ಮಾಡಾಳ್ ನಿವಾಸದಲ್ಲಿ ಸಿಕ್ಕಿತು ಕೆಜಿಗಟ್ಟಲೆ ಆಭರಣ, ಲಕ್ಷ ಲಕ್ಷ ನಗದು: ಲೋಕಾಯುಕ್ತ ಶೋಧ ಅಂತ್ಯ
ಮಾಡಾಳ್ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ಮುಕ್ತಾಯವಾಗಿದ್ದು, ಶಾಸಕರ ಮನೆಯಲ್ಲಿ ಬರೋಬ್ಬರಿ 2,800 ಗ್ರಾಂ ಚಿನ್ನಾಭರಣ, 20 ಕೆ.ಜಿ ಬೆಳ್ಳಿ ಆಭರಣಗಳು, 16.5 ಲಕ್ಷ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ.
ದಾವಣಗೆರೆ: ಮಾಡಾಳ್ ನಿವಾಸದಲ್ಲಿ ಲೋಕಾಯುಕ್ತ (Lokayukta) ಪೊಲೀಸರ ದಾಳಿ ಮುಕ್ತಾಯವಾಗಿದ್ದು, ಶಾಸಕರ ಮನೆಯಲ್ಲಿ ಬರೋಬ್ಬರಿ 2,800 ಗ್ರಾಂ ಚಿನ್ನಾಭರಣ, 20 ಕೆ.ಜಿ ಬೆಳ್ಳಿ ಆಭರಣಗಳು, 16.5 ಲಕ್ಷ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ಸತತ 10 ಗಂಟೆ ಕಾಲ ಪರಿಶೀಲನೆ ಮಾಡಿದ್ದಾರೆ. ನಗದು, ಚಿನ್ನ, ಬೆಳ್ಳಿ, ಆಸ್ತಿ ಪತ್ರಗಳ ಪಟ್ಟಿ ಮಾಡಿ ಶಾಸಕ ಮಾಡಾಳ್ ಪತ್ನಿ ಲೀಲಾವತಿಯವರಿಂದ ಅಧಿಕಾರಿಗಳು ಸಹಿ ಪಡೆದಿದ್ದಾರೆ. ಇದಕ್ಕೂ ಮೊದಲು ಚನ್ನಗಿರಿ ತಾಲೂಕಿನ ಮಾವಿನಹೊಳೆಯಲ್ಲಿನ ಮಾಡಾಳ್ ಕುಟುಂಬದ ಕ್ರಶರ್ ಕಚೇರಿ ಹಾಗೂ ಮಾವಿನಕಟ್ಟಿ ಬಳಿಯ ಮಾಡಾಳ್ ಕುಟುಂಬದ ತೋಟದ ಮತ್ತು ಖೇಣಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದರು.
ಕಚ್ಚಾ ಸಾಮಾಗ್ರಿ ಖರೀದಿಸಿದ ಆರೋಪ
ಕೆಎಸ್ಡಿಎಲ್ ನಿಯಮ ಗಾಳಿಗೆ ತೂರಿ 800 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿದ ಆರೋಪ ಸಂಬಂಧ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ KSDL ನೌಕರರ ಒಕ್ಕೂಟವು ಫೆಬ್ರವರಿ 21ರಂದೇ ಲೋಕಾಯುಕ್ತ ಕಚೇರಿಗೆ ದೂರು ನೀಡಿದೆ. ಟೆಂಡರ್ದಾರರು ಸಾಮಾಗ್ರಿ ದರ ಶೇಕಡಾ 2ರಿಂದ 3ರಷ್ಟು ಹೆಚ್ಚಳಕ್ಕೆ ಅವಕಾಶವಿದೆ, ಆದರೆ ಕಚ್ಚಾ ಸಾಮಗ್ರಿ ದರ ಶೇ.70, 83, 140ರಷ್ಟು ಹೆಚ್ಚಿಸಿದ್ದರು. ಹೀಗಿದ್ದರೂ ಕಚ್ಚಾ ಸಾಮಗ್ರಿ ದರ ಹೆಚ್ಚಳದ ಬಗ್ಗೆ ನೆಗೋಸಿಯೇಷನ್ ಕಮಿಟಿ, ಫೈನಾನ್ಸ್ ಕಮಿಟಿ ಕ್ರಮ ವಹಿಸಿಲ್ಲವೆಂದು ಲೋಕಾಯುಕ್ತರಿಗೆ ದೂರು ನೀಡಿದೆ.
ಇದನ್ನೂ ಓದಿ: KSDL: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ 800 ಕೋಟಿ ಅವ್ಯವಹಾರ ಆರೋಪ
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಲಂಚ ಸ್ವೀಕಾರದ ವೇಳೆ ತನ್ನ ಪುತ್ರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬೆನ್ನಲ್ಲೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಪ್ತರ ಮೂಲಕ ಮುಖ್ಯಮಂತ್ರಿಯವರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಎಸಿಬಿ ರದ್ದುಗೊಂಡು ಲೋಕಾಯುಕ್ತ ಮರು ನಿರ್ಮಾಣದ ನಂತರ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಗಳಲ್ಲಿ ಇದು ಅತಿದೊಡ್ಡ ದಾಳಿಯಾಗಿದೆ. ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ಪುತ್ರನೇ ಬಂಧನಕ್ಕೊಳಗಾಗಿದ್ದಾನೆ. ಸದ್ಯ ದಾಖಲಾದ ಲೋಕಾಯುಕ್ತ ಎಫ್ಐಆರ್ನಲ್ಲಿ ಮೊದಲ ಆರೋಪಿಯಾಗಿ ಶಾಸಕ ಮಾಡಾಳ್ ಇದ್ದು, ಎರಡನೇ ಆರೋಪಿಯಾಗಿ ಶಾಸಕರ ಪುತ್ರನಾಗಿದ್ದಾನೆ. ಈತನ ಬಂಧನದ ನಂತರ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಆರಂಭಗೊಂಡಿದೆ.
ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಸಿಕ್ಕಿತು ಕಂತೆ ಕಂತೆ ಹಣ, ಚಿನ್ನ
ವಿರುಪಾಕ್ಷಪ್ಪ ಪತ್ನಿ ಆರೋಗ್ಯದಲ್ಲಿ ಏರುಪೇರು
ಸತತ ಲೋಕಾಯುಕ್ತರಿಂದ ಪರಿಶೀಲನೆ ಹಿನ್ನೆಲೆ ವಿರುಪಾಕ್ಷಪ್ಪ ಪತ್ನಿ ಲೀಲಾವತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ವೈದ್ಯ ಡಾ.ಚನ್ನಕೇಶವ ಲೀಲಾವತಿ ಆರೋಗ್ಯ ತಪಾಸಣೆ ಮಾಡಿದರು. ಬಳಿಕ ಮಾತನಾಡಿ, ಸುಮಾರು ವರ್ಷಗಳಿಂದ ಲೀಲಾವತಿ ಅವರಿಗೆ ಅಸ್ತಮಾ ಇದೆ. ಇಂದು ಒತ್ತಡದಿಂದ ಬಿಪಿ ಹೆಚ್ಚಳ ಆಗಿದೆ. ಸೂಕ್ತ ಚಿಕಿತ್ಸೆ ನೀಡಿ ವಿಶ್ರಾಂತಿಗೆ ಸೂಚಿಸಿದ್ದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.