ಬೆಂಗಳೂರು, ನ.24: ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಆದರೆ ಸಿಬಿಐ ತನಿಖೆಯಿಂದ ಪಾರಾಗಲು ಶಿವಕುಮಾರ್ ಹೂಡಿರುವ ತಂತ್ರ ಸುಲಭಕ್ಕೆ ಫಲ ಕೊಡುವ ಲಕ್ಷಣಗಳು ಕಾಣುತ್ತಿಲ್ಲ. ಕೋರ್ಟ್ನಲ್ಲಿ ಈ ಬಗ್ಗೆ ಕಾನೂನು ಹೋರಾಟಕ್ಕೆ ಸಿದ್ಧತೆಗಳು ಆರಂಭವಾಗಿವೆ. ಹಾಗಾದರೆ ಸಿಬಿಐ (CBI) ಮುಂದಿನ ದಾರಿ ಏನು? ಶಿವಕುಮಾರ್ ಮುಂದಿರುವ ಹಾದಿ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಾದರೂ ಸರಿ ಸಿಬಿಐ ತನಿಖೆಯಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬಚಾವು ಮಾಡಲೇಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ನೀಡಿದ ಸಮ್ಮತಿ ಹಿಂಪಡೆಯಲು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಬಗ್ಗೆ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ತನಿಖೆ ವಾಪಸ್: ಸುಪ್ರೀಂ ತಿಳಿವಳಿಕೆ ಇಲ್ಲದೆ ಹೋಯ್ತೇ ಸಿದ್ದರಾಮಯ್ಯ ಸರ್ಕಾರಕ್ಕೆ?
ಸರ್ಕಾರ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಈ ನಿರ್ಧಾರ ಕೈಗೊಂಡಿದ್ದರೂ, ಸರ್ಕಾರ ಹಾಗೂ ಡಿಕೆ ಶಿವಕುಮಾರ್ ಮುಂದಿನ ಹಾದಿ ಸುಲಭವಾಗೇನೂ ಇಲ್ಲ. 2020 ರಲ್ಲೇ ಸಿಬಿಐ ತನಿಖೆ ಆರಂಭಿಸಿದ್ದು, ತನಿಖೆ ಇದೀಗ ಮುಕ್ತಾಯ ಹಾದಿಯಲ್ಲಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಸಮ್ಮತಿ ಹಿಂಪಡೆದಿರುವ ಕ್ರಮ ದೋಷಪೂರಿತವೆಂದು ವಾದಿಸಲು ಸಿಬಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಸಮ್ಮತಿ ಹಿಂಪಡೆಯುವ ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಸಿಬಿಐ ಕಾಯುತ್ತಿದೆ.
ಸಿಬಿಐ ನಿಲುವಿಗೆ ಪೂರಕವಾಗಿ ಸುಪ್ರೀಂಕೋರ್ಟ್ ತೀರ್ಪು ಕೂಡಾ ಇದ್ದು, ಇದನ್ನೇ ಅಸ್ತ್ರವಾಗಿ ಬಳಸಲು ಸಿಬಿಐ ಚಿಂತನೆ ನಡೆಸುತ್ತಿದೆ. ಸಿಬಿಐ ಅಲ್ಲದೇ ಯಾವುದೇ ವ್ಯಕ್ತಿ ಸರ್ಕಾರದ ಆದೇಶ ಪ್ರಶ್ನಿಸಿ ಪಿಐಎಲ್ ದಾಖಲಿಸಲೂ ಅವಕಾಶವಿದೆ. ಸಿಕ್ಕಿಂನ ಮುಖ್ಯಮಂತ್ರಿ ವಿರುದ್ಧದ ಇಂತಹದ್ದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಈಗ ಮಹತ್ವ ಪಡೆದಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್: ಸಿದ್ದರಾಮಯ್ಯ ಸಂಪುಟ ಡಿಕೆಶಿ ಪಾದದಡಿಯಲ್ಲಿದೆ ಎಂದ ಕುಮಾರಸ್ವಾಮಿ
ಸದ್ಯ ಸಿಬಿಐ ಈ ತೀರ್ಪನ್ನು ಡಿಕೆ ಶಿವಕುಮಾರ್ ಪ್ರಕರಣಕ್ಕೂ ಅನ್ವಯಿಸಿ ವಾದಮಂಡಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಶಿವಕುಮಾರ್ ಕೂಡಾ ಈ ಪ್ರಕರಣದ ಕಾನೂನು ಕುಣಿಕೆಯಿಂದ ಪಾರಾಗಲು ಸರ್ವಸಿದ್ಧತೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ನ ಹಿರಿಯ ವಕೀಲರು, ಕರ್ನಾಟಕದ ಹಲವು ಹಿರಿಯ ವಕೀಲರ ಕಾನೂನು ಸಲಹೆ ಪಡೆದಿದ್ದಾರೆ. ನವೆಂಬರ್ 29 ರಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಅಷ್ಟರಲ್ಲಿ ಸರ್ಕಾರದ ನಿರ್ಧಾರ ತಿಳಿಸಿ, ವಿಚಾರಣೆಯನ್ನು ಮುಕ್ತಾಯಗೊಳಿಸುವುದು ಡಿಕೆ ಶಿವಕುಮಾರ್ ಉದ್ದೇಶ.
ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಒಪ್ಪಿದರೆ ಸಿಬಿಐ ತನಿಖೆಗೆ ಸಮ್ಮತಿ ಪ್ರಶ್ನಿಸಿರುವ ತಮ್ಮ ಮೇಲ್ಮನವಿಯನ್ನು ಡಿಕೆ ಶಿವಕುಮಾರ್ ಹಿಂಪಡೆಯಬಹುದು. ಒಮ್ಮೆ ಸಿಬಿಐ ತನಿಖೆಯಿಂದ ಪಾರಾದರೆ ರಾಜ್ಯದ ಯಾವುದೇ ತನಿಖಾ ಸಂಸ್ಥೆಯಿಂದಲೂ ತೊಂದರೆಯಾಗುವುದಿಲ್ಲವೆಂಬ ನಂಬಿಕೆ ಅವರಿಗಿದ್ದರೆ ಅದು ಸಹಜ. ಹೀಗಾಗಿ ಡಿಕೆ ಶಿವಕುಮಾರ್ ಅವರನ್ನು ಸಿಬಿಐ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಮುಂದಿಟ್ಟಿರುವ ಈ ಹೆಜ್ಜೆಯ ಪರಿಣಾಮಗಳು ನವೆಂಬರ್ 29 ರಂದೇ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ