ಮತ್ತೆ ಹೋಬಳಿ ಮಟ್ಟದಲ್ಲಿ ಬಡವರು ಮತ್ತು ರೈತರ ಕೈಹಿಡಿಯಲಿದೆ.. DK ರವಿ ಕನಸಿನ ಕೂಸು!

ಅದು ದಕ್ಷ ಐಎಎಸ್​ ಅಧಿಕಾರಿಯೊಬ್ಬರ ಕನಸಿನ ಯೋಜನೆ. ಬಡವರು ಮತ್ತು ರೈತರಿಗೆ ವರದಾನವಾಗಿರುವ ಆ ಯೋಜನೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಇಡೀ ಜಿಲ್ಲೆಯಲ್ಲಿ ಜನರ ಮನ ಗೆದ್ದಿತ್ತು. ಈಗ ಮತ್ತೆ ಆ ಯೋಜನೆ ಜಿಲ್ಲೆಯಲ್ಲಿ ಆರಂಭವಾಗುತ್ತಿದೆ.. ಇದು ನಿಜಕ್ಕೂ ಸಂತಸದ ವಿಷಯ ಕೋಲಾರದಲ್ಲಿ ಕಂದಾಯ ಅದಾಲತ್​ ಕಾರ್ಯಕ್ರಮ ಮತ್ತೆ ಜಾರಿಗೊಳ್ಳುತ್ತಿದೆ. ಹತ್ತಾರು ವರ್ಷಗಳ ಹಿಂದೆ.. ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಗಿ ಹೋಗಿದ್ದ ಸಾವಿರಾರು ರೈತರ ಮುಖದಲ್ಲಿ ಆ ಯೋಜನೆ ಮಂದಹಾಸವನ್ನು ಮೂಡಿಸಿತ್ತು. […]

ಮತ್ತೆ ಹೋಬಳಿ ಮಟ್ಟದಲ್ಲಿ ಬಡವರು ಮತ್ತು ರೈತರ ಕೈಹಿಡಿಯಲಿದೆ.. DK ರವಿ ಕನಸಿನ ಕೂಸು!

Updated on: Oct 24, 2020 | 6:01 PM

ಅದು ದಕ್ಷ ಐಎಎಸ್​ ಅಧಿಕಾರಿಯೊಬ್ಬರ ಕನಸಿನ ಯೋಜನೆ. ಬಡವರು ಮತ್ತು ರೈತರಿಗೆ ವರದಾನವಾಗಿರುವ ಆ ಯೋಜನೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಇಡೀ ಜಿಲ್ಲೆಯಲ್ಲಿ ಜನರ ಮನ ಗೆದ್ದಿತ್ತು. ಈಗ ಮತ್ತೆ ಆ ಯೋಜನೆ ಜಿಲ್ಲೆಯಲ್ಲಿ ಆರಂಭವಾಗುತ್ತಿದೆ.. ಇದು ನಿಜಕ್ಕೂ ಸಂತಸದ ವಿಷಯ

ಕೋಲಾರದಲ್ಲಿ ಕಂದಾಯ ಅದಾಲತ್​ ಕಾರ್ಯಕ್ರಮ ಮತ್ತೆ ಜಾರಿಗೊಳ್ಳುತ್ತಿದೆ. ಹತ್ತಾರು ವರ್ಷಗಳ ಹಿಂದೆ.. ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಸುತ್ತಿ ಸುತ್ತಿ ಸುಸ್ತಾಗಿ ಹೋಗಿದ್ದ ಸಾವಿರಾರು ರೈತರ ಮುಖದಲ್ಲಿ ಆ ಯೋಜನೆ ಮಂದಹಾಸವನ್ನು ಮೂಡಿಸಿತ್ತು. ರೈತರ ಭೂಮಿಗೆ ಸಂಬಂಧಿಸಿದ್ದ ಸಮಸ್ಯೆಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಯನ್ನು ಪರಿಹರಿಸಿಕೊಡುವ ಯೋಜನೆ. ಅದುವೇ ಕೋಲಾರದ ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿ ಅವರ ಕನಸಿನ ಯೋಜನೆ.

ಕಂದಾಯ ಅದಾಲತ್​.. ಈ ಯೋಜನೆ ಮೂಲಕವೇ ಡಿ.ಕೆ. ರವಿ ಕೋಲಾರ ಜಿಲ್ಲೆಯ ಮನೆ ಮಾತಾಗಿ ಜನ-ಮನಗೆದ್ದಿದ್ದರು. ಅಲ್ಲದೆ ಈ ಮಾದರಿ ಯೋಜನೆ ಸರ್ಕಾರದ ಗಮನ ಸೆಳೆದು ಅಂದಿನ ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಿತ್ತು. ಆದ್ರೆ ಈ ಮಧ್ಯೆ ಯೋಜನೆ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು.

ಈಗ ಮತ್ತೆ ಕೋಲಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಕಂದಾಯ ಅದಾಲತ್​ ಆರಂಭ ಮಾಡಿದ್ದು, ಮೊದಲ ಹಂತವಾಗಿ ಹೋಬಳಿ ಮಟ್ಟದಲ್ಲಿ ಈ ಯೋಜನೆ ಆರಂಭ ಮಾಡಲಾಗಿದೆ. ಸದ್ಯ ಕೊರೊನಾ ಸಂದರ್ಭದಲ್ಲಿ ಜನರು ಕಚೇರಿಗಳಿಗೆ ಅಲೆದಾಡುವುದು ಬೇಡ ಅನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಮತ್ತೆ ಆರಂಭಿಸಲಾಗಿದೆ.

ಸದ್ಯ ಪಿಂಚಣಿಗೆ ಸಂಬಂಧಿಸಿದ ದೂರು ಹಾಗೂ ಪಹಣಿ ತಿದ್ದುಪಡಿಗೆ ಸಂಬಂಧಿಸಿದಂತೆ ದೂರುಗಳನ್ನು ಮಾತ್ರ ಅದಾಲತ್​ನಲ್ಲಿ ಪರಿಹರಿಸಲಾಗುತ್ತಿದೆ. ಪಿಂಚಣಿಗೆ ಸಂಬಂಧಿಸಿದ ದೂರನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಿದ್ರೆ ಪಹಣಿಗೆ ಸಂಬಂಧಿಸಿದ ದೂರುಗಳನ್ನು ಒಂದು ತಿಂಗಳ ಅವಧಿಯಲ್ಲಿ ಇತ್ಯರ್ಥ ಪಡಿಸಲಾಗುತ್ತಿದೆ.

ಎಲ್ಲಾ ವರ್ಗದ ಜನರಿಗೂ ಸಹಾಯಕವಾದ ಯೋಜನೆ ಇದು 
ಇನ್ನು ಇಂಥ ಮಹತ್ವದ ಯೋಜನೆಯಿಂದ ಕೋಲಾರ ಜಿಲ್ಲೆಯ ರೈತರು, ಶ್ರೀಮಂತರು, ಬಡವರು ಎನ್ನದೆ ಭೂಮಿ ಉಳ್ಳವರು ಎಲ್ಲರಿಗೂ ಅನುಕೂಲವಾಗಿತ್ತು. ಸರ್ಕಾರಿ ಕಚೇರಿಗಳ ಬಳಿ ತಿಂಗಳುಗಟ್ಟಲೆ ಅಲೆದಾಡಿ, ಅಧಿಕಾರಿಗಳಿಗೆ ಕೇಳಿದಷ್ಟು ಲಂಚ ಕೊಟ್ರು ಬಗೆಯರಿಯದ ಸಮಸ್ಯೆಗಳನ್ನು ಕ್ಷಣದಲ್ಲೇ ಸಮಸ್ಯೆಗಳನ್ನು ಬಗೆಹರಿಸುವುದು ಯೋಜನೆಯ ಉದ್ದೇಶ.

ಆದ್ರೆ ಈಗ ಜಮೀನಿಗೆ ಸಂಬಂಧ ಪಟ್ಟಂತೆ ಹಲವು ವಿವಾದಗಳು ಕೋರ್ಟ್​ ತಡೆ ಇನ್ನಿತರ ಸಮಸ್ಯೆಗಳು ಇರುವ ಕಾರಣ ಈಗ ಕೇವಲ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ರೀತಿಯಲ್ಲಿ, ಜೊತೆಗೆ ಪಹಣಿಯ ತಿದ್ದುಪಡಿ ಮಾತ್ರ ಮಾಡಲಾಗುತ್ತಿದೆ.

ಯೋಜನೆ ಮೂಲಕ ಡಿಕೆ ರವಿ ಇನ್ನೂ ಜೀವಂತ
ಒಟ್ಟಾರೆ ದಕ್ಷ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿಯವರ ಕನಸಿನ ಯೋಜನೆಯನ್ನು ಜಿಲ್ಲೆಯಲ್ಲಿ ಮತ್ತೆ ಜಾರಿಗೆ ತರುವ ಮೂಲಕ ಮತ್ತೆ ಅವರ ನೆನಪು ಮರುಕಳಿಸಿದೆ. ಜೊತೆಗೆ ಈ ಮಹತ್ವದ ಯೋಜನೆಯ ಮೂಲಕ ಮತ್ತಷ್ಟು ಜನ ರೈತರ, ಬಡವರ ಸಂಕಷ್ಟಗಳು ಬಗೆಹರಿದರೆ ನಿಜಕ್ಕೂ ಅದೇ ಸಂತಸದ ವಿಷಯ..
-ರಾಜೇಂದ್ರ ಸಿಂಹ

Published On - 5:59 pm, Sat, 24 October 20