ಬೆಂಗಳೂರು: ಸರ್ಕಾರದ ಅಕ್ಕಿಯನ್ನು ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಫೋಟೋಗಳನ್ನು ಹಾಕಿ ಹಂಚಿಕೆ ಮಾಡಿದ್ದಾರೆ. ಅಕ್ಕಿ ಹಂಚಿಕೆ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೊರೊನಾ ವಿಚಾರದಲ್ಲಿ ರಾಜಕಾರಣ ಮಾಡಬಾರದು ಅಂತ ಸುಮ್ಮನಿದ್ದೇನೆ. ಮನವಿ ಮಾಡೋದು ಹೋಯ್ತು, ಈ ಕ್ಷಣದಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬಿಎಸ್ವೈ ವಿರುದ್ಧ ವಾಗ್ದಾಳಿ:
ಕಾರ್ಮಿಕರನ್ನು ಉಚಿತವಾಗಿ ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡಿ. ಅವರಿಗೆ ಕೂಲಿ ಇಲ್ಲ, ದುಡ್ಡು ಎಲ್ಲಿಂದ ತರಬೇಕು. ನಿಮ್ಮ ಕೈಯಲ್ಲಿ ಆಗದಿದ್ದರೆ ರಸ್ತೆಯಲ್ಲಿ ಭಿಕ್ಷೆ ಬೇಡಿ ನಾನು ಕೊಡುತ್ತೇನೆ. ಯಡಿಯೂರಪ್ಪ ಈ ಕೆಲಸ ಮಾಡಲಿಲ್ಲ ಅಂದ್ರೆ ಅವರು ಬದುಕಿದ್ದು ಸತ್ತಂಗೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ, ಆನೇಕಲ್ನಲ್ಲಿ ನಡೆದ ಅಕ್ಕಿ, ಸಕ್ಕರೆ ಮರು ಪ್ಯಾಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದರು. ಪ್ರಕರಣವನ್ನು ನ್ಯಾಯಧೀಶರಿಂದ ತನಿಖೆಗೆ ಒತ್ತಾಯಿಸಿದರು. ಆರೋಪಿಗಳನ್ನು ಬಂಧಿಸಲಿಲ್ಲ ಅಂದ್ರೆ ನಿಮಗೆ ಮುಹೂರ್ತ ಇಡಬೇಕಾಗುತ್ತೆ ಎಂದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ರೆ ಹೋರಾಟ:
ಡಿಡಿ ಉಷಾ ಹಾಗೂ ಸಿಡಿಪಿಒ ಇಬ್ಬರೂ ಒಪ್ಪಿಕೊಂಡು ದೂರು ದಾಖಲಿಸಿದ್ದಾರೆ. ಮುಖ್ಯಮಂತ್ರಿಗಳೇ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇನೆ. ಇಡೀ ರಾಜ್ಯಾದ್ಯಂತ ಬೀದಿಗಿಳಿಯುವುದು ಅನಿವಾರ್ಯ ಸೃಷ್ಟಿಯಾಗಿದೆ. ಪ್ರತೀ ಜಿಲ್ಲೆಯಿಂದ ಸಚಿವರಿಗೆ ಅಕ್ಕಿ ಬರಬೇಕಂತೆ. ಅಕ್ಕಿಯನ್ನು ರೀ ಪ್ಯಾಕ್ ಮಾಡಿ ಹಂಚಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅವರನ್ನು ಬಂಧಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
ಸಿಡಿಪಿಒ, ಶಾಸಕರು, ವಕ್ತಾರರು ಇಡೀ ತಂಡವನ್ನು ಕರೆದುಕೊಂಡು ಹೋಗಿ ಸಕ್ಕರೆ, ಬೇಳೆ, ಗರ್ಭಿಣಿಯರ ಆಹಾರ, ಅಂಗನವಾಡಿ ಕೇಂದ್ರಗಳಿಗೆ ನೀಡುವ ಆಹಾರವನ್ನು ಬಿಜೆಪಿ ಹೆಸರಿನಲ್ಲಿ ಮರು ಪ್ಯಾಕಿಂಗ್ ಮಾಡಿ ಹಂಚಿದ್ದಾರೆ. ಆದರೆ ಈವರೆಗೆ ಯಾವ ತಪ್ಪಿತಸ್ಥರನ್ನು ಬಂಧಿಸಿಯೂ ಇಲ್ಲ. ಪ್ರಕರಣವನ್ನು ಸಹ ದಾಖಲು ಮಾಡಿಲ್ಲ. ಯಾವುದಕ್ಕೆ ಎಷ್ಟು ಕೊಟ್ಟು ಖರೀದಿಸಿದ್ದಾರೆಂದು ಗೊತ್ತಿದೆ. ಸಚಿವರು ಎಷ್ಟು ಕಮೀಷನ್ ಪಡೆದಿದ್ದಾರೆಂಬ ಮಾಹಿತಿಯೂ ಇದೆ. ಕೆಲವೇ ಕ್ಷಣಗಳಲ್ಲಿ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದರು.