ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ; ಧರ್ಮಸ್ಥಳ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಮುಂದಿನ ಶ್ರೀ
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದ 16 ವರ್ಷದ ವಟುವಾಗಿರುವ ನೂತನ ಪೀಠಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಅನಿರುದ್ಧ್ ಸರಳತ್ತಾಯ, ಉಡುಪಿಯ ವಿದ್ಯೋದಯ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರೈಸಿದ್ದಾರೆ.
ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ನೂತನ ಪೀಠಾಧಿಪತಿಯನ್ನು ಘೋಷಿಸಲಾಗಿದೆ. ಸೋದೆ (ವಾದಿರಾಜ) ಮಠದ ವಿಶ್ವವಲ್ಲಭ ತೀರ್ಥರು ನೂತನ ಪೀಠಾಧಿಪತಿಯ ಹೆಸರು ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಮುಂದಿನ ಶ್ರೀಗಳಾಗಿ ನಿಯುಕ್ತಿಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠದಲ್ಲಿ ಮೇ 11ರಿಂದ 14ರವರೆಗೆ ಶಿಷ್ಯ ಸ್ವೀಕಾರ ವಿಧಿ ವಿಧಾನಗಳು ಜರುಗಲಿವೆ.
ಶಿರೂರು ಮಠಕ್ಕೆ ನೂತನ ಪೀಠಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಅನಿರುದ್ಧ್ ಸರಳತ್ತಾಯ ಮಠದ ಉತ್ತರಾಧಿಕಾರಿಯಾಗಲಿದ್ದಾರೆ. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದ 16 ವರ್ಷದ ವಟುವಾಗಿರುವ ಅವರು, ಉಡುಪಿಯ ವಿದ್ಯೋದಯ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರೈಸಿದ್ದಾರೆ.
ಅಷ್ಟಮಠಗಳಲ್ಲಿ ಬಾಲಸನ್ಯಾಸ ಸ್ವೀಕಾರ ಸಂಪ್ರದಾಯ ಇದೆ. ಸಂಪ್ರದಾಯದ ಪ್ರಕಾರವೇ ವಟುವಿನ ಆಯ್ಕೆ ನಡೆದಿದೆ. ಅಷ್ಟಮಠಗಳ ಯತಿಗಳಿಂದ ಸನ್ಯಾಸ ವಿಚಾರದಲ್ಲಿ ಯಾವುದೇ ಸಂವಿಧಾನ ರಚನೆಯಾಗಿಲ್ಲ. ಎಲ್ಲಾ ಯತಿಗಳ ಗಮನಕ್ಕೆ ತಂದು ಶಿಷ್ಯನ ಆಯ್ಕೆ ಮಾಡಿದ್ದೇವೆ ಎಂದು ಉಡುಪಿಯ ಶಿರೂರಿನಲ್ಲಿ ಸೋದೆ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೋದೆ-ಶೀರೂರು ದ್ವಂದ್ವ ಮಠಗಳು ಶೀರೂರು ಮಠದ ಲಕ್ಷ್ಮೀವರ ತೀರ್ಥರು ಸಂಶಯಾಸ್ಪದ ರೀತಿಯಲ್ಲಿ ಅಸುನೀಗಿ ಎರಡು ವರ್ಷ ಒಂಭತ್ತು ತಿಂಗಳು ಕಳೆಯಿತು. ಈವರೆಗೆ ಖಾಲಿಯಿದ್ದ ಶೀರೂರು ಮಠ ಪೀಠಕ್ಕೆ ಇದೀಗ ನೂತನ ಯತಿಯ ನೇಮಕದ ಪ್ರಕ್ರಿಯೆ ಆರಂಭವಾಗಿದೆ. ಶೀರೂರಿಗೆ ದ್ವಂದ್ವ ಮಠವಾಗಿರುವ ಸೋದೆ ಮಠದ ವಿಶ್ವವಲ್ಲಭ ತೀರ್ಥರು ಪ್ರಸ್ತುತ ಶೀರೂರು ಮಠದ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ.
ಶೀರೂರು ಮಠದ ಲಕ್ಷ್ಮೀವರ ತೀರ್ಥರು ನಿಧನರಾದಾಗ ಅಷ್ಟಮಠಗಳಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಕೆಲ ಹಿರಿಯ ಸ್ವಾಮಿಗಳ ಬಗ್ಗೆ ಹಲವು ಆರೋಪಗಳೂ ಕೇಳಿಬಂದಿತ್ತು. ಲಕ್ಷ್ಮೀವರ ತೀರ್ಥರ ನಿಧನಾನಂತರವೂ ಮಠದ ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲ ಎಂದು ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಬಂಧುಗಳು ಆರೋಪಿಸಿದ್ದರು. ಪೀಠಕ್ಕೆ ಯತಿ ನೇಮಕವಾಗದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ದ್ವಂದ್ವ ಮಠದ ಸೋದೆ ಶ್ರೀಗಳು ಶೀರೂರು ಮಠಕ್ಕೆ ನೂತನ ಯತಿಯ ಘೋಷಣೆ ಮಾಡಿದ್ದಾರೆ. ಧರ್ಮಸ್ಥಳ ಸಮೀಪದ ನಿಡ್ಲೆ ಮೂಲದ ಅನಿರುದ್ಧ ಸನ್ಯಾಸ ಸ್ವೀಕಾರಕ್ಕೆ ಸಿದ್ದರಾಗಿದ್ದಾರೆ.
ಸೋದೆ ಮಠದ ಪ್ರಧಾನ ವೈದಿಕರಲ್ಲಿ ಒಬ್ಬರಾದ ಉದಯ ಸರಳತ್ತಾಯರ 16 ವರ್ಷದ ಮಗನಾದ ಅನಿರುದ್ಧ ಸದ್ಯ ಹತ್ತನೇ ತರಗತಿ ಪೂರೈಸಿದ್ದಾರೆ. ಇವರ ಜಾತಕದಲ್ಲಿ ಸನ್ಯಾಸ ಯೋಗ ಇರುವುದನ್ನು ಉಡುಪಿ, ಕಾಶಿ ಮತ್ತು ನಾಗಪುರದ ಜ್ಯೋತಿಷಿಗಳು ಖಚಿತಪಡಿಸಿದ್ದಾರೆ. ಬಾಲ್ಯದಿಂದಲೇ ವಿರಕ್ತನಾದ ಬಾಲಕ, ಕೃಷ್ಣಪೂಜೆಯ ಆಸೆ ವ್ಯಕ್ತಪಡಿಸುತ್ತಿದುದಾಗಿ ಉದಯ ಸರಳತ್ತಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಾಯಣ ನಂತರ ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ -ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ
ಸನ್ಯಾಸ ದೀಕ್ಷೆಗೆ ಆಕ್ಷೇಪ ಈ ನಡುವೆ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರರು ಈ ಸನ್ಯಾಸ ದೀಕ್ಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಾಲ ಸನ್ಯಾಸ ನೀಡುವುದು ಸರಿಯಲ್ಲ, ವೇದಾಂತ ಅಧ್ಯಯನ ಪೂರ್ಣವಾದ ಮತ್ತು 21 ವರ್ಷ ಮೇಲ್ಪಟ್ಟ ವಟುವನ್ನೇ ಆಯ್ಕೆ ಮಾಡಬೇಕಿತ್ತು ಎಂದು ವಾದಿಸಿದ್ದರು. ಈ ಆಕ್ಷೇಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅಷ್ಟಮಠಗಳಲ್ಲಿ ಬಾಲಸನ್ಯಾಸದ ಪರಂಪರೆ ಇದೆ, ನನಗೂ 14 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ನೀಡಲಾಗಿದೆ. ಅಷ್ಟ ಮಠಾಧೀಶರ ಜೊತೆ ಈ ವಟುವಿನ ಆಯ್ಕೆಯ ಬಗ್ಗೆ ಚರ್ಚಿಸಿ ಸಮ್ಮತಿ ಪಡೆಯಲಾಗಿದೆ. ಹೆಚ್ಚು ಕಾಲ ಪೀಠವನ್ನು ಖಾಲಿಯಿಡುವುದು ಸರಿಯಲ್ಲ, ಹಾಗಾಗಿ ಯೋಗ್ಯವಾದ ರೀತಿಯಲ್ಲಿಯೇ ಅನಿರುದ್ಧನ ಆಯ್ಕೆ ಮಾಡಲಾಗಿದೆ. 21 ವರ್ಷ ಪೂರ್ಣಗೊಂಡವರಿಗೆ ಮಾತ್ರ ಸನ್ಯಾಸ ಎಂಬ ಬಗ್ಗೆ ಅಷ್ಟಮಠಗಳಲ್ಲಿ ಯಾವುದೇ ನಿಯಮಗಳು ರೂಪುಗೊಂಡಿಲ್ಲ. ಮುಂದಿನ ಶೀರೂರು ಪರ್ಯಾಯಕ್ಕೆ ಮುಂಚಿತವಾಗಿ ಸೂಕ್ತ ರೀತಿಯ ವೇದ-ವೇದಾಂತ ಪಾಠಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
(New Seer Appointed for Shiroor Mutt Announces Vishwavallabha Teertha Swamiji)
ಇದನ್ನೂ ಓದಿ: ಕೃಷಿಕ್ರಾಂತಿಗೆ ಮುಂದಾದ ಉಡುಪಿ ಜಿಲ್ಲೆ; ಶಾಸಕರ ಮುಂದಾಳತ್ವದಲ್ಲಿ ನಡೆಯಲಿದೆ ಹಡಿಲು ಭೂಮಿ ಬಿತ್ತನೆ ಕಾರ್ಯ
ಇದನ್ನೂ ಓದಿ: ಪೇಜಾವರು ಶ್ರೀಗಳು ನಡೆದು ಬಂದ ಹಾದಿ