ಮದುವೆಗಳಿಗೆ ಕೊರೊನಾ ವಿಘ್ನ, ಪಾಸ್ಗಳಿಗೆ ಪರದಾಟ: ಕಣ್ಣೀರು ಹಾಕುತ್ತಿದ್ದಾರೆ ಪೋಷಕರು
ಮಕ್ಕಳ ಮದುವೆಗೆಂದು ಜೀವಮಾನವಿಡೀ ಹಣ ಕೂಡಿಸಿದವರು ಸರ್ಕಾರದ ನಿಯಮವನ್ನು ಒಲ್ಲದ ಮನಸ್ಸುಗಳಿಂದ ಒಪ್ಪಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಒಬ್ಬ ಮಗ/ಮಗಳು ಇರುವ ಹೆತ್ತವರಂತೂ ಅಕ್ಷರಶಃ ಖಿನ್ನರಾಗಿ ಕೊರೊನಾಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಾಗಲಕೋಟೆ: ಕೊರೊನಾ ಸೋಂಕು ನಿಯಂತ್ರಣಕ್ಕೆಂದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಠಿಣ ನಿಯಮಾವಳಿಗಳಲ್ಲಿ ಮದುವೆಗಳಿಗೆ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಮದುವೆಗಳಲ್ಲಿ ಹೆಚ್ಚು ಜನರು ಸೇರುವುದು ಕೊರೊನಾ ವೇಗವಾಗಿ ಹರಡಲು ಮುಖ್ಯ ಕಾರಣವಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮಕ್ಕಳ ಮದುವೆಗೆಂದು ಜೀವಮಾನವಿಡೀ ಹಣ ಕೂಡಿಸಿದವರು ಸರ್ಕಾರದ ನಿಯಮವನ್ನು ಒಲ್ಲದ ಮನಸ್ಸುಗಳಿಂದ ಒಪ್ಪಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಒಬ್ಬ ಮಗ/ಮಗಳು ಇರುವ ಹೆತ್ತವರಂತೂ ಅಕ್ಷರಶಃ ಖಿನ್ನರಾಗಿ ಕೊರೊನಾಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಾಗಲಕೋಟೆಯಲ್ಲಿ ಬುಧವಾರ ಇಂಥದ್ದೇ ಪ್ರಕರಣವೊಂದು ವರದಿಯಾಗಿದೆ. ಒಬ್ಬನೇ ಮಗನ ಮದುವೆಯನ್ನು ಸಂಭ್ರಮದಿಂದ ಮಾಡಲು ಸಾಧ್ಯವಾಗದ ಗೋಪಿಚಂದ್ ಮೇಲಾಳೆ ಎಂಬ ತಂದೆ ಕಣ್ಣೀರು ಹಾಕಿದ್ದಾರೆ. ಲಗ್ನ ಪತ್ರಿಕೆ ಹಂಚಿಕೆ ಮಾಡಿ ಲಕ್ಷಲಕ್ಷ ಖರ್ಚು ಮಾಡಿದ್ದೆ. ಈಗ ನೋಡಿದ್ರೆ ಜನರೇ ಬರುವಂತೆ ಇಲ್ಲ. ಮಗನ ಮದುವೆ ಸಂಭ್ರಮ ನೋಡುವ ಭಾಗ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಗ ನಿತಿನ್ ಕುಮಾರ ಹಾಗೂ ಪವಿತ್ರಾ ಎಂಬುವವರ ಮದುವೆ ಇದೇ ಏಪ್ರಿಲ್ 25ರಂದು ನಿಗದಿಯಾಗಿತ್ತು. ಸ್ಟಾಫ್ ನರ್ಸ್ ಆಗಿರುವ ನಿತಿನ್ ಕುಮಾರ ಮದುವೆಗೆ ಎಲ್ಲರೂ ಬರಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಭಾನುವಾರವೇ ಮುಹೂರ್ತ ಇರಿಸಲಾಗಿತ್ತು. ಆದರೆ ಇದೀಗ ಮದುವೆಗೆ ಕೇವಲ 50 ಜನರು ಪಾಲ್ಗೊಳ್ಳಬಹುದು ಎಂಬ ನಿಯಮ ಜಾರಿಗೆ ಬಂದಿರುವುದರಿಂದ ಹೆತ್ತವರು ನಿರಾಶರಾಗಿದ್ದಾರೆ. ಅವರನ್ನು ವೀಕ್ ಎಂಡ್ ಕರ್ಫ್ಯೂ ಗೊಂದಲವೂ ಇನ್ನಿಲ್ಲದಂತೆ ಕಾಡುತ್ತಿದೆ. ಮದುವೆಗೆ ಪಾಸ್ ಕೊಡಿ ಎಂದು ವಿನಂತಿಸಿದರೆ ಅಧಿಕಾರಿಗಳು ಮದುವೆಯನ್ನೇ ಮುಂದಕ್ಕೆ ಹಾಕಿ ಎಂದರಂತೆ. ಪಾಸ್ ಕೂಡ ಸಿಗದ ಕಾರಣ, ನಿಗದಿ ಮಾಡಿದ್ದ ಕಲ್ಯಾಣ ಮಂಟಪ ಬಿಟ್ಟು ಮನೆಯಲ್ಲೇ ಸರಳ ಮದುವೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ ಗೋಪಿಚಂದ್ ಮೇಲಾಳೆ ಅವರು ಬಾಗಲಕೋಟೆಯ ಕೆಂಪ್ ರೋಡ್ ನಿವಾಸಿ. ವಿದ್ಯಾಗಿರಿಯ ಸೆಂಟ್ ಮೇರಿಸ್ ಕಲ್ಯಾಮಮಂಟಪದಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕಲ್ಯಾಣ ಮಂಟಪಕ್ಕಾಗಿ ಈಗಾಗಲೇ ₹ 24 ಸಾವಿರ ಹಣವನ್ನು ಮುಂಗಡವಾಗಿ ನೀಡಿದ್ದರು. ಕಲ್ಯಾಣ ಮಂಟಪದವರು ಮುಂಗಣ ಹಣವನ್ನು ಹಿಂದಿರುಗಿಸುವುದಿಲ್ಲ ಎನ್ನುತ್ತಿದ್ದಾರೆ. ಮದುವೆ ಜವಳಿಗಾಗಿಯೂ ಸುಮಾರು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿಕೊಂಡಿದ್ದೇವೆ ಎಂದು ಕುಟುಂಬ ಬೇಸರ ವ್ಯಕ್ತವಪಡಿಸಿದೆ.
ಮದುವೆಗಾಗಿ ಅನುಮತಿ ಪಾಸ್ ಪಡೆಯಲು ಈ ಕುಟುಂಬ ಸಾಕಷ್ಟು ಪ್ರಯತ್ನಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯ ವರ್ತನೆಗೆ ಬೇಸರಗೊಂಡು ಪಾಸ್ ಸಹವಾಸವೇ ಬೇಡವೆಂದು ಮನೆ ಮಟ್ಟಿಗೆ ಮದುವೆ ಮಾಡಿಮುಗಿಸಲು ನಿರ್ಧರಿಸಿದೆ. ಬಾಗಲಕೋಟೆಯ ಇತರ ಕಲ್ಯಾಣ ಮಂಟಪಗಳಲ್ಲಿಯೂ ಇಂಥದ್ದೇ ಸಮಸ್ಯೆ ಕಂಡುಬರುತ್ತಿದೆ. ಮಕ್ಕಳ ಮದುವೆಯನ್ನು ಸಂಭ್ರಮದಿಂದ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಹಲವಾರು ಮಂದಿ ಮದುವೆಯನ್ನೇ ಮುಂದೂಡುತ್ತಿದ್ದಾರೆ. ಮದುವೆ ನಿಲ್ಲಿಸಲು ಆಗುವುದಿಲ್ಲ ಎಂಬ ಪರಿಸ್ಥಿತಿಯಲ್ಲಿರುವವರಿಗೆ ವೀಕೆಂಡ್ ಲಾಕ್ಡೌನ್ನಿಂದ ಗೊಂದಲ ಮೂಡುತ್ತಿದೆ.
ಬಾಗಲಕೋಟೆಯ ಬಸವೇಶ್ವರ ಸಂಘದ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ಮದುವೆಗಳ ಪರಿಸ್ಥಿತಿಯೂ ಇದೇ ರೀತಿ ಇದೆ. ಮದುವೆ ಮಾಡೋದಾ ಹೇಗೆ ಎಂದು ಕಲ್ಯಾಣ ಮಂಟಪದ ಸಿಬ್ಬಂದಿಗೆ ಮದುವೆಮನೆಯವರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಕಲ್ಯಾಣ ಮಂಟಪಗಳಲ್ಲಿ ಸಾಮಾಜಿಕ ಅಂತರಕ್ಕಾಗಿ ಚೌಕಗಳನ್ನು (ಬಾಕ್ಸ್) ಗುರುತು ಮಾಡಲಾಗಿದೆ. ಅಂತರ ಪಾಲನೆಗಾಗಿ ಇಂಥ ಚೌಕರಗಳಲ್ಲಿಯೇ ಕುರ್ಚಿ ಹಾಕಿ, ಮದುವೆ ನಡೆಸಿಕೊಡಲು ಕಲ್ಯಾಣ ಮಂಟಪದ ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
‘ಸರ್ಕಾರ ಹೇರಿರುವ ಹೊಸ ನಿಯಮಗಳಿಂದಾಗಿ ಕಲ್ಯಾಣ ಮಂಟಪಗಳಿಗೆ ಭಾರೀ ನಷ್ಟವಾಗುತ್ತಿದೆ. ಮದುವೆ ಮಾಡುವವರಿಗೂ ನೆಮ್ಮದಿಯಿಲ್ಲ, ಕಲ್ಯಾಣ ಮಂಟಪದವರಿಗೂ ನೆಮ್ಮದಿಯಿಲ್ಲ. ಈಗಾಗಲೇ ಲಗ್ನಪತ್ರಿಕೆ ಮಾಡಿಸಿದವರು ಮದುವೆ ರದ್ದುಪಡಿಸುತ್ತಿದ್ದಾರೆ ಎಂದು ಬಾಗಲಕೋಟೆ ಎಪಿಎಂಸಿ ಆವರಣದಲ್ಲಿರುವ ಚರಂತಿಮಠ ಕಲ್ಯಾಣಮಂಟಪದ ಸಿಬ್ಬಂದಿ ಹೇಳುತ್ತಿದ್ದಾರೆ.
ಕೊವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ಕೊವಿಡ್ ನಿಯಮ ಉಲ್ಲಂಘಿಸಿ ಬಾದಾಮಿ ತಾಲ್ಲೂಕಿನ ಮಂಗಳಗುಡ್ಡ ಗ್ರಾಮದ ಮಂಗಳಾದೇವಿ ಜಾತ್ರೆ ನಡೆಸಲಾಗಿದೆ. ರಥೋತ್ಸವ ವೇಳೆ ದೈಹಿಕ ಅಂತರ ಕಾಪಾಡಲು ಸಾಧ್ಯವಾಗಿಲ್ಲ. ಭಕ್ತರು ಮಾಸ್ಕ್ಗಳನ್ನೂ ಧರಿಸಿರಲಿಲ್ಲ.
ಹಾಸ್ಟೆಲ್ಗಳಲ್ಲಿದ್ದವರಿಗೆ ಕೊರೊನಾ ಇಳಕಲ್ ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್‌ನಲ್ಲಿ 8, ಬಾಲಕಿಯರ ಹಾಸ್ಟೆಲ್‌ನಲ್ಲಿ 3 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
(Coronavirus Marriage Rules Parents Unhappy over Rules to curtail Covid 19 Pandemic)
ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ಗೆ ಕೊರೊನಾ ಸೋಂಕು
ಇದನ್ನೂ ಓದಿ: ಸರ್ಕಾರದ ಕಟ್ಟುನಿಟ್ಟಿನ ಕೊವಿಡ್ ನಿಯಮವನ್ನು ಶ್ರೀರಾಮುಲು, ಆನಂದ್ ಸಿಂಗ್ ಅವರೇ ಉಲ್ಲಂಘಿಸಿದರು!