ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ 4 ಆಂಬುಲೆನ್ಸ್ ಹಾಗೂ 50 ಮಂಚ ದೇಣಿಗೆ ನೀಡಿದ ಎಂ.ಪಿ. ರೇಣುಕಾಚಾರ್ಯ
MP Renukacharya: ಬಿಜೆಪಿ ಶಾಸಕ ರೇಣುಕಾಚಾರ್ಯ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ 4 ಆ್ಯಂಬುಲೆನ್ಸ್ ಹಾಗೂ 50 ಮಂಚವನ್ನು ದೇಣಿಗೆ ನೀಡಿದ್ದಾರೆ. ತಮ್ಮ ತಂದೆ ತಾಯಿ ಸ್ಮರಣಾರ್ಥ ಸರ್ಕಾರಿ ಆಸ್ಪತ್ರೆಗೆ ಈ ದೇಣಿಗೆ ನೀಡಿದ್ದಾರೆ.
ದಾವಣಗೆರೆ: ಕೊರೊನಾ ಸೋಂಕು ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡಿ ಬಹಳಷ್ಟು ಸಂಕಷ್ಟ ಎದುರಾಗಿದೆ. ಕರ್ನಾಟಕದಲ್ಲೂ ಕೊರೊನಾ ಉಂಟುಮಾಡಿರುವ ಹಾನಿ ಪ್ರಮಾಣ ಕಡಿಮೆ ಏನಿಲ್ಲ. ಈ ಸಂದರ್ಭ ಸರ್ಕಾರ ಮಾತ್ರವಲ್ಲದೆ ಜನಪ್ರತಿನಿಧಿಗಳು, ಜನಸಾಮಾನ್ಯರು ವೈಯಕ್ತಿಕವಾಗಿ, ಸಂಘ ಸಂಸ್ಥೆಗಳ ಮೂಲಕ ಸಮಾಜಕ್ಕೆ ನೆರವಾಗುವಂಥ ಕಾರ್ಯವನ್ನು ಮಾಡಿದ್ದಾರೆ. ಸೋಂಕಿತರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಲೇ ಬಂದಿದ್ದಾರೆ. ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೂಡ ಈ ರೀತಿ ಕೆಲಸದಲ್ಲಿ ಕಳೆದ ಕೆಲವು ದಿನಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಬಿಜೆಪಿ ಶಾಸಕ ರೇಣುಕಾಚಾರ್ಯ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ 4 ಆ್ಯಂಬುಲೆನ್ಸ್ ಹಾಗೂ 50 ಮಂಚವನ್ನು ದೇಣಿಗೆ ನೀಡಿದ್ದಾರೆ. ತಮ್ಮ ತಂದೆ ತಾಯಿ ಸ್ಮರಣಾರ್ಥ ಸರ್ಕಾರಿ ಆಸ್ಪತ್ರೆಗೆ ಈ ದೇಣಿಗೆ ನೀಡಿದ್ದಾರೆ. ತಮ್ಮ ತಂದೆ ಪಂಚಾಕ್ಷರಯ್ಯ ಮತ್ತು ತಾಯಿ ಕಮಲಮ್ಮ ಅವರ ಸ್ಮರಣಾರ್ಥ ರೇಣುಕಾಚಾರ್ಯ ಈ ಕಾರ್ಯ ಮಾಡಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಅಂಬ್ಯುಲೆನ್ಸ್ ಮತ್ತು ಮಂಚ ದಾನ ಮಾಡಿದ್ದಾರೆ.
ಕೊವಿಡ್ ಕೇರ್ ಸೆಂಟರ್ನಲ್ಲಿ ರಸಮಂಜರಿ ಕಾರ್ಯಕ್ರಮ ರೇಣುಕಾಚಾರ್ಯ ಕೊವಿಡ್ ಕೇರ್ ಸೆಂಟರ್ನಲ್ಲಿ ಬುಧವಾರ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಸಿಸಿ ಕೇಂದ್ರದಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಸುಮಾರು 180 ಸೋಂಕಿತರಿರುವ ಕೊವಿಡ್ ಕೇರ್ ಸೆಂಟರ್ನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಮೊದಲು, ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಕೊರೊನಾದಿಂದ ಗುಣಮುಖರಾದವರಿಗೆ ಪುಷ್ಪವೃಷ್ಟಿ ಮಾಡಿದ್ದರು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ಕೊವಿಡ್ ಕೇರ್ ಸೆಂಟರ್ನಲ್ಲಿ ಪುಷ್ಪವೃಷ್ಟಿ ಮಾಡಲಾಗಿತ್ತು. ಅಲ್ಲದೆ, ಕೊವಿಡ್ನಿಂದ ಗುಣಮುಖರಾದ 12 ಜನರಿಗೆ ರೇಣುಕಾಚಾರ್ಯ ಸಿಹಿ ಹಂಚಿದ್ದರು.
ಎಲ್ಲಾ ರೋಗಿಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮುಂದಾಗಿದ್ದರು. ಬೆಳ್ಳಂಬೆಳಿಗ್ಗೆಯೇ ತಮ್ಮ ಸ್ವಗೃಹದ ಮುಂದೆ ಸೋಂಕಿತರಿಗಾಗಿ ಇಡ್ಲಿ ತಯಾರಿಸಿ ಉಪಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ರೇಣುಕಾಚಾರ್ಯ ದಂಪತಿ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಮ್ಮ ಸ್ವಗೃಹದ ಮುಂದೆ ಇಡ್ಲಿ ತಯಾರಿಸಿದ್ದರು. ಪ್ರತಿನಿತ್ಯವೂ ಕೂಡಾ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರಿಗೆ ಮತ್ತು ಲಸಿಕೆ ಪಡೆಯುವವರಿಗೆ ಜೊತೆಗೆ ಸೋಂಕಿತರ ಸಿಬ್ಬಂದಿಗೆ ಉಪಹಾರ ನೀಡುತ್ತಿದ್ದರು. ಮೇ 16ರಂದು ಬೆಳಿಗ್ಗಿನ ಉಪಹಾರಕ್ಕೆ ಇಡ್ಲಿ ಜೊತೆಗೆ ಚಟ್ನಿ, ಸಂಬಾರ್ ತಯಾರಿಸಿದ್ದರು.
ಕೊರೊನಾ ಸೋಂಕಿತರಿಗೆ ಬಸವ ಜಯಂತಿಯಂದು ರೇಣುಕಾಚಾರ್ಯ ಹೋಳಿಗೆ ಊಟವನ್ನು ಕೂಡ ಹಾಕಿಸಿದ್ದರು. ಅಗತ್ಯ ಸಂದರ್ಭದಲ್ಲಿ ಆಕ್ಸಿಜನ್ ಒದಗಿಸುವ ಮೂಲಕವೂ ಶಾಸಕರು ಸೋಂಕಿತರ ರಕ್ಷಣೆಯ ಕೆಲಸ ಮಾಡಿದ್ದರು.
ಇದನ್ನೂ ಓದಿ: Lockdown Guidelines: ಕೊರೊನಾ ಸೋಂಕು ಇಳಿಕೆಯತ್ತ ಮುಖ ಮಾಡಿರುವಾಗಲೇ ಲಾಕ್ಡೌನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ
ಪ್ರೌಢಶಾಲೆಯನ್ನೇ ಕೊವಿಡ್ ಕೇರ್ ಸೆಂಟರ್ ಮಾಡಿದ ಆದಿಚುಂಚನಗಿರಿ ಮಠ; ಕೊರೊನಾ ನಿರ್ವಹಣೆಗೆ ಕಾಲೇಜಿನ ಬಸ್ ಬಳಕೆ
Published On - 7:50 pm, Wed, 26 May 21