World Elephant Day 2021: ಆನೆಗಳು ಕಾಡಿನಿಂದ ನಾಡಿಗೆ ಬರುವುದು ಏತಕ್ಕೆ?

| Updated By: ರಶ್ಮಿ ಕಲ್ಲಕಟ್ಟ

Updated on: Aug 12, 2021 | 5:27 PM

ಕರ್ನಾಟಕ ವಿಶ್ವವಿದ್ಯಾಲಯದ ಸುಮಾರು 800 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಲಕ್ಷಾಂತರ ಗಿಡ-ಮರಗಳಿವೆ. ಇದೊಂದು ಸಣ್ಣ ಕಾಡಿನಂತೆ ಕಾಣುತ್ತದೆ. ಈ ಪ್ರದೇಶದಲ್ಲಿ ರಾತ್ರಿ ಗಸ್ತು ತಿರುತ್ತಿದ್ದ ಕಾವಲುಗಾರರಿಗೆ ಬೆಳಗಿನ ಜಾವ ಈ ಆನೆ ಕಂಡಿದೆ. ಕೂ

World Elephant Day 2021: ಆನೆಗಳು ಕಾಡಿನಿಂದ ನಾಡಿಗೆ ಬರುವುದು ಏತಕ್ಕೆ?
ಆನೆ
Follow us on

ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿರೋದು ಹೆಚ್ಚಾಗುತ್ತಿದೆ. ಅದರಲ್ಲೂ ಆನೆಗಳಂತೂ ನಾಡಿಗೆ ನುಗ್ಗಿ ಅನಾಹುತಗಳನ್ನೇ ಸೃಷ್ಟಿಸುತ್ತಿವೆ. ಆನೆಗಳು ನಾಡಿಗೆ ಬರುತ್ತಿದ್ದಂತೆಯೇ ಜನರು ಆತಂಕಗೊಂಡು ಅವುಗಳನ್ನು ಮತ್ತೆ ಕಾಡಿನತ್ತ ಓಡಿಸಲು ಹೋಗಿ ಅನಾಹುತಗಳನ್ನು ಸೃಷ್ಟಿಸುತ್ತಿರುವುದು ಕೂಡ ಎಲ್ಲ ಕಡೆ ಕಂಡು ಬರುತ್ತಿದೆ. ಅದರಲ್ಲೂ ಆನೆಗಳ ಹಿಂಡಿನಲ್ಲಿ ಮರಿ ಆನೆಗಳಿದ್ದರಂತೂ ಮುಗಿದೇ ಹೋಯಿತು. ಅವು ಇಂಥ ವೇಳೆಯಲ್ಲಿ ತುಂಬಾನೇ ಕ್ರೂರವಾಗಿ ವರ್ತಿಸುತ್ತವೆ. ಅಷ್ಟಕ್ಕೂ ಇತ್ತೀಚಿನ ದಿನಗಳಲ್ಲಿ ಆನೆಗಳು ನಾಡಿಗೆ ಏಕೆ ಬರುತ್ತವೆ? ಅವು ನಾಡಿಗೆ ಬಂದಾಗ ಅವುಗಳನ್ನು ಹೇಗೆ ಕಾಡಿನತ್ತ ಕಳಿಸಬೇಕು? ಆನೆಗಳ ಬದುಕು ಹೇಗಿರುತ್ತದೆ? ಹಿಂಡನ್ನು ಯಾವ ಆನೆ ಮುನ್ನಡೆಸುತ್ತದೆ? ಅನ್ನುವದರ ಬಗ್ಗೆ ಮಾಹಿತಿ ಇಲ್ಲಿದೆ. ಅಲ್ಲದೇ ಇತ್ತೀಚಿಗೆ ವಿದ್ಯಾಕಾಶಿ ಧಾರವಾಡಕ್ಕೆ ಬಂದಿದ್ದ ಆನೆಯ ಕಥೆ ಏನಾಯಿತು? ಅನ್ನೋದರ ವಿಸ್ತ್ರತ ವರದಿಯೊಂದು ಇಲ್ಲಿದೆ…

ವಿದ್ಯಾಕಾಶಿಗೆ ಬಂದ ಆನೆ ಕಥೆ ಏನು?
ಅವತ್ತು ಏಪ್ರಿಲ್ 18, 2021. ಅಂದು ರವಿವಾರ ಬೇರೆ. ವಿದ್ಯಾಕಾಶಿ ಧಾರವಾಡದಲ್ಲಿ ಎಲ್ಲರೂ ಮನೆಯಲ್ಲಿ ರಜೆಯ ಮೂಡಿನಲ್ಲಿದ್ದಾಗ ಸುದ್ದಿಯೊಂದು ಬಂದಿತ್ತು. ನಗರದ ಕರ್ನಾಟಕ ವಿಶ್ವವಿದ್ಯಾಲಯದ ಬಳಿ ಕಾಡಾನೆಯೊಂದು ಪ್ರತ್ಯಕ್ಷವಾಗಿತ್ತು. ಧಾರವಾಡ ಜನರಿಗೆ ವನ್ಯಜೀವಿಗಳು ಹೊಸದೇನಲ್ಲ. ಧಾರವಾಡ ನಗರಕ್ಕೆ ಜಿಂಕೆ, ಕಾಡು ಕೋಣ ಸೇರಿದಂತೆ ಹಲವಾರು ಪ್ರಾಣಿಗಳು ಬಂದ ಉದಾಹರಣೆಗಳು ಇದ್ದವು. ಆದರೆ ಇದೇ ಮೊದಲ ಬಾರಿಗೆ ಕಾಡಾನೆಯೊಂದು ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಕಂಡು ಬಂದಿದ್ದು ಅಚ್ಚರಿ ಜೊತೆಗೆ ಆತಂಕವನ್ನೂ ತಂದಿತ್ತು. ಜಿಲ್ಲೆಯ ಕಲಘಟಗಿ ತಾಲೂಕು ಹಾಗೂ ಧಾರವಾಡ ತಾಲೂಕಿನ ವಿವಿಧ ಕಡೆಗಳಲ್ಲಿ ಆನೆಗಳ ಹಿಂಡು ಆಗಾಗ ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲ ದಿನಗಳ ಕಾಲ ಅಲ್ಲೇ ಇದ್ದು, ಬಳಿಕ ಅವರು ಮತ್ತೆಲ್ಲೋ ವಲಸೆ ಹೋಗುವುದು ಪ್ರತಿವರ್ಷ ನಡೆಯುವ ವಿದ್ಯಮಾನ. ಆದರೆ ತೀರಾ ಧಾರವಾಡ ನಗರದಲ್ಲಿ ಆನೆ ಕಾಣಿಸಿಕೊಂಡಿರುವುದು ಮೊದಲ ಬಾರಿಗೆ ಅನ್ನುವುದೇ ಆತಂಕಕ್ಕೆ ಕಾರಣವಾಗಿತ್ತು.

ಮೊದಲಿಗೆ ಅದು ಹೆಣ್ಣಾನೆ ಅಂದುಕೊಳ್ಳಲಾಗಿತ್ತು
ಕರ್ನಾಟಕ ವಿಶ್ವವಿದ್ಯಾಲಯದ ಸುಮಾರು 800 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಲಕ್ಷಾಂತರ ಗಿಡ-ಮರಗಳಿವೆ. ಇದೊಂದು ಸಣ್ಣ ಕಾಡಿನಂತೆ ಕಾಣುತ್ತದೆ. ಈ ಪ್ರದೇಶದಲ್ಲಿ ರಾತ್ರಿ ಗಸ್ತು ತಿರುತ್ತಿದ್ದ ಕಾವಲುಗಾರರಿಗೆ ಬೆಳಗಿನ ಜಾವ ಈ ಆನೆ ಕಂಡಿದೆ. ಕೂಡಲೇ ಮಾಹಿತಿಯನ್ನು ಉಳಿದ ಸಿಬ್ಬಂದಿಗೆ ರವಾನಿಸಲಾಗಿದೆ. ಎಲ್ಲರೂ ಸೇರಿ ಹುಡುಕಾಡಿದರೂ ಮತ್ತೆ ಆನೆ ಎಲ್ಲಿಯೂ ಕಂಡಿಲ್ಲ. ಬಳಿಕ ಸುಮಾರು 9 ಗಂಟೆ ಹೊತ್ತಿಗೆ ಅದೇ ಪ್ರದೇಶದಲ್ಲಿ ಓರ್ವ ಭದ್ರತಾ ಸಿಬ್ಬಂದಿಗೆ ಕಾಣಿಸಿದೆ. ಆಗ ಮಾಹಿತಿಯನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮುಟ್ಟಿಸಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆನೆಯನ್ನು ಹುಡುಕಾಡಿದರೂ ಯಾವುದೇ ಪ್ರಯೋಜನವಾಗಲೇ ಇಲ್ಲ. ಅವತ್ತು ಮಧ್ಯಾಹ್ನದವರೆಗೆ ಹುಡುಕಾಟ ನಡೆಸಿದರೂ ಅದು ಎಲ್ಲಿಯೂ ಪತ್ತೆಯೇ ಆಗಲಿಲ್ಲ. ಆದರೂ ರಾತ್ರಿಯಿಡಿ ಕರ್ನಾಟಕ ಕ್ಯಾಂಪಸ್ ನ ವಿವಿಧ ಕಡೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗಸ್ತು ಹಾಕಲಾಯಿತು. ಆದರೆ ಇಷ್ಟೆಲ್ಲಾ ಸಿಬ್ಬಂದಿಯ ಗಸ್ತು ನಡುವೆಯೇ ಆ ಪ್ರದೇಶದಿಂದ ಆನೆ ಕಾಲು ಕಿತ್ತಿತ್ತು. ಅಚ್ಚರಿಯ ಸಂಗತಿ ಅಂದರೆ ಅದು ಅಲ್ಲಿಂದ ಹೋಗಿದ್ದು ಯಾರಿಗೂ ಗೊತ್ತೇ ಆಗಿರಲಿಲ್ಲ. ಅಷ್ಟಕ್ಕೂ ಅದು ಮರುದಿನ, ಅಂದರೆ ಸೋಮವಾರ ಕಂಡಿದ್ದು ಧಾರವಾಡದ ಸೋಮೇಶ್ವರ ಕೆರೆಯ ಬಳಿ ಇರುವ ತಡಸಿನಕೊಪ್ಪ ಕಣಿವೆ ಬಳಿ.

 

ಅದು ಹೆಣ್ಣಾನೆ ಅಲ್ಲ, ಪ್ರೌಢಾವಸ್ಥೆಯಲ್ಲಿರುವ ಗಂಡಾನೆ
ಯಾವಾಗ ಈ ಆನೆಯನ್ನು ಸ್ಥಳೀಯರು ನೋಡಿದರೋ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಹೋಗಿ ನೋಡಿದರೆ ಅದು ಹೆಣ್ಣಾನೆಯಲ್ಲ ಅನ್ನುವುದು ಖಚಿತವಾಗಿತ್ತು. ಅದು ಸುಮಾರು 18 ವರ್ಷದ ಗಂಡಾನೆ ಅನ್ನುವುದನ್ನು ಅಧಿಕಾರಿಗಳು ಮನಗಂಡಿದ್ದರು. ಆನೆಗೆ ಸುಮಾರು ಒಂದೂವರೆ ಅಡಿಯಷ್ಟು ಕೋರೆಗಳು ಇರುವುದು ಖಚಿತವಾಗಿತ್ತು. ಅಲ್ಲದೇ ಅದು ವಿಚಲಿತವಾಗಿರುವುದು ಹಾಗೂ ಕೊಂಚ ಸಿಟ್ಟಿನಿಂದ ವರ್ತಿಸುವುದು ಕೂಡ ಕಂಡು ಬಂದಿತ್ತು. ಇದರಿಂದಾಗಿ ಸಿಬ್ಬಂದಿಗೆ ಆತಂಕವಾಗಿತ್ತು. ಏಕೆಂದರೆ ಈ ವಯಸ್ಸಿನ ಗಂಡು ಆನೆಗಳ ವರ್ತನೆಯನ್ನು ಊಹಿಸುವುದು ಕಷ್ಟ. ಅಲ್ಲದೇ ಅದು ಯಾವ ಸಂದರ್ಭದಲ್ಲಾದರೂ ನಗರ ಪ್ರದೇಶಕ್ಕೆ ನುಗ್ಗಬಹುದು ಅನ್ನುವ ಆತಂಕ ಬೇರೆ. ಒಂದು ವೇಳೆ ಈ ವಯಸ್ಸಿನ ಆನೆಗಳು ಜನರು ವಾಸವಾಗಿರುವ ಪ್ರದೇಶಕ್ಕೆ ನುಗ್ಗಿದರೆ ಅನಾಹುತ ಖಚಿತ ಅನ್ನುವುದನ್ನು ಅರಿತ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳ ತಜರೊಂದಿಗೆ ಸಂಪರ್ಕ ಮಾಡಿ, ಮುಂದೆ ಮಾಡಬಹುದಾದ ಯೋಜನೆಗಳ ಬಗ್ಗೆ ಚರ್ಚಿಸಿದ್ದರು. ಆನೆ ಕಲಘಟಗಿ ತಾಲೂಕಿನಿಂದ ಬಂದಿರಬಹುದು, ಹೀಗಾಗಿ ಅತ್ತ ಕಡೆಗೆ ಅದನ್ನು ಓಡಿಸಲು ಯೋಜನೆ ಹಾಕಿಕೊಂಡರು. ಏಕೆಂದರೆ ಇತ್ತೀಚಿಗಷ್ಟೇ ಕಲಘಟಗಿ ತಾಲೂಕಿನಲ್ಲಿ ಆನೆ ಹಿಂಡು ಪ್ರತ್ಯಕ್ಷವಾಗಿತ್ತು. ಹೀಗಾಗಿ ಈ ಆನೆ ಆ ಗುಂಪಿನಿಂದ ತಪ್ಪಿಸಿಕೊಂಡಿರಬಹುದು. ಇಲ್ಲವೇ ಹಿಂಡಿನಲ್ಲಿರುವ ಬಲಿಷ್ಠ ಗಂಡಾನೆ ಇದನ್ನು ಅಲ್ಲಿಂದ ಓಡಿಸಿರಬಹುದು ಅನ್ನುವುದು ಅಧಿಕಾರಿಗಳ ಲೆಕ್ಕಾಚಾರವಾಗಿತ್ತು. ಈ ಲೆಕ್ಕಾಚಾರಗಳು ಏನೇ ಇದ್ದರೂ ಮೊದಲಿಗೆ ಈ ಆನೆಯನ್ನು ನಗರ ಪ್ರದೇಶದಿಂದ ಕಾಡಿನ ಕಡೆಗೆ ಓಡಿಸುವುದೇ ಮೊದಲ ಆದ್ಯತೆಯಾಗಿತ್ತು.

ಹೀಗೆ ಹೋಗಿದ್ದ ಆನೆ ಹಾಗೆ ಮರಳಿ ಬಂದು ಬಿಟ್ಟಿತ್ತು
ತಡಸಿನಕೊಪ್ಪ ಕಣಿವೆಯಲ್ಲಿ ನಿಂತಿದ್ದ ಆನೆಯನ್ನು ಒಂದು ಭಾಗದಿಂದ ಸುತ್ತುವರೆದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಹಾರಿಸುತ್ತಾ ನುಗ್ಗಿಕೇರಿ ಗ್ರಾಮದ ಕಡೆಗೆ ಓಡಿಸುತ್ತಾ ಹೋದರು. ಆನೆ ಅದೆಷ್ಟು ಚುರುಕಾಗಿತ್ತೆಂದರೆ, ಐದರಿಂದ ಆರು ನಿಮಿಷಗಳಲ್ಲಿ ನುಗ್ಗಿಕೇರಿ ತಲುಪಿಬಿಟ್ಟಿತು. ಇದು ಇಲಾಖೆ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿತು. ಇನ್ನೇನೂ ಅಲ್ಲಿನ ಒಂದು ರಸ್ತೆ ದಾಟಿ ಬಿಟ್ಟಿದ್ದರೆ, ಅದರ ಮುಂದಿನ ಪ್ರಯಾಣ ನಿರಾತಂಕವಾಗಿ ಹೋಗುತ್ತಿತ್ತು. ಅದೇಕೋ ಏನೋ ಅದು ಅಲ್ಲಿಂದ ಮರಳಿ ಬಿಟ್ಟಿತು. ಹೀಗೆ ಮರಳಿ ಬಂದ ಆನೆಯನ್ನು ಮತ್ತೆ ಅದೇ ದಾರಿಗೆ ಓಡಿಸಲು ಎಷ್ಟೇ ಯತ್ನಿಸಿದರೂ ಅದು ಮತ್ತೆ ತಡಸಿನಕೊಪ್ಪ ಕಣಿವೆಗೆ ಬಂದು ಠಿಕಾಣಿ ಹೂಡಿಬಿಟ್ಟಿತ್ತು. ಇದರಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿಯ ತಲೆ ಬಿಸಿ ಮತ್ತಷ್ಟು ಹೆಚ್ಚಾಗಿತ್ತು. ಅಷ್ಟೊತ್ತಿಗೆ ಮಧ್ಯಾಹ್ನದ ಬಿಸಿಲು ಹೆಚ್ಚಾಗಿದ್ದರಿಂದ ಒಂದು ಮರದ ಬುಡದಲ್ಲಿ ನಿಂತು ಆನೆ ವಿಶ್ರಾಂತಿ ಪಡೆಯಲು ಶುರು ಮಾಡಿತ್ತು. ಸಾಮಾನ್ಯವಾಗಿ ಆನೆಗಳು ಮಧ್ಯಾಹ್ನದ ಬಿಸಿಲಲ್ಲಿ ಒಂದು ಕಡೆ ನೆರಳಲ್ಲಿ ನಿಂತು ವಿಶ್ರಾಂತಿ ಪಡೆಯುತ್ತವೆ. ಅವುಗಳ ಓಡಾಟವೇನಿದ್ದರೂ ಸಂಜೆಯ ಬಳಿಕವೇ. ಅರಣ್ಯ ಇಲಾಖೆ ಸಿಬ್ಬಂದಿ ಕೊಂಚ ಕಾಲ ಬಿಟ್ಟು ಮತ್ತೆ ಆನೆಯನ್ನು ಅಲ್ಲಿಂದ ಕಾಡಿನತ್ತ ಓಡಿಸುವ ಕಾರ್ಯಾಚರಣೆ ಆರಂಭಿಸಿದ್ದರು. ಪಟಾಕಿ, ನಗಾರಿಗಳ ಸಹಾಯದಿಂದ ಆನೆಯನ್ನು ಕಣಿವೆಯಿಂದ ಹೊರಗೆ ಕಳಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರೂ ಶಿವಮೊಗ್ಗದಿಂದ ಬಂದಿದ್ದ ಸಿಬ್ಬಂದಿಯೋರ್ವ ಮಾಡಿದ ಯಡವಟ್ಟಿನಿಂದಾಗಿ ಮತ್ತೆ ಕೆಲಸ ಕೆಟ್ಟು ಹೋಗಿತ್ತು.

ಓರ್ವ ಸಿಬ್ಬಂದಿ ಮಾಡಿದ ಯಡವಟ್ಟು, ಪಥ ಬದಲಿಸಿದ್ದ ಗಜರಾಜ
ಇನ್ನೇನು ಕಣಿವೆಯಿಂದ ಹೊರ ಬಂದಿದ್ದ ಗಜರಾಜ ರಸ್ತೆಯನ್ನು ದಾಟಿ ನುಗ್ಗಿಕೇರಿ ಕಡೆಗೆ ಹೋಗುತ್ತಿತ್ತು. ಆಗ ಶಿವಮೊಗ್ಗದಿಂದ ಬಂದಿರುವ ಸಿಬ್ಬಂದಿಯ ಪೈಕಿ ಓರ್ವ ಅದರ ಎದುರಿಗೆ ಪಟಾಕಿಯನ್ನು ಸಿಡಿಸಿಬಿಟ್ಟ. ಅಷ್ಟೇ! ಆನೆ ಮತ್ತೆ ತನ್ನ ದಾರಿಯನ್ನು ಬದಲಿಸಿ ಬಿಟ್ಟಿತು. ಅಷ್ಟೇ ಅಲ್ಲ, ಅದರಿಂದ ಸಿಟ್ಟಿಗೆದ್ದ ಅದು ಅಲ್ಲಿಯೇ ನಿಲ್ಲಿಸಿದ್ದ ಬೈಕ್ ವೊಂದನ್ನು ತುಳಿದು ಹಾಕಿತ್ತು. ಬೈಕ್ ತುಳಿದು ಸಿಟ್ಟನ್ನು ಇಳಿಸಿಕೊಂಡ ಆನೆ ಮತ್ತೆ ತಡಸಿನಕೊಪ್ಪ ಕಣಿವೆಗೆ ಜಾರಿ, ವಿಶ್ರಾಂತಿ ತೆಗೆದುಕೊಳ್ಳಲು ನಿಂತು ಬಿಟ್ಟಿತು. ಅಲ್ಲಿಗೆ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆ ವಿಫಲವಾಗಿತ್ತು.

ಗಂಟೆಗಟ್ಟಲೇ ಕಾರ್ಯಾಚರಣೆ, ಆದರೂ ಏನೂ ಪ್ರಯೋಜನವಾಗಲೇ ಇಲ್ಲ…!
ಯಾವಾಗ ಗಜರಾಜ ಈ ಪ್ರದೇಶದಿಂದ ಹೋಗೋದೇ ಇಲ್ಲ ಅನ್ನುವಂತೆ ವರ್ತಿಸಲು ಶುರು ಮಾಡಿತ್ತೋ ಅದನ್ನು ಶತಾಯಗತಾಯ ಇಲ್ಲಿಂದ ಕಾಡಿಗೆ ಅಟ್ಟಬೇಕು ಅಂತಾ ಸಿಬ್ಬಂದಿ ಸಿದ್ಧರಾಗಿದ್ದರು. ಮತ್ತೆ ಪಟಾಕಿ, ನಗಾರಿ ಎಲ್ಲ ಸದ್ದು ಮಾಡತೊಡಗಿದ್ದವು. ಆದರೆ ಗಜರಾಜ ಮಾತ್ರ ಅದಕ್ಕೂ ತನಗೂ ಸಂಬಂಧವೇ ಇಲ್ಲ. ಈ ಜಾಗ ತನ್ನದೇ ಅನ್ನುವ ರೀತಿಯಲ್ಲಿ ಎಲ್ಲವನ್ನು ನಿರ್ಲಕ್ಷಿಸತೊಡಗಿತ್ತು. ಗಜರಾಜನ ಈ ವರ್ತನೆಯಿಂದ ಸಿಬ್ಬಂದಿ ತಾಳ್ಮೆ ಕಳೆದುಕೊಳ್ಳುವಂತಾಯಿತು. ಹೀಗಾಗಿ ಅದರ ಸಮೀಪಕ್ಕೆ ಹೋಗಿ ಪಟಾಕಿ ಸಿಡಿಸಿದರು. ಇದರಿಂದ ಕಂಗಾಲಾದ ಗಜರಾಜ ಪಟಾಕಿ ಹೊಡೆಯೋರನ್ನೇ ಒಮ್ಮೆ ಅಟ್ಟಿಸಿಕೊಂಡು ಹೋಯಿತು. ಇದರಿಂದಾಗಿ ಕೊಂಚ ಕಾಲ ಆತಂಕದ ವಾತಾವರಣವೂ ಸೃಷ್ಟಿಯಾಗಿತ್ತು. ಈ ಮಧ್ಯೆ ಆನೆ ನಗರದ ಕಡೆಗೆ ನಡೆದರೆ ಹೇಗೆ ಅನ್ನುವ ಆತಂಕವೂ ಎದುರಾಗಿತ್ತು. ಹೀಗಾಗಿ ನಗರದ ಕಡೆಗೆ ಹೋಗಬಹುದಾದ ದಾರಿಯಲ್ಲಿ ಸಿಬ್ಬಂದಿ ಬೆಂಕಿಯನ್ನು ಹಾಕಿದರು. ಇದರಿಂದಾಗಿ ಆನೆ ಅತ್ತ ಹೋಗುವ ಸಾಹಸ ಮಾಡಲಿಲ್ಲ. ಇದಾದ ಬಳಿಕ ನಿರಂತರವಾಗಿ ಪಟಾಕಿ ಸಿಡಿಸಿದರೂ ಅದಕ್ಕೂ ತನಗೂ ಸಂಬಂಧವೇ ಇಲ್ಲ ಅನ್ನುವಂತೆ ವರ್ತಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಠಿಕಾಣಿ ಹೂಡಿರುವ ಸ್ಥಳದ್ದೇ ಆತಂಕ
ಗಜರಾಜ ಅದೆಂಥ ಸ್ಥಳವನ್ನು ವಿಶ್ರಾಂತಿಗಾಗಿ ಆರಿಸಿಕೊಂಡಿತ್ತು ಎಂದರೆ ತನ್ನನ್ನು ಓಡಿಸಲು ಬರುವವರು ಕಷ್ಟ ಪಡಬೇಕು. ಆದರೆ ಅವರನ್ನು ಅಟ್ಟಾಡಿಸಿಕೊಂಡು ಹೋಗಲು ತನಗೆ ಅನುಕೂಲವಾಗಬೇಕು. ಇಂಥದ್ದೊಂದು ಸ್ಥಳದಲ್ಲಿ ನಿಂತು ಆನೆ ವಿಶ್ರಾಂತಿ ಪಡೆಯುತ್ತಿತ್ತು. ಸಾಮಾನ್ಯವಾಗಿ ಆನೆಗಳಿಗೆ ಗುಡ್ಡಗಳನ್ನು ಏರುವುದು ಸರಳ. ಆದರೆ ಅದಕ್ಕೆ ವೇಗವಾಗಿ ಕೆಳಗಡೆ ಇಳಿಯಲು ಸಾಧ್ಯವಾಗುವುದಿಲ್ಲ. ಇಲ್ಲಿ ಅದು ಆಯ್ಕೆ ಮಾಡಿಕೊಂಡ ಜಾಗೆ ಕಣಿವೆಯ ತೀರಾ ಕೆಳಭಾಗದಲ್ಲಿತ್ತು. ಸಿಬ್ಬಂದಿ ಅದು ನಿಂತಿರುವ ಜಾಗಕ್ಕೆ ಬರಬೇಕೆಂದರೆ ಕೆಳಗಡೆ ಇಳಿದು ಬರಬೇಕು. ಒಂದು ವೇಳೆ ಆನೆಯೇನಾದರೂ ಸಿಬ್ಬಂದಿಯನ್ನು ಬೆನ್ನಟ್ಟಿದರೆ ಕೆಲವೇ ಕ್ಷಣಗಳಲ್ಲಿ ಸಿಬ್ಬಂದಿ ಆನೆಯ ಕೈಗೆ ಸಿಗುವಂತಾಗುತ್ತಿತ್ತು. ಹೀಗಾಗಿ ಸಿಬ್ಬಂದಿ ಕೂಡ ಆನೆಯ ಜಾಣತನಕ್ಕೆ ಅಚ್ಚರಿ ಪಡುವಂತಾಗಿತ್ತು. ರಾತ್ರಿಯವರೆಗೆ ಆನೆ ತಡಸಿನಕೊಪ್ಪ ಕಣಿವೆಯ ಕೆಳಭಾಗದಲ್ಲಿಯೇ ಠಿಕಾಣಿ ಹೂಡಿತ್ತು.
ಸಕ್ರೆಬೈಲಿನಿಂದ ಮೂರು ಆನೆಗಳು ಬಂದಿದ್ದವು: ಆದರೆ ಯಾರಿಗೂ ಗೊತ್ತಾಗದಂತೆ ಮರಳಿ ಕಾಡಿಗೆ ನಡೆದಿದ್ದ ಗಜರಾಜ

ಯಾವಾಗ ಈ ಆನೆಗೆ ಸುಮಾರು 18 ವರ್ಷ ವಯಸ್ಸು ಅನ್ನುವುದು ಗೊತ್ತಾಗಿತ್ತೋ ಆಗ ಇದನ್ನು ಓಡಿಸುವುದು ಅಷ್ಟು ಸುಲಭದ ಮಾತಲ್ಲ ಅನ್ನುವುದನ್ನು ಅಧಿಕಾರಿಗಳು ಮನಗಂಡಿದ್ದರು. ಏಕೆಂದರೆ ಇದು ಸಣ್ಣ ಆನೆಯಲ್ಲ. ಹಾಗಂತ ಇದು ಅನುಭವಿ ಆನೆಯೂ ಅಲ್ಲ. ಹೀಗಾಗಿ ಇದನ್ನು ಅಷ್ಟು ಸುಲಭವಾಗಿ ಕಾಡಿಗೆ ಅಟ್ಟುವುದು ಸಾಧ್ಯವಿಲ್ಲ ಅನ್ನುವುದು ಗೊತ್ತಾಗಿತ್ತು. ಹೀಗಾಗಿ ಶಿವಮೊಗ್ಗದ ಸಕ್ರೆಬೈಲಿನಿಂದ ಮೂರು ಆನೆಗಳು ಅದಾಗಲೇ ಧಾರವಾಡಕ್ಕೆ ಬಂದು ಇಳಿದಿದ್ದವು. ಅವುಗಳ ಮೂಲಕ ಈ ಆನೆಯನ್ನು ಕಾಡಿಗೆ ಅಟ್ಟಲು ಸಿದ್ಧರಾಗಿ ಮಾವುತರು ಕೂಡ ಬಂದಿದ್ದರು. ಆದರೆ ಅಚ್ಚರಿ ಅನ್ನುವಂತೆ ಅಷ್ಟೊಂದು ಜನ ಸಿಬ್ಬಂದಿ ಪಹರೆ ನಡೆಸಿದ್ದರೂ ಯಾರಿಗೂ ಕಾಣದ ಹಾಗೆ ಆನೆ ಕಾಡಿನತ್ತ ದಾರಿ ಹಿಡಿದಿತ್ತು. ಮರುದಿನ ಬೆಳಿಗ್ಗೆ ಹೋಗಿ ಕಣಿವೆಯಲ್ಲಿ ನೋಡಿದರೆ ಆನೆ ಇರಲೇ ಇಲ್ಲ. ಆದರೆ ಅದು ಹೋಗಿರಬಹುದಾದ ದಾರಿಯನ್ನು ಪತ್ತೆ ಹಚ್ಚಿದ ತಜ್ಞರು, ಅದು ಧಾರವಾಡ ತಾಲೂಕಿನ ನುಗ್ಗಿಕೇರಿ, ಯರಿಕೊಪ್ಪ ಗ್ರಾಮಗಳ ಮೂಲಕ ಕಲಘಟಗಿ ಕಡೆಗೆ ಹೋಗಿದೆ ಅಂತಾ ಅಂದಾಜಿಸಿದ್ದರು.

ಹೀಗೆ ಏಕಾಏಕಿ ಬರಲು ಕಾರಣಗಳೇನು? ಈ ಬಗ್ಗೆ ತಜ್ಞರು ಏನು ಅಭಿಪ್ರಾಯಗಳೇನು?
ಆನೆಗಳ ಕುಟುಂಬದಲ್ಲಿ ಹೆಣ್ಣಾನೆಯೇ ಮುಖ್ಯಸ್ಥೆಯಾಗಿರುತ್ತದೆ. ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದು ಇದೇ ಹೆಣ್ಣು ಆನೆ. ಇನ್ನು ಆನೆ ಸಾಮಾನ್ಯವಾಗಿ ಎಲ್ಲ ಕಾಡುಪ್ರಾಣಿಗಳಂತೆ ಮನುಷ್ಯನಿಂದ ದೂರವೇ ಇರಲು ಬಯಸುತ್ತೆ. ಆದರೆ ಹಿಂಡಿನಲ್ಲಿ ನಡೆಯೋ ಕೆಲವು ಘಟನೆಗಳು ಅದು ಈ ರೀತಿ ಒಂಟಿಯಾಗಿ ಬರುವಂತೆ ಮಾಡಿರಲೂಬಹುದು. ಕಾಡು ಪ್ರಾಣಿಗಳ ಪೈಕಿ ಅತ್ಯಂತ ಜಾಣ ಪ್ರಾಣಿ ಆನೆ ಅನ್ನುವುದು ಪ್ರಾಣಿ ತಜ್ಞರ ಅಭಿಪ್ರಾಯ. ಜನವಸತಿಯಿಂದ ಇವು ಆದಷ್ಟೂ ದೂರವಿರಲು ಬಯಸುತ್ತವಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಕಾರಿಡಾರ್ ಗಳನ್ನು ಮನುಷ್ಯರು ಆಕ್ರಮಿಸಿಕೊಂಡಿರುವದರಿಂದ ಇಂಥ ಸಮಸ್ಯೆಗಳು ಉದ್ಭವಿಸುತ್ತವೆ ಅನ್ನುತ್ತಾರೆ ಸೆರೆ ಹಿಡಿದ ಆನೆಗಳ ಯೋಗಕ್ಷೇಮ ಮಂಡಳಿ ಸದಸ್ಯ ಹರ್ಷವರ್ಧನ ಶೀಲವಂತ್. ಆನೆಗಳಿಗೆ ಒಂದು ಮೆಂಟಲ್ ಮ್ಯಾಪ್ ಇರುತ್ತದೆ. ಆ ಮ್ಯಾಪ್ ಮೂಲಕವೇ ಅವು ಸಾವಿರಾರು ಕಿ.ಮೀ. ಪ್ರತಿವರ್ಷ ಕ್ರಮಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನ ಸ್ವಾರ್ಥದಿಂದಾಗಿ ಅವುಗಳ ಕಾರಿಡಾರ್ ನಾಶವಾಗಿವೆ. ಹೀಗಾಗಿ ಅವುಗಳು ದಾರಿ ತಪ್ಪಿ ಈ ರೀತಿ ಬರುತ್ತವೆ ಅನ್ನುತ್ತಾರೆ ಹರ್ಷವರ್ಧನ ಶೀಲವಂತ. ಇನ್ನು ಹೀಗೆ ಗಂಡಾನೆ ಬರುವುದಕ್ಕೆ ಮತ್ತೊಂದು ಕಾರಣವೂ ಇದೆಯಂತೆ. ಕುಟುಂಬವನ್ನು ಮುನ್ನಡೆಸುವುದು ಹೆಣ್ಣಾನೆ. ಹೀಗೆ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಮೆಟ್ಟಿನಿಲ್ಲುವ ಬಗ್ಗೆ ಇದೇ ಹೆಣ್ಣಾನೆ ಇಡೀ ಕುಟುಂಬಕ್ಕೆ ಕಲಿಸಿಕೊಡುತ್ತದೆ. ಇನ್ನು ಹಿಂಡಿನಲ್ಲಿ ಅದಾಗಲೇ ಒಂದು ಗಂಡಾನೆ ಇದ್ದರೆ, ಅದು ಬಲಿಷ್ಠವಾಗಿದ್ದರೆ ಹಿಂಡಿನಲ್ಲಿನ ಮತ್ತೊಂದು ಆ ಗಂಡಾನೆ ಅದನ್ನು ಹೊರದಬ್ಬುವ ಸಾಧ್ಯತೆಯೂ ಇರುತ್ತೆ. ಒಂದೋ ಇದು ದಾರಿ ತಪ್ಪಿ ಬಂದಿರಬೇಕು, ಇಲ್ಲವೇ ಹಿಂಡಿನಲ್ಲಿನ ಬಲಿಷ್ಠ ಗಂಡಾನೆ ಅದನ್ನು ಹೊರಗೆ ದಬ್ಬಿರಬಹುದು ಅನ್ನುತ್ತಾರೆ ಹರ್ಷವರ್ಧನ್. ಇದೆಲ್ಲದರೊಂದಿಗೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಅನ್ನುವುದು ಪ್ಯಾಕೆಟ್ ಥರಾ ಆಗಿದೆ. ಅದು ಐಲ್ಯಾಂಡ್ ಥರಾ ಆಗಿದೆ. ಹೀಗಾಗಿ ಅವು ಸರಿಯಾದ ದಾರಿ ಸಿಗದೇ ಇದ್ದರೆ ಈ ರೀತಿ ಬಂದು ಬಿಡುವ ಸಾಧ್ಯತೆಯೂ ಇರುತ್ತದೆ. ಈ ಆನೆಯಂತೂ ಆಹಾರ ಅರಸಿ ಬಂದಿರಲಿಕ್ಕಿಲ್ಲ ಅನ್ನುವ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಹುತೇಕ ಅಕೇಶಿಯಾ ಗಿಡಗಳೇ ಇವೆ. ಅಲ್ಲದೇ ಅಲ್ಲಿ ನೀರು ಕೂಡ ಇಲ್ಲ. ಹೀಗಾಗಿ ಇತ್ತೀಚಿಗೆ ಧಾರವಾಡಕ್ಕೆ ಬಂದಿದ್ದ ಆನೆ ದಾರಿ ತಪ್ಪಿಯೋ ಅಥವಾ ಬಲಶಾಲಿ ಗಂಡಾನೆಯಿಂದ ಹೊರದಬ್ಬಿಸಿಕೊಂಡು ಬಂದಿರಬಹುದು ಅನ್ನುತ್ತಾರೆ.

ಇಂಥ ಆನೆಗಳಿಗೆ ಎದುರಾಗುವ ಆತಂಕಗಳೇನು?
ಆನೆ ಅಷ್ಟು ದೊಡ್ಡ ಪ್ರಾಣಿಯಾದರೂ ಭಯಗೊಂಡರೆ ಅದಕ್ಕೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಅದನ್ನು ಮರಳಿ ಕಾಡಿಗೆ ಓಡಿಸಲು ಪಟಾಕಿ ಸಿಡಿಸುವುದು, ನಗಾರಿ ಬಾರಿಸುವದರಿಂದ ಅದು ಭಯಗೊಂಡರೆ ಹೃದಯಾಘಾತವಾಗೋ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ ಇತ್ತೀಚಿಗೆ ಧಾರವಾಡಕ್ಕೆ ಬಂದಿದ್ದ ಆನೆಗೆ 16 ರಿಂದ 18 ವರ್ಷ ವಯಸ್ಸು. ಇದಕ್ಕೆ ಅಷ್ಟೊಂದು ಅನುಭವ ಇರೋ ಸಾಧ್ಯತೆ ಇರಲಿಲ್ಲ. ಹೀಗಾಗಿ ಅದು ಆಕ್ರೋಶಗೊಂಡಿದ್ದರೆ ಏನೆಲ್ಲಾ ಅನಾಹುತವನ್ನು ಸೃಷ್ಟಿಸೋ ಸಾಧ್ಯತೆಯನ್ನೂ ತಳ್ಳಿ ಹಾಕುವ ಹಾಗಿರಲಿಲ್ಲ. ಇದೆಲ್ಲಕ್ಕಿಂತ ಹೆಚ್ಚಿಗೆ ಅದು ಎಲ್ಲ ಘಟನೆಗಳಿಂದ ಭಯಗೊಂಡಿರುವುದರಿಂದ ಮತ್ತು ಆ ವೇಳೆಯಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಾಗಿತ್ತು ಅನ್ನುತ್ತಾರೆ ಹರ್ಷವರ್ಧನ ಶೀಲವಂತ್.

ಆನೆಗಳು ಹೀಗೆ ಬಂದಾಗ ಏನು ಮಾಡಬೇಕು?
ಆನೆಗಳ ಅತಿ ಇಷ್ಟದ ಆಹಾರವೆಂದರೆ ಕಬ್ಬು, ಬತ್ತ, ಬೆಲ್ಲ. ಇದರೊಂದಿಗೆ ಆನೆಗೆ ಉಪ್ಪು ಕಂಡರೂ ಖುಷಿಯೇ. ಅದನ್ನು ಆನೆ ಪ್ರೀತಿಯಿಂದ ನೆಕ್ಕುತ್ತದೆ. ತನ್ನ ದೇಹದಲ್ಲಿ ಕಡಿಮೆಯಾಗಿರುವ ಲವಣಾಂಶದ ಪ್ರಮಾಣವನ್ನು ಅದು ಉಪ್ಪನ್ನು ನೆಕ್ಕುವ ಮೂಲಕ ಸರಿದೂಗಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಅದಕ್ಕೆ ಉಪ್ಪು ಸಿಗುವುದು ಕಡಿಮೆ. ಹೀಗಾಗಿ ಆಗಾಗ ಮಣ್ಣನ್ನು ಕೂಡ ನೆಕ್ಕುವ ಮೂಲಕ ದೇಹದಲ್ಲಿನ ಲವಣಾಂಶದ ಪ್ರಮಾಣವನ್ನು ಸರಿದೂಗಿಸಿಕೊಳ್ಳುತ್ತದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಒಂದು ಲೋಡ್ ಕಬ್ಬನ್ನು ಹಾಗೂ ಕಣಿವೆಯಲ್ಲಿ ನೀರು ಇರುವ ಸ್ಥಳದಲ್ಲಿ ಒಂದಷ್ಟು ಉಪ್ಪನ್ನು ಸುರಿಯಬೇಕು. ಉಪ್ಪನ್ನು ನೆಕ್ಕುವ ಆನೆ ನೀರನ್ನು ಕುಡಿಯುತ್ತದಂತೆ. ಒಂದು ವೇಳೆ ನೀರು ಸಿಗದಿದ್ದರೆ ಕಬ್ಬಂತೂ ಇದ್ದೇ ಇರುತ್ತದೆ. ಅದನ್ನು ತಿಂದು ದಾಹವನ್ನು ತಣಿಸಿಕೊಳ್ಳುತ್ತದೆ. ಹೀಗೆ ಮಾಡುವದರಿಂದ ಆನೆಯನ್ನು ಆತಂಕಗೊಳ್ಳುವದರಿಂದ ಬಚಾವ್ ಮಾಡಬಹುದು ಅನ್ನುತ್ತಾರೆ ಹರ್ಷವರ್ಧನ ಶೀಲವಂತ್. ಇದೆಲ್ಲಕ್ಕಿಂತ ಹೆಚ್ಚಿಗೆ ಅದನ್ನು ಅದರಷ್ಟಕ್ಕೆ ಬಿಟ್ಟು ಬಿಡಬೇಕು. ಏಕೆಂದರೆ ಅವು ಶಾಂತವಾದ ವಾತಾವರಣವನ್ನು ಬಯಸುತ್ತವೆ. ಅಲ್ಲದೇ ತಮ್ಮ ಕುಟುಂಬವನ್ನು ಸೇರಿಕೊಳ್ಳುವ ಧಾವಂತದಲ್ಲಿ ಇರುವುದರಿಂದ ನಿಧಾನವಾಗಿ ಅತ್ತ ಹೆಜ್ಜೆ ಹಾಕಲು ಅನುಕೂಲವಾಗುವ ವಾತಾವರಣವನ್ನು ನಿರ್ಮಿಸಬೇಕು. ಇನ್ನು ಆದಷ್ಟು ಹೆಚ್ಚಿನ ಶಬ್ದವಾಗದಂತೆ ನೋಡಿಕೊಳ್ಳುವುದರಿಂದ ಅವು ಕಾಡಿನತ್ತ ಹೆಜ್ಜೆ ಹಾಕಲು ಅವಕಾಶ ನಿರ್ಮಿಸಿದಂತಾಗುತ್ತದೆ ಅನ್ನುವುದು ಅವರ ಅಭಿಪ್ರಾಯ.

ಆನೆಗಳಿಗೆ ಜಂಟಲ್ ಜೇಂಟ್ ಅಂತಾ ಕರೆಯುತ್ತೇವೆ – ಮನೋಜ ಕುಮಾರ್
ಅನೇಕ ಕಡೆಗಳಲ್ಲಿ ಆಗಾಗ ಆನೆಗಳು ಪ್ರತ್ಯಕ್ಷವಾಗುವುದು ಸಾಮಾನ್ಯ ಸಂಗತಿ. ಇಂಥ ಸಂದರ್ಭದಲ್ಲಿ ವನ್ಯ ಮೃಗಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ವನ್ಯಮೃಗಗಳು ಕಾಡಿನಿಂದ ನಾಡಿಗೆ ಬಂದಾಗ ಹೇಗೆ ವರ್ತಿಸಬೇಕು? ಅವುಗಳನ್ನು ಮತ್ತೆ ಕಾಡಿಗೆ ಅಟ್ಟಲು ಏನು ಮಾಡಬೇಕು? ಅನ್ನುವದರ ಅರಿವು ಸಾರ್ವಜನಿಕರಿಗೂ ಇರಬೇಕಾಗುತ್ತದೆ. ಇಂಥ ಪ್ರಕರಣಗಳಲ್ಲಿ ಅವರ ಸಹಕಾರ ಅತಿ ಅವಶ್ಯಕ ಅನ್ನುತ್ತಾರೆ ಚಾಮರಾಜನಗರ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ ಕುಮಾರ್. ಆನೆಗಳ ಮನುಷ್ಯರ ಸಂಘರ್ಷ ತುಂಬಾನೇ ಹಳೆಯದ್ದು. ಆದರೆ ಇಬ್ಬರಲ್ಲೂ ಒಂದು ತಿಳುವಳಿಕೆ ಇದೆ. ಸೋಲಿಗರ ಪ್ರದೇಶದಲ್ಲಿ ಆನೆಗಳ ಓಡಾಟವಿದ್ದರೂ ಮನುಷ್ಯರ ಸಾವುಗಳು ಸಂಭವಿಸುವುದಿಲ್ಲ. ಆದರೆ ಅದೇ ಆನೆ ನಾಡಿಗೆ ಬಂದಾಗ ಮನುಷ್ಯರ ಸಾವುಗಳಾಗುತ್ತವೆ. ಅದೂ ಕೂಡ ಆನೆಗಳು ಬಂದಾಗ ನಾವು ಗದ್ದಲ ಮಾಡಿದಾಗ ಮಾತ್ರ. ಆನೆಗಳಿಗೆ ಅತಿಯಾದ ತೊಂದರೆ ಕೊಟ್ಟಾಗ ಮಾತ್ರ ಅವು ಕ್ರೂರವಾಗಿ ವರ್ತಿಸುತ್ತವೆ. ಅದರಲ್ಲೂ ಗುಂಪಿನಲ್ಲಿ ಮರಿಗಳಾದ್ದಾಗ, ತನಗೆ ಅಪಾಯ ಅನ್ನಿಸಿದಾಗ ಕೆಟ್ಟದಾಗಿ ವರ್ತಿಸುತ್ತವೆ. ಇಲ್ಲದಿದ್ದರೆ ತನ್ನ ಪಾಡಿಗೆ ತಾನು ಇರುವಂಥ ಜೀವಿ ಅದು. ಇದೇ ಕಾರಣಕ್ಕೆ ಆನೆಯನ್ನು ಜಂಟಲ್ ಜೇಂಟ್ ಅಂತಾ ಕರಿಯತ್ತೇವೆ. ನಾಡಿಗೆ ಬಂದಾಗ ಅವುಗಳನ್ನು ಓಡಿಸುವ ಕೆಲಸವೇ ವ್ಯರ್ಥ. ಅವುಗಳ ಪಾಡಿಗೆ ಅವುಗಳನ್ನು ಬಿಟ್ಟಾಗ ಸಂಜೆ ಹೊತ್ತಿಗೆ ಅವು ಮರಳಿ ಕಾಡಿಗೆ ಹೋಗುತ್ತವೆ ಅನ್ನುತ್ತಾರೆ ಮನೋಜ ಕುಮಾರ.

ನರಸಿಂಹಮೂರ್ತಿ ಪ್ಯಾಟಿ
 ಧಾರವಾಡ
ಇದನ್ನೂ ಓದಿ:  World Elephant Day 2021: ವಾವ್​! ತಮ್ಮ ದಿನವನ್ನು ಆಚರಿಸಲು 1300 ಕಿ.ಮೀ ನಡೆದು ತವರಿಗೆ ಬಂದ ಆನೆಗಳು

ಇದನ್ನೂ  ಓದಿ:  World Elephant Day 2021: ಕಾಡುಗಳಲ್ಲಿ ಅಲೆಯುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕ ಆನೆಗಳು

(World Elephant Day2021 Reasons for Elephants enters villages Dharwad)