70 ಸಾವಿರಕ ಹುದ್ದೆಗಳ ನೇಮಕಾತಿ: ಸ್ಪರ್ಧಾತ್ಮಕ ಪರೀಕ್ಷೆ- ನೇಮಕಾತಿ ವ್ಯವಸ್ಥೆಯ ಸುಧಾರಣೆಗೆ ಸಮಿತಿ ರಚನೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೇಶದಲ್ಲಿ ಭಾರೀ ಸದ್ದು ಮಾಡಿದ್ದು, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ನೀಡುವಂತಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ, ಖಾಲಿ ಹುದ್ದೆಗಳಿಗೆ ನೇಮಕಾತಿಗಾಗಿ ಕೈಗೊಳ್ಳಲಾಗುವ ಪರೀಕ್ಷೆಗಳ ಸನ್ನದ್ಧತೆಯ ಬಗ್ಗೆ ಡಿಕೆ ಶಿವಕುಮಾರ್ ಮಹತ್ವದ ಸಭೆ ನಡೆಸಿದ್ದು, ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನ ನೀಡಿದ್ದಾರೆ.

70 ಸಾವಿರಕ ಹುದ್ದೆಗಳ ನೇಮಕಾತಿ: ಸ್ಪರ್ಧಾತ್ಮಕ ಪರೀಕ್ಷೆ- ನೇಮಕಾತಿ ವ್ಯವಸ್ಥೆಯ ಸುಧಾರಣೆಗೆ ಸಮಿತಿ ರಚನೆ
ಡಿಕೆ ಶಿವಕುಮಾರ್ ಸಭೆ
Edited By:

Updated on: Jul 31, 2026 | 8:35 PM

ಬೆಂಗಳೂರು, (ಜುಲೈ 31): ಕರ್ನಾಟಕದಲ್ಲಿ (Karnataka) ಇದೇ ಮೊದಲ ಬಾರಿಗೆ 70 ಸಾವಿರಕ್ಕೂ ಅಧಿಕ ಹುದ್ದೆಗಳ (Job recruitment)  ನೇಮಕಾತಿಗೆ ಸಿದ್ಧತೆಗಳು ನಡೆದಿವೆ. ಈ ಸಂಬಂಧ ಡಿಕೆ ಶಿವಕುಮಾರ್ (DK SHivakumar) ಅವರು ರಾಜ್ಯದಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿಗಾಗಿ ಕೈಗೊಳ್ಳಲಾಗುವ ಪರೀಕ್ಷೆಗಳ ಸನ್ನದ್ಧತೆಯ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ, ಕಟ್ಟುನಿಟ್ಟಿನಿಂದ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.  ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ನೇಮಕಾತಿ ವ್ಯವಸ್ಥೆಯ ಸುಧಾರಣೆಗೆ ಸಮಿತಿ ರಚನೆ ಮಾಡಲಾಗಿದೆ.

ಸುಧಾರಣೆಗೆ ಸಮಿತಿ ರಚನೆ

ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ನೇಮಕಾತಿ ವ್ಯವಸ್ಥೆಯ ಸುಧಾರಣೆಗೆ ಸಮಿತಿ ರಚನೆ ಮಾಡಲಾಗಿದೆ. ಎಸ್.ವಿ ರಂಗನಾಥ್ ಅಧ್ಯಕ್ಷರಾಗಿದ್ದು, ಟಿ.ಎಂ ವಿಜಯಭಾಸ್ಕರ್, ವಂದಿತಾ ಶರ್ಮಾ ಹಾಗೂ ಎಲ್.ಕೆ. ಅಥೀಕ್ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಗೆ ನೇಮಕಾತಿ ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿ ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸಲು ಅಗತ್ಯ ಸುಧಾರಣೆಗಳನ್ನು ಅಧ್ಯಯನ ಮಾಡಿ ಶಿಫಾರಸುಗಳನ್ನು ಸಲ್ಲಿಸುವ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: 319 KAS ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಅರ್ಜಿ ಸಲ್ಲಿಕೆ ಯಾವಾಗಿನಿಂದ? ಇಲ್ಲಿದೆ ವಿವರ

ಅಧಿಕಾರಿಗಗಳಿಗೆ ಡಿಕೆಶಿ ಪಾಠ

ನೇಮಕಾತಿಯಲ್ಲಿ ದೇಶಕ್ಕೆ ನಾವು ಮಾದರಿಯಾಗಬೇಕು.70 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡುವ ದೊಡ್ಡ ಕಾರ್ಯವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಹೀಗಾಗಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ದೇಶಕ್ಕೆ ಮಾದರಿಯಾಗಿ ತೋರಿಸಬೇಕಾಗಿದೆ. ದೇಶಕ್ಕೆ ವಿದ್ಯಾರ್ಥಿಗಳ ಸಂದೇಶ ಈಗಾಗಲೇ ಸ್ಪಷ್ಟವಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ತಾಂತ್ರಿಕತೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಇತಿಹಾಸವಿದೆ. ತಾಂತ್ರಿಕತೆಯಲ್ಲಿ ನಾವು ತುಂಬಾ ಮುಂದೆ ಇದ್ದೇವೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ನೇಮಕಾತಿಯನ್ನು ಅತ್ಯಂತ ವೃತ್ತಿಪರವಾಗಿ ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಧಿಕಾರಿಗಳಿಗೆ ಪಾಠ ಮಾಡಿದರು.

ಪರೀಕ್ಷಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ

ಮುಂದಿನ ಆರು ತಿಂಗಳಲ್ಲಿ 36,773 ಹುದ್ದೆಗಳನ್ನು ತುಂಬಲು ಕೆಪಿಎಸ್ಸಿ ಮತ್ತು ಕೆಇಎ ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿದ್ದು, ಸುಮಾರು 35 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆಯಿದೆ.
ಪರೀಕ್ಷೆ ಪ್ರಕ್ರಿಯೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸಮಗ್ರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿಪಾಲಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಧಿಕಾರಿಗಳಿಗೆ ಡಿಕೆಶಿ ನೀಡಿದ ಸೂಚನೆಗಳೇನು?

  • ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು
  • ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಇರಬಾರದು
  • ದೇಶಕ್ಕೆ ಮಾದರಿಯಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು
  • ಪರೀಕ್ಷೆ ಅಕ್ರಮ ನಡೆದರೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೇ ಜವಾಬ್ದಾರಿ
  • ಎಲ್ಲಾ ಕೋಚಿಂಗ್ ಸೆಂಟರ್ಗಳ ಮೇಲೆ ಕಣ್ಗಾವಲು ಇಡಬೇಕು.
  • ಪರೀಕ್ಷೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಒದಗಿಸಬೇಕು.
  • ಪರೀಕ್ಷಾ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸಲು ಯುಪಿಎಸ್ಸಿಯಲ್ಲಿ ಅನುಸರಿಸುವ ಉತ್ತಮ ಅಂಶಗಳನ್ನು ಇಲ್ಲಿಯೂ ಅಳವಡಿಸಿಕೊಳ್ಳಬೇಕು.
  • ಜಿಲ್ಲಾ ಮಟ್ಟದಲ್ಲಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳ ಜವಾಬ್ದಾರಿ.
  • ಜಿಲ್ಲಾಧಿಕಾರಿ, ಎಸ್ಪಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು.
  • ಪ್ರತಿಯೊಬ್ಬರಿಗೆ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದ್ದು, ಪ್ರತಿಯೊಬ್ಬರೂ ಅವರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us