ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಗೆ (Hubli) ಇಂದು (ಜ.28) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆಗಮಿಸಲಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಅಮಿತ್ ಶಾ ಹುಬ್ಬಳ್ಳಿಗೆ ಬರುತ್ತಿರುವುದು ಹಲವು ಕೂತುಹಲಕ್ಕೆ ಕಾರಣವಾಗಿದೆ. ಒಂದೇ ದಿನ ಎರಡು ಜಿಲ್ಲೆಯಲ್ಲಿ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಚುನಾವಣಾ ಚಾಣಕ್ಯ ಅಮಿತ್ ಶಾ ಬಿಜೆಪಿ (BJP) ಕಾರ್ಯಕರ್ತರ ರಣೋತ್ಸಾಹ ಹೆಚ್ಚಿಸಲಿದ್ದಾರೆ. ಶಿಶುನಾಳ ಶರೀಫರ, ಗುರುಗೋವಿಂದ ಭಟ್ಟರ ಪುಣ್ಯಭೂಮಿ ಕುಂದಗೋಳ ಪಟ್ಟಣದಲ್ಲಿ ಅಮಿತ್ ಶಾ ಬೂತ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗಿ ರೋಡ್ ಶೋ ಮಾಡಲಿದ್ದಾರೆ. ಈ ಮೂಲಕ ಕಾಂಗ್ರೆಸ್ನ ಭದ್ರಕೋಟೆಯಲ್ಲಿ ಕಮಲ ಅರಳಿಸುವ ತಂತ್ರಗಾರಿಕೆ ರೂಪಿಸಲಿದ್ದಾರೆ. ರೋಡ್ ಶೋ ಗೂ ಮೊದಲು ಶಾ ಪಟ್ಟಣದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಅಮಿತ್ ಶಾ ಪೂಜೆ ಸಲ್ಲಿರೋದು ಕೂತುಹಲಕ್ಕೆ ಕಾರಣವಾಗಿದ್ದು, ಅಮಿತ್ ಶಾ ಫೂಜೆ ಸಲ್ಲಿಸುವ ದೇವಸ್ಥಾನಕ್ಕೂ ಶತಮಾನಗಳ ಇತಿಹಾಸ ಇದೆ.
ಕುಂದಗೋಳ ಪಾಶ್ಚಿಮಾತ್ಯ ಚಾಲುಕ್ಯ ಸಾಮ್ರಾಜ್ಯದ ದೇವಸ್ಥಾನವಾಗಿದೆ. 11 ನೇ ಶತಮಾನದ ಶ್ರೀ ಶಂಭುಲಿಂಗೇಶ್ವರ ದೇವಾಲಯ ನಿರ್ಮಾಣವಾಗಿತ್ತು. 1948 ಕ್ಕೂ ಮುಂಚಿತವಾಗಿ, ಕುಂದಗೋಳ ಜಮಖಂಡಿ ರಾಜಮನೆತನದ ಅಧೀನದಲ್ಲಿತ್ತು . ಈ ದೇವಾಲಯದ ಶಂಬುಲಿಂಗೇಶ್ವರ ಗುಡಿ 11 ನೇ ಶತಮಾನದ ದೇವಾಲಯವಾಗಿದ್ದು, ಕದಂಬರು ನಿರ್ಮಿಸಿದ ನಂತರ ಚಾಲುಕ್ಯರು ನವೀಕರಿಸಿದ್ದಾರೆ. ಇದು ಪಶ್ಚಿಮ ಚಾಲುಕ್ಯರು ನಿರ್ಮಿಸಿದ ದೊಡ್ಡ ಶಿವ ದೇವಾಲಯವಾಗಿದೆ. ಇದನ್ನು ಹೆಚ್ಚು ನಯಗೊಳಿಸಿದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಕಂಬಗಳ ಮೇಲಿನ ಕೆತ್ತನೆಗಳು ಮತ್ತು ಚಿತ್ರಗಳನ್ನು ಚೆನ್ನಾಗಿ ಕೆತ್ತಲಾಗಿದೆ. ಬ್ರಹ್ಮದೇವರ ಗುಡಿ, ದತ್ತಾತ್ರೇಯಗುಡಿ, ಶಂಕರಾಚಾರ್ಯರ ಗುಡಿ ಹಾಗೂ ಮಲ್ಲಿಕಾರ್ಜುನ ಗುಡಿಗಳು ಇಲ್ಲಿಯ ಇತರ ದೇವಾಲಯಗಳು. ಇಲ್ಲಿ 11 ಶಿಲಾಶಾಸನಗಳಿವೆ.
ಇದನ್ನೂ ಓದಿ: ಕೇಂದ್ರ ಸಚಿವ ಅಮಿತ್ ಶಾ ಹುಬ್ಬಳ್ಳಿ, ಬೆಳಗಾವಿ ಭೇಟಿ: ಇಲ್ಲಿದೆ ವೇಳಾಪಟ್ಟಿ
ಈ ದೇವಸ್ಥಾನವು ಪೂರ್ವ, ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲಿ 3 ದ್ವಾರಗಳನ್ನು ಹೊಂದಿದೆ. ದೇವಾಲಯದ ಬಾಗಿಲುಗಳ ಮೆಟ್ಟಿಲಿನ ಬದಿಯಲ್ಲಿ, ಸಿಂಹದ ಕೆತ್ತನೆಯನ್ನು ಕಾಣಬಹುದು. ಗರ್ಭಗುಡಿಯ ಒಳಭಾಗದಲ್ಲಿನ ಶಿವಲಿಂಗವು ದಟ್ಟವಾದ ಕಂದು ಬಣ್ಣದಲ್ಲಿದೆ. ಸಾಮಾನ್ಯವಾಗಿ ಶಿವಲಿಂಗಗಳು ಗಾಢ ಬೂದು ಬಣ್ಣದಲ್ಲಿ ಇಲ್ಲವೇ ಕಪ್ಪು ಬಣ್ಣದ್ದಾಗಿರುತ್ತದೆ. ಆದರೆ ಕಂದು ಬಣ್ಣದ ಶಿವಲಿಂಗವಿರುವುದು ಬಹಳ ಅಪರೂಪ. ಗರ್ಭಗುಡಿಯಲ್ಲಿ ಗಣಪತಿ ಮತ್ತು ಪಾರ್ವತಿಯ ಮೂರ್ತಿಗಳೂ ಇವೆ.
ದೇವಸ್ಥಾನವು ಬಂಕಾಪುರ ಕೋಟೆಯಲ್ಲಿರುವ 60 ಕಂಬಗಳ ದೇವಾಲಯದ ಮಾದರಿಯಲ್ಲಿದೆ. ಚಾಲುಕ್ಯ ಶೈಲಿಯಲ್ಲಿ ನಿರ್ಮಿತವಾದ ದೇವಾಲಯ ಸದ್ಯ ಮೂಲ ಗುಡಿಯ ಸಭಾಮಂಟಪ ಮತ್ತು ಗರ್ಭಗುಡಿಗಳು ಮಾತ್ರ ಉಳಿದಿವೆ. ಸಭಾಮಂಟಪದ ವೃತ್ತದಲ್ಲಿ ಅಷ್ಟದಿಕ್ಪಾಲಕರನ್ನು ಕೆತ್ತಲಾಗಿದೆ. ಹೊರಬದಿಯಲ್ಲಿ ಕೀರ್ತಿ ಮುಖಗಳಿವೆ.
ಈ ದೇವಾಲಯವು ಕದಂಬ ಶೈಲಿಯ ನಿರ್ಮಾಣವಾಗಿದೆ. ಸುಮಾರು 4 ಅಥವಾ 5 ಕಂಬಗಳು ಹಾನಿಗೊಳಗಾಗಿವೆ. ಹಲವು ವರ್ಷಗಳ ಹಿಂದೆ ಸಿಡಿಲು ಹೊಡೆದು ಈ ಕಂಬಗಳು ಹಾನಿಯಾಗಿವೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಹತ್ತಿರದಿಂದ ನೋಡಿದರೆ ಹಾನಿಗೊಳಗಾಗಿರುವುದನ್ನು ನೀವು ಗಮನಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ