
ಧಾರವಾಡ, ಮಾರ್ಚ್ 15: ಕನ್ನಡ ವಾಙ್ಮಯ ವಿಹಾರದಲ್ಲಿ ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಸಂಪಾದಕ ಮತ್ತು ವಾಗ್ಮಿಯಾಗಿ ಗುರುತಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ (92) ಅವರು ಶುಕ್ರವಾರ (ಮಾರ್ಚ್ 14 ರಂದು) ನಗರದಲ್ಲಿ ವಿಧಿವಶರಾದರು.
ಕೊಪ್ಪಳ ಜಿಲ್ಲೆ ಬಿಸರಹಳ್ಳಿಯಲ್ಲಿ 1933 ಜನವರಿ 6ರಂದು ಜನಿಸಿದ್ದ ಡಾ.ಪಂಚಾಕ್ಷರಿಯವರು ರಾಷ್ಟ್ರೀಯ ಚಳುವಳಿಯ ಪ್ರಭಾವಕ್ಕೊಳಗಾಗಿ ತಮ್ಮ ಶಿಕ್ಷಣವನ್ನು ಅರ್ಧದಲಿಯೇ ಮೊಟಕುಗೊಳಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಧುಮುಕಿದರು. ಹೀಗಾಗಿ, ನಾಲ್ಕು ಗೋಡೆಗಳ ನಡುವಿನ ಅವರ ಶಿಕ್ಷಣ ಅರ್ಧದಲ್ಲಿಯೇ ನಿಂತುಹೋಯಿತು. ಬಹುಮುಖ ವ್ಯಕ್ತಿತ್ವದ ಪ್ರೊ. ಪಂಚಾಕ್ಷರಿಯವರು ಜೀವನದ ಅನೇಕ ರಂಗಗಳಲ್ಲಿ ತಮ್ಮನ್ನು ತಾವು ಕ್ರೀಯಾಶೀಲವಾಗಿ ತೊಡಗಿಸಿಕೊಂಡರು. ಪ್ರೌಢಶಾಲೆಯಲ್ಲಿ ಅವರು ವಿದ್ಯಾರ್ಥಿ ಮುಖಂಡರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತಿಯಾಗಿದ್ದರು.
ಕಾವ್ಯ, ಗದ್ಯ, ಪತ್ರ ಸಾಹಿತ್ಯ, ಸಣ್ಣಕಥೆ, ಸಂಶೋಧನೆ, ಸಂಪಾದನೆ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸಿದ್ಧಿ ಸಾಧಿಸಿದ್ದ ಇವರು ಬಹುಭಾಷಾ ಕೋವಿದರು. ಹಲವು ಭಾಷೆಗಳಿಂದ ಅನೇಕ ಸಾಹಿತ್ಯ ಕೃತಿ ರತ್ನಗಳನ್ನು ಕನ್ನಡಕ್ಕೆ ಅನುವಾದಿಸಿ, ಜೊತೆಗೆ ಅವುಗಳ ಬಗೆಗೆ ಕನ್ನಡದಲ್ಲಿ ಸ್ವತಂತ್ರವಾಗಿ ಬರೆದು ಭಾಷಾಬಾಂಧವ್ಯಕ್ಕೆ ನಾಂದಿ ಹಾಡಿದ್ದರು.
19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ
8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಮತ್ತು ವಿಮರ್ಶೆಯ ಕೃತಿಗಳು, 7 ಚಿಂತನ ಸಾಹಿತ್ಯ ಕೃತಿಗಳು, 6 ಜೀವನ ಚರಿತ್ರೆಗಳು, 3 ಪತ್ರ ಸಾಹಿತ್ಯ ಕೃತಿಗಳು, 2 ಚರಿತ್ರೆಗಳು, 7 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದಿತ ನಾಟಕಗಳು, ಸಂಪಾದನೆಯ 8 ಕೃತಿಗಳು, ಹಿಂದಿ, ತೆಲಗು ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡ 8 ಕೃತಿಗಳು ಸೇರಿ ಸುಮಾರು ನೂರಕ್ಕೂ ಹೆಚ್ಚು ಉಪಯುಕ್ತ ಕೃತಿಗಳನ್ನು ಕನ್ನಡ ಸಾರಸ್ವತಲೋಕಕ್ಕೆ ಸಮರ್ಪಿಸಿ ಧನ್ಯತೆಯನ್ನು ಕಂಡ ಡಾ.ಪಂಚಾಕ್ಷರಿ ಹಿರೇಮಠ ಅವರು ಅಪ್ಪಟ ಭಾವಜೀವಿ ಮತ್ತು ಕನಸುಗಾರರಾಗಿದ್ದರು.
ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರ ಅಗಲಿಕೆಗೆ ವೀರಶೈವ ಧರ್ಮದ ಪಂಚಪೀಠಾಧೀಶ್ವರರು ಶೋಕ ವ್ಯಕ್ತಪಡಿಸಿದ್ದಾರೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಕೇದಾರ ಪೀಠದ ಶ್ರೀಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಶ್ರೀಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ಬದುಕು-ಬರಹ, ನಡೆ-ನುಡಿಯಲ್ಲಿ ಸಾಮ್ಯತೆ ಸಾಧಿಸಿದ್ದ ಡಾ. ಪಂಚಾಕ್ಷರಿ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. ಜೊತೆಗೆ ಪಂಚಪೀಠಾಧೀಶ್ವರರಲ್ಲಿ ಅತ್ಯಂತ ಭಕ್ತಿ ಶೃದ್ಧೆಗಳನ್ನು ಹೊಂದಿದ್ದರು ಎಂದಿದ್ದಾರೆ.
“ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ಬಹುಭಾಷಾ ಪಂಡಿತ ಡಾ. ಪಂಚಾಕ್ಷರಿ ಹಿರೇಮಠ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಸೇವೆಗೈಯ್ಯುವ ಜೊತೆಗೆ ಸಾಹಿತ್ಯ, ಪ್ರಬಂಧ, ವಿಮರ್ಶೆ, ಅನುವಾದ, ಕಾವ್ಯ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು. ಪಂಚಾಕ್ಷರಿ ಅವರ ಅಗಲಿಕೆಯಿಂದ ನಾಡಿನ ಸಾರಸ್ವತ ಲೋಕ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ಬಹುಭಾಷಾ ಪಂಡಿತ ಡಾ. ಪಂಚಾಕ್ಷರಿ ಹಿರೇಮಠ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಸೇವೆಗೈಯ್ಯುವ ಜೊತೆಗೆ ಸಾಹಿತ್ಯ, ಪ್ರಬಂಧ, ವಿಮರ್ಶೆ, ಅನುವಾದ, ಕಾವ್ಯ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಭಾಷೆಯನ್ನು… pic.twitter.com/gc6kLjYgFU— CM of Karnataka (@CMofKarnataka) March 14, 2025
ಶನಿವಾರ ಮುಂಜಾನೆ 8:30 ರಿಂದ ಧಾರವಾಡ ಜಯನಗರದಲ್ಲಿರುವ ಡಾ. ಪಂಚಾಕ್ಷರಿ ಹಿರೇಮಠ ಅವರ ನಿವಾಸದಲ್ಲಿ ಅಪರಾಹ್ನ 1 ಗಂಟೆಯವರೆಗೆ ಪಾರ್ಥವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನಂತರ ಕೊಪ್ಪಳ ಜಿಲ್ಲೆ ಬಿಸರಹಳ್ಳಿಯ ಡಾ. ಪಂಚಾಕ್ಷರಿ ಹಿರೇಮಠ ಅವರ ತೋಟದಲ್ಲಿ ವೀರಶೈವ ಧರ್ಮ ಪದ್ಧತಿಯಂತೆ ಶನಿವಾರ ಸಂಜೆ ಅಂತ್ಯಕ್ರಿಯೆ ಜರುಗಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
Published On - 7:59 am, Sat, 15 March 25