
ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಾಟಕ 25ನೇ ಮುಖ್ಯಮಂತ್ರಿಯಾಗಿ ಇಂದು (ಜೂನ್ 03) ಪ್ರಮಾಣವಚನ ಸ್ವೀಕರಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ಡಿಕೆಶಿ ಯುಗಾರಂಭವಾಗಿದೆ. ಸತತ ಆರು ವರ್ಷಗಳ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷರಾಗಿ ಕಾಲಿಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿದ್ದರು. ಅಲ್ಲದೇ 2023ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರ ಪ್ರತಿಫಲ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರಿಗೆ ರವಾನಿಸಿದ್ದಾರೆ.
2020ರ ಜುಲೈ 2ರಂದು ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಬರೋಬ್ಬರಿ 6 ವರ್ಷ ಪೂರೈಸಿದ್ದಾರೆ. ಆದ್ರೆ, ಕೆಪಿಸಿಸಿ ಅಧ್ಯಕ್ಷರಾದ ಆರಂಭದಲ್ಲಿ ಡಿಕೆಶಿ ಪಾಲಿಗೆ ಹೂವಿನ ಹಾಸಿಗೆ ಆಗಿರಲಿಲ್ಲ.ಕೆಪಿಸಿಸಿ ಚುಕ್ಕಾಣಿ ವಹಿಸಿಕೊಂಡ ಸಂದರ್ಭದಲ್ಲಿ ವಾತಾವರಣ ಸುಗಮವಾಗಿರಲಿಲ್ಲ. ಕೋವಿಡ್ ಸಂಕಷ್ಟದ ಸಮಯ ಅದಾಗಿತ್ತು. ಅದಕ್ಕೂ ಮೊದಲು ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪವೂ ಇತ್ತು. ಸಿಬಿಐ, ಇಡಿ ತನಿಖೆಗಳು ನಡೆಯುತ್ತಿದ್ದವು. ತಿಹಾರ್ ಜೈಲು ವಾಸ ಮುಗಿಸಿ ಬಂದ ಅವರಿಗೆ ಎಐಸಿಸಿ ಸೂಚನೆಯಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ರಾಜ್ಯದಲ್ಲಿ ಅಂದು ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಪರಿಣಾಮವನ್ನು ಡಿಕೆಶಿ ಎದುರಿಸಬೇಕಾಗಿತ್ತು. ಆರೋಪ ಹೊತ್ತವರಿಗೆ ಅಧ್ಯಕ್ಷ ಸ್ಥಾನ ಏಕೆ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಈ ಸವಾಲಿನ ನಡುವೆಯೂ ಡಿಕೆಶಿ ಕೆಪಿಸಿಸಿಗೆ ಹೊಸ ಆಯಾಮ ನೀಡಿದರು. ಗಮನ ಸೆಳೆಯುವಂತಹ ಕಾರ್ಯಕ್ರಮಗನ್ನು ಹಮ್ಮಿಕೊಂಡರು. ಪಕ್ಷ ಸಂಘಟನೆ, ಕಾರ್ಯಕರ್ತರನನ್ನು ನಿಭಾಯಿಸುವಲ್ಲಿ , ಕಚೇರಿಗೆ ಕಾರ್ಯಕರ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ವಿರೋಧ ಪಕ್ಷಗಳು ಆಡಳಿತದಲ್ಲಿದ್ದಾಗ ಸರ್ಕಾರದ ವೈಫಲ್ಯವನ್ನು ತಮ್ಮದೇ ಆದ ಶೈಲಿಯಲ್ಲಿ ಜನರ ಮುಂದೆ ಇಡುವಲ್ಲಿ ಇವರ ಪಾತ್ರ ಇತ್ತು.
ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಪ್ರಮಖ ಪಾತ್ರ ನಿರ್ವಹಣೆ ಮಾಡಿದ್ದಾರೆ. ಸಂಘಟನೆಯಲ್ಲಿ ಹಿನ್ನಡೆ ಅನುಭವಿಸಿದ್ದ ಪಕ್ಷಕ್ಕೆ ಹೊಸ ಹುರುಪು ನೀಡಿದ್ದಾರೆ. ಯುವಕರನ್ನು ಸೆಳೆಯುವಲ್ಲಿಯೂ ಯಶಸ್ವಿ ಆಗಿದ್ದಾರೆ. ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ ಪಕ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಡಿಜಿಟಲ್ ಸದಸ್ಯತ್ವವನ್ನು ನೋಂದಾಯಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ನೇರವಾಗಿ ಜನರ ಮನೆಬಾಗಿಲಿಗೆ ಕಳುಹಿಸುವ ಮೂಲಕ ಪಕ್ಷದ ತತ್ವಗಳನ್ನು ತಲುಪಿಸುವ ಪ್ರಯತ್ನ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಪಕ್ಷದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿದ್ದು ಮತ್ತು ಸ್ವಂತ ಕಟ್ಟಡಗಳ ಅಭಿವೃದ್ಧಿಯಲ್ಲೂ ಡಿಕೆಶಿ ಪಾತ್ರ ಇದೆ. ಹಾಗೇ ಯೂತ್ ಕಾಂಗ್ರೆಸ್ ಅನ್ನು ಬಲಿಷ್ಠಗೊಳಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಮುಖಂಡರಿಗೆ ಆದ್ಯತೆ ಹೊರತಾಗಿ ಕಾರ್ಯಕರ್ತರಿಗೆ ಇಲ್ಲ ಎಂಬ ಅಭಿಪ್ರಾಯ ಹಿಂದಿನಿಂದಲೂ ಇತ್ತು. ಆದ್ರೆ, ಡಿಕೆ ಶಿವಕುಮಾರ್ ಅವರು ಇದನ್ನು ತಕ್ಕ ಮಟ್ಟಿಗೆ ಬದಲಾವಣೆ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ, ಬದಲಾಗಿ ಪಕ್ಷ ಪೂಜೆ ಮಾಡಬೇಕು ಎಂದು ಹಲವು ಕಾರ್ಯಕ್ರಮಗಳಲ್ಲಿ ಒತ್ತಿ ಒತ್ತಿ ಹೇಳುತ್ತಿದ್ದರು. ಅಲ್ಲದೆ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂಬುವುದನ್ನು ಪದೇ ಪದೇ ಹೇಳಿದ್ದರು.
ಕಾಂಗ್ರೆಸ್ ಕಾರ್ಯಕ್ರಮಗಳು, ಪತ್ರಿಕಾಗೋಷ್ಠಿಗಳು ಅಶಿಸ್ತಿನಿಂದ ಕೂಡಿರುತ್ತವೆ ಎಂಬ ಅಭಿಪ್ರಾಯಗಳು ಇದ್ದವು. ಪಕ್ಷದ ಕಚೇರಿಯಲ್ಲಿ ಶಿಸ್ತು ಕಡಿಮೆ ಎಂಬ ಆರೋಪಗಳು ಸಹ ಇದ್ದವು. ಡಿಕೆ ಶಿವಕುಮಾರ್ ಅಧ್ಯಕ್ಷರಾದ ಬಳಿಕ ಇದು ತಕ್ಕಮಟ್ಟಿನಲ್ಲಿ ಬಲಾವಣೆ ಕಂಡಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆಗಳಲ್ಲಿ ನಾಯಕರೇ ತುಂಬಿ ತುಳುಕುತ್ತಿದ್ದರು. ಇದನ್ನು ಬದಲಾವಣೆ ಮಾಡಿ ಭಾಷಣ ಮಾಡುವ ಸಂದರ್ಭದಲ್ಲಿ ಮಾತ್ರ ನಾಯಕರು ವೇದಿಕೆಗೆ ಹೋಗುವ ಸಂಪ್ರದಾಯ ತಂದರು. ಇಂತಹ ಕೆಲವೊಂದು ಭಿನ್ನ ಹಾಗೂ ಹೊಸ ಸಂಪ್ರದಾಯಗಳಿಗೆ ಡಿಕೆಶಿ ನಾಂದಿ ಹಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹಲವು ಹಗರಣಗಳನ್ನು ಬೆಳಕಿಗೆ ತಂದಿತ್ತು. ಬಿಟ್ ಕಾಯಿನ್, 40% ಕಮಿಷನ್, ಗುತ್ತಿಗೆದಾರರ ಪತ್ರ, ಕೋವಿಡ್ ಹಗರಣ ಹೀಗೆ ಸಂಗತಿಗಳನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಹಲವು ಹೋರಾಟ, ಪಾದಯಾತ್ರೆಗಳು ನಡೆದಿವೆ. ಮೇಕೆ ದಾಟು ಪಾದಯಾತ್ರೆ, ಸ್ವಾತಂತ್ರ ನಡಿಗೆ ಸೇರಿದಂತೆ ಕೆಲವು ಪಾದಯಾತ್ರೆಗಳು, ಹೋರಾಟಗಳು ಮಾಡುವ ಮೂಲಕ ಡಿಕೆಶಿ ಪಕ್ಷಕ್ಕೆ ಬಲ ತುಂಬಿದ್ದರು.
ಚುನಾವಣಾ ಸಂದರ್ಭದಲ್ಲಿ ಹಲವು ಪ್ರಮುಖ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಬಲ ತಂದುಕೊಟ್ಟಿದೆ ಎಂಬುವುದು ಸತ್ಯ. ಬಿಜೆಪಿಯ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದರು. ಆದರೆ ಅವರು ಬಳಿಕ ಕಾಂಗ್ರೆಸ್ ತೊರೆದರು. ಅಷ್ಟೇ ಅಲ್ಲದೆ, ಲಕ್ಷ್ಮಣ ಸವದಿ, ಬಿಎಂ ಸುಕುಮಾರ್ ಶೆಟ್ಟಿ, ಪುಟ್ಟಣ್ಣ, ಎಚ್ ಡಿ ತಮ್ಮಣ್ಣ, ಅಯನೂರು ಮಂಜುನಾಥ್, ಮರಿತಿಬ್ಬೇಗೌಡ ಹೀಗೆ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆಶಿ ಪ್ರಮುಖ ಪಾತ್ರವಹಿಸಿದ್ದರು.
ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸ್ಪರ್ಶ ನೀಡಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರು ಮನೆ-ಮಟ ಬಿಟ್ಟು ಪಕ್ಷ ಆರು ವರ್ಷಗಳ ಕಾಲ ಹಗಲು ರಾತ್ರಿ ಎನ್ನದೇ ದುಡಿದ್ದರು. ಹೀಗಾಗಿ ಅವರು 2023ರ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಬಹುಮತ ಪಡೆದುಕೊಂಡಿತ್ತು. ಇದರಿಂದ ಡಿಕೆಶಿ ಕೆಲಸಕ್ಕೆ ತಕ್ಕ ಕೂಲಿ ನೀಡಿ ಎಂದು ಪರೋಕ್ಷವಾಗಿ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದ್ರೆ, ಹೈಕಮಾಂಡ್ 2ನೇ ಬಾರಿಗೆ ಸಿದ್ದರಾಮಯ್ಯನವರಿಗೆ ಸಿಎಂ ಪಟ್ಟ ಕಟ್ಟಿದ್ದರು. ಬಳಿಕ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷ ಪೂರೈಸುತ್ತಿದ್ದಂತೆಯೇ ನಾಯಕತ್ವ ಬದಲಾವಣೆ ಕೂಗೂ ಜೋರಾಗಿದ್ದು, ಸಿಎಂ ಸ್ಥಾನ ಬೇಕೆಂದು ಡಿಕೆಶಿ ತೆರೆಮರೆಯ ಕಸರತ್ತು ಮಾಡಿದ್ದರು. ಮುಸುಕಿನ ಗುದ್ದಾಟಗಳ ಮಧ್ಯೆ ಸಿದ್ದರಾಮಯ್ಯ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದ್ದಂತೆಯೇ ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಿದ್ದು, ಎರಡು ವರ್ಷದ ಅವಧಿಗೆ ಸಿಎಂ ಪಟ್ಟವನ್ನು ಡಿಕೆ ಶಿವಕುಮಾರ್ ಕಟ್ಟಿದ್ದಾರೆ. ಇದರೊಂದಿಗೆ ಇನ್ಮುಂದೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಆಡಳಿತ ಅಂತ್ಯವಾಗಿ ಡಿಕೆಶಿ ರಾಜ್ಯಭಾರ ಆರಂಭವಾಗಿದೆ.
ಡಿಕೆ ಶಿವಕುಮಾರ್ ಅವರು ತಮ್ಮ ಆರು ವರ್ಷದ ಅವಧಿಯಲ್ಲಿ ಪಕ್ಷಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಹಳ್ಳಿ-ಹಳ್ಳಿ ಸುತ್ತಾಡಿ ಪಕ್ಷ ಸಂಘಟಿಸಿ ಈ ಮಟ್ಟಕ್ಕೆ ಬೆಳೆಸಿ ನಿರ್ಗಮಿಸಿದ್ದು, ಮುಂದಿನ ಕೆಪಿಸಿಸಿ ಅಧ್ಯಕ್ಷ ಯಾರು ಎನ್ನುವ ಚರ್ಚೆಗಳ ನಡುವೆ ಮೊದಲ ಸತೀಶ್ ಜಾರಕಿಹೊಳಿ ಹೆಸರು ಕೇಳಿಬಂದಿತ್ತು. ಆದ್ರೆ, ಅವರು ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೆಂದು ಹೈಕಮಾಂಡ್ಗೆ ಹೇಳಿದ್ದರು. ಆದ್ರೆ, ಹೈಕಮಾಂಡ್ ಒಬ್ಬರಿಗೆ ಒಂದೇ ಹುದ್ದೆ ನಿಯಮವಮ್ಮು ಮುಂದಿಟ್ಟಿದ್ದು, ಜಾರಕಿಹೊಳಿ ಬದಲು ವಿಧಾನಪರಿಷತ್ ಸದಸ್ಯ ಬಿಜೆ ಹರಿಪ್ರಸಾದ್ಗೆ ಕೆಪಿಸಿಸಿ ಪಟ್ಟ ಕಟ್ಟಲು ಹೈಕಮಾಂಡ್ ಮುಂದಾಗಿದೆ ಎಂದು ತಿಳಿದುಬಂದಿದೆ.
ಹೌದು.. ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿ ಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ.ಬಿಕೆ ಹರಿ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಹೈಕಮಾಂಡ್ ಇದೀಗ ಈ ನಿರ್ಧಾರ ಕೈಗೊಂಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಹಿಂದುಳಿದ ವರ್ಗಕ್ಕೆ ಸೂಕ್ತ ಸ್ಥಾನ ಮಾನ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದು, ಹರಿಪ್ರಾಸದ್ ಅವರು ಯಾವ ರೀತಿ ಪಕ್ಷವನ್ನು ಮುನ್ನಡೆಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.