ಹುಬ್ಬಳ್ಳಿ: ರಾಜ್ಯದಲ್ಲಿರುವ 40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆಯಬೇಕು. ಅದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆಯಲ್ಲಿ ಭಾಗಿಯಾಗಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ದಾವಣಗೆರೆಯತ್ತ ಪ್ರಯಾಣ ಬೆಳೆಸಲಿದ್ದು ಈ ವೇಳೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ 40 ಪರ್ಸೆಂಟ್ ಸರ್ಕಾರವಿದೆ. ಅದನ್ನು ಕಿತ್ತೆಸೆಯಬೇಕಿದೆ. ದೆಹಲಿಯಲ್ಲಿ ನಾವೇನು ಮಾಡಿದ್ದೇವೆ ಅಂತ ಜನರಿಗೆ ಗೊತ್ತಿದೆ. ದೆಹಲಿ, ಪಂಜಾಬ್ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದಲ್ಲೂ ಪ್ರಾಮಾಣಿಕ ಸರ್ಕಾರ ನೀಡುವ ಗುರಿ ಇದೆ. ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಬಲವರ್ಧನೆ ಮಾಡುತ್ತಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಣ್ಣೆ ನಗರಿಯಿಂದ ಚುನಾವಣಾ ಅಖಾಡಕ್ಕೆ ಇಳಿದ ದೆಹಲಿ ಸಿಎಂ, ಇಂದು ಕೇಜ್ರಿವಾಲ್ ದಾವಣಗೆರೆಗೆ ಆಗಮನ
ಇನ್ನು ಇದೇ ವೇಳೆ ಪಂಜಾಬ್ ಸಿಎಂ ಭಗವಂತ್ ಮಾನ್ ಮಾತನಾಡಿದ್ದು, ಕರ್ನಾಟಕದಲ್ಲಿರುವ ರೈತರ ಸಮಸ್ಯೆಯೇ ಪಂಜಾಬ್ ನಲ್ಲಿದೆ. ಕೇಂದ್ರ ಮೂರು ಕೃಷಿ ಕಾಯ್ದೆ ವಾಪಸ್ ತೆಗೆದುಕೊಂಡಿದೆ. ಆದರೆ ಕರ್ನಾಟಕದಲ್ಲಿ ವಾಪಸ್ ಪಡೆದಿಲ್ಲ. ಇಲ್ಲಿನ ರೈತರು ಆತ್ಮಹತ್ಯೆಗೆ ಶರಣಾಗ್ತಿದಾರೆ. ನಾವು ಒಪಿಎಸ್ ಜಾರಿಗೆ ತಂದಿದ್ದೇವೆ. ಇಲ್ಲಿ ಇನ್ನೂ ಒಪಿಎಸ್ ಜಾರಿಗೆ ತಂದಿಲ್ಲ. ಕರ್ನಾಟಕದ ರೈತರ ಸಮಸ್ಯೆಗಳನ್ನ ಎಎಪಿ ಬಗೆಹರಿಸುತ್ತೆ. ಸ್ವಚ್ಛ, ಭ್ರಷ್ಟಾಚಾರ ಮುಕ್ತ ಸರ್ಕಾರ ತರ್ತೇವೆ. ಉಚಿತ ವಿದ್ಯುತ್, ನಿರುದ್ಯೋಗ ನಿವಾರಣೆ, ಕೈಗಾರಿಕೆ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ಪಂಜಾಬ್ ಮತ್ತು ದೆಹಲಿ ಮಾದರಿಯಲ್ಲಿ ಇಲ್ಲಿಯ ಜನರೂ ಎಎಪಿ ಸರ್ಕಾರ ತರಬೇಕು ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:46 pm, Sat, 4 March 23