ನ.26 ರಿಂದ ಐ.ಟಿ.ಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿ; ಇಲ್ಲಿದೆ ವಿವರ
ಬಿಸಿಲ ನಾಡು ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ಐ.ಟಿ.ಎಫ್ ಕಲಬುರಗಿ ಓಪನ್ ಮೆನ್ಸ್ ಲಾನ್ ಟೆನಿಸ್ ಟೂರ್ನಾಮೆಂಟ್-2023 ಆಯೋಜನೆ ಮಾಡಲಾಗಿದೆ. ಟೆನಿಸ್ ಕ್ರೀಡಾಕೂಟ ಯಶಸ್ಸಿಗೆ ಎಲ್ಲಾ ಸಮಿತಿಗಳು ಕಾರ್ಯೋನ್ಮುಖವಾಗಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚಿಸಿದ್ದಾರೆ.
Updated on: Nov 24, 2023 | 9:07 PM

ಬಿಸಿಲ ನಾಡು ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ಐ.ಟಿ.ಎಫ್ ಕಲಬುರಗಿ ಓಪನ್ ಮೆನ್ಸ್ ಲಾನ್ ಟೆನಿಸ್ ಟೂರ್ನಮೆಂಟ್-2023 ಆಯೋಜನೆ ಮಾಡಲಾಗಿದೆ.

ಟೆನಿಸ್ ಕ್ರೀಡಾಕೂಟ ಯಶಸ್ಸಿಗೆ ಎಲ್ಲಾ ಸಮಿತಿಗಳು ಕಾರ್ಯೋನ್ಮುಖವಾಗಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚಿಸಿದ್ದಾರೆ.

ಟೆನಿಸ್ ಟೂರ್ನಮೆಂಟ್ ಆಯೋಜನೆ ಸಂಬಂಧ ರಚಿಸಲಾಗಿರುವ ವಿವಿಧ ಸಮಿತಿಗಳ ಮುಖ್ಯಸ್ಥರಾಗಿರುವ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಂತರಾಷ್ಟ್ರೀಯ ಖ್ಯಾತಿಯ 75 ಕ್ಕೂ ಹೆಚ್ಚು ಆಟಗಾರರು ಇದರಲ್ಲಿ ಭಾಗವಹಿಸಲಿದ್ದು, ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.

ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ಒಂದು ವಾರಗಳ ಕಾಲ ಕಲಬುರಗಿಯಲ್ಲಿ ಟೆನಿಸ್ ಕಲರವ ಕಾಣಲಿದೆ. ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಈ ಕ್ರೀಡಾಕೂಟ ನಡೆಯಲಿದೆ.

ಕ್ರೀಡಾಪಟುಗಳಿಗೆ ವಸತಿ, ಊಟೋಪಚಾರ, ಸಾರಿಗೆ, ಭದ್ರತೆ ವ್ಯವಸ್ಥೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. ಟೂರ್ನಾಮೆಂಟ್ ಕುರಿತು ಟೀಸರ್, ಪ್ರೊಮೋಷನ್ ಕಾರ್ಯ ಕೂಡಲೆ ಚುರುಕುಗೊಳಿಸಬೇಕು. ಸಾಮಾಜಿಕ ಜಾಲತಾಣ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು ಎಂದರು.

ಕ್ರೀಡಾಕೂಟ ಯಶಸ್ಸಿಗೆ ಈಗಾಗಲೆ ಸ್ವಾಗತ, ಹಣಕಾಸು, ಸಾರಿಗೆ, ಪ್ರಚಾರ, ಮನರಂಜನಾ, ವಸತಿ, ಆರೋಗ್ಯ, ಭದ್ರತಾ, ಕುಡಿಯುವ ನೀರು ಮತ್ತು ಸ್ವಚ್ಛತೆ, ಅಗ್ನಿಶಾಮಕ ಹೀಗೆ ಒಟ್ಟಾರೆ 14 ಸಮಿತಿ ರಚಿಸಿ ಜವಾಬ್ದಾರಿ ನೀಡಿದ್ದು, ಅದರಂತೆ ಸಮಿತಿಯಲ್ಲಿರುವ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.

ನವೆಂಬರ್ 26 ಮತ್ತು 27 ರಂದು ಅರ್ಹತಾ ಪಂದ್ಯಗಳು ನಡೆಯಲಿವೆ. ನವೆಂಬರ್ 28 ರಿಂದ ಮುಖ್ಯ ಪಂದ್ಯ ನಡೆಯಲಿದ್ದು, ಡಿಸೆಂಬರ್ 2 ರಂದು ಮೆನ್ಸ್ ಡಬಲ್ ಮತ್ತು ಡಿಸೆಂಬರ್ 3 ರಂದು ಮೆನ್ಸ್ ಸಿಂಗಲ್ ಫೈನಲ್ ಪಂದ್ಯ ನಡೆಯಲಿದೆ.

ಸುಮಾರು 75 ಜನ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಕಲಬುರಗಿ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯ ಟೂರ್ನಮೆಂಟ್ ನಿರ್ದೇಶಕ ಪೀಟರ್ ವಿಜಯಕುಮಾರ ಅವರು ಸಭೆಗೆ ಇವೆಂಟ್ ಮಾಹಿತಿ ನೀಡಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ್ ಬಾಳೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಸೇರಿದಂತೆ ವಿವಿಧ. ಸಮಿತಿ ಮುಖ್ಯಸ್ಥರು, ಕೆ.ಎಸ್.ಎಲ್.ಟಿ.ಎ. ಸಂಸ್ಥೆಯ ಇತರೆ ಅಧಿಕಾರಿಗಳು ಇದ್ದರು.



















