ಬೆಣ್ಣೆ ನಗರಿಯಿಂದ ಚುನಾವಣಾ ಅಖಾಡಕ್ಕೆ ಇಳಿದ ದೆಹಲಿ ಸಿಎಂ, ಇಂದು ಕೇಜ್ರಿವಾಲ್ ದಾವಣಗೆರೆಗೆ ಆಗಮನ
ದಾವಣಗೆರೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಅರವಿಂದ್ ಕೇಜ್ರಿವಾಲ್ಗೆ ಸಾಥ್ ನೀಡಲಿದ್ದಾರೆ.
ದಾವಣಗೆರೆ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ಭರ್ಜರಿ ತಯಾರಿಗಳು ಶುರುವಾಗಿವೆ. ಬೆಣ್ಣೆ ನಗರಿ ದಾವಣಗೆರೆಯಿಂದ ಚುನಾವಣಾ ಪ್ರಚಾರಕ್ಕೆ ಕಿಚ್ಚು ಹಚ್ಚಲು ಆಮ್ ಆದ್ಮಿ ಪಕ್ಷದ ಸ್ಥಾಪಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ಆಮ್ ಆದ್ಮಿಗೆ ನೆಲೆ ಕಲ್ಪಿಸಲು ದಾವಣಗೆರೆ ಆಯ್ಕೆ ಮಾಡಿಕೊಂಡ ಅರವಿಂದ್ ಕೇಜ್ರಿವಾಲ್ ಇಂದು(ಮಾರ್ಚ್ 04) ಬೆಣ್ಣೆ ನಗರಿಗೆ ಆಗಮಿಸಲಿದ್ದಾರೆ.
ದಾವಣಗೆರೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಅರವಿಂದ್ ಕೇಜ್ರಿವಾಲ್ಗೆ ಸಾಥ್ ನೀಡಲಿದ್ದಾರೆ. ಉಭಯ ನಾಯಕರು ಇಂದು ದೆಹಲಿಯಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಆಗಮಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 12.15ಕ್ಕೆ ದಾವಣಗೆರೆ ನಗರದ ಎಂಬಿಎ ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ಉಭಯ ನಾಯಕರು ಮಧ್ಯಾಹ್ನ 12.30ಕ್ಕೆ ವೇದಿಕೆಗೆ ಆಗಮಿಸಲಿದ್ದು ಆಮ್ ಅದ್ಮಿ ಬಹಿರಂಗ ಸಭೆಯನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆ ಅದೃಷ್ಟದ ನೆಲ ಎಂದೇ ಪ್ರಸಿದ್ದಿ ಪಡೆದ ದಾವಣಗೆರೆಯಿಂದ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ಅರವಿಂದ್ ಕೇಜ್ರಿವಾಲ್ ಮುಂದಾಗಿದ್ದಾರೆ. ಸದ್ಯ ಆಮ್ ಆದ್ಮಿ ಬಹಿರಂಗ ಸಮಾವೇಶಕ್ಕೆ ದಾವಣಗೆರೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ.
ಇದನ್ನೂ ಓದಿ: Retired Top Cop Joins BJP: ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಈಗ ಆಮ್ ಆದ್ಮಿ ಅಲ್ಲ, ಬಿಜೆಪಿ ಕಾರ್ಯಕರ್ತ!
ಇನ್ನು ಉಭಯ ನಾಯಕರು ಎಲ್ಲಾ 224 ಕ್ಷೇತ್ರಗಳ ಪಕ್ಷದ ರಾಜ್ಯ ಪದಾಧಿಕಾರಿಗಳು ಮತ್ತು ಬ್ಲಾಕ್ ಹಾಗೂ ವೃತ್ತ ಸಮಿತಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಹಾಗೂ ವೇದಿಕೆಯಲ್ಲಿ ರಾಜ್ಯದ ಜನರಿಗೆ ಪ್ರಮುಖ ಯೋಜನೆಗಳು ಮತ್ತು ಖಾತರಿಗಳನ್ನು ಘೋಷಿಸಲಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಖಾತೆ ತೆರೆಯಲೇಬೇಕು ಎಂಬ ದೃಢ ಸಂಕಲ್ಪವನ್ನು ಹೊಂದಿರುವ ಅರವಿಂದ್ ಕೇಜ್ರಿವಾಲ್ ದಾವಣೆಗೆರೆಯಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ಅರವಿಂದ್ ಕೇಜ್ರಿವಾಲ್, ಭಗವಂತ ಮಾನ್ಗೆ ಅದ್ಧೂರಿ ಸ್ವಾಗತ
ಅರವಿಂದ ಕೇಜ್ರಿವಾಲ್ ಮತ್ತು ಭಗವಂತ ಮಾನ್ ಮಧ್ಯರಾತ್ರಿ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ. ವಾಣಿಜ್ಯನಗರಿಗೆ ಆಪ್ ಮುಖಂಡರು ಅದ್ದೂರಿಯಾಗಿ ಸ್ವಾಗತ ನೀಡಿದ್ದಾರೆ. ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಅರವಿಂದ್ ಕೇಜ್ರಿವಾಲ್ ಅವರು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿಯಿಂದ ದಾವಣಗೆರೆಗೆ ಹೆಲಿಕಾಪ್ಟರ್ ಮೂಲಕ ಊಭಯ ನಾಯಕರು ಪ್ರಯಾಣ ಬೆಳೆಸಲಿದ್ದಾರೆ. ಕರ್ನಾಟಕದಲ್ಲಿಯೂ ಖಾತೆ ತೆಗೆಯಲು ಆಪ್ ಭರ್ಜರಿ ಪ್ಲ್ಯಾನ್ ಮಾಡಿದೆ.
2023ರ ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡ ಆಪ್, ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಕರ್ನಾಟಕದ ಮಧ್ಯ ಭಾಗದಿಂದಲೇ ಪಕ್ಷ ಸಂಘಟನೆಗೆ ಮುಂದಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:48 am, Sat, 4 March 23