿಂಗಳು 30 ಸಾವಿರ ರೂ. ಬಾಡಿಗೆ ಕೊಡಲು ಆದೇಶದಲ್ಲಿ ತಿಳಿಸಿದೆ.

Also Read: ಫ್ಯ್ಲಾಟ್‌ ನಿರ್ಮಿಸಿಕೊಡದ ಬಿಲ್ಡರ್‌! ಧಾರವಾಡ ಗ್ರಾಹಕರ ಆಯೋಗದ ಆದೇಶವೇನು?

ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ 50 ಸಾವಿರ ರೂ. ಪರಿಹಾರ ಮತ್ತು 2 ಸಾವಿರ ರೂ. ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರ ರಿಲಯನ್ಸ್ ಇನ್ಫೋಕಾಮ್ ಲಿಮಿಟೆಡ್‌ಗೆ ಸೂಚಿಸಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ