ಧಾರವಾಡ: ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಗಂಡ ಹೆಂಡತಿ ಒಂದೊಂದು ಕಡೆಯಾಗಿದ್ದರೆ ಮಕ್ಕಳು ಮತ್ತೊಂದು ಕಡೆ ಉಳಿದಿದ್ದರು. ಆದರೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಲೋಕ ಅದಾಲತ್ ಮೂಲಕ ಅಂತಹ ಪ್ರಕರಣಗಳನ್ನು ಸುಖಾಂತ್ಯಗೊಳಿಸಲು ಮುಂದಾಗಿದೆ. ನ್ಯಾಯಾಧೀಶರಾದ ಕೆ.ಶಾಂತಿ ಹಾಗೂ ನಾಗಶ್ರೀ ನೇತೃತ್ವದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 37 ಪ್ರಕರಣಗಳ ಪೈಕಿ 17 ಪ್ರಕರಣಗಳನ್ನ ಬಗೆಹರಿಸಿ ಬೇರ್ಪಟ್ಟಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಲಾಗಿದೆ.
ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರೇ ಜಗಳ, ವಾದ ಮಾಡಿದ್ದಲ್ಲದೆ ತಮ್ಮ ತಮ್ಮ ವೈಮನಸ್ಸುಗಳನ್ನ ನ್ಯಾಯಾಧೀಶರ ಮುಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳು ತೋಡಿಕೊಳ್ಳುತ್ತಿದ್ದಾರೆ. ವಾದ ಪ್ರತಿವಾದಗಳು, ಪರಸ್ಪರ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ಆಲಿಸಿಸಿದ ನ್ಯಾಯಾಧೀಶರು, ದಂಪತಿಗಳಿಗೆ ತಿಳಿ ಹೇಳುವ ಮೂಲಕ ಅವರನ್ನ ಒಂದು ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್ ಮೂಲಕ ಬೇರ್ಪಟ್ಟಿದ್ದ 17 ದಂಪತಿಗಳನ್ನು ಮತ್ತೆ ಒಂದು ಮಾಡಲಾಗಿದೆ.
ಗಂಡ ಹೆಂಡತಿಯನ್ನ ಕರೆಸಿ ಅವರ ಜೊತೆ ಮಾತುಕತೆ ನಡೆಸಿದ ನ್ಯಾಯಾಧೀಶರು ಅವರಿಗೆ ತಿಳಿ ಹೇಳುವ ಕಾರ್ಯವನ್ನ ಮಾಡಿದರು. ಗಂಡನಿಂದ ದೂರ ಉಳಿದಿದ್ದ ಹೆಂಡತಿ ಮಕ್ಕಳನ್ನ ಕರೆಸಿ ಅವರ ಎದುರಲ್ಲೇ ಇಬ್ಬರಿಗೂ ತಿಳುವಳಿಕೆ ಹೇಳಲಾಯಿತು. ಅಸಮಾಧಾನ ಸೇರಿದಂತೆ ಇಬ್ಬರಲ್ಲೂ ಮನಸ್ತಾಪಗಳು ಬಂದಿದ್ದರಿಂದ ಅವರ ಸಂಬಂಧಿಕರ ಎದುರಲ್ಲೇ ಮತ್ತೆ ಅವರನ್ನ ಒಂದು ಮಾಡುವ ಕಾರ್ಯ ನಡೆಯಿತು. ಒಂದಾದ ದಂಪತಿಗಳು ಖುಷಿ ಖುಷಿಯಿಂದಲೇ ನಾವು ಮತ್ತೆ ಯಾವತ್ತೂ ಜಗಳ ಆಡದಂತೆ ಜೀವನ ಸಾಗಿಸುವುದಾಗಿ ಹೇಳಿದ್ದಾರೆ.
ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇದರ ಹೊರತಾಗಿಯೂ ಸಣ್ಣಪುಟ್ಟ ವಿಚಾರಗಳಿಗೆ ಮುನಿಸಿಗೊಂಡು ವಿಚ್ಛೇದನ ನೀಡಲು ತೀರ್ಮಾನಿಸಿದವರನ್ನು ಮತ್ತೆ ಒಂದು ಮಾಡುವ ಮೂಲಕ ನ್ಯಾಯಾಧೀಶರು ಮತ್ತೆ ದಂಪತಿಗಳ ಬಾಳಿಗೆ ಹೊಸ ಬೆಳಕನ್ನ ನೀಡಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sun, 13 November 22