ಅಪ್ರಾಪ್ತನಿಗೆ ಸನ್ಯಾಸ ನೀಡಿದಾಗ ಸರ್ಕಾರ ಮೂಕಪ್ರೇಕ್ಷನಾಗಿರಲು ಸಾಧ್ಯವಿಲ್ಲ: ಉಡುಪಿಯ ಶಿರೂರು ಮಠಕ್ಕೆ ಬಾಲಸನ್ಯಾಸಿ ನೇಮಕಕ್ಕೆ ಹೈಕೋರ್ಟ್​ ಆಕ್ಷೇಪ

|

Updated on: May 26, 2021 | 8:33 PM

ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಬಾಲಕನನ್ನು ಮಠಾಧಿಪತಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಅಪ್ರಾಪ್ತನಿಗೆ ಸನ್ಯಾಸ ನೀಡಿದಾಗ ಸರ್ಕಾರ ಮೂಕಪ್ರೇಕ್ಷನಾಗಿರಲು ಸಾಧ್ಯವಿಲ್ಲ: ಉಡುಪಿಯ ಶಿರೂರು ಮಠಕ್ಕೆ ಬಾಲಸನ್ಯಾಸಿ ನೇಮಕಕ್ಕೆ ಹೈಕೋರ್ಟ್​ ಆಕ್ಷೇಪ
ಶಿರೂರು ಮಠ ಮತ್ತು ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಅಪ್ರಾಪ್ತ ಬಾಲಕನಿಗೆ ಒತ್ತಾಯದಿಂದ ಸನ್ಯಾಸ ನೀಡಿದಾಗ ಸರ್ಕಾರವು ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಬಾಲಕನಿಗೆ ಸನ್ಯಾಸ ನೀಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು, ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಬಾಲಕನನ್ನು ಮಠಾಧಿಪತಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು.

‘ಒತ್ತಾಯದಿಂದ ಬಾಲಕನಿಗೆ ಸನ್ಯಾಸ ನೀಡಲಾಗಿದೆ. ಅಪ್ರಾಪ್ತನ ಹಕ್ಕುಗಳು ಇದರಿಂದ ಉಲ್ಲಂಘನೆಯಾಗಿವೆ. ಈ ಕುರಿತು ಅರ್ಜಿದಾರರು ಸಲ್ಲಿಸಿರುವ ಮಾಹಿತಿಯಲ್ಲಿ ಕೆಲ ಗೊಂದಲಗಳಿವೆ. ಪ್ರಾರ್ಥನೆಯನ್ನು ಬದಲಿಸಲು ಅವಕಾಶ ನೀಡಲಾಗಿದೆ. ಜೂನ್ 2ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಪೀಠವು ಹೇಳಿತು.

ಉಡುಪಿ ಶಿರೂರು ಮಠಕ್ಕೆ 31ನೇ ಪೀಠಾಧಿಪತಿಯಾಗಿ ಬಾಲಕನನ್ನು ನೇಮಿಸಿದ ಕ್ರಮದ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಹೈಕೋರ್ಟ್​ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಉಡುಪಿ ಶಿರೂರು ಮಠ ಭಕ್ತ ಸಮಿತಿಯ ವ್ಯವಸ್ಥಾಪಕ ಟ್ರಸ್ಟಿಯು ಪಿ.ಲಾತವ್ಯ ಆಚಾರ್ಯ ಮೂಲಕ ಈ ಮನವಿಯನ್ನು ಸಲ್ಲಿಸಿದ್ದಾರೆ.

ಸೋದೆ ಮಠದ ಮಠಾಧೀಶರು 16 ವರ್ಷದ ಬಾಲಕನನ್ನು ಶಿರೂರು ಮಠದ ಮುಂದಿನ ಪೀಠಾಧಿಪತಿ ಎಂದು ಘೋಷಿಸಿದ್ದಾರೆ. ಆ ಬಾಲಕನಿಗೆ ಸನ್ಯಾಸವನ್ನೂ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ ಎಂದು ಅರ್ಜಿದಾರರು ನ್ಯಾಯಪೀಠದ ಗಮನ ಸೆಳೆದರು. ಈ ನೇಮಕವನ್ನು ಶಿರೂರು ಮಠದ ಭಕ್ತರು ಒಪ್ಪಿಲ್ಲ. ಶಿರೂರು ಮಠಕ್ಕೆ ಇದೀಗ ಪೀಠಾಧಿಪತಿಯೆಂದು ಘೋಷಣೆಯಾಗಿರುವ ಬಾಲಕ ಈ ಮಠದ ಅನುಯಾಯಿಯೂ ಅಲ್ಲ ಎಂದು ಅರ್ಜಿದಾರರು ವಾದಿಸಿದರು.

ಕಳೆದ ಮಾರ್ಚ್​ ತಿಂಗಳಲ್ಲಿಯೇ (ಸೋದೆ ಮಠದ) ಪೀಠಾಧಿಪತಿಗೆ ಲೀಗಲ್ ನೊಟೀಸ್ ನೀಡಿ, ಶಿರೂರು ಮಠದ ಯಾವುದೇ ವಿಗ್ರಹಗಳು ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರ ಮಾಡಬಾರದು ಎಂದು ಸೂಚಿಸಲಾಗಿತ್ತು. ಹೀಗಿದ್ದರೂ ಶಿರೂರು ಮಠಕ್ಕೆ ಪೀಠಾಧಿಪತಿಯನ್ನು ಘೋಷಿಸಲಾಗಿದೆ. ಇದು ಅಪ್ರಾಪ್ತನ ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿದರು.

ಅರ್ಜಿಯಲ್ಲಿದ್ದ ಅಂಶಗಳಲ್ಲಿ ಕೆಲ ಗೊಂದಲಗಳಿರುವುದನ್ನು ಗಮನಿಸಿದ ನ್ಯಾಯಪೀಠವು ಅರ್ಜಿಯನ್ನು ಬದಲಿಸಲು ಅನುಮತಿ ನೀಡಿ, ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತು.

ಶಿರೂರು ಮಠದ ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರು ನಿಧನರಾದ ನಂತರ ಮಠಕ್ಕೆ ಪೀಠಾಧಿಪತಿ ನೇಮಕ ವಿಚಾರ ಚರ್ಚೆಯಲ್ಲಿತ್ತು. ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿಗೆ ಸಂಪ್ರದಾಯದಂತೆ ಹೊಸ ಪೀಠಾಧಿಪತಿ ನೇಮಿಸಲು ಅವಕಾಶವಿತ್ತು ಎಂದು ಭಕ್ತರು ಹೇಳಿದ್ದರು. ಅದರಂತೆ ಸ್ವಾಮೀಜಿ ಈಚೆಗಷ್ಟೇ ಅನಿರುದ್ಧ ಸರಳತ್ತಾಯ ಎಂಬ ಬಾಲಕನನ್ನು ಪೀಠಾಧಿಪತಿಯನ್ನಾಗಿ ನೇಮಿಸಿದ್ದರು. ಉಡುಪಿ ಅಷ್ಟಮಠಗಳಲ್ಲಿ ಬಾಲಸನ್ಯಾಸಿಗಳಿಗೆ ಪೀಠ ಕೊಡುವ ಪರಿಪಾಠ ಬೆಳೆದುಬಂದಿದೆ.

(Disciples of Shiroor Mutt Questions Appointment of new Pontiff in Karnataka High Court)

ಇದನ್ನೂ ಓದಿ: ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ; ಧರ್ಮಸ್ಥಳ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಮುಂದಿನ ಶ್ರೀ

ಇದನ್ನೂ ಓದಿ: ಉತ್ತರಾಯಣ ನಂತರ ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ -ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ

Published On - 8:24 pm, Wed, 26 May 21