ಹೆಣ್ಣಿನ ಆಸೆಗೆ ಕೋರ್ಟ್ ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಕೈದಿ ಬಿಡುಗಡೆ: ಡಿಐಜಿಯ ಕೃತ್ಯ ಬಟಾಬಯಲು
ಆತ ಕಾನೂನು ಕಾಪಾಡಬೇಕಿದ್ದ ಪೊಲೀಸ್ ಅಧಿಕಾರಿ.ಆದ್ರೆ ಮಾಯಾಂಗನೆ ಮಾಯೆಗೆ ಮೈಮರೆತಿದ್ದ.ಆಕೆಗಾಗಿ ಏನನ್ನ ಬೇಕಾದ್ರು ಮಾಡಲು ಸಿದ್ಧನಾಗಿದ್ದ.ಖೈದಿ ಪತ್ನಿ ಜೊತೆಗೆ ಸರಸ ಸಲ್ಲಾಪ ಮಾಡಿದ್ದ ಆತ.ಸುಪ್ರೀಂ ಕೋರ್ಟ್ ನಕಲಿ ಆದೇಶ ಪ್ರತಿ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ಧ ಆರೋಪಿಯನ್ನೇ ಜೈಲಿನಿಂದ ಬಿಡುಗಡೆ ಮಾಡಿ ಕಳಿಸಿದ್ದ.ಇಷ್ಟೆಲ್ಲಾ ಆಗಿದ್ದು ಮಾತ್ರ ಹೆಣ್ಣಿಗಾಗಿ.

ಬೆಂಗಳೂರು, (ಅಕ್ಟೋಬರ್ 05): 2018ರಲ್ಲಿ ಸುಪ್ರಿಂಕೋರ್ಟ್ ನ ಆದೇಶವನ್ನ ನಕಲು ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿ ಶಂಕರ್ ನನ್ನು ಜೈಲಿನಿಂದ ಬಿಡುಗಡೆ ಮಾಡಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಂಬಂಧ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೃತ್ಯದಲ್ಲಿ ಶಾಮೀಲಾಗಿರುವ ಆರೋಪದಡಿ ಅಂದಿನ ಜೈಲು ಮುಖ್ಯ ಅಧೀಕ್ಷಕ ಹಾಗೂ ಹಾಲಿ ಕಲಬುರಗಿಯ ಜೈಲು ಡಿಐಜಿ ಎಂ.ಸೋಮಶೇಖರ್ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಒಂದು ಹೆಣ್ಣಿನ ಆಸೆಗೆ ಬಿದ್ದು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿ ಶಂಕರ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎನ್ನುವ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ.
ಕೈದಿ ಪತ್ನಿ ಕೊಟ್ಟ ಲೈಂಗಿಕ ತೃಪ್ತಿಗೆ ಋಣ ಸಂದಾಯ
ಹೌದು…ಅಪರಾಧಿ ಶಂಕರ್ ಪತ್ನಿ ಮೇಲಿನ ಆಸೆಗೆ ಅಕ್ರಮವಾಗಿ ಕೈದಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ರೋಚಕ ಅಂಶ ಬಯಲಿಗೆ ಬಂದಿದೆ. ಡಿಐಜಿ ಸೋಮಶೇಖರ್ ಹಾಗೂ ಸಿಬ್ಬಂದಿ ಶ್ರೀಕಾಂತ್, ಅಪರಾಧಿ ಶಂಕರ್ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದು, ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದು, ಇದರ ಋಣ ತೀರಿಸಲು 2018ರಲ್ಲಿ ಸುಪ್ರೀಂಕೋರ್ಟ್ನ ನಕಲಿ ಆದೇಶ ಸೃಷ್ಟಿಸಿ ಶಂಕರ್ ಬಿಡುಗಡೆಗೆ ಸಂಚು ರೂಪಿಸಲಾಗಿದೆ. ಈ ಅಕ್ರಮದಲ್ಲಿ ಡಿಐಜಿ ಸೋಮಶೇಖರ್ ಪಾತ್ರದ ಬಗ್ಗೆ ಕೈದಿ ಪತ್ನಿ ಒಪ್ಪಿಕೊಂಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕರ್ನಾಟಕ ಡಿಐಜಿ ಸೋಮಶೇಖರ್ ಅರೆಸ್ಟ್
ಡಿಜಿಪಿ ಪಾತ್ರದ ಬಗ್ಗೆ ಬಾಯ್ಬಿಟ್ಟ ಕೈದಿ ಶಂಕರ್ನ ಪತ್ನಿ
ಸುಪ್ರೀಂಕೋರ್ಟ್ ಆದೇಶವನ್ನ ನಕಲಿಯಾಗಿ ಸೃಷ್ಟಿಸಿ 2018 ನ.13ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಅಪರಾಧಿ ಶಂಕರ್, ನಕಲಿ ಆದೇಶ ಸೃಷ್ಟಿಸಲು ಸಹಕರಿಸಿದ್ದ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ವಿಭಾಗದ ಹಾಲಿ ಪ್ರಥಮ ದರ್ಜೆ ಸಹಾಯಕ ಶ್ರೀಕಾಂತ್ ನನ್ನ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಅಂದಿನ ಜೈಲು ಮುಖ್ಯ ಅಧೀಕ್ಷಕರಾಗಿದ್ದ ಸೋಮಶೇಖರ್ ಅವರ ಕೈವಾಡ ಬಗ್ಗೆ ತಿಳಿದುಬಂದಿತ್ತು. ಇದಕ್ಕೆ ಪೂರಕವಾಗಿ ಸಜಾಬಂಧಿ ಶಂಕರ್ ಪತ್ನಿಯು ಸಹ ವಿಚಾರಣೆಯಲ್ಲಿ ಅಧೀಕ್ಷಕರ ಪಾತ್ರವಿರುವುದಾಗಿ ಹೇಳಿಕೆ ನೀಡಿದ್ದರು. ಈ ಮಾಹಿತಿ ಆಧರಿಸಿ ಅ.4ರಂದು ವಶಕ್ಕೆ ಪಡೆದು ವಿಚಾರಿಸಿದಾಗ ತನಿಖೆಗೆ ಸಹಕರಿಸಿದೆ ಪ್ರಕರಣ ಕುರಿತು ಮಾಹಿತಿ ಮರೆಮಾಚಿದ್ದಾರೆ. ಈ ಸಂಬಂಧ ಬಂಧಿಸಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಡಿಐಜಿ ಮೂರನೇ ಆರೋಪಿಯಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಈ ಪ್ರಕರಣದ ಹಿನ್ನಲೆ ನೋಡೋದಾದ್ರೆ 2001ರಲ್ಲಿಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಂಕರ್ ಗೆ 2004ರಲ್ಲಿ ತ್ವರಿತಗತಿ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿತ್ತು. ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗೆ ಶಂಕರ್ ಮೊರೆ ಹೋಗಿದ್ದ. ಈತನ ಅರ್ಜಿಯನ್ನ ತಿರಸ್ಕರಿದ್ದವು. ಶಿಕ್ಷೆಯಿಂದ ಪಾರಾಗಲು ಸಂಚು ರೂಪಿಸಿದ ಶಂಕರ್, ಸುಪ್ರೀಂಕೋರ್ಟ್ ಆದೇಶವನ್ನ ನಕಲಿಯಾಗಿ ಸೃಷ್ಟಿಸಿಕೊಂಡು 2018ರ ನವೆಂಬರ್ ನಲ್ಲಿ ಜೈಲಾಧಿಕಾರಿಗಳಿಗೆ ತೋರಿಸಿ 10 ಸಾವಿರ ದಂಡ ತೆತ್ತಿ ಬಿಡುಗಡೆಯಾಗಿದ್ದ. ಇದಾದ 8 ವರ್ಷಗಳ ಬಳಿಕ ಕಾರಾಗೃಹ ಇಲಾಖೆಗೆ ನಕಲಿ ಆದೇಶ ಸೃಷ್ಟಿಸಿ ಬಿಡುಗಡೆ ಅನಾಮಧೇಯ ಪತ್ರ ಬಂದಿತ್ತು. ಈ ಸಂಬಂಧ ವಿಚಾರಣೆ ನಡೆದು ಆದೇಶವನ್ನ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಗೆ ಕಳುಹಿಸಿದಾಗ ಇದೊಂದು ನಕಲಿ ಆದೇಶವೆಂದು ಗೊತ್ತಾಗಿತ್ತು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕಾರಾಗೃಹದ ಅಧೀಕ್ಷಕರು ಕರ್ಣ ಬಿ.ಕ್ಷೇತ್ರಿ ಎಂಬುವರು ಶಂಕರ್ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಎಲೆಕ್ಟ್ರಾನಿಕ್ ವಿಭಾಗ ಡಿಸಿಪಿ ನಾತಾಯಣ್ ನೇತೃತ್ವದ ತಂಡ, ಕಳೆದ ಜೂನ್ ನಲ್ಲಿ ಮೈಸೂರಿನಲ್ಲಿ ಅಪರಾಧಿಯನ್ನ ಬಂಧಿಸಿತ್ತು.
ಬಂಧಿತ ಇಬ್ಬರು ಆರೋಪಿ ಪತ್ನಿಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ರು
ಈತ ನೀಡಿದ ಮಾಹಿತಿ ಆಧರಿಸಿ ಎಫ್ ಡಿಎ ಆಗಿರುವ ಶ್ರೀಕಾಂತ್ ನನ್ನ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಸೋಮಶೇಖರ್ ಪಾತ್ರದ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದರು. ಈ ಬಗ್ಗೆ ಶಂಕರ್ ಪತ್ನಿ ಸಹ ತಮ್ಮ ಗಂಡನ ಬಿಡುಗಡೆ ಹಿಂದೆ ಡಿಐಜಿ ಶಾಮೀಲು ಆಗಿರುವ ಬಗ್ಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಕುರಿತು ಸತ್ಯ ಸಂಗತಿ ಮುಚ್ಚಿಟ್ಟು ತನಿಖೆಗೆ ಸಹಕರಿಸದ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ. ಬಂಧಿತ ಇಬ್ಬರು ಆರೋಪಿ ಪತ್ನಿಯನ್ನ ಲೈಂಗಿಕವಾಗಿ ಬಳಸಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.
ಸದ್ಯ ಪರಪ್ಪನ ಅಗ್ರಹಾರ ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತನಿಖೆಗೆ ಸಹಕರಿಸದೆ ಮಾಹಿತಿ ಮಾರೆಮಾಚಿದ ಆರೋಪದಡಿ ಸೋಮಶೇಖರ್ ಬಂಧಿಸಲಾಗಿದ್ದು, ಸೋಮವಾರ 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಅ.9ರವರೆಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.




